Friday, April 15, 2011

ರೇಷ್ಮೆ ಹುಳುಗಳ ಜೀವನದಾಟ.. ಪಾಠ..

ಕೆಲವು ದಿನಗಳ ಮೊದಲು ಕೊಕ್ಕರೆ ಬೆಳ್ಳೂರಿನ ಕೊಕ್ಕರೆಗಳ ಫೋಟೋಗಳನ್ನು ಬ್ಲಾಗಿನಲ್ಲಿ ಪ್ರಕಟಿಸಿದ್ದೆನಷ್ಟೇ. ಅದೇ ಕೊಕ್ಕರೆ ಬೆಳ್ಳೂರಿನಿಂದ ವಾಪಾಸಾಗುವಾಗ ರಸ್ತೆ ಬದಿಯ ಮನೆಯೊಂದರ ಪಕ್ಕದ ನೆರಳಿನಲ್ಲಿ  ರೇಷ್ಮೆ ಹುಳುಗಳ  ಈ ಚಂದ್ರಿಕೆಗಳು ಕಾಣಿಸಿದವು. 'ಬಿಟ್ಟರೆ ಸಿಗದು ' ಎಂದುಕೊಳ್ಳುತ್ತಾ   ಜ್ಞಾನವನ್ನು ಭದ್ರಪಡಿಸಿಕೊಳ್ಳಲು ತರಾತುರಿಯಿ೦ದ ಕಾರಿಳಿದು ಫೋಟೋ ತೆಗೆಯಲು ಮುಂದಾದೆವು..ಅಷ್ಟೊತ್ತಿಗೆ ಆ ಮನೆಯ ಯಜಮಾನ ಸ್ವಯಂ ರೇಷ್ಮೆ ಕೃಷಿಕ ನಮಗೆ   ಮಾಹಿತಿಗಳೊಂದಿಗೆ ಒಳಗಡೆ    ಇರುವ ಮತ್ತಷ್ಟು ಚಂದ್ರಿಕೆಗಳನ್ನೂ ,ಅಟ್ಟಣಿಗೆಯಲ್ಲಿ  ಹಿಪ್ಪುನೇರಳೆ ಸೊಪ್ಪನ್ನು ಭಕ್ಷಿಸುತ್ತಿರುವ ರೇಷ್ಮೆ ಮರಿ ಹುಳುಗಳನ್ನೂ, ಬಲಿತ ಹುಳುಗಳೂ, ಕೋಶ ಮಾಡಿಕೊಳ್ಳುತ್ತಿರುವ [ಕಕೂನ್]  ಹುಳುಗಳ ಮತ್ತು ಕೋಶಗಳನ್ನೂ ತೋರಿಸಿ ಫೋಟೋ ತೆಗೆದುಕೊಳ್ಳಲು  ಅನುವು ಮಾಡಿಕೊಟ್ಟರು.  
ಅವರ ಹೊಟ್ಟೆ ತಣ್ಣಗಿರಲಿ.ಮಕ್ಕಳಿಗೆ ಒಂದು ಉತ್ತಮ ಪ್ರಾತ್ಯಕ್ಷಿಕೆ ದೊರೆತಂತೆ ಆಯಿತು.

ಅಂತೆಯೇ ನಾನೂ ಕೂಡಾ ಫೋಟೋದೊಂದಿಗೆ ಇನ್ನಷ್ಟು   ಮಾಹಿತಿಯನ್ನೂ ಹೊಂದಿಸಿ  ಮತ್ತಷ್ಟು ವಿಸ್ತರಿಸಿಕೊಳ್ಳಲು  ಅಂತರ್ಜಾಲಮುಖಿಯಾದೆ.


ಮೊದಲು ಕಾಣಿಸಿದ ತಟ್ಟಿಯ ಚಂದ್ರಿಕೆಗಳು 

ಹಿಪ್ಪುನೇರಳೆ ಸೊಪ್ಪನ್ನು ಭಕ್ಷಿಸುತ್ತಿರುವ ರೇಷ್ಮೆ ಹುಳುಗಳು.


ಬಾಂಬಿಕ್ಸ್ ಮೊರಿ     [  bombyx mori  ] ಎನ್ನುವ ಒಂದು ಜಾತಿಯ ಹಾತೆಯ ಲಾರ್ವೆಯೇ  ರೇಷ್ಮೆ ಹುಳು. ರೇಷ್ಮೆ ಇಲಾಖೆಯಲ್ಲಿ ಸಿಗುವ ಚಿಕ್ಕ ಲಾರ್ವೆಗಳನ್ನು ತಂದು ಈ ಹಿಪ್ಪುನೇರಳೆ ಸೊಪ್ಪಿನ ಅಟ್ಟಣಿಗೆಯ ಮೇಲೆ ಬಿಡುತ್ತಾರೆ. ಹುಳುಗಳಿಗೆ   ಸದಾಕಾಲ ಸೊಪ್ಪನ್ನು ತಿನ್ನುವುದೇ ಕೆಲಸ..ಸುಮಾರು ಇಪ್ಪತ್ತು -ಇಪ್ಪತೈದು ದಿನಗಳ ಕಾಲ ತಿಂದೂ ತಿಂದೂ ಬಲಿಯುತ್ತವೆ. ರೇಷ್ಮೆ ಸಾಕುವವರು ಹಿಪ್ಪು ನೇರಳೆ ತೋಟವನ್ನೂ ಹೊಂದಿರುತ್ತಾರೆ.



ರೈತರು ಎಳೆ ಹುಳುಗಳಿಗೆ 'ಕಾಯಿ' ಎಂದೂ, ಬಲಿತವಕ್ಕೆ 'ಹಣ್ಣು' ಎಂದು ಸರಳವಾಗಿ ವಿವರಿಸಿದರು.

ಬಲಿತ ಹುಳುಗಳು 

ರೇಷ್ಮೆ ಹುಳುಗಳು ಈ ಅವಧಿಯಲ್ಲಿ ನಾಲ್ಕು ಹಂತಗಳಿಂದ ಹೊರ ಚರ್ಮವನ್ನು ಗಟ್ಟಿಗೊಳಿಸಿಕೊಳ್ಳುತ್ತದೆ [molt]. ಚರ್ಮದ  ಬಣ್ಣ ಹಳದಿಯಾಗುತ್ತದೆ. ಸೊಪ್ಪು ತಿನ್ನುವುದನ್ನು ನಿಲ್ಲಿಸುತ್ತದೆ. ಐದನೇ ಹಂತವೇ 'ಪ್ಯೂಪ'.
ಆಗ ಅದನ್ನು ಅಟ್ಟಣಿಗೆಯಿಂದ ಹೊರ ತೆಗೆದು ಚಂದ್ರಿಕೆಯಲ್ಲಿ ಬಿಡುತ್ತಾರೆ. 


ಕೋಶದ ಸಿದ್ದತೆಯಲ್ಲಿರುವ ಹುಳು
 
ತನ್ನ ಜೊಲ್ಲು ರಸದಿಂದ ತನ್ನ ಸುತ್ತಲೂ ಕೋಶವನ್ನು ಹೆಣೆಯಲು ತೊಡಗುತ್ತದೆ. ಇದು ಸ್ರವಿಸುವ  ಜೊಲ್ಲು ರಸದಲ್ಲಿ ಎರಡು ಬಗೆಯ ಪ್ರೋಟೀನ್ ಗಳಿವೆ. fibroin ಮತ್ತು  sericin .  ಫೈಬ್ರೊಇನ್  ಎಳೆಗಳಾಗುತ್ತವೆ ಮತ್ತು ಸೆರಿಸಿನ್ ಅದನ್ನು ಗಟ್ಟಿಗೊಳಿಸಲು ಸಹಾಯಮಾಡುತ್ತದೆ. ಅದು ನಿಶ್ಚಲ ಸ್ಥಿತಿಯಲ್ಲಿರುವ ಪ್ಯೂಪದ ಸಂರಕ್ಷಣೆಗಾಗಿ ಕೋಶವನ್ನು ನಿರ್ಮಿಸಿಕೊಳ್ಳುತ್ತದೆ. ಸುಮಾರು ಮೂರು ದಿನಗಳಲ್ಲಿ ಕೋಶ ಸಿದ್ಧವಾಗುತ್ತದೆ.

ಪೂರ್ಣಗೊಂಡ ಕೋಶ [cocoon ]




ಈ ಕಕೂನ್ ಎಷ್ಟು ಗಟ್ಟಿಯಾಗಿರುತ್ತದೆಂದರೆ   ಬರಿ ಕೈಗಳಿಂದ ಇದನ್ನು ಛೇಧಿಸಲಾಗದು. ಒಂದು ಕಕೂನ್   ಸಾವಿರ ಅಡಿಗಳಿಂದ ಮೂರು  ಸಾವಿರ ಅಡಿ ಉದ್ದದ ಎಳೆಯಿಂದ  ಮಾಡಲ್ಪಟ್ಟಿರುತ್ತದೆ.  ಈ ಹಂತದಲ್ಲಿಯೇ ಇದನ್ನು ರೇಷ್ಮೆ ಉತ್ಪನ್ನಗಳಿಗಾಗಿ ಬಳಸುವರು.ಕುದಿ ನೀರಿನಲ್ಲಿ ಈ ಕಕೂನುಗಳನ್ನು ಮುಳುಗಿಸಿ ಹುಳುಗಳನ್ನು ಸಾಯಿಸುತ್ತಾರೆ. ನಂತರ ನೂಲನ್ನು ತೆಗೆಯುತ್ತಾರೆ.

ಈ ಕಕೂನನ್ನು ಹಾಗೆಯೇ ಇಟ್ಟರೆ ಒಳಗಿನ ರೇಷ್ಮೆಹುಳ  ಹಾತೆಯಾಗಿ ಹೊರಬರುತ್ತದೆ.  ಇದು ಸ್ರವಿಸುವ  ಪ್ರೋಟಿಯೋಲಿಟಿಕ್ ಕಿಣ್ವ  ಎಳೆಗಳನ್ನು ಕರಗಿಸಿ ಹೊರಬರಲು ಸಹಾಯಮಾಡುತ್ತದೆ.

ಪ್ರಕೃತಿ ತನ್ನ ಮಕ್ಕಳಿಗೆ ಬದುಕಲು ಎಷ್ಟೆಲ್ಲಾ  ವೈವಿಧ್ಯಮಯವಾಗಿ   ಸಹಾಯ ಮಾಡುತ್ತದೆ. ಮನುಷ್ಯನೆಂಬ ಮಗ  ಮಾತ್ರ  ಅದೆಲ್ಲಾ ತನಗೆ ಸೇರಿದ್ದು ಎನ್ನುವಂತೆ  ಅದನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಾನೆ..

ರೇಷ್ಮೆ ಹುಳುಗಳನ್ನು ಬಿಸಿನೀರಿನಲ್ಲಿ ಹಾಕಿ ಕೊಲ್ಲುತ್ತಾರೆಂದು ಕೇಳಿದಾಕ್ಷಣ ನನ್ನ ಮಗಳು 'ಪಾಪ...!  ನನಗಂತೂ ರೇಷ್ಮೆ ಬಟ್ಟೆ ಬೇಡ.. ಜೀನ್ಸ್ ಬಟ್ಟೆಯೇ ಸಾಕು' ಎನ್ನುವ ಸ್ಟೇಟ್ ಮೆಂಟ್ ಕೊಟ್ಟಿದ್ದಾಳೆ..!!
ಹಾತೆಯಾಗಿ ಹೊರ ಬರುವುದನ್ನು ನೋಡಲೆಂದು ಒಂದು ಕಕೂನನ್ನು ಅವರಲ್ಲಿ ಇಸಿದುಕೊಂಡು ಬಂದಿದ್ದೆವು. ಶಿಶಿರನ ಪ್ರಯೋಗಶೀಲತೆಯ ಪರಿಣಾಮದಿಂದ ಅದು ಹಾತೆಯಾಗುವ ಬದಲು ಮೋಕ್ಷ ಹೊಂದಿತು..!

ಅಂತೂ ಮಕ್ಕಳ ರಜೆಯ ಪ್ರಯುಕ್ತ ಹೋಗಲಾದ ಒಂದು ದಿನದ ಪ್ರವಾಸಕ್ಕೆ ಶೈಕ್ಷಣಿಕ ರೂಪ ಕೊಟ್ಟು ಅರ್ಥ ಪೂರ್ಣವಾಗುವಲ್ಲಿ ಶ್ರಮಿಸಿದ್ದೇವೆ...!


ವಂದನೆಗಳು 

15 comments:

  1. ಮಾಹಿತಿಪೂರ್ಣ ಲೇಖನ... ನಮಗೆ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಇದರ ಕುರಿತು ಒಂದು ಪಠ್ಯವಿತ್ತು. ಮತ್ತೊಮ್ಮೆ ನೆನಪಿಸಿತು ಲೇಖನ. ಮಕ್ಕಳಿಗೆ ಉಪಯುಕ್ತವಾಗಿದೆ.

    ನಿಜ.... ಪಾಪದ ಹುಳುವನ್ನು ನಿದ್ರೆಯಲ್ಲೇ ಸಾಯಿಸಿ ನಮ್ಮ ಅಂದ ಚಂದಕ್ಕೆ ಬಳಸಿಕೊಳ್ಳುತ್ತೇವೆ ರೇಷ್ಮೆಯನ್ನು! ಆ ಪಾಪ ನಮ್ಮನ್ನು ದೈಹಿಕವಾಗಿ ಸುತ್ತುಕೊಳ್ಳುವುದು ಬೇರೆ!!! ಆದಷ್ಟು ಕಡಿಮೆ ರೇಷ್ಮೆ ಬಟ್ಟೆಗಳನ್ನು ಧರಿಸುವುದು.. ಖರೀದಿಸುವುದು ಉತ್ತಮವೇನೋ ಎಂದೆನಿಸುತ್ತದೆ.

    ReplyDelete
  2. sannavaniddaaga naanu kutuhaladinda namma urinalli reshmesaakaanike maaduva raitara maneyalli ivugalannu nodalu hoguttidde jotege avugalannu chandrikege biduvadu, mattu chandrikeyinda gudannu tegeyuvadu, soppu hokuvadu, hulugalannu tatte badalaayisuvadaralli sahaaya maaduttiddu nenapayitu tamma lekhana odi.

    ReplyDelete
  3. ವಿಜಯಶ್ರೀ,
    ರೇಶ್ಮೆ ಹುಳದ ಜೀವನಚಕ್ರದ ಅದ್ಭುತ ವಿವರಗಳನ್ನು ಚಿತ್ರಸಮೇತ ಕೊಟ್ಟಿರುವಿರಿ. ನಿಮಗೆ ಧನ್ಯವಾದಗಳು. ರೇಶಿಮೆ ಬಟ್ಟೆ ಬೇಡವೆಂದು ಘೋಷಿಸಿದ ನಿಮ್ಮ ಮಗಳ ಅಂತಃಕರಣವು ನನ್ನ ಮನಸ್ಸನ್ನು ಕಲಕಿದೆ. ಆ ಪುಟ್ಟಿಗೆ ನನ್ನ
    ನೂರು ವಂದನೆಗಳು. (ಕಂಚಿ ಶಂಕರಾಚಾರ್ಯ ಪೀಠದ ಹಿಂದಿನ ಗುರುಗಳೂ ಸಹ ರೇಶಿಮೆ ಬಟ್ಟೆಯನ್ನು ತೊಡದಿರುವ ಸಂಕಲ್ಪ ಮಾಡಿದ್ದರು.)

    ReplyDelete
  4. ವಿಜಯಶ್ರೀ...ನಿಮ್ಮ ಲೇಖನ ನನಗೆ ನನ್ನ ಸ್ಕೂಲ್ ದಿನಗಳನ್ನು ನೆನಪಿಸ್ತು...ನಾವು ಮನೆಲಿ ರೇಶ್ಮೆ ಕೃಷಿ ಮಾಡ್ತಿದ್ವಿ..ಹುಳಕ್ಕೆ ಬೇಕಾಗುವ ಸೊಪ್ಪನ್ನು ತೋಟದಿಂದ ಕುಯ್ದು ತಂದರೆ ಮಾತ್ರ ನಮಗೆ ಸ್ಕೂಲಿಗೆ ಹೋಗಲು ಬ್ಯಾಗ್ ಸಿಕ್ತಿದ್ದಿದ್ದು (ಪ್ರಾಥಮಿಕ ಹಂತಗಳಲ್ಲಿ ಮಾತ್ರ..ಹೈಸ್ಕೂಲ್ ಸಮಯಕ್ಕೆ ಯಿಯಾಯಿತಿ ಸಿಕ್ತು ಅನ್ನೋದು ಬೇರೆ ವಿಷಯ). ಸಚಿತ್ರ ಮಾಹಿತಿ ಭರಿತ ಲೇಖನ...ಅವುಗಳ ಮೋಲ್ಟಿಂಗ್ ಹಂತವನ್ನ ನಾವು ಜ್ವರ ಬಂದಿದೆ ಎನ್ನುತ್ತಿದ್ವಿ..ಯಾಕಂದ್ರೆ ಆಗ ಅವು ಸೊಪ್ಪು ತಿನ್ನೊಲ್ಲ...
    ಆದ್ರೆ ರೇಶ್ಮೆ ಸೀರೆಯನ್ನ ತೊಡೋದಿಲ್ಲ ಅನ್ನೋದು ... ಯಾಕೋ ರೇಶ್ಮೆಸೀರೆಗೆ ಬೇಜಾರಾಗಿದೆ ಅನ್ಸುತ್ತೆ...ಹಹಹ...

    ReplyDelete
  5. ಮಾಹಿತಿಪೂರ್ಣ ಲೇಖನ

    ReplyDelete
  6. namma oorallu modalu reshme krushi maadta idru, nimma lekhanda moolaka aa haleya nenapugalu marukalisidavu....upayukta lekhana...

    ReplyDelete
  7. ಒಳ್ಳೆಯ ಲೇಖನ, ನಾವು ಚಿಕ್ಕವರಿರುವಾಗ ನಮ್ಮ ಮನೆಯಲ್ಲೂ ರೇಷ್ಮೆ ಹುಳುಸಾಕಾಣಿಕೆ ನೆಡಿತಾ ಇತ್ತು.ಹಿಂದಿನ ದಿನಗಳನ್ನ ನೆನಪಿಸಿದ್ದೀರಿ ಧನ್ಯವಾದಗಳು... ರೇಷ್ಮೆ ಹುಳುವಿನ ಬಗ್ಗೆ ತಿಳಿದರೆ ರೇಷ್ಮೆ ಸೀರೆ ಬೇಡವೇ ಬೇಡ ಎನ್ನಿಸುತ್ತೆ. ಆದರೆ ಎಷ್ಟೋ ಮನೆಗಳಲ್ಲಿ ಪೂಜೆಗೆ ರೇಷ್ಮೆ ಸೀರೆ ತೊಟ್ಟು ಪೂಜೆ ಸಲ್ಲಿಸಿದರೆ ಮೈಲಿಗೆ ಇಲ್ಲ ಎಂದು ಕೇಳಿದ್ದೇನೆ... ಇದು ನಿಜವೇ ಅಥವಾ ಮೂಢನಂಬಿಕೆಯೋ ಗೊತ್ತಿಲ್ಲ...

    ReplyDelete
  8. ಉಪಯುಕ್ತ ಲೇಖನ...ಚೆನ್ನಾಗಿದೆ

    ReplyDelete
  9. madam,

    naanu chikkavaniddaga reshme hulugalannu beleyuvadara bagege tumba nodiddene, namma doddappana maneyalli beleyuttiddaru

    nimma baraha ishtavaayitu

    ReplyDelete
  10. Nammooralli reshme hulugalannu saakuttaare..
    MariHulugalannu 'chaki kendra'dinda taruttaare,kelavaru papernalli antisida rave yante kaanuva motte tandu mari maadisi saakuttare,
    hulu saakida maneyavaru beraava janarannu mane olage serisalu anjuttare.. Mailige endu.

    ReplyDelete
  11. chikkavaniddaaga odidde...

    eega chitra sahita maahiti sikkitu...
    dhanyavaada maDam...

    ReplyDelete
  12. ಅತ್ಯುತ್ತಮವಾದ ಲೇಖನ ವಿಜಯಶ್ರೀ‍ರವರೇ.. ಬಹಳಾಷ್ಟು ವಿಷಯಗಳನ್ನು ತಿಳಿಸಿದ್ದೀರಿ.. ಪ್ರಾಣಿ ಹತ್ಯೆ ಮಾಡಬಾರದೆಂದು ಜನರು ಮಾಂಸಾಹಾರ ಬಿಡುತ್ತಾರೆ.. ಆದರೆ ಇದನ್ನು ಕಂಡು ನನಗೆ ಜನರು ರೇಷ್ಮೆ ಬಟ್ಟೆ ಉಡುವುದು ಬಿಡಬೇಕೆನಿಸಿತು.. ಹಿಂದೆ ನಾವೂ ಸಣ್ಣವರಿದ್ದಾಗ ಇದೇ ರೀತಿ ರೇಷ್ಮೆ ಕಾರ್ಖಾನೆಯೊಂದಕ್ಕೆ ಹೋಗಿ ಕಕೂನ ಒಂದನ್ನು ಮನೆಗೆ ತಂದಿದ್ದೆವು. ಆಗಲೂ ನನ್ನ ಹಾಗು ನಮ್ಮಣ್ಣನ ಪ್ರಯೋಗಶೀಲತೆಯ ಪರಿಣಾಮವಾಗಿ ಅದಕ್ಕೆ ಮೋಕ್ಷ ಪ್ರಾಪ್ತಿಯಾಗಿತ್ತು. ಹಳೆಯ ಸವಿ ನೆನಪು ಕಣ್ಣಮುಂದೆ ಹಾದು ಹೋಯಿತು. ಧನ್ಯವಾದಗಳು!

    ReplyDelete
  13. ಮೇಡಮ್,
    ರೇಷ್ಮೆಯ ಬಗ್ಗೆ ಮಾಹಿತಿ ಮತ್ತು ಚಿತ್ರಸಹಿತ ವಿವರಣೆ..ನನಗೂ ಹುಳುವನ್ನು ಸಾಯಿಸುವ ವಿಚಾರ ಮನಸ್ಸಿಗೆ ಬೇಸರವೆನಿಸಿತು. ಆದ್ರೂ ವಿಧಿ ಇಲ್ಲ ಅಲ್ಲವೇ..

    ReplyDelete
  14. thumbaane ishta aayitu.. gottE iralilla ishtella steps ive antha :) thumba thnaks..

    ReplyDelete
  15. vijayashri medam olleya maahiti nididdakkagi dhanyavaadagalu.naanu saha reshmehuluvina hantagalannu tumba aaseinda serehididittukondiddene.aadare adara bagge bareyalu samayavaagiralilla.adann univu bahala samrapakavaagi maadiruvuddakke thanks.

    ReplyDelete