Thursday, October 29, 2009

ಬನ್ನಿರಲ್ಲ...ಬ್ಲಾಗೂರ ನನ್ನ ಮನೆಗೆ ...

ಬ್ಲಾಗೂರಲ್ಲೊಂದು ಸೈಟು ಮಾಡಿದ್ದೇನೆ
ಹಾಗೇ ಅಡಿಪಾಯ ಹಾಕಿದ್ದೇನೆ ...
ಪುಟ್ಟ ಮನೆ ಕಟ್ಟುತ್ತಿದ್ದೇನೆ........
ಒಂದೇ ಬಾಗಿಲು..ನಾಲ್ಕು ಕೋಣೆ
ಚಿಕ್ಕ ಪುಟ್ಟ ಕಿಟಕಿಗಳು....ಅಲ್ಲಲ್ಲಿ ಗೂಡು ಕಪಾಟು..
ಕಟ್ಟುತ್ತೇನೆ ..ಕೀಳುತ್ತೇನೆ....
ಮತ್ತೆ ಹಾಗೇ ಮೆತ್ತುತ್ತೇನೆ ..ಸಿಂಗಾರ ಮಾಡುತ್ತೇನೆ....
ನನ್ನ ಮನೆ...ನನ್ನ ಇಷ್ಟ...ಕೆಲವೊಮ್ಮೆ ಕಷ್ಟ ..ಸಮಯ ನಷ್ಟ.....!
ಅನುಭವ ಹೊಸತು ..ಮನದಲ್ಲೇ ಮಸೆತು....
ಕಟ್ಟಬೇಕಿದೆ ಅರಮನೆ......!
ನಿಮಗೊಂದು ನೆರೆಮನೆ....!
ಬಾಗಿಲಿಗೆ ರಂಗೋಲಿ ..ಗೋಡೆಗೆ ಚಿತ್ತಾರ..
ಹೊಸಿಲಿಗೆ ತೋರಣ....ರುಚಿಸಬಲ್ಲ (?) ಹೂರಣ ...
ಕಟ್ಟುತ್ತಿದ್ದೇನೆ ಇನ್ನೂ ...ಕಟ್ಟಬೇಕಿದೆಯಿನ್ನೂ....
ಮೆತ್ತು ....ಮೇಲ್ಮೆತ್ತು ...
ಹೀಗೆ ಹಲಹತ್ತು ......
ಬರುತ್ತಾರೆ ..ಅಕ್ಕ ಪಕ್ಕದವರು ಹೀಗೆ.... ಒಳಗೆ...
ನೋಡುತ್ತಾರೆ..ಮಾತನಾಡುತ್ತಾರೆ.
ಕೆಲವರು ಉಳಿಯುತ್ತಾರೆ...ಸಲಹೆ ಕೊಡುತ್ತಾರೆ...
ಕಷ್ಟ ಸುಖ ಹಂಚುತ್ತಾರೆ.....
ಕರೆಯುತ್ತಾರೆ .....ತಮ್ಮ ಮನೆಗೆ....
ಇಡುತ್ತಾರೆ ತಮ್ಮದೊಂದು ನುಡಿಮುತ್ತ.....
ಮನೆಯ ಶೋಕೇಸ್ ಒಳಗೆ .....
ಹ್ಞಾ ....ಬನ್ನಿರಲ್ಲ ..ನೀವು ಬ್ಲಾಗೂರಿಗೆ ...
ಮನೆಯೊಂದ ಕಟ್ಟಿರಲ್ಲ...!
ಜಾತಿಯಿಲ್ಲ...ಮತವಿಲ್ಲ...
ನಿಮ್ಮ ದನಿ ನಿಮ್ಮದು ..ನನ್ನ ದನಿ ನನ್ನದು,
ಅನುಭವದ ಮೂಟೆ ..ನಗೆ ಬುಗ್ಗೆ ವೂಟೆ...
ಸಂಪೂರ್ಣ ಸ್ವಾತಂತ್ರ್ಯ ...!
ನನ್ನದೇ ಮನೆಗೊಂದು ಇಟ್ಟಿದ್ದೆನಲ್ಲ ಹೆಸರ....
ಚುಕ್ಕಿ ಚುಕ್ಕಿ ಸೇರಿಸಿ ಚುಕ್ಕಿ ಚಿತ್ತಾರ....!
ನಿಮ್ಮೆಲ್ಲರ ಬರುವು ತರುವುದಲ್ಲ ....!
ಒಂದಷ್ಟು ಖುಷಿ ...ಸಂತೋಷ...
ಮನವೆಲ್ಲ ಉಬ್ಬಿ....ಹೆಮ್ಮೆ ಒಮ್ಮೊಮ್ಮೆ.....
ಬರುವಿರಲ್ಲ ...!? ಬ್ಲಾಗೂರ ನನ್ನ ಮನೆಗೆ.........!!!!!!!

Monday, October 26, 2009

ಕ್ಯಾಮರಾ ಕೊಂಡ ತಪ್ಪಿಗೆ..

ನೋಡುವ ಮುನ್ನ....

ಹ್ಞಾ ......ನಾನೇನು ಉತ್ತಮ ಛಾಯಾಗ್ರಾಹಕಿಯು ಅಲ್ಲಾ . ಛಾಯಾಗ್ರಹಣ ನನ್ನ ಹವ್ಯಾಸವೂ ಅಲ್ಲ. ನನ್ನವರಲ್ಲಿ ಹಠ ಹಿಡಿದು ಕ್ಯಾಮರಾ ಕೊಂಡ ತಪ್ಪಿಗೆ ಅಲ್ಲಲ್ಲಿ ಕ್ಲಿಕ್ಕಿಸಿದ್ದೇನೆ... ಆಯ್ದ ಕೆಲವನ್ನ ನನ್ನ ಬ್ಲಾಗಿನರಮನೆಯ ಗೋಡೆಗೆ ಇಳಿ ಬಿಟ್ಟಿದ್ದೇನೆ.. ದೃಷ್ಟಿಯಾಗದಿರಲೆಂದು....!!!!!??? ಹೆಲಿ ಕೊರ್ನಿಯಾದ ಚಲುವು ...


ಷೋಡಶಿ ....
ಬಾನಿನಲ್ಲೇಕೆ ಬೆಣ್ಣೆ ಕಾಯಿಸುತ್ತಿದ್ದಾರೆ.......?

ನೀರ್ಗನ್ನಡಿ...


ರೆಕ್ಕೇ ....ಹರಿದಾ.....ಚಿಟ್ಟೇಯು ನಾನು....


ಮುಗುದೆಯ ಚಲುವ ನೋಡಾ....
ಛೀ ..ಕಳ್ಳಿ....Wednesday, October 21, 2009

ಆಟಿಸಂ ...ಒಂದು ಭಿನ್ನತೆ.

ಮೊದಲು ಇದನ್ನು ಪೀಟಿಕೆಯಿಂದ ಶುರು ಮಾಡೋಣ.
ಆಪಕೀ ಅಂತರಾ....ಎನ್ನುವ ಒಂದು ಮೆಘಾ ಧಾರಾವಾಹಿ ಝೀ ಟೀವಿಯಲ್ಲಿ ದಿನಾಲು ರಾತ್ರಿ ೮.೩೦ ರಿಂದ ಪ್ರಸಾರವಾಗುತ್ತಿದೆ.ಇದು ಇತ್ತೀಚಿನ ದಿನಗಳಲ್ಲಿ ಪ್ರಸಾರವಾಗುತ್ತಿರುವ , ಮನೋವಿಜ್ಞಾನಕ್ಕೆ ಸಂಬಂಧಿಸಿದ  ಒಂದು ಉತ್ತಮ ಧಾರಾವಾಹಿ ಎನ್ನಬಹುದು.

ಇದರ ಕಥಾವಸ್ತುವೇ ಆಟಿಸಂ.ಒಂದು ಆಟಿಸ್ಟಿಕ್ ಮಗು ಮನೆಯಲ್ಲಿದ್ದರೆ ಆ ಸಂಸಾರ ಏನೆಲ್ಲಾ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ ಎನ್ನುವುದನ್ನು ತುಂಬಾ ವಿವರವಾಗಿ,ನೈಜವಾಗಿ ತೋರಿಸುತ್ತಿದ್ದಾರೆ.ನೆರೆಹೊರೆಯವರ ತಿರಸ್ಕಾರ ,ಸಮಾಜದ ಪೂರ್ವಾಗ್ರಹ ,ನಂತರದಲ್ಲಿ ಆಟಿಸಂ ಬಗ್ಗೆ ಅರಿವು ಮೂಡಿಸುವ ಪ್ರಯತ್ನ,ಥೆರಪಿ ಇವುಗಳನ್ನು ತುಂಬಾ ವಿಸ್ತಾರವಾಗಿ ಚಿತ್ರಿಸಿದ್ದಾರೆ.

ನಮ್ಮ ನಡುವೆಯೇ ಈ ರೀತಿಯ ಮಗುವೊಂದಿದ್ದಿದ್ದರೆ ಧಾರಾವಾಹಿಯಲ್ಲಿ ವರ್ಣಿಸಿದಂತಹ ಸಮಸ್ಯೆಗಳೇ ಉದ್ಭವಿಸುತ್ತಿತ್ತೇನೋ..?ಸುತ್ತಲಿನ ಸಮಾಜ ಮಗುವಿನ ತೊಂದರೆಯನ್ನು ಹುಚ್ಚು ಎಂದು ಪರಿಗಣಿಸಿ ದೂರ ಸರಿಸುವುದು ಹಾಗು ತಾಯ್ತಂದೆಯರ ವಿಹ್ವಲತೆ ನೋಡುಗರನ್ನು ಯೋಚನೆಗೆ ಹಚ್ಚುತ್ತದೆ.


ಹಾಗಾದರೆ ಈ ಆಟಿಸಂ ಎಂದರೆ ಏನು ?ಅದರ ಗುಣ ಲಕ್ಷಣಗಳೇನು?

ಮೆದುಳಿನಲ್ಲಿರುವ ನರಗಳ ಬೆಳವಣಿಗೆಯಲ್ಲಿನ ಅವ್ಯವಸ್ಥೆಯೇ ಆಟಿಸಂ ಅಥವಾ ಆಟಿಸ್ಟಿಕ್.
ಇಂತಹಾ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಸಾಮಾಜಿಕ ಹೊಂದಾಣಿಕೆ ಮತ್ತು ಭಾಷೆಯ ಬಳಕೆಯಲ್ಲಿನ ತೊಡಕು ಎದ್ದು ಕಾಣುವ ಲಕ್ಷಣಗಳಾಗಿವೆ.ಇದು ಮುಖ್ಯವಾಗಿ ಆನುವಂಶಿಕ ತಳಹದಿಯನ್ನು ಹೊಂದಿದ್ದರೂ ಕೂಡಾ ಅದನ್ನು ಅರ್ಥೈಸಿ ಕೊಳ್ಳುವುದು ತುಂಬಾ ಕಠಿಣ ತರದ್ದಾಗಿದೆ. ಆಟಿಸಂ ನ ಲಕ್ಷಣಗಳು ಸುಮಾರಾಗಿ ಎರಡು ವರ್ಷದ ಮಕ್ಕಳಿರುವಾಗಿನಿಂದಲೇ ಕಾಣಿಸಿಕೊಳ್ಳುತ್ತದೆ.ಇದು ಮಗುವಿನಿಂದ ಮಗುವಿಗೆ ಭಿನ್ನವಾಗಿರುತ್ತದೆ.ಕಣ್ಣುಗಳಲ್ಲಿ ಕಾಂತಿ ಇಲ್ಲದಿರುವಿಕೆ,ಸಂವಹನದ ಕೊರತೆ ,ಪುನರಾವರ್ತಿತ ಕ್ರಿಯೆಗಳು(ಮಾಡಿದ್ದನ್ನೇ ಮಾಡುವುದು,ಒಂದೇ ಶಬ್ಧವನ್ನು ಪದೇ ಪದೇ ಉಚ್ಚರಿಸುತ್ತಿರುವುದು) ಒಬ್ಬರನ್ನೇ ನೆಚ್ಚಿ ಕೊಳ್ಳುವುದು ಇವು ಇತರ ಲಕ್ಷಣಗಳಾಗಿವೆ.
ಆದರೆ ಆಟಿಸ್ಟಿಕ್ ಮಕ್ಕಳು ಸಾಮಾನ್ಯ ಮಕ್ಕಳಂತೆ ನೆನಪಿನ ಶಕ್ತಿ ,ಸಮಸ್ಯೆ ಬಿಡಿಸುವಿಕೆ,ಗಣಿತ,ಕಲೆ ಇವುಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಬಲ್ಲರು.


ಪೋಷಕರು ಚಿಕ್ಕಂದಿನಲ್ಲಿಯೇ ಈ ತೊಂದರೆಯನ್ನು ಗುರುತಿಸಿ ಸೂಕ್ತ ಪಾಲನೆ, ಪೋಷಣೆ ಮತ್ತು ಉತ್ತಮ ತರಬೇತಿಯನ್ನು ಕೊಟ್ಟಲ್ಲಿ ಅವರನ್ನು ಕೂಡಾ ಸಮಾಜದ ಮುಖ್ಯವಾಹಿನಿಯಲ್ಲಿ ತರುವುದು ಕಷ್ಟ ಸಾಧ್ಯವೇನಲ್ಲ.ಸಮಾಜ ಇವರ ತೊಡಕನ್ನು ಅರಿತುಕೊಂಡು ,ಇದೊಂದು ರೋಗ ,ಹುಚ್ಚು ಸ್ವಲ್ಪ ಲೂಸು ಎಂಬಿತ್ಯಾದಿ ಹಣೆ ಪಟ್ಟಿ ಕಟ್ಟದೆ ಕೈಲಾದ ಸಹಾಯವನ್ನು ಮಾಡುವುದು ಹೊಣೆಯರಿತಕೆಲಸವಾಗಿದೆ.
ಇದು ಒಂದು ಅಸಮತೆ ಅಥವಾ ಭಿನ್ನತೆಯೇ ಹೊರತು ರೋಗವಲ್ಲ .ಆದರೆ ಇದಕ್ಕೆ ಉಪಶಮನವೇ ಹೊರತು ನಿವಾರಣೆ ಇಲ್ಲವೇ ಇಲ್ಲ.ಆಟಿಸ್ಟಿಕ್ ಮಗು ಆಟಿಸ್ಟಿಕ್ ವ್ಯಕ್ತಿಯಾಗಿಯೇ ಜೀವಿಸುವುದು ಅನಿವಾರ್ಯ.ನಿಯಮಿತ ಶಿಕ್ಷಣ ,ಥೆರಪಿ ಇವುಗಳಿಂದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳ ಬಹುದು ಅಷ್ಟೆ.
ಇರುವ ಸಮಸ್ಯೆಯನ್ನು ಒಪ್ಪಿಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಮಾತ್ರ ಇದಕ್ಕೆ ಪರಿಹಾರ.ಪೋಷಕರ ಸಹನೆ,ಸಹಕಾರ ಅತ್ಯಗತ್ಯ.

Thursday, October 8, 2009

ಕನಸುಗಳು

ಕನಸುಗಳು ಏಕೆ ಬೀಳುತ್ತವೆ ?ಇದುಒಂದು ಮಿಲಿಯನ್ ಡಾಲರ್ ಪ್ರಶ್ನೆ.ಇದುವರೆಗೂ ಕನಸುಗಳನ್ನು ಕುರಿತಾಗಿ ಅನೇಕ ಸಂಶೋಧನೆಗಳು ನಡೆದರೂ ಯಾರಿಗೂ ಈ ಪ್ರಶ್ನೆಗೆ ಸಮರ್ಪಕ ಉತ್ತರ ದೊರಕಿಲ್ಲ.ಅಲ್ಲದೆ ಮೆದುಳಿನ ಯಾವ ಭಾಗದಿಂದ ಕನಸು ಉತ್ಪತ್ತಿಯಾಗುತ್ತದೆಯೆಂದು ಕೂಡ ನಿಖರವಾಗಿ ತಿಳಿದಿಲ್ಲ.ಆದರೆ ನಿದ್ರೆಯ ಯಾವ ಸ್ಥಿತಿಯಲ್ಲಿ ಕನಸು ಬೀಳುತ್ತದೆ ಎನ್ನುವುದನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ.ಅನಿಯಂತ್ರಿತ ಕಣ್ಣುಗಳ ಚಲನೆಯನ್ನು ಹೊಂದಿದಂತಹ ನಿದ್ರೆಯಲ್ಲಿ ಕನಸುಗಳು ಹೆಚ್ಚಾಗಿ ಬೀಳುತ್ತವೆ ಹಾಗು ನೆನಪಿನಲ್ಲುಳಿಯುತ್ತವೆ.


ಕನಸುಗಳಿಗೆ ಅರ್ಥವಿದೆಯೇ?ಪ್ರಸಿದ್ದ ಮನೋವಿಶ್ಲೇ ಶಕ ಸಿಗ್ಮಂಡ್ ಫ್ರಾಯ್ಡ್ ತನ್ನ The intrepritation of dreams ಎನ್ನುವ ಪುಸ್ತಕದಲ್ಲಿ ಕನಸುಗಳನ್ನು ವಿವರಿಸಿದ್ದಾನೆ."ಮನಸ್ಸು ತಾನು ತಡೆ ಹಿಡಿದ ಆಸೆಗಳು ಹಾಗು ಅತೃಪ್ತಿಗಳನ್ನ ಪೂರೈಸಿಕೊಳ್ಳಲು ನಿದ್ರೆಯಲ್ಲಿ ಗುಪ್ತ ಸಂದೇಶಗಳ ಮೂಲಕ ಹೊರಹಾಕುವ ತಂತ್ರವೇ ಕನಸು"ಸಾಮಾನ್ಯವಾಗಿ ನಮಗೆ ಬೀಳುವ ಕನಸುಗಳ ಅರ್ಥಗಳು ಹೀಗಿರಬಹುದು.ಕನಸಿನಲ್ಲಿ ಹಾರಾಟ : ಹಾರಾಟ ಎನ್ನುವುದು ಸುಖಕ್ಕೆ ಸಂಬಂಧಿಸಿದೆ .ಯಾವುದೇ ತಲೆಬಿಸಿ ಹಾಗು ಜವಾಬ್ಧಾರಿ ಇಲ್ಲದಿದ್ದಾಗ ಹಾರಾಡುವ ಕನಸುಗಳು ಬೀಳುತ್ತವೆ.ಬೆತ್ತಲೆ: ಅನೇಕ ಸಲ ಸಾರ್ವಜನಿಕವಾಗಿ ಬೆತ್ತಲೆಯಾಗಿ ಕಾಣಿಸಿಕೊಂಡಂತೆ ,ಅದರಿಂದ ಮುಜುಗರಕ್ಕೊಳಗಾದಂತೆ ಕನಸುಗಳು ಬೀಳುತ್ತಿರುತ್ತವೆ.ನಮ್ಮ ಗೌಪ್ಯತೆಯು ಬಯಲಾದರೆ...... ಎನ್ನುವಂತಹ ಭಯವನ್ನು ಇದು ಸೂಚಿಸುತ್ತದೆ.ಕೆಲವು ವಸ್ತುಗಳು: ಗೋಡೆಗಳು ,ಚಿಕ್ಕಮನೆ ಅಥವಾ ಮುಚ್ಚಿದ ಬಾಗಿಲುಗಳು ಸತತವಾಗಿ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ,ಅದು ಲೈಂಗಿಕ ಅತೃಪ್ತಿಯನ್ನು ಸೂಚಿಸುತ್ತದೆ.ಬಾಲ್ಯದ ಅನುಭವಗಳು :ಚಿಕ್ಕಂದಿನಲ್ಲಿ ನಡೆದ ಘಟನೆಗಳು ಪದೇ ಪದೇ ಕಾಣಿಸಿಕೊಂಡರೆ ಅದು ವ್ಯಕ್ತಿಯ ಬೇಜವಾಬ್ಧಾರಿತನ ,ನೈತಿಕ ಸ್ಥೈರ್ಯದ ಕೊರತೆ ,ನಿರ್ಲಕ್ಷಕ್ಕೊಳಗಾಗಿರುವುದು ಇತ್ಯಾದಿ ನಕಾರಾತ್ಮಕ ಭಾವನೆಗಳನ್ನು ಪ್ರಕಟ ಪಡಿಸುತ್ತದೆ.ನಮ್ಮ ಮನೆಗಳಲ್ಲಿ ಹಿರಿಯರು ಹೇಳುತ್ತಿರುತ್ತಾರೆ .ಹೊಟ್ಟೆ ತುಂಬಾ ಊಟ ಮಾಡಿದ ಕನಸು ಬಿದ್ದರೆ ಆರೋಗ್ಯ ಕೆಡುತ್ತಿರುವ ಸೂಚನೆ ಎಂದು.ನನ್ನ ವಿಷಯದಲ್ಲಿ ಇದು ಬಹುತೇಕ ನಿಜವಾಗಿದೆ.ಹಾಗಾಗಿ ನಮಗೆ ಪದೇ ಪದೇ ಒಂದೇ ರೀತಿಯ ಕನಸುಗಳು ಬೀಳುತ್ತಿದ್ದರೆ ಅದನ್ನು ನಮ್ಮ ಜೀವನದ ಜೊತೆ ಹೋಲಿಸಿಕೊಳ್ಳಬಹುದು.ಪರಿಹಾರ ಕಂಡುಕೊಳ್ಳಬಹುದು.