Sunday, September 28, 2014

ಬ್ಲಾಗಿಗೊಂದು ಬರ್ತ್ಡೇ ಸ್ಪೆಷಲ್ ..!!!

 ಎಲ್ಲರಿಗೂ ದಸರೆಯ ಹಾರ್ದಿಕ ಶುಭಾಶಯಗಳು.

 ನನ್ನ ಬ್ಲಾಗು ಅನೇಕ ದಿನಗಳಿಂದ ಅನ್ನ, ನೀರು ಕಾಣದೆ ಸೊರಗಿ ಸೊರಗಿ ತೆನಾಲಿ ರಾಮನ ಬೆಕ್ಕಾಗಿತ್ತು. ಈ ವರ್ಷ ಔಷಧಿಗೆಂಬಂತೆ ಐದೇ ಐದು ಅಪ್ ಡೇಟ್ ಗಳು .. ಅಂತಾದ್ದರಲ್ಲಿ  ದಸರೆಯ ಸಮಯದಲ್ಲಿ  ಧುತ್ತನೆ  ಬಂದಿಳಿದಿದ್ದೇನೆಂದರೆ   ದುರ್ಗೆಯಂತೆ ಯಾರನ್ನಾದರೂ ಸಂಹರಿಸಿ ಬಂದರಾ ? ಅಥವಾ ಸಂಹರಿಸಲು ಬಂದರಾ ಎನ್ನುವ ಅನುಮಾನ ನಿಮ್ಮನ್ನು ಕಾಡಿ ರಲು ಸಾಕು.. ! .
 ದಸರೆಯ  ಸಮಯದಲ್ಲಿಯೆ ನನ್ನ ಬ್ಲಾಗು ಜನ್ಮ ತಳೆದಿದ್ದು, ಹಾಗಾಗಿ  ಯಾವುದೋ  ಸ್ಪೆಶಲ್  ಅವತಾರ ಇದು  ಎಂದು ಕೂಡಾ ಕೆಲವೊಮ್ಮೆ  ಅನ್ನಿಸಿರಲಿಕ್ಕುಂಟು.    ಹಾಗೇನೂ ಇಲ್ಲ .. ನನ್ನ ಮಟ್ಟಿಗೆ ಒಂದು ಒಳ್ಳೆಯ ಸುದ್ದಿ ಇದೆ . ಬ್ಲಾಗಿನ ಹ್ಯಾಪಿ  ಬರ್ತಡೆ ಗೆ ಒಂದು ಸುಂದರ ಗಿಫ್ಟು ವಿದೇಶದಿಂದ ಬಂದಿದೆ ... !!! 

 ಆಗಸ್ಟ್ ೨೯,೩೦ ಹಾಗೂ ೩೧ ರಂದು ನಡೆದ  ಅಕ್ಕ-೨೦೧೪ ಸಮ್ಮೇಳನದಲ್ಲಿ ಬಿಡುಗಡೆಯಾದ ಎರಡು ಪುಸ್ತಕಗಳಲ್ಲೊಂದಾದ   '' ಹರಟೆ ಕಟ್ಟೆ - ಹೊಸಕಾಲದ ಲಲಿತ ಪ್ರಬಂಧಗಳು'' .. ಇದರಲ್ಲಿ ನನ್ನದೂ ಒಂದು ಹರಟೆ ಸೇರಿಕೊಂಡಿದೆ ಎನ್ನುವುದು ನನಗೆ ಜಂಬದ ವಿಚಾರವಾಗಿದೆ.
'ಸುಮ್ಮನೆ ' ಬರೆಯುವ  ನನ್ನಂತವರಿಗೆ ಸಿಕ್ಕ ಈ ಮನ್ನಣೆ ಚೀಲ ತುಂಬಿ  ಹರಿಯುವಷ್ಟಾಗಿದೆ [ ಜಂಬದ ಚೀಲ]. ಎಸ್, ಎಲ್ ಬೈರಪ್ಪನವರಿಂದ  ಈ ಪುಸ್ತಕಗಳು ಬಿಡುಗಡೆಯಾಗಿವೆ ಅನ್ನುವುದು ರೋಮಾಂಚನದ ವಿಚಾರ. ಅನೇಕ ಸುಂದರ ಲಲಿತ ಪ್ರಬಂಧಗಳು ಇಲ್ಲಿವೆ.   ಇವುಗಳ ನಡುವೆ ನನ್ನ ಹರಟೆ ' ಬಿಸಿಯ ತಲೆಬಿಸಿ '   
   ಈ ಲೇಖನಗಳನ್ನು ಪೋಣಿಸಿ ಚಂದದ ಹಾರವಾಗಿಸಿದ ಅಕ್ಕ ಸಮ್ಮೇಳನಕ್ಕೂ, ಪ್ರಧಾನ ಸಂಪಾದಕರಾದ   ಕೆ. ವಿ . ರಾಮಪ್ರಸಾದ ರವರಿಗೂ, ಲಿಂಕ್ ಕೊಟ್ಟ ವಿಕಾಸ್ ಹೆಗಡೆಯವರಿಗೂ  ಮತ್ತು ಈ ವಿಭಾಗದಲ್ಲಿ ಕೆಲಸ ಮಾಡಿದ ಎಲ್ಲ   ಸಹೃದಯರಿಗೂ    ನನ್ನ ಹೃತ್ಪೂರ್ವಕವಾದ ಧನ್ಯವಾದಗಳು.
----------------------------------------------------------------------------------------------------------------

ನನ್ನ ಹರಟೆ ..

 ' ಬಿಸಿಯ ತಲೆಬಿಸಿ '

ಎಲೆಕ್ಷನ್ನಿನ ಬಿಸಿ, ಆಮೇಲೆ ಅದರ ರಿಸಲ್ಟಿನ  ಬಿಸಿ,  ಸೋತವರ, ಗೆದ್ದವರ ಕಸಿವಿಸಿ,    ವಿಮರ್ಶಕರ ವಿಮರ್ಶೆಯ ಹಸಿಬಿಸಿ, ಒಬ್ಬರ ಮೇಲೊಬ್ಬರು ಹರಿ ಹಾಯುವ ಖುಷಿ.   ಸರ್ಕಾರ ರಚಿಸುವ ಬಿಸಿ, ಬಹುಮತ ಪಡೆದ ಪಾರ್ಟಿಯಾದ್ದರಿಂದ ಆಂತರಿಕ ಬಿಸಿ ಕಡಿಮೆ.   ನೀರಿಲ್ಲದ ಬಿಸಿ ಒಂದೆಡೆಯಾದರೆ ಪವರ್  ಕಟ್ಟಿನ  ಬಿಸಿ ಇನ್ನೊಂದೆಡೆ. ಬೆಲೆ ಏರಿಕೆಯ ಸುಡು ಸುಡು ಬಿಸಿ,

ಮಕ್ಕಳಿಗೆ  ಪರೀಕ್ಷೆಗಳ ಬಿಸಿ ಕಳೆದು ಅದರ ರಿಸಲ್ಟುಗಳ ಬಿಸಿ,ಪೋಷಕರಿಗೆ  ಶಾಲೆ ಕಾಲೇಜುಗಳಿಗೆ ಸೇರಿಸಲು ಹಣ ಹೊಂಚುವ ಬಿಸಿ, ತಾಯಂದಿರಿಗೆ ಮನೆಗಳಲ್ಲಿ  ಮಕ್ಕಳ ಹಠ, ಕಾಟ ತಾಳಲಾರದೇ  ಕುಂತಲ್ಲಿ ನಿಂತಲ್ಲಿ ಬಿಸಿ. ಆದರೆ ಪರೀಕ್ಷೆಗೆ ಓದಿಸುವ ಬಿಸಿ ಇದೆಯಲ್ಲ,  ಅದು ಡಿಗ್ರೀ ಕಡ್ಡಿಯೇ [ ಥರ್ಮಾಮೀಟರ್ ]ಸ್ಪೋಟಗೊಳ್ಳುವಷ್ಟು ಇರುತ್ತದೆಯೆನ್ನುವುದು ಯಾರೂ ಅಳೆಯದಿದ್ದರೂ ಗೊತ್ತಾಗುತ್ತದೆ.ಅದರ ಬಗ್ಗೆ  ಬರೆಯುವುದಾದರೆ ಕಾದಂಬರಿಯೇ ಆದೀತು. ಮತ್ತು ನನ್ನ ತಲೆ ಬಿಸಿ ಪುನರಾಕ್ರಮಣ ಮಾಡುವುದು ನನಗೀಗ ಇಷ್ಟವಿಲ್ಲ ..!!    ಕಾರ್ಯದ ಮನೆಗಳ ಚಪ್ಪರದಡಿಯಲ್ಲಿನ ಬಿಸಿ ಬಿಸಿ ..  ಅಂತೂ  ಈ ಬೇಸಿಗೆಯಲ್ಲಿ ಜನರಿಗೆ ಬಿಸಿ ಬಿಸಿ ತಲೆ ಬಿಸಿ. ಬಿಸಿ ಇಲ್ಲದ್ದೆಂದರೆ ಶಿಕ್ಷಕರಿಗೀಗ  ಶಾಲೆಗಳಲ್ಲಿ ತಯಾರಿಸುವ ಬಿಸಿಯೂಟದ ಬಿಸಿ. ರಜೆಯ ಪ್ರಯುಕ್ತ ಅವರುಗಳು ತಣ್ಣಗೆ, ತಣ್ಣ  ತಣ್ಣಗೆ. ಎಲ್ಲಾ ಬಿಸಿಗಳ ನಡುವೆ ಸಕಾಲಿಕ  ಬಿರು ಬೇಸಿಗೆಯ ಬಿಸಿ .

  ಬೆವರು ಒರೆಸಿ ಒರೆಸಿ ಒಂದು ಹಾಸು ಮೈ ಚರ್ಮವೆಲ್ಲಾ  ಕಿತ್ತು ಬರುತ್ತೇನೆ ಅಂತಿದೆ.   ಒಮ್ಮೆ ಮಳೆ ಬಂದರೆ ಸಾಕು ಅಂದುಕೊಳ್ಳದ ದಿನವಿಲ್ಲ.  ಪ್ರತೀ ಸಲವೂ,  ಈ ಸಲದ ಬೇಸಿಗೆ ಮಾತ್ರಾ ... ಎಂದು ಬೆವರು ಒರೆಸುವುದೇ  ಕ್ರಮವಾಗಿದೆ.  ಪ್ರತೀ ದಿನ ಮೋಡ ಎಷ್ಟಾಗಿದೆ ? ಇವತ್ತು ಮಳೆ ಬರಬಹುದಾ..? ನಾಳೆಯಾದ್ರೂ ಬಂದೇ ಬರುತ್ತೇನೋ,   ಎನ್ನುವ ಆಸೆಯೊಂದಿಗೆ ಕೆಳಗಿನ ತುಟಿ ಒಳಗೆಳೆದುಕೊಂಡು ಊದಿಕೊಳ್ಳುತ್ತಾ  ಉಸಿರುಗರೆಯುವುದು.  ಹಂಗಂತ ಸೆಖೆ ಹೆಚ್ಚಾಗಿ ಹೆಚ್ಚಾಗಿ ಸೂರ್ಯನಿಗೂ ಬೆವರಲು ಶುರುವಾಗಿ ಆಗಾಗ ನಾಲ್ಕಾರು ಹನಿ ಭೂಮಿಗೆ ಬೀಳುವುದುಂಟು. ಬರ್ತೇನೆ ಬರ್ತೇನೆ ಅಂತ ಕಾಯಿಸಿ ಮಳೆಯ ಜೊತೆಗೆ ಒಮ್ಮೆಲೇ ಆಲಿಕಲ್ಲುಗಳನ್ನೆಲ್ಲಾ ಸುರಿಸಿ ಐಸ್ ವಾಟರ್ ಸಪ್ಲೇ ಮಾಡುವುದೂ ಇದೆ.     ಸೂರ್ಯನ ಕರುಣೆ..!! ಮಳೆ ಬಂದ  ಮರುದಿನದ ಬಿಸಿ ಇದೆಯಲ್ಲ ಅದು ನೀರ್ಗೊಜ್ಜಿಗೆ ಒಗ್ಗರಣೆ ಕೊಟ್ಟ ಹಾಗೆ.  ಮಲೆನಾಡಿನವರಿಗೆ ಸೆಖೆ ತಡಿಯುವುದೇ ಕಷ್ಟ. ಅವರು ಸುಖ ಪುರುಷರು. ಯಾವಾಗಲೂ  ಗುಡ್ಡ ಬೆಟ್ಟಗಳ   ಕಾಡಿನ ಮರೆಯಲ್ಲಿ ತಣ್ಣಗೆ ಇರುವವರು. ಆಗೆಲ್ಲಾ  ಬೇಸಿಗೆಯಲ್ಲೂ ಕಂಬಳಿ ಇಲ್ಲದೆ ಮಲಗಲಾರದಷ್ಟು ತಣ್ಣ ತಣ್ಣಗೆ.  ಈಗ ಹಾಗೇನಿಲ್ಲ.  ಕಾಲ ಬಿಸಿಯಾಗಿದೆ.  ಹೊಸ ಹೊಸ ಆವಿಷ್ಕಾರಗಳೊಂದಿಗೆ ಸಂಪನ್ಮೂಲಗಳನ್ನೆಲ್ಲಾ ಬೇಕಾ ಬಿಟ್ಟಿ  ಬಳಸಿ ಭೂತಾಯಿಗೆ  ಇನ್ಫೆಕ್ಷನ್ ಆಗಿ   ಫ್ಲೂ ಜ್ವರ ಬಂದಂತೆ   ಆಗುವುದುಂಟು. ಹಾಗಾಗಿ   ಚಳಿಗಾಲ, ಬೇಸಿಗೆಗಾಲ, ಮಳೆಗಾಲ ಎಲ್ಲಾ ಒಂದೇ ದಿನದಲ್ಲಿ ಬಂದರೂ ಬಂತೆ ..

ಘಟ್ಟದ ಕೆಳಗೆ ಹೋದರೆ ಅಲ್ಲಿ ಸೆಖೆಯನ್ನು ವರ್ಣಿಸುವುದೇ ಬೇಡ..!  ಬೇಸಿಗೆಯಲ್ಲೊಮ್ಮೆ ಅಲ್ಲೊಂದು ಉಪನಯನದ ಮನೆಗೆ ಹೋಗಿ  ನಮ್ಮ ಅವಸ್ತೆ  ಯಾರಿಗಂತ  ಹೇಳುವುದು ?   ಬೆವರನ್ನು ಒರೆಸಿ ಒರೆಸಿ ಕರವಸ್ತ್ರ ಹಿಂಡಿ ಹಿಂಡಿ  ಅದು  ಹನಿಯಾಗಿ,ಹೊಳೆಯಾಗಿ  ಹರಿದು ಸಮುದ್ರ ಸೇರಿ ನೀರೆಲ್ಲಾ ಉಪ್ಪುಪ್ಪು ...!  ನಾವೆಲ್ಲಾ  ಉಪ್ಪೇರಿಯಂತಾದೆವು.  ಅಲ್ಲಿ  ಬೇಕಿದ್ದರೆ ಪ್ರತಿಮನೆಯಲ್ಲೂ ಖರ್ಚಿಗಾಗುವಷ್ಟು ಉಪ್ಪು ತಯಾರಿಸಬಹುದು..  ಉಪ್ಪಿನ  ಬಗೆ ಬಗೆಯ ಹೊಸರುಚಿ ಮಾಡ್ಲಿಕ್ಕುಂಟು ಎಂದು ಗೆಳತಿಯೊಬ್ಬಳು ಹಾಸ್ಯ ಮಾಡುತ್ತಾಳೆ. ಅಲ್ಲಿಯವರು ದಿನಾಲೂ ಕಷ್ಟ ಪಟ್ಟು ಬೆವರು ಸುರಿಸಿಯೇ   ಊಟ ಮಾಡಬೇಕು ಪಾಪ.

ಬೇಸಿಗೆಯಲ್ಲಿ ಹಳೆಮಳೆ ಬಂದರೆ ಒಮ್ಮೆ ಸುಖ ಹೌದು. ಮೊದಲ ಮಳೆಗೆ ಪಸರಿಸುವ ಮಣ್ಣಿನ ಘಮ ಹೀರಿದಷ್ಟೂ ಮತ್ತೆ ಮತ್ತೆ ಹೀರುವ ಆಸೆ.    ಬೆಂಗಳೂರಿನಲ್ಲಿ ಮಳೆ ಬಂದರೆ ಗೊತ್ತಲ್ಲ,  ಮೂಗು ಮುಚ್ಚಿಕೊಳ್ಳಬೇಕು ಹಾಗೆ ಕೊಚ್ಚೆಯ ವಾಸನೆ ..!

ಮತ್ತೆ ಒಮ್ಮೆ ಮಳೆ ಬಂದು ಹೋಯಿತೆಂದರೆ ನಮ್ಮಲ್ಲಿ  ಮರುದಿನವೇ ರಕ್ತದಾನದ ಶಿಬಿರ ಶುರು ಆಯಿತೆಂದೇ ಲೆಕ್ಕ .. ! ಅದೂ  ಪ್ರತಿ ಮನೆಮನೆಯಲ್ಲೂ ..!!   ಆಬಾಲ ವೃದ್ಧರಾದಿಯಾಗಿ, ಹುಟ್ಟಿದ ಶಿಶುಗಳೂ ಸಹಾ ಈ ರಕ್ತದಾನ ಶಿಬಿರದಲ್ಲಿ ಕಡ್ಡಾಯವಾಗಿ ಪಾಲುಗೊಂಡು    ಮೇಲು ಕೀಳೆನ್ನದೆ ದಿನವೊಂದಕ್ಕೆ ಲೆಕ್ಕವಿಲ್ಲದಷ್ಟು ಬಾರಿ ರಕ್ತ ದಾನ ಮಾಡುವುದರಲ್ಲಿ ವ್ಯಸ್ತರು.
ರಕ್ತದಾನ ಶ್ರೇಷ್ಟದಾನವೇ ಹೌದಾದರೂ  ಯಾರಿಗೂ ಈ ಬಗ್ಗೆ ತಿಳುವಳಿಕೆ  ಇಲ್ಲ...!   ಈ ರಕ್ತ ತೆಗೆಯುವವರು ಬಂದರೆಂದರೆ, ಹೌಹಾರಿ,  ಕುಮುಟಿ  ಬಿದ್ದು   ಅವರನ್ನು ಇನ್ನಿಲ್ಲದ ಕೋಪದಿಂದ ಅಟ್ಟಿಸಿಕೊಂಡು ಹೋಗಿ ಕೊಲೆಗೈದೇ  ಬಿಡುತ್ತಾರೆ ಎನ್ನುವುದು ಎಲ್ಲೂ ದಾಖಲಾಗದ  ಪರಮ ಸತ್ಯ. ಸಾಮಾನ್ಯ ಜನರು ಬಿಡಿ,  ಪೊಲೀಸರೂ,  ನ್ಯಾಯ ಪಾಲನೆ ಮಾಡುವ ನ್ಯಾಯಾಧೀಶರೂ ಈ ಕೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವುದನ್ನು ಯಾರಾದರೂ ಎಲ್ಲಾದರೂ ಉಲ್ಲೇಖಿಸಿದ್ದಾರೆಯೇ..? ಸಮಾಜದ ಎಲ್ಲ ವರ್ಗದ ಜನರೂ ಈ ಕೆಲಸಕ್ಕೆ   'ಕೈ ತಟ್ಟು'ವವರೇ.     ಕೆಲವೊಮ್ಮೆ ಮೈ ಕೈ ಪರಚಿಕೊಂಡು, ಗೋಡೆಗೆ ಜಪ್ಪಿ ಟವೆಲ್ಲೋ, ಕರವಸ್ತ್ರವೋ ಮಾತ್ತಾವುದೋ  ಅಸ್ತ್ರಗಳಲ್ಲೆಲ್ಲಾ ಹೊಡೆದು ಸಿಟ್ಟು  ತೀರಿಸಿಕೊಳ್ಳುವವರೇ.

 ಅಲ್ಲಲ್ಲಿ ನಿಂತ ಮಳೆ ನೀರಲ್ಲಿ  ಇನ್ನಿಲ್ಲದ ಖುಷಿಯಲ್ಲಿ ಸಂಸಾರಹೂಡಿ ಮನೆ, ಮಕ್ಕಳು ಮರಿಗಳನ್ನೆಲ್ಲಾ ಕಸಿ ಮಾಡಿ ಬೆಳೆಸಿ  ರಕ್ತಬೀಜಾಸುರರಂತೆ ಹುಟ್ಟಿಕೊಂಡು ಕಂಡ ಕಂಡವರ ರಕ್ತ ಹೀರಿ ತಾವೂ  ವೈವಿದ್ಯಮಯ  ರೋಗಗಳನ್ನು ನಮಗೆ ದಾನ ಮಾಡುವ ಈ ರಕ್ತ ತೆಗೆಯುವ ಸೊಳ್ಳೆಗಳನ್ನು ಕಂಡರೆ  ಭಯ ಪಡದಿದ್ದವರಾರು..? ರೋಗ ಪ್ರವರ್ತಕರಾಗಿ   [ಸೊಳ್ಳೆಗಳಿಗೆ]   'ರಕ್ತದಾನ ಪರಂದಾಮ' ಎನ್ನುವ ಹೆಡ್ಡಿಂಗ್ ಕೆಳಗೆ ಬಾಳುವೆ ಮಾಡುವ ಪರಿಸ್ಥಿತಿಯನ್ನು ತಂದೊಡ್ಡುತ್ತವೆ ಎನ್ನುವುದು ಈ ಬೇಸಿಗೆಯಲ್ಲಿ   ಲೌಕಿಕ ಸತ್ಯವೇ ಹೌದು.  ಎರಡು ದಿನ ಜೋರು ಮಳೆ ಬಂದರೆ ಮತ್ತೆ ರೆಕ್ಕೆಗೆ ತಂಡಿಯಾಗಿ  ಸೊಳ್ಳೆಗಳೆಲ್ಲಾ ಸತ್ತು ಹೋಗುವುದು ಅಲೌಕಿಕ ಸತ್ಯ. ಬಹುಷಃ ರಾಮನಿಂದ ಹತರಾದ ರಾಕ್ಷಸರೆಲ್ಲಾ  ಸೊಳ್ಳೆಗಳಾಗಿ ಹುಟ್ಟಿ  ಮನುಷ್ಯರ ಮೇಲೆ ಸೇಡು ತೀರಿಸಿಕೊಳ್ಳುತ್ತಿವೆಯೋ? ಅಥವಾ ಮಹಾಭಾರತದ ಹದಿನೆಂಟಕ್ಷೋಹಿಣಿ  ಸೈನಿಕರ ಅತೃಪ್ತ ಆತ್ಮಗಳು  ಸೊಳ್ಳೆಗಳಾಗಿ ಅವತಾರ ಎತ್ತಿವೆಯೋ ? ನನಗಂತೂ  ಹೀಗೆಯೇ ಇರಬಹುದು  ಅಂತಲೇ  ಅನ್ನಿಸುತ್ತದೆ ಸೊಳ್ಳೆ ಕಾಟ ವಿಪರೀತವಾದಾಗ. ಕಲಿಯುಗದಲ್ಲಿ ಗಂಡನಿಗೆ ಹೆಂಡತಿ ರಪ್ಪಂಥ ಹೊಡೆಯುವುದೂ, ಗಂಡ ಹೆಂಡತಿಗೆ ಮುಖ ಮೂತಿ ನೋಡದೇ ಚಚ್ಚುವುದೂ, ಭಾರಿಸುವುದೂ ಇದೆಲ್ಲಾ ಈ ಸೊಳ್ಳೆಗಳ ದೆಸೆಯಿಂದಲೇ ಆಗುತ್ತಿರಬಹುದೆಂಬುದು ನನ್ನ ಅನುಮಾನ ಮತ್ತು ವಾದ.    ನೋಡಿ ಹೇಗಿದೆ ?  ಸೊಳ್ಳೆ ಕಡಿತದ  ಬಿಸಿ..!ಮತ್ತೊಂದಿದೆ ಈ ಬೇಸಿಗೆಯ ರಾಮಾಯಣ .  ನೀರು ತಳ ಸೇರಿರುತ್ತದೆ. ನೀರಿಗೆ ಬಣ್ಣ , ರುಚಿ, ಎರಡೂ ಬಂದಿರುತ್ತದೆ.ಆದರೆ  ಶಕ್ತಿಯಿಲ್ಲ.  ಜೊತೆಗೆ  ಬಿಸಿಲ ಝಳದ ಹಠ ಬೇರೆ. ಗಂಟಲು ತಣ್ಣಗೆ ಮಾಡಲು ಸಿಕ್ಕದ್ದನ್ನೆಲ್ಲ ಕುಡಿದು ಐಸ್ ಕ್ರೀಮ್  ತಿಂದು ಲೂಸ್ ಮೋಶನ್ ನಿಂದ ತೂರಾಡುವುದು ಅವರವರ ಪ್ರಕೃತಿ ಮತ್ತು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ..!!     ಶಾಲೆಗೆ ಹೋಗುವ ಮಕ್ಕಳಂತೂ 'ಅಮ್ಮ ಬಂದಿದೆ' ಎಂದು ನಪುಂಸಕೊಚ್ಛಾರದಲ್ಲಿ ಹೇಳಿದವೆಂದರೆ ಪರೀಕ್ಷೆ ಬಂತು ಮತ್ತು ಬೇಸಿಗೆಯೂ ಬಂತು ಎಂದೇ ತೀರ್ಮಾನಿಸಬೇಕು.  ಸುಂದರವಾದ ಫ್ರಾಕಿನ ಫ್ರಿಲ್ಲುಗಳನ್ನು ನೆನಪಿಗೆ ತರುವಂತಹ ಚಿಕನ್ ಫಾಕ್ಸ್  ಎನ್ನುವ ಹೆಸರಿಟ್ಟುಕೊಂಡು ಮಕ್ಕಳ ಮುಖ ಸೌಂದರ್ಯವನ್ನೆಲ್ಲಾ ಹಾಳು ಮಾಡಲು ಬರುವವಳು  ಅಮ್ಮ ಆಗಲು ಹೇಗೆ ಸಾಧ್ಯ ಎಂದೇ   ನನಗೆ ತಿಳಿಯುತ್ತಿಲ್ಲ ..! ಆಮಶಂಕೆ,  ಡೆಂಗು, ಕೋಳಿಜ್ವರ, ಹಂದಿ ಜ್ವರ, ಇಲಿಜ್ವರ ಹುಲಿಜ್ವರಗಳೆಲ್ಲಾ  ಒಂದರ ಹಿಂದೊಂದು ಕ್ಯೂನಲ್ಲಿ ನಿಂತಿರುತ್ತವೆ. ಇವುಗಳನ್ನು ಉಂಟು ಮಾಡುವ ವೈರಸ್ಸುಗಳ ಹೆಸರುಗಳು ಮಾತ್ರಾ ಅದೆಷ್ಟು ಮೋಹಕವಾಗಿರುತ್ತವೆ.  ಎಂಟಮೀಬಾ ಹಿಸ್ಟಲಿಟಿಕ, ಇನ್ಫ್ಳುಯೆಂಜಾ,ಆಂಥ್ರಾಕ್ಸ್ ಇವೆಲ್ಲ ಕೇಳಿದಾಗ ಯಾರೋ ಹೊರದೇಶದವರು ಬಂದರು ಅನ್ನಿಸುತ್ತೆ.. ಸರಿಯೇ ಇದೆಯಲ್ಲ.. ಫಾರಿನ್ ಬಾಡಿಗಳು!  
 ಅಂತೂ ಜ್ಯೂಸು ಅಂಗಡಿಗಳವರಿಗೆ ಮತ್ತು ಡಾಕ್ಟರುಗಳಿಗೆ ಒಳ್ಳೆ ವ್ಯಾಪಾರ. ಆದರೆ ಬೇಸಿಗೆಯಲ್ಲಿ ಆಗುವ ಥಂಡಿ ಇದೆಯಲ್ಲ, ಅದನ್ನು ಅನುಭವಿಸುವುದು ಯಾರಿಗೂ ಬೇಡ ಕರ್ಮ.ಹೊರಗೆ ಬೆವರು ಮತ್ತು ಒಳಗೆ ಜೌಗು ... ಇದಪ್ಪ ಶೀತದ ಬಿಸಿ.ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂವುಗಳ ಕಾಲದಲ್ಲಿ ಹಣ್ಣ ಹೊಗಳುವರು
ಹಣ್ಣಿನ ಗಾತ್ರ ಪೀಚು ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು
ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು
ಮಳೆ ಬಿತ್ತೋ ಬಿಡದಲ್ಲ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

..   ಅಂತ  ಕೆ. ಎಸ್. ನರಸಿಂಹಸ್ವಾಮಿಯವರು ಸುಮ್ಮನೆ ಕವನ ಬರೆದಿದ್ದಾರೆಯೇ ?  ಇದ್ದಿದ್ದನ್ನು  ಇದ್ದಂತೆ ಮೆಚ್ಚಿದರೆ  ನಾಲ್ಕು ಜನರ ನಡುವೆ ಬೆಲೆಯುಂಟೆ..?

ಅಲ್ಲದೇ ' ನಾವು  ಕಾಲಕ್ಕೆ ತಕ್ಕಂತೆ ನಡೆಯಬೇಕು, ನಾವು ತಾಳಕ್ಕೆ ತಕ್ಕಂತೆ ಕುಣಿಯಬೇಕು'' ಎಂದು ರಾಜ್ ಕುಮಾರ್  ಥರವೇ ಹಾಡುತ್ತಾ, ಅವರ ಮುತ್ತಿನಂಥಾ ಮಾತಿಗೆ ಗೌರವ ಕೊಟ್ಟು  ಬಿಸಿಲಲ್ಲಿ ಚಪ್ಪಲಿಯಿಲ್ಲದೆ ಬರಿಗಾಲಲ್ಲಿ ಟಾರ್ ರಸ್ತೆಯ ಮೇಲೆ  ಕಾಲಿಟ್ಟರೆ  ರಸ್ತೆಯ  ಬಿಸಿಗೆ 'ಕಾಲ' ಮತ್ತು ತಾಳಕ್ಕೆ ತಕ್ಕಂತೆ ಕುಣಿ ಕುಣಿಯುತ್ತಾ ಸಾಗಬಹುದು.


ಆದರೆ ಬೇಸಿಗೆಯ ಕೆಲವು ಬೆನಿಫಿಟ್ಗಳು  'ಬರಲಿ ಬೇಸಿಗೆ' ಅಂತ ಕರೆಯುವಂತೆ  ಮಾಡಿಲ್ಲ ಅಂದರೆ ಕೇಳಿ.
ಕಲ್ಲಂಗಡಿ ಹಣ್ಣು , ಮಾವಿನ ಹಣ್ಣು , ಹಲಸಿನ ಹಣ್ಣು ಇವೆಲ್ಲಾ ಬಿರು ಬೇಸಿಗೆಯಲ್ಲಿಯೇ ಸವಿಯಲು ಹಿತ.  ಕಾರ್ಯದ ಮನೆಗಳಲ್ಲಿನ ಕಜ್ಜಾಯಗಳೂ,ನೀರುಗೊಜ್ಜೂ ಬಾಯಿಯಲ್ಲಿ  ಸುನಾಮಿಯನ್ನೇ ಸೃಷ್ಟಿ ಮಾಡುತ್ತವೆ. ಆದರೆ ಈ ವೈಶಾಖದ ಶಾಖದ ನಡುವೆ ಒಂದೆರಡು  ಹಳೆ ಮಳೆ ಬಂತೆಂದರೆ ಸಾಕು,  ಮಾವಿನ ಹಣ್ಣು ಹುಳ, ಹಲಸಿನ ಹಣ್ಣು ಗುಳ  ಆಗಿಬಿಡುತ್ತದೆ ನೀರು ಸೇರಿ. ಕಾರ್ಯದ ಮನೆಯವರು ಕಂಗಾಲು. ಮಳೆಯೊಂದು ಬರದಿದ್ದರೆ ಸಾಕು ಅಂತ ಮಳೆ ದೇವರಿಗೆ ಕಾಯಿ ಒಡೆಸುವುದರಿಂದ ಹಿಡಿದು ಕೆಸವಿನ ಸೊಪ್ಪಿನ ಆವಾರಿ [ಮುದ್ದೆ ]ಮಾಡಿಕೊಡುತ್ತೇನೆ ಎನ್ನುವ ಹರಕೆಗಳವರೆಗೆ ನಂಬುಗೆಯ  ಜೀವ ಬರಿಸುತ್ತಾರೆ.   ಕಜ್ಜಾಯ ತಿಂದು ಕೆಟ್ಟ ನಾಲಿಗೆಗೆ ಹೊಸದೊಂದು ರುಚಿಯ ವ್ಯವಸ್ಥೆ ಬೇಕಲ್ಲ, ಅದಕ್ಕೊಂದು ನೆವ. ಮಾವಿನ ಮಿಡಿ ಉಪ್ಪಿನ ಕಾಯಿ ಹಾಕಲು ಬೇಸಿಗೆ ಇರದಿದ್ದರೆ ಚೆನ್ನವೆ..? ನಮ್ಮ ಹಳ್ಳಿ ಮನೆಗಳಲ್ಲಿ  ವರ್ಷಾವಧಿಗಾಗುವಷ್ಟು ಕಾಳು ಕಡಿ ಒಣಗಿಸಿಟ್ಟು ಒಬ್ಬಜ್ಜಿ ಮಾಡಲು ಬೇಸಿಗೆಯ ಗಟ್ಟಿ ಬಿಸಿಲೇ ಬೇಕು.

ವಯಸ್ಸಾದವರಿಗೆ ಸದಾಕಾಲವೂ ಬಿಸಿಯೇ ಬಿಸಿ. ಸ್ಲಿಪ್ ಡಿಸ್ಕ್ ಆದವರಿಗೆ  ದೇಹವನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಲು ಪ್ರಾಣಿಗಳಂತೆ ನಾಲ್ಕು  ಕಾಲುಗಳಿರಬೇಕಿತ್ತು ಅನ್ನಿಸುವುದಿದೆ. ಮತ್ತೆ ಚಪ್ಪಲಿ  ರೇಟ್  ಕೇಳಿದಾಗ ಯಾಕಾದ್ರೂ ಕಾಲು ಕೊಟ್ಟೆಯೋ ದೇವರೇ  ಎಂದು ಹಲುಬುವಂತಾಗುತ್ತದೆ. ಬ್ಲಡ್ ಪ್ರೆಷರ್ ಇರುವವರಿಗಂತೂ  ಮನುಷ್ಯರನ್ನು  ಕಂಡರೆ ಒಂದು ಥರದ ಬಿಸಿ, ಕಾಣದಿದ್ದರೆ ಇನ್ನೊಂದು ಥರದ ಬಿಸಿ.

 ಎಲ್ಲರಿಗೂ ಹೀಗೆ ಥರ ಥರದ ಬಿಸಿಯಾದರೆ ನನಗೋ ಈ ಲೇಖನ ಬರೆಯುವ ಬಿಸಿ. ಬರೆದು ಅಳಿಸಿ,  ಬರೆದು ಅಳಿಸಿ ಕಂಪ್ಯೂಟರಿನ  ಕೀ ಬೋರ್ಡಿನ ಕೀಗಳೆಲ್ಲಾ ಕರಗಿಯೇ  ಹೋದವೇನೋ ಅನ್ನುವಷ್ಟು ಬಿಸಿ. ಆದರೂ ಒಮ್ಮೆಯೂ ಮೊನಿಟರ್ ನ ಹರಿಯದೇ ಬರೆದಿದ್ದುದು ಆ ಮಟ್ಟಿಗೆ ಬಿಸಿ ಕಡಿಮೆಯೇ ಇದೆ ಎನ್ನಲಡ್ಡಿಯಿಲ್ಲ.... !!

_---------------------------------------------------------------------------------------------------12 comments:

 1. ಎಂಥ ಮಾರ್ರೆ .. ಬಿಸಿ ಬಿಸಿ ಬರಹ ಓದಿ.. ನಾವೂ ಅನುಭವಿಸಿ.. ಉಫ್ ಉಫ್ ನಮ್ಮ ಮಂಡೆ ಸರೀ ಬಿಸಿ ಆತ್ತು.. :) ಇಡೀ ಮನುಷ್ಯ ಜನ್ಮದ ಬಿಸಿಯನ್ನು ಚುರುಕಾಗಿ ಮಜವಾಗಿ ನಯವಾಗಿ ನಮಗೆ ದಾಟಿಸಿ ನೀವು ತಂಪಾದಿರಿ..

  ReplyDelete
 2. ಧನ್ಯವಾದಗಳು ತಾಯಿ ಅಪರ್ಣೆ... ನೀವೀಗ ಒಂದು ಐಸ್ ಕ್ರೀಮ್ ತಿಂದು ತಂಪಾಗಿರಿ ..:)

  ReplyDelete
 3. Namaste....Maleya kaalada chilli yalli (thandi) bisi bisi bonda tinda haage aaitu....Dhanyavaadagalu....:)

  ReplyDelete
  Replies
  1. ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.. :)

   Delete
 4. congrats.. :) manassige khushi koduva bechchaneya bharaha..

  ReplyDelete
 5. Abhinandanegalu. Mattomme talebisi madiddakkagi dhanyavadagalu!

  ReplyDelete
 6. :). 'ರಕ್ತದಾನ ಶಿಬಿರ ' ಓದಿ ನಕ್ಕೀದ್ದೇ ಆಯ್ತು.

  ReplyDelete
 7. ಬರಹ ಕಾಣದ ಬೇಸಿಗೆಯ ಬಿಸಿಗೆ ಒಣಗಿದ್ದ ಬ್ಲಾಗಿಗೆ ನವವಸಂತದ ನವರತ್ನ ತೈಲ ಹಚ್ಚಿದ್ದೀರಿ.. ತಂಪು ತಂಪು ಕೂಲ್ ಕೂಲ್.

  ReplyDelete
 8. ಯಪ್ಪಾ...ನೀವೂ ೨೦೧೪ ರಿಂದ ಬರೆದಿಲ್ಲ...ನಾನೂ ಓದೇ ಇಲ್ಲಾ ಛೇ.ಛೇ ಛೇ...ನೀವೂ ಬರೀರಿ ನಾನೂ ಬರೀತೇನೆ..

  ReplyDelete
 9. Kannada news live tv on mobile
  tv9 Public Kannada News Live - Android Apps on Google Play (https://play.google.com/store/apps/details?id=com.quick.kannadanew)

  ReplyDelete