ಜಿಟಿ ಜಿಟಿ ಮಳೆ . ಇರುಚಲು ಬಡಿದು ಬಾಲ್ಕನಿಯಲ್ಲಿಟ್ಟ ಪಾಟುಗಳ ತುಂಬೆಲ್ಲ ನೀರು. ಹಾಕಿದ ಗಿಡಗಳೆಲ್ಲಾ ಕೊಳೆತು ಹೋಗುತ್ತವೋ ಏನೋ.. ?
ಯಾಕೋ ಮನಸಿಗೆ ಸೋಮಾರೀತನ. ಮಕ್ಕಳು ಶಾಲೆಯಿಂದ ಬರಲಿನ್ನೂ ತುಂಬಾ ಹೊತ್ತಿದೆ.
ಟೀಪಾಯಿಯ ಮೇಲೆ ಪಗಡೆ ಕಾಯಿಗಳು ಹರಡಿಕೊಂಡಿದ್ದು ಯಾಕೋ ಆಪ್ಯಾಯಮಾನ. ಮಗ ಬಂದವನೇ ಪಗಡೆ ಕಾಯಿ ಹುಡುಕುತ್ತಾನೆ.ಮಗಳು ಪಟ ಹಾಸುತ್ತಾಳೆ. ಅಮ್ಮ, ಅಪ್ಪ ಬರಲೆಷ್ಟು ಹೊತ್ತಿದೆ.? ಪಗಡೆ ಆಡೋಣ...
ಮನಸ್ಸು ಹಳೆಯದನ್ನೇ ಮೆಲುಕು ಹಾಕುತ್ತದೆ. ಚಿಕ್ಕವರಿರುವಾಗ ತಮ್ಮನೊ೦ದಿಗೆ ಅತ್ತೆಯ ಕೈ ಹಿಡಿದೆಳೆದು ಹೀಗೆ ಮಾಡುತ್ತಿದ್ದದ್ದು ನಿನ್ನೆ ಮೊನ್ನೆ ನಡೆದ೦ತಿದೆ. ಮಳೆಯ ಹನಿಗಳೆಡೆಯಿ೦ದ ನೆನಪುಗಳ ತು೦ತುರು ಮನಸ್ಸನ್ನು ಒದ್ದೆ ಮಾಡುತ್ತದೆ.ಮಳೆಯ ಮಹತ್ವ ಅದಲ್ಲವೇ ? ಅದಕ್ಕೂ ನೆನಪುಗಳ ಜರೂರತ್ತಿದೆ.!
ಅತ್ತೆಯಾದರೂ ಪಾಪ.., ಮದುವೆಯಾಗಿ ಮೂರು ವರುಷ ತು೦ಬುವುದರೊಳಗೆ, ಗ೦ಡ ತಿರುಗಿ ನೋಡದೇ ಮೋಡದೆಡೆ ನಡೆದು ಬಿಟ್ಟಿದ್ದ. ಮಗುವೊ೦ದು ಇತ್ತ೦ತೆ ಅತ್ತೆಗೂ. ಅದಕ್ಕೆ ಅದ್ಯಾವುದೊ ಜ್ವರ ಬಡಿದು ತೀರಿಕೊ೦ಡಿತ೦ತೆ. ಅತ್ತೆಯ ಕನಸುಗಳೆಲ್ಲಾ ಕಮರಿಹೋದವು. ಮತ್ತೆ ಭುಗಿಲೇಳದ೦ತೆ ಕನಸುಗಳ ಕ೦ಪಾರ್ಟ್ಮೆ೦ಟಿಗೆ ದೊಡ್ಡದೊ೦ದು ಬೀಗ ಹಾಕಿ ಕೀಲಿಯನ್ನು ಎಡಗೈಲೆಲ್ಲೋ ಇಟ್ಟು ಮರೆತುಬಿಟ್ಟಿದ್ದಳು.ಸಿಕ್ಕ೦ತಾಗಿ ಸಿಗದೇ ಹೋದ ಬಿಸಿಲ್ಗುದುರೆಯಾಯ್ತು ಅತ್ತೆಯ ಬಾಳು. ಮತ್ತೆ ಅತ್ತೆಗಾದರೂ ದಿಕ್ಕು ತವರೇ ಆಯಿತು. ತಮ್ಮನ ಮನೆ ತನ್ನದು, ತಮ್ಮನ ಮಕ್ಕಳು ತನ್ನವು.. ದನ ಕರು, ಕೊಟ್ಟಿಗೆ, ಗದ್ದೆ ನೆಟ್ಟಿ, ತೋಟದ ಕಳೆ ಎಲ್ಲಾ ಕಡೆಗೂ ಅತ್ತೆಯೇ ದಿಕ್ಕು, ''ಅಕ್ಕಿಯೊಂದಿದ್ದರೆ ಸಾಕ? ಬರೀ ಅನ್ನನೆ ತಿನ್ನಕಾಗ್ತಾ?ನಾಕು ಮಗೆ ಬೀಜ, ತಿಂಗಳವರೆ ಬೀಜ ಹಾಕಿರೆ ಮಳೆಗಾಲಿಡೀ ಮಾಯ್ನ್ಕಾಯಿ , ಹಲ್ಸಿನ್ಕಾಯಿ ಎರಡ್ರದ್ದೆ ಪದಾರ್ಥ ತಿಮ್ಬದು ತಪ್ಪ್ತು,'' ಎನ್ನುವವಳೂ ಆಕೆಯೇ. ಆಸರಿಗೆ ಮನೆಗೆ ಬಂದ ಆಳುಗಳ ಕೈಲಿ ಅಂಗಳದಲ್ಲಿ ಮಣ್ಣು ಹೊಯ್ಸಿ ಏರಿ ಮಾಡಿಸಿಕೊಂಡು ಅವರೇ ಕಾಯಿಯ ಒಂದೊಂದೇ ಬೀಜ ಹುಗಿಯುವವಳೂ ಅವಳೇ. ತ್ಯಾರಣದ ಏರಿ ಮಾಡಿ ಮನೆ ಮುಂದೆ ಉದ್ಯಾನವನ ಮಾಡುವವಳೂ ಅವಳೇ. ಎಲ್ಲರ ಕನಸುಗಳಿಗೆ ಬಣ್ಣ ಹಚ್ಚುವವಳೂ ಅವಳೇ!
ಶಾಲೆ ಬಿಟ್ಟ ಮೇಲೆ ಸ೦ಜೆ ಕಡೆಗೆ ಜೋರು ಮಳೆ ಹೊಯ್ಯುವಾಗ ಇನ್ನೇನು ಕೆಲಸ? ಅತ್ತೆಯ ಬಳಿ ಸಾರಿ ಕಥೆ ಹೇಳೆ ಅತ್ತೆ ಅ೦ದರೆ ಸಾಕು, '' ಕಥೆ ನಾ ಎ೦ತಾ ಹೇಳ್ತ್ನೆ..? ಅದಕ್ಕೆ ಮಾಚಬಟ್ಟರು ಇದ್ವಲೇ, ಅವ್ವಾದ್ರೆ ಚೊಲೋತ್ನಾಗಿ ಹೇಳ್ತ. ಬನ್ನಿ ಪಗಡೆ ಆಡನ. ಕೂಸೇ ಪಟ ಹಾಸಿ ಕಾಯಿ ಇಡು, ಈಗ ಬ೦ದಿ ಹಪ್ಳ ಸುಟ್ಕಂಬತ್ತಿ ನಾಕೆಯ. ಕಡಿಗೆ ಎಂತಾರೂ ತಿನ್ನಕ್ಕೊಡು ಹೇಳಿ ಅಮ್ಮಂಗೆ ಗೋಳ್ಹೊಯ್ಯಡಿ. ಆ ಚಾಳಿ ಎಮ್ಮೆ ಕರಿಯಕ್ಕೆ ಹೊಯ್ದ. ಆಗಿಂದ ನಾಕ್ ಬಾರಿ ಆತು, ಮೂರು ಸಲ ನಾ ನೋಡಿದ್ದಿ, ಇನ್ನೆಷ್ಟು ಬಾರೀ ನೋಡಕಾ ಏನ ? ಮತ್ತೆ ದೋಸೆ ಅಕ್ಕಿ ಸೈತ ಬೀಸದಿದ್ದು, ನಾ ಬರದು ಒಂದೇ ಆಟಕ್ಕೆ ಮತ್ತೆ ''
ಇಷ್ಟರ ಜೊತೆಗೆ ಮೊದಲೇ ಸುಟ್ಟು ಅಡಗಿಸಿಟ್ಟ ಹಲಸಿನ ಬೇಳೆ, ಹಪ್ಪಳ ಹಾಳೆ ತಟ್ಟೆಯಲ್ಲಿಟ್ಟುಕೊಂಡು ಬರುವ ಹೊತ್ತಿಗೆ ಅಕ್ಕ ತಮ್ಮನಲ್ಲಿ ಪಗಡೆ ಕಾಯಿಯ ಬಣ್ಣಕ್ಕಾಗಿ ಜಗಳ.
'ನಂಗೆ ಕೆಂಪಿದು ಬೇಕು.' ತಮ್ಮನ ಹಕ್ಕು.
'ಯಾವಾಗಲೂ ನಿಂಗೆ ಕೆಂಪಿ ಕಾಯಿ ಬೇಕಾ. ನಂಗೊತ್ತಿಲ್ಲೆ. ಇವತ್ತು ಕೆಂಪುಕಾಯಿ ನಾ ತಗತ್ತಿ., ಅತ್ತೆ ನೋಡೇ...'
ಜಗಳ ತಗಾದೆ ಮುಗಿದು ಅತ್ತೆಯ ಪ೦ಚಾಯ್ತಿಕೆ ನಡೆದು ಅಂತೂ ಆಟ ಶುರು. ಅತ್ತೆಯ ಕೈಯ್ಯೋ ಕಯ್ಯಿ , ಅದು ಹೇಗೆ ಕವಡೆ ಪಳಗಿಸಿದ್ದಳೋ. ಚಿತ್ತ, ನಾಕು , ಭಾರ ಬೇಕೆಂದಾಗಲೆಲ್ಲಾ ಒಚ್ಚಿ, ಮೂರು.. ಮೊದಲು ಕಾಯಿ ಇಳಿಸಿ ಜುಗ ಕಟ್ಟುವುದು ಅವಳೇ. ಉಳಿದ ಎಲ್ಲರ ಕಾಯಿಯೂ ಆಗಾಗ ಮನೆಗೆ,
ತಮ್ಮನದು ಬರೀ ಮೋಸ. ಒಚ್ಚಿ ಬಿದ್ದರೆ ಮೆಲ್ಲ ಮಗಚಿಟ್ಟು 'ಭಾರ' ಮಾಡುವುದು, ಹುಳ್ಳಗೆ ನಗುವುದು! ಚಿಮನೀ ಬುಡ್ಡಿಯ ದೀಪದ ಬೆಳಕಲ್ಲಿ ಹೌದೆಂದುಕೊಳ್ಳಬೇಕು!
ಅಂತೂ ಅತ್ತೆಯ ಕಾಯಿಯೇ ಮೊದಲು ತೆಗೆಯುವುದು. ಅತ್ತೆಯೇ ಗೆಲ್ಲುವುದು.! ಜೀವನದ ಎಲ್ಲಾ ಪರೀಕ್ಷೆಗಳನ್ನೂ ಅನಿವಾರ್ಯವಾಗಿ ಎದುರಿಸಿದವಳು ಅವಳು. ಗೆಲುವೋ, ಸೋಲೋ..? ಅರ್ಥವಾಗದ ವಯಸ್ಸುಅದು. ಅಪ್ಪ ಅಮ್ಮ ಆಗಾಗ ಹೇಳುತ್ತಿದ್ದುದು, ''ಪಾಪ ಇವಳ ಬಾಳು ಕಣ್ಣೀರಾದರೂ ಮೇಲೆ ಒಂಚೂರು ತೊಸ್ಕ್ಯತ್ಲಲ್ಲೇ, ಅವಳಿಗೆ ಹ್ಯಾಂಗೆ ಬೇಕಾ ಹಾಂಗೆ ಇರ್ಲಿ.''ಮಕ್ಕಳಿಗೆ ಅದೆಲ್ಲಿ ಅರ್ಥವಾದೀತು?
’ಅತ್ತೇನೆ ಯಾವಾಗ್ಲೂ ಗೆಲ್ತಾ...’
'ಆಮೇಲೆ, ಒಂದ್ ಕೈ ಆಡಿಕೊಡೆ ಅತ್ತೆ ಒಚ್ಚಿ ಬೀಳ್ತೆ ಇಲ್ಲೇ..'
'ಹುಗಿದ ಕಾಯಿ ತೆಗೆಯಲೇ ಆಗ್ತಿಲ್ಲೆ.. ಎರಡು ಬೀಳ್ಸಿಕೊಡು,' ಎನ್ನುತ್ತಾ ಅಕ್ಕ ತಮ್ಮನ ಗೋಳಾಟ..
''ಇನ್ ಸಾಕು. ಯಂಗೆ ಒಳಗೆ ಕೆಲಸ ಇದ್ದು. ನಿನ್ ಅಮ್ಮನೇ ದೋಸಿಗೆ ಬೀಸ್ತಾ ಇದ್ದ ಕಾಣ್ತು, ನಾ ಒಂಚೂರ್ ಕೈ ಹಾಕ್ತಿ. ನಿಂಗ ಇವತ್ತು ಶಾಲೆ ಬಿಟ್ ಬಂದವರು ಮಗ್ಗಿ ಹೇಳಿದ್ರ. ? ಬೇಗ ಬೇಗ ಬರ್ಕಂಡು ಓದ್ಕ್ಯ೦ಡು ಮಾಡ್ಕ್ಯಳಿ, ಅಪ್ಪ ಬಂದ್ರೆ ಬೈತ. ಸುಳ್ಳಲ್ಲ..ಮಾಚ್ ಭಟ್ರಿಗೆ ಸಂಧ್ಯಾವನ್ನೇ ಆತು ಕಾಣ್ತು. ಕಥೆ ಹೇಳ್ತ, ಕೇಳ್ಳಕ್ಕು. ಬೇಗ್ ಬರ್ಕಂಡು ಮುಗ್ಸಿ.''
ಆಯ್ತಪ್ಪಾ ...ಅದೂ ಮುಗಿಸಿಯಾಗುತ್ತಿತ್ತು.
ಈಗ ಮಾಚಭಟ್ಟರ ಸರದಿ. ಅವರು ಸಹಾ ಜೀವನದಲ್ಲಿ ಸಾಕಷ್ಟು ಕಷ್ಟ ನುಂಗಿದವರೇ ಅಲ್ಲವೇ...? ಅವರ ಬಗ್ಗೆ ವಿವರ ಯಾರಿಗ್ಗೊತ್ತು? ಮಗನೊಬ್ಬನಿದ್ದನಂತೆ, ಅವನ ಸಂಸಾರದೊಂದಿಗೆ ಬೇರೆ ಮನೆ ಮಾಡಿಕೊಂಡು.
ಇವರಿಗೆ ಹೆಂಡತಿ ಸತ್ತು ಸುಮಾರು ವರ್ಷಗಳೇ ಆಗಿತ್ತೇನೋ. ಅವರಿಗೂ ಎಪ್ಪತೈದರ ಮೇಲೆ ವಯಸ್ಸಾಗಿದ್ದಿರಬಹುದು. ಮಳೆಗಾಲ ಶುರುವಿನಲ್ಲಿ ಬಂದವರಿಗೆ ಮತ್ತೆ ಚೌತಿಯ ಗಣಪತಿಯನ್ನು ಮುಳುಗಿಸಿಯೇ ಹೋಗಬೇಕೆನ್ನುವುದು ಅಪ್ಪನ ಅಣತಿ.
ಅವರಿಗಾದರೂ ಮನೆಯಲ್ಲಿ ಕಾಯ್ದುಕೊಂಡಿರಲು ಯಾರಿದ್ದಾರೆ ? ಆದರೆ ಆಗ ಅರ್ಥವಾಗದ ಅವರ ನಿಟ್ಟುಸಿರು ಈಗ ಅರಿವಿಗೆ ಬರುತ್ತದೆ. ಅತ್ತೆಯ ಮದುವೆ ಮಾಡಿಸಿದ್ದು ಅವರೇ ಅಂತೆ. 'ಮಾಣಿ ಘನಾವ' ಎಂದು ಇಲ್ಲದ ತರಾತುರಿಯಲ್ಲಿ. 'ಯಾರ್ಯಾರ ಹಣೆ ಮೇಲೆ ಯಂತಾ ಬರದ್ದು ಹೇಳದನ್ನ ಯಾರಿಗೆ ಓದಲಾಗ್ತು, ತಲೆ ಬಿಸಿ ಮಾಡ್ಕ್ಯಳದು ಯಂತಕೆ ಭಟ್ರೇ,ನಮಗೆ ಶಿಕ್ಕಿದ್ದು ಇಷ್ಟೇಯ..' ಅಪ್ಪನ ಸಮಾಧಾನ.
ಕಥೆ ಕೇಳುವವರಿಗೆ ಕಥೆಯಾದರೆ ಸಾಕು, ಊಟ ಮುಗಿಸಿ ಮಾಚಭಟ್ಟರ ಒಂದು ಬದಿಗೆ ಅಕ್ಕ, ಇನ್ನೊಂದು ಬದಿಯಲ್ಲಿ ತಮ್ಮ ಆತು ಕುಳಿತರೆಂದರೆ ತಮ್ಮನಿಗೆ ಕಥೆ ಮುಗಿಯುವಷ್ಟರಲ್ಲಿಯೇ ತೊಡೆಮೇಲೆ ನಿದ್ದೆ.
ವೈವಿಧ್ಯಮಯ ಕಥೆಗಳು ಅವು . ರಾಜಕುಮಾರಿಯನ್ನು ಧುರುಳನೊಬ್ಬ ಅಪಹರಿಸಿಕೊಂಡು ಹೋದದ್ದು..ಅವಳನ್ನು ಉಪಾಯವಾಗಿ ಶೂರನೊಬ್ಬ ಕರೆದುಕೊಂಡು ಬಂದಿದ್ದು, ಬರುವಾಗ ಶತ್ರು ಬೆನ್ನಟ್ಟಿದ್ದು, ಪೊಟರೆಯೊಂದರಲ್ಲಿ ಇವರು ಅಡಗಿಕೊಂಡಿದ್ದು. ಹೆಜ್ಜೆ ಗುರುತು, ವಾಸನೆ ಕಂಡು ಹಿಡಿಯುವವರೊಂದಿಗೆ ಆತ ಇವರ ಪೊಟರೆಯನ್ನು ಗುರುತಿಸಿದ್ದು ಅಲ್ಲಿ ಈ ಮೊದಲು ವಾಸವಾಗಿದ್ದ ಭೂತವೊಂದು ಇವರಿಗೆ ಸಹಾಯಮಾಡಿದ್ದು., ಮಾಯದ ಕತ್ತಿಯಿಂದ ಹೋರಾಡಿದ್ದು.,
ಕಥೆ ತು೦ಬಾ ಉದ್ದ .ಉದ್ದ ... ಆಮೇಲೆ ಏನಾಯ್ತು..? ಕೇಳಿದಂತೆಲ್ಲಾ ಒಂದಕ್ಕೆ ಇನ್ನೊಂದು ಕಥೆ ಸೇರುವುದು, ಸರಕ್ಕೆ ಮಣಿ ಸುರುಗಿದಂತೆ. ಏಡಿ ಮನುಷ್ಯನ ಕಥೆ, ಕಪ್ಪೆ ರಾಣಿಯ ಕಥೆ, ಹುಲಿ ಬೆಟ್ಟದ ಕಥೆ, ಮಂತ್ರವಾದಿಯ ಕಥೆ, ಭೂತದ ಕಥೆ ಒಂದೇ ಎರಡೇ.. ಕಥೆಗಳ ಖಜಾನೆ. ಕಥೆಯ ಪಾತ್ರಗಳಲ್ಲೆಲ್ಲಲ್ಲ ತೇಲಿ ಹೋಗುವ ಸುಖ ಮರೆಯುವುದಾದರೂ ಹೇಗೆ..?
ಕಥೆ ಮುಗಿದ ಮೇಲೆ ಅತ್ತೆ ಮೆಲ್ಲನೆಬ್ಬಿಸಿ ಕರೆದುಕೊಂಡು ಹೋಗಿ ತನ್ನ ಆ ಪಕ್ಕ ಈ ಪಕ್ಕ ಇಬ್ಬರನ್ನೂ ಮಲಗಿಸಿಕೊಂಡು ಕಥೆಯ ಭೂತ ಕನಸಿನಲ್ಲಿ ಬ೦ದರೆ ಹೆದರಬಾರದೆಂದು ಇಬ್ಬರ ಮೈ ಮೇಲೂ ಕೈ ಇಟ್ಟು ಕೊಂಡು ಮಲಗಿಸಿಕೊಳ್ಳುತ್ತಿರಲಿಲ್ಲವೇ?
ಅತ್ತೆ ಅಂದರೆ ಹಾಗೆ ಇರೋದು!
ಮೋಡ ಕವಿದು ಕತ್ತಲೆ ಕವಿದಂತೆಲ್ಲ ನೆನಪುಗಳೆಲ್ಲ ಮಿಂಚು ಮಿಂಚು..
ಹನಿದು ಕಣ್ಣೆಲ್ಲ ನೀರ್ಕಾಲುವೆ..!
ಪಗಡೆಯ ಕಾಯಿಗಳನ್ನೆಲ್ಲ ಎತ್ತಿಡಲು ಹೋದರೆ ಕಾಯಿಗಳೆಲ್ಲಾ ಅತ್ತೆಯ ಮುಖಗಳೇ ಆದವಲ್ಲ..! ಕುಣಿಯುತ್ತಾ ಕರೆಯುತ್ತಿರುವಳೇ ? ಪಗಡೆ ಆಡೋಣವೆಂದು.... ಪಟದ ಚೌಕಗಳೆಲ್ಲಾ ಮಾಚಭಟ್ಟರ ಕತೆಯ ಪಾತ್ರಗಳಾಗಿ ಹೊರಳಿ ಹೊರಳಿ ನೋಡುತ್ತಿವೆಯೇಕೆ..?
ಕಿರ್ರೋ .... ಕೀಕ್..ಕೀಕ್... ಕಿರ್ರೋ... ಕೀಕ್ ಕೀಕ್..
ಮಕ್ಕಳು ಬಂದರೇ? ಇಷ್ಟು ಬೇಗ ಸಮಯ ಕಳೆದು ಹೋಯಿತೇ...?
ಮತ್ತೆ ಯಾಕೋ ಕಳೆದುಹೊಗಬೇಕೆನಿಸುತ್ತಿದೆ.....!