Monday, November 23, 2009

ದತ್ತಾತ್ರೇಯನ ಅವಾಂತರಗಳು

ನಾನು ಬೆಂಗಳೂರಿಗೆ ಬಂದು ವರ್ಷವಾಗಿತ್ತಷ್ಟೆ . ನಾನು ಮತ್ತು ಸೂರಿ ದಾಸರಹಳ್ಳಿಯ ಹನುಮೇಗೌಡರ ವಠಾರದಲ್ಲಿ ವಾಸ್ತವ್ಯ ಹೂಡಿದ್ದೆವು. ಅದೊಂದು ಸುವ್ಯವಸ್ತಿತ ರೂಂ . ಕಿಚನ್,ಡೈನಿಂಗ್ ಹಾಲ್,ಬೆಡ್ರೂಮ್ ಅಲ್ಲದೆ ಸ್ಟೋರ್ ರೂಂ ಕೂಡಾ ಅದೊಂದೇ ರೂಮಿನಲ್ಲಿ ಸುಸಜ್ಜಿತಗೊಂಡಿತ್ತಾದ್ದರಿಂದ ಬೇಕಾದಾಗ ಬಯಸಿದ್ದು ಕೈ ಕಾಲಿಗೆ ಎಟಕುವ ಸೌಲಭ್ಯವಿತ್ತು.

ಈ ನಡುವೆ ನಮ್ಮಿಬ್ಬರಿಗೆ ಇನ್ನೋರ್ವನ ಜೊತೆ ರೂಂ ಹಂಚಿಕೊಳ್ಳುವ ಸೌಭಾಗ್ಯ ಒದಗಿಬಂತು. ಮೂರನೆಯವನಾಗಿ ದಾಖಲಾದವನೇ ಶ್ರೀಮಾನ್ ದತ್ತಾತ್ರೇಯ. ಅವನ ವ್ಯಕ್ತಿತ್ವವನ್ನು ಬಣ್ಣಿಸಲಸದಳ.....!! ಅವನ ಜಾಣ್ಮೆಗೆ ಅವನೇ ಸಾಟಿ....!ಅಂಥಾ ಉದ್ಯೋಗದ ಅಭಾವದ ಕಾಲದಲ್ಲಿಯೂ ದಿನಕ್ಕೊಂದು ಉದ್ಯೋಗ ಬದಲಿಸಬಲ್ಲ ಅಸಾಧ್ಯ ಚತುರ...!

ಆತ ನಮ್ಮ ರೂಮಿಗೆ ಎಂಟರಾದದ್ದೇ ಆದದ್ದು ..... ರೂಮಿನ ದಿಕ್ಕೇ ಬದಲಾಗಿ ಹೋಯಿತು.ರಾತ್ರಿ ಮಲಗುವಾಗ ನಾವೆಲ್ಲ ಒಂದೇ ದಿಕ್ಕಿಗೆ ತಲೆ ಹಾಕಿ ಮಲಗಿದರೆ ದತ್ತು ದಿನಕ್ಕೊಂದು ದಿಕ್ಕಿಗೆ ತಲೆ ಹಾಕಿರುತ್ತಿದ್ದ.ಅಂವ ಮಾತ್ರಾ ಗಡಿಯಾರದ ಘಂಟೆ ಮುಳ್ಳೇ......! ಮಲಗುವಾಗಲೂ ಹೆಚ್ಚೇನು ತ್ರಾಸಿರಲಿಲ್ಲ. ಕಿವಿಗೆ ಹತ್ತಿ, ತಲೆಗೆ ಯಕ್ಷಗಾನದ ಭಾಗವತರನ್ನು ನೆನಪಿಗೆ ತರುವಂತಾ ರುಮಾಲು, ಹೊದೆಯಲು ಎಂತಾ ಬೇಸಿಗೆಯಲ್ಲೂ ಎರಡೇ ಎರಡು ಬ್ಲಾಂಕೆಟ್ ಸಾಕಾಗಿತ್ತು !

ಅವನ ಬೆಳಗಿನ ದಿನಚರಿ ಮಾತ್ರಾ .......ಪುಣ್ಯಾತ್ಮ ಟೀ ಮಾಡಲು ಪಾತ್ರೆ ಒಲೆಯ ಮೇಲಿಟ್ಟು ಸ್ನಾನಕ್ಕೆ ಹೋದರೆ ಬರುವಷ್ಟರಲ್ಲಿ ಬ್ಲಾಕ್ ಟೀ (?) ಯನ್ನು ಪಾತ್ರೆಯಿಂದ ಉದುರಿಸ ಬೇಕಾಗುತ್ತಿತ್ತು. ಸ್ನಾನ ಮಾಡುವಾಗೇನಾದರೂ ನಲ್ಲಿಯಲ್ಲಿ ನೀರು ಬರುವುದು ನಿಂತು ಹೋದರೆ ನಲ್ಲಿಯನ್ನು ಆರಿಸದೇ ನೆಟ್ಟಗೆ ಆಫೀಸಿಗೆ ಹೋಗುವುದು ಅವನ ಜಾಯಮಾನ.
ಅಂದು ಅವನಿಗೆ ಸೆಕೆಂಡ್ ಶಿಫ್ಟಿನ ಕೆಲಸ . ನಾನು, ಸೂರಿ ಮೊದಲೇ ಮನೆ ಬಿಟ್ಟಿದ್ದೆವು . ನೀರು ಬರುವುದು ನಿಂತಿದ್ದ ನಲ್ಲಿಯನ್ನು ಆರಿಸದೇ ಇಂವ ಆಫೀಸಿಗೆ ನಡೆದ. ಸಾಯಂಕಾಲ ನಾವು ಬಂದು ನೋಡುವ ಹೊತ್ತಿಗೆ ರೂಂ ಮಿನಿ ಸ್ವಿಮ್ಮಿಂಗ್ ಫೂಲಾಗಿತ್ತು...... ಪಾತ್ರೆಗಳು, ಹಾಸಿಗೆ ವಸ್ತ್ರಗಳಿಗೆ ನೀರಿನಲ್ಲಿ ಈಜುವ ಸಂತೋಷ .... ನಮಗೆ ತಡೆಯಲಾರದ ಆಕ್ರೋಶ ..ಮನೆಗೆ ಬಂದವನಲ್ಲಿ ವಿಚಾರಿಸಿದರೆ ಅಂವ ಹ್ಹ .... ಎಂದು ನಕ್ಕ ...ಜಡ ಶಂಕ್ರ....!!! ಅಂದು ರಾತ್ರಿ ಒದ್ದೆ ಹಾಸಿಗೆ ಮೇಲೆ ನಿದ್ದೆ ಬಾರದೆ ಹೊರಳಾಡಿದ್ದು ಮಾತ್ರಾ ಇನ್ನೂ ಹಸಿಹಸಿ ....ನೆನಪು

ನಾವು ಅವನನ್ನು ಸುಧಾರಿಸಿಕೊಳ್ಳಬೇಕಿತ್ತೇ ಹೊರತೂ ಅವನಿಂದ ಸುಧಾರಣೆ ನಿರೀಕ್ಷಿಸುವಂತೆಯೇ ಇರಲಿಲ್ಲ .( ಆಗ ಸುಧಾರಿಸಿಕೊಂಡು ಅಭ್ಯಾಸ ಮಾಡಿಕೊಂಡಿದ್ದು ಮದುವೆಯಾದ ಮೇಲೆ ಉಪಯೋಗಕ್ಕೆ ಬಂತೆಂದು ಹೇಳಿ ಮಡದಿಯ ಕೆಂಗಣ್ಣಿಗೆ ಗುರಿಯಾದದ್ದು ......ಸುಳ್ಳಲ್ಲ.)

ಅವನು ಮಾಡದ ಕೆಲಸವಿಲ್ಲ . ಅದ್ಯಾವುದೋ ಸೊಳ್ಳೆ ನಿವಾರಕಗಳ ವಿತರಕ ಅಂಗಡಿಗೆ ಸೇಲ್ಸ್ ಮ್ಯಾನ್ ಆಗಿಸೇರಿ ನಾಲ್ಕು ದಿನಕ್ಕೆ ಅದನ್ನು ಬಿಟ್ಟ. ನಂತರ ಒಂದು ಪ್ಲಾಸ್ಟಿಕ್ ಕವರ್ ಗಳ ವಿತರಕ ಅಂಗಡಿಗೆ ಸೇರಿದ.ಇಲ್ಲೂ ಸೇಲ್ಸ್ ಮ್ಯಾನ್ ಕೆಲಸವೇ. ಅಂಗಡಿಗಳಿಗೆ ಕವರ್ ಮಾರಿ ಬರುವ ಕೆಲಸ.ಅಂಗಡಿಯವನೊಬ್ಬ ಸರಿಯಾಗಿ ಹಣ ಪಾವತಿ ಮಾಡಲಿಲ್ಲ.ದತ್ತು ಏನ್ ಸಾಮಾನ್ಯದವನೇ .... ? ನಿನ್ನ ಅಂಗಡಿ ವಸ್ತುಗಳನ್ನೆಲ್ಲ ಸೀಜ್ ಮಾಡುವೆನೆಂದು ಹೆದರಿಸಿದ . ಅಂಗಡಿಯವನಿಗೆ ಇದೇನು ಹೊಸದೇ...? ಆಯ್ತಪ್ಪಾ ತಗಂಡು ಹೋಗು ಎಂದು ತಾನೆ ಮೂಟೆಯಲ್ಲಿ ತುಂಬಿಕೊಟ್ಟ. ದತ್ತು ಗೆದ್ದ ಸಂಭ್ರಮದಲ್ಲಿ ರೂಮಿಗೆ ಬಂದು ನಮಗೆ ತೋರಿಸಿದ. ಅವು , ಒಂದು ಬೇಲೂರು ಶಿಲಾಬಾಲಿಕೆಯಂತಾ ಪೌಡರ್ ಡಬ್ಬ ಮತ್ತು ಹದಿನೈದು ಕೆಜಿ ಅಕ್ಕಿ . ಅಕ್ಕಿಯಾದರೂ ಎಂತಾ ಕ್ವಾಲಿಟಿ....! ಹುಳುಗಳ ಮಧ್ಯೆ ಅಕ್ಕಿಯನ್ನು ಹುಡುಕಬೇಕಿತ್ತು.

ಆ ಕೆಲಸವೂ ಹೆಚ್ಚು ದಿನ ಬಾಳಿಕೆ ಬರಲಿಲ್ಲ. ಈಗ ಸೇರಿದ್ದು ಒಂದು ಅಕ್ಕಿ ಮಿಲ್ . ನಂತರದ್ದೆ ಸ್ವಲ್ಪ ಇಂಟರೆಸ್ಟಿಂಗ್ ಸ್ಟೋರಿ. ಸೇರಿದ ಕೆಲವೇ ದಿನಗಳಲ್ಲಿ ಇವನನ್ನು ನೈಟ್ ಶಿಫ್ಟ್ ಗೆ ಹಾಕಿದರು. ರಾತ್ರಿ ಹತ್ತರಿಂದ ಬೆಳಿಗ್ಗೆ ಆರರ ವರೆಗೆ ಕೆಲಸ. ನಾಲ್ಕು ದಿನ ರಾತ್ರಿ ನಿದ್ದೆ ಗೆಟ್ಟು ಕೆಲಸ ಮಾಡಿದ . ಐದನೇ ದಿನದಿಂದ ತನ್ನ ಚಾಳಿ ಶುರುಮಾಡಿದ. ಕಳ್ಳತನದಲ್ಲಿ ಮಲಗಲು ವ್ಯವಸ್ತೆಯನ್ನು ತುಂಬಾ ವ್ಯವಸ್ತಿತವಾಗಿಯೇ ಮಾಡಿಕೊಂಡ.ಅಕ್ಕಿ ತುಂಬಲು ಬಳಸುವ ಎರಡು ಗೋಣಿಚೀಲ ತೆಗೆದು ಕೊಂಡು , ಒಂದರಲ್ಲಿ ಕಾಲನ್ನೂ, ಇನ್ನೊಂದರಲ್ಲಿ ತಲೆಯನ್ನೂ ತೂರಿಸಿಕೊಂಡು ಕ್ಯಾಪ್ಸೂಲ್ ತರದಲ್ಲಿ ಅಕ್ಕಿ ಮೂಟೆಗಳ ಸಂದಿಯಲ್ಲಿ ನಿದ್ದೆ ಹೊಡೆಯಲಾರಂಬಿಸಿದ. ಈ ಉಪಾಯ ಸುಮಾರು ದಿನ ನಡೆಯಿತು.

ಒಂದು ದಿನ ಇವನ ಗ್ರಾಚಾರಕ್ಕೆ... ಇನ್ಸ್ಪೆಕ್ಷನ್ನಿಗೆಂದು ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ರೆ ಹಾಜರಿ ಪುಸ್ತಕ ಹಿಡಿದು ಬಂದರು. ಒಬ್ಬನ ಸುಳಿವಿಲ್ಲ . ಹುಡುಕಲು ಆಜ್ನೆಯಾಯಿತು.ಅಕ್ಕಿ ಮೂಟೆಗಳ ಸಂದಿಯಲ್ಲಿ ಗೊರಕೆ ಹೊಡೆಯುತ್ತಿದ್ದ ಕ್ಯಾಪ್ಸೂಲ್ ದತ್ತು ಸಿಕ್ಕಿ ಬಿದ್ದ . G.M. ತರಾಟೆಗೆ ತೆಗೆದು ಕೊಂಡರು. ಹುಷಾರಿರಲಿಲ್ಲ.....ಅದೂ ಇದೂ ಹೇಳಿ ಕಣ್ಣೀರುಗರೆದ. ವಾರ್ನ್ ಮಾಡಿ ಬಿಟ್ಟರು. ಈ ಸಲ ದತ್ತು ಬದುಕಿಕೊಂಡ.

ಆಮೇಲೆ ಕೆಲದಿನಗಳು ಸರಿಯಾಗೇ ಕೆಲಸ ಮಾಡಿದ . ನಾಯಿ ಬಾಲ ಯಾವತ್ತೂ ಡೊಂಕೆ ... ಅದಕ್ಕೆ ಅಪಚಾರ ಆಗಬಾರದಲ್ಲ.. ಈ ಸಲ ನಿದ್ದೆ ಮಾಡಲು ಹೊಸ ತಂತ್ರವೊಂದನ್ನು ಅಳವಡಿಸಿಕೊಂಡ.ಅಕ್ಕಿ ಮೂಟೆಗಳ ಸಾಗಣಿಕೆಗೆಂದು ಲಾರಿಗಳು ನಿಂತಿರುತ್ತಿದ್ದವಲ್ಲಾ... ಲಾರಿಯಲ್ಲಿ ಮಲಗಲು ಶುರು ಮಾಡಿದ .ದಿಕ್ಕು ದೆಸೆ ಇಲ್ಲದ ದತ್ತು ಸ್ಟೇರಿಂಗ್ ಕಡೆ ಕಾಲಿಡಬೇಕೋ ,ತಲೆಯಿಡಬೇಕೋ ಒಂದೂ ಯೋಚಿಸದೆ ಮಲಗಿ ಗೊರೆಯುವುದೊಂದೇ ಮಾಡಿದ. ಒಂದಿನ ನಿದ್ರೆಯ ಭರದಲ್ಲಿ ಇವನ ಕಾಲು ಲಾರಿಯ ಹಾರನ್ ಮೇಲೆ ಬಿತ್ತು. ಪೊಂ .......... ........ ......... ಹಾರನ್ ಹೊಡೆದು ಕೊಳ್ಳತೊಡಗಿತು. ದತ್ತುಗೆ ಎಚ್ಚರವಾಗಿ ಗಡಿಬಿಡಿಯಾಗಿ ಶಬ್ಧವನ್ನು ನಿಲ್ಲಿಸಲು ನೋಡಿದ. ಊಹೂ .... ಹಾರನ್ ಸ್ಟ್ರಕ್ ಆಗಿಬಿಟ್ಟಿತ್ತು .

ಸೆಕ್ಯುರಿಟಿಯವರೆಲ್ಲ ಅಲರ್ಟ್ ಆದರು.ಶಬ್ದ ಬರುತ್ತಿರುವ ಲಾರಿಯ ಸಮೀಪ ಬರತೊಡಗಿದರು.ದತ್ತುಗೆ ಭಯವಾಗತೊಡಗಿ ಗೊಂದಲದಲ್ಲಿ ಏನು ಮಾಡಬೇಕೆಂದು ತೋಚದೆ ಬೆಡ್ ಶೀಟ್ ಮುಚ್ಚಿಕೊಂಡು ಓಡತೊಡಗಿದ. ಹಾಗೆಯೇ ಸಿಕ್ಕುಬಿದ್ದ.ಯಾರೆಂದು ನೋಡುವುದಕ್ಕಿಂತ ಮೊದಲು ಗುದ್ದುಗಳು ಬಿದ್ದವು. ಅಯ್ಯಯ್ಯೋ.... ಬಿಡಿ ನಾನು ದತ್ತಾತ್ರೇಯ..... ಎಂದು ಗೋಳಿಟ್ಟ. ಈ ಸಲ ಯಾವ ತಂತ್ರವೂ ನಡೆಯಲಿಲ್ಲ. ಆನ್ ದಿ ಸ್ಪಾಟ್ .... ಸಸ್ಪೆಂಡ್ ಆಯಿತು.

ಮುಖ ಒಣಗಿಸಿಕೊಂಡು ರೂಮಿಗೆ ಬಂದು ಬಿದ್ದುಕೊಂಡ. ಎರಡು ದಿನ ರೂಮಿನಲ್ಲಿಯೇ ಇದ್ದುದನ್ನು ಕಂಡು ನಾವು ಕೇಳಿದೆವು . ಈ ಕಥೆಯೆಲ್ಲಾ ಹೇಳಿದ.ಸಿಕ್ಕಿಹಾಕಿಕೊಂಡೆ ....ಎಂದು ಪಶ್ಚಾತ್ತಾಪ ಪಟ್ಟ ಹೊರತೂ ಬುದ್ದಿ ಕಲಿತ ಮಾತಾಡಲಿಲ್ಲ.

ನಂತರ ಇನ್ನೊಂದು ಕಡೆ ಕೆಲಸಕ್ಕೆ ಸೇರಿ , ಅಲ್ಲಿ ಫ್ಯಾಕ್ಟರಿಯ ಪಾಸ್ ಬುಕ್ ಕದ್ದು , ಪೋಲೀಸ್ ಕಂಪ್ಲೇಂಟ್ ಆಗಿ, ಪೊಲೀಸರು ರೂಮಿನ ತನಕ ಬಂದದ್ದೂ ಆಯ್ತು. ನಮ್ಮ ರೂಂ ಓನರಿಗೆ ದತ್ತು ನಮ್ಮ ರೂಮಿನಲ್ಲಿರುವ ಬಗ್ಗೆ ಗೊತ್ತಿರಲಿಲ್ಲವಾದ್ದರಿಂದ ದತ್ತಾತ್ರೇಯ ಎನ್ನುವವರು ಯಾರೂ ಇಲ್ಲಿಲ್ಲ ಎಂದು ಕಳಿಸಿ ಬಿಟ್ಟ.ಸಧ್ಯ ಬಚಾವಾದ..!

ನಮಗೆ ಇವನ ಸಹವಾಸ ಸಾಕಾಗಿ ಹೋಗಿತ್ತು.ಅವನ ಕೈಚೀಲ,ಹಾಸಿಗೆ ಹೊರಗಿಟ್ಟು,'' ನಾವು ರೂಂ ಬದಲಾಯಿಸುತ್ತಿದ್ದೇವೆ ನಿನಗಿಲ್ಲಿ ಅವಕಾಶವಿಲ್ಲ . ''ಎಂದು ಕಳಿಸುವಷ್ಟರಲ್ಲಿ ಹೈರಾಣವಾಗಿದ್ದೆವು. ಜೀವನದಲ್ಲಿ ಗೊತ್ತು ಗುರಿಯಿಲ್ಲದೆ, ಸ್ಥಿರತೆಯಿಲ್ಲದೆ, ಹೋದಲ್ಲೆಲ್ಲಾ ಒಂದೊಂದು ಭಾನಗಡಿ ಮಾಡಿಕೊಳ್ಳುವ ದತ್ತಾತ್ರೇಯ ಅಲ್ಲಿ ಇಲ್ಲಿ ಕೆಲಸ ಮಾಡಿ ಯಾವುದೂ ಬರಕಾಸ್ತಾಗದೆ, ಊರು ಸೇರಿಕೊಂಡಿದ್ದಾನೆ.ಹುಟ್ಟು ಗುಣ ಸುಟ್ಟರೂ ಬಿಡ... ಎಂಬಂತೆ ಯಡವಟ್ಟು ಮಾತಾಡುತ್ತಾ , ಹುಚ್ಚನಂತೆ ಅಲ್ಲಿ ಇಲ್ಲಿ ಅಲೆಯುತ್ತಿದ್ದಾನೆ.

ಆದರೆ ಜೀವನದಲ್ಲಿ ಹೇಗಿರಬಾರದು ಎಂಬುದನ್ನು ಕಲಿಸಿದ ಆತ ನಿಜವಾಗೂ ನನ್ನ ಗುರು......!

(ಈ ಮೇಲೆ ಬರೆದಿದ್ದೆಲ್ಲ ನನ್ನವರು ನನಗೆ ಹೇಳಿದ ಅನುಭವ ಕಥನ.)

18 comments:

 1. ಕೆಲವೊಮ್ಮೆ ನಿಲುವಿಲ್ಲದ ಜನ ಬಳಿಯಲ್ಲಿದ್ದವರನ್ನೆಲ್ಲಾ ತಬ್ಬಿಬ್ಬು ಮಾಡಿಬಿಡುತ್ತಾರೆ ಅಲ್ವಾ....? ದತ್ತಾತ್ರೇಯನ ಗ೦ಡಾ೦ತರ... ಉಳಿದವರ ಪಚೀತಿ....ಈಮದ್ಯೆ ಧನಾತ್ಮಕ ಅ೦ಶವನ್ನು ಗುರುತಿಸಿದ್ದು ಮೆಚ್ಚಬೇಕಾದ್ದೇ.

  ReplyDelete
 2. ತುಂಬಾ ಚೆನ್ನಾಗಿದೆ ಹುಡುಗಾಟಕ್ಕೆ ಚೆನ್ನಾಗಿರುತ್ತೆ ಆದರೆ ಜೀವನದಲ್ಲಿ ಜವಾಬ್ದಾರಿ ಇಲ್ಲದಿದ್ದರೆ ಕಷ್ಟವಾಗುತ್ತೆ ತುಂಬಾ ಚೆನ್ನಾಗಿದೆ ಕಥೆ. ಈ ಲೇಖನದಿಂದ ಕಲಿಯುವುದು ಇದೇ. ಆ ಸ್ನೇಹಿತ ಇಷ್ಟೆಲ್ಲಾ ಆದರೂ ಬುದ್ದಿ ಕಲಿತಿಲ್ಲವೆಂದರೆ ಬಹಳ ಕಷ್ಟವಾಗುತ್ತೆ ಜೀವನ.

  ReplyDelete
 3. ದತ್ತೂನ ಆವಾಂತರಗಳನ್ನು ಓದಿ, ನಕ್ಕು ನಕ್ಕು ಸಾಕಾಯಿತು.
  ಅವನಿಗೆ ಕಲ್ಯಾಣವಾಗಲಿ!

  ReplyDelete
 4. ಸುಮ, ದತ್ತಾವತಾರ ಎಲ್ಲ ಕಡೆ ಇರುತ್ತೆ ಅನ್ಸುತ್ತೆ,,,ನನ್ನ ಸಹಪಾಠಿಯೊಬ್ಬ ಇಂತಹವನೇ..ಇದ್ದ...ನನ್ನ ಎಸ್ಸೆಸೆಲ್ಸಿ ಮತ್ತು ಪಿಯು ಸಮಯ. ಎಸ್ಸೆಸೆಲ್ಸಿ ಗಣಿತ ಪರೀಕ್ಷೆಯ ದಿನ ಹೊಸಕೋಟೆಯಲ್ಲಿ ನಮ್ಮ ಪಬ್ಲಿಕ್ ಎಕ್ಸಾಮ್ ಇದ್ದದ್ದು..ಪಕ್ಕದ ಟೆಂಟ್ ನಲ್ಲಿ (ರೇಕುಗಳ ಗೋಡೆಗಳ ಟೆಂಟದು) ಲವ-ಕುಶ ಸಿನಿಮಾ ನಡೀತಿತ್ತು...ನನ್ನನ್ನ ಮತ್ತು ನನ್ನ ಮತ್ತೊಮ್ಮ ಸ್ನೇಹಿತರನ್ನು ಸೆಕೆಂಡ್ ಶೋ ಗೆ ಎಳೆದುಕೊಂಡೇ ಹೋಗಿ..ಮತ್ತೆ ವಾಪಸ್ಸಾದಾಗ ನಮ್ಮ ಗಣಿತದ ಟೀಚರ್ ಬಿ.ಕೆ. ಕೈಗೆ ಸಿಕ್ಕಿಬಿದ್ವಿ....ಅವನೂ ನಿಮ್ಮ ದತ್ತ ಮಾಡೋ ತರಹಾನೇ... ಚನ್ನಾಗಿದೆ ಕಥೆ...

  ReplyDelete
 5. ಯಾವಾಗಲೂ ಹುಡುಗಾಟವನ್ನೇ ಮಾಡುತ್ತಾ, ಬೇರೆಯವರನ್ನೂ ಪೇಚಿಗೆ ಸಿಲುಕಿಸುತ್ತಾ, ಎಲ್ಲರೆದುರು ನಗೆಪಾಟಲಿಗೀಡಾಗುವ ಇ೦ತಾ ಜನರು ಜೀವನದುದ್ದಕ್ಕೂ ಹೀಗೇ ಇರುತ್ತಾರೆ ...
  ಮನಮುಕ್ತಾ, ಮನಸು ಹಾಗೂ ಸುನಾಥ್ ಸರ್,
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

  ReplyDelete
 6. ಹುಡುಗರಾಗಿದ್ದಾಗಿನ ಹುಡುಗಾಟಕ್ಕೆ ಬೆಲೆ ಹೆಚ್ಚು.
  ಜವಾಬ್ದಾರಿಯುತ ಜೀವನ ನಡೆಸಬೇಕಾದ ಸಮಯದಲ್ಲೂ ಹಾಗೇ ಉಳಿದರೆ ಬೆಲೆ ಇರದು. ಅಲ್ಲವೇ ಜಲನಯನ ಸರ್.... ನಿಮ್ಮ ಅನುಭವ ಹ೦ಚಿಕೊ೦ಡಿದ್ದಕ್ಕೆ ವ೦ದನೆಗಳು .
  ಚಿತ್ರಾ, ಸುಮ ಎರಡೂ ಅಲ್ಲದ ...

  ವಿಜಯಶ್ರೀ

  ReplyDelete
 7. ಕಥೆ ಚೆನ್ನಾಗಿದೆ,
  ಒಳ್ಳೆಯ ಅನುಭವ ಕಥನ
  ತಿಳಿದುಕೊಳ್ಳುವುದು ತುಂಬಾ ಇದೆ ಇದರಲ್ಲಿ

  ReplyDelete
 8. ಚುಕ್ಕಿಚಿತ್ತಾರ,
  ಹ್ಹ ಹ್ಹ ಹ್ಹ...ಈ ಬಾರಿ ನಗುವನ್ನು ತಂದ್ಬಿಟ್ಟಿದ್ದಿರ.. ಪ್ರತಿ paragraphನಲ್ಲಿ ಹಂಚ್ಬಿಟ್ಟಿದ್ದಿರ... ಸೂಪರ್! ದತ್ತಾತ್ರೇಯನ ಯಾತ್ರೆ...ದತ್ತಾತ್ರೇಯನ ವಾಟ್ ಎನ್ ಐಡಿಯಾ ಕಾನ್ಸೆಪ್ಟ್ ಸೂಪರ್.. ಹ್ಹ ಹ್ಹ ಹ್ಹ..
  ನಿಮ್ಮವ,
  ರಾಘು.

  ReplyDelete
 9. ಚುಕ್ಕಿ ಚಿತ್ತಾರ...

  ನಿಮ್ಮ ಇದುವರೆಗಿನ ಲೇಖನಗಳಿಗಿಂತ ಇದು ಭಿನ್ನವಾಗಿದೆ...

  ತುಂಬಾ ಚಂದದ ಬರವಣಿಗೆ...
  ದತ್ತು ಎಲ್ಲರ ಜೀವನದಲ್ಲೂ ಸಿಗುತ್ತಾರೆ..
  ಹೆಸರು ಬದಲಿಸಿಕೊಂಡು...

  ನನಗಂತೂ ನಕ್ಕು ನಕ್ಕು ಸುಸ್ತಾದೆ...!!

  ವೈವಿಧ್ಯವಾಗಿ ಬರುತ್ತಿದೆ ನಿಮ್ಮ ಬ್ಲಾಗ್...

  ನಮ್ಮನ್ನೆಲ್ಲ ಸಿಕ್ಕಾಪಟ್ಟೆ ನಗಿಸಿದ್ದಕ್ಕೆ ಅಭಿನಂದನೆಗಳು...

  ReplyDelete
 10. ದತ್ತಾತ್ರೇಯ ಮಹಾತ್ಮೆ ತುಂಬಾ ಚೆನ್ನಾಗಿದೆ..... ಇಂಥವರು ಬದಲಾಗೋದು ತುಂಬಾ ತುಂಬಾ ಕಷ್ಟ.... ಸಹಿಸಿಕೊಂಡ ನಿಮ್ಮವರಿಗೆ ತುಂಬಾ ಸಹನಾ ಶಕ್ತಿ ಬಂದಿರಬೇಕಲ್ಲಾ.....

  ReplyDelete
 11. ಗುರು.... ಅವರೆ.

  ಜೀವನದಲ್ಲಿ ಇ೦ತಾ ವ್ಯಕ್ತಿಗಳಿ೦ದ ಅನೇಕ ಸ೦ಗತಿಗಳನ್ನ ಹೀಗೂ ಅರಿಯಬಹುದಲ್ಲವೇ..... ನಿಮ್ಮ ಅಭಿಪ್ರಾಯಗಳಿಗೆ , ಪ್ರೋತ್ಸಾಹಕ್ಕೆ ಧನ್ಯವಾದಗಳು.

  ReplyDelete
 12. ರಾಘು...ಅವರೇ
  ನನ್ನ ಬರಹ ಇಷ್ಟಪಟ್ಟಿದ್ದಕ್ಕೆ, ನಕ್ಕಿದ್ದಕ್ಕೆ ......
  ನಮನಗಳು.

  ReplyDelete
 13. ಪ್ರಕಾಶಣ್ಣ..
  ಏಕತಾನತೆಯಿ೦ದ ಬೋರ್ ಆಗುತ್ತದಲ್ಲವೇ....
  ಒ೦ದೇ ತರದ " ತಲೆ ಕೆಡಿಸುವ" ವಿಚಾರಗಳ ಮಧ್ಯೆ ಹೀಗೊ೦ಚೂರು ವೈವಿಧ್ಯ....
  ಇಷ್ಟ ಪಟ್ಟು ನಕ್ಕಿದ್ದಕ್ಕೆ ನನ್ನ ಹಾಗೂ ನನ್ನವರ ನಮನಗಳು.

  ReplyDelete
 14. ಮೋಗೇರ... ಅವರೇ.
  ನಿಜವಾಗೂ ನನ್ನವರಿಗೆ ಸಹನಾ ಶಕ್ತಿ ಹೆಚ್ಚೆ....
  ನನ್ನ ಬರಹ ಮೆಚ್ಚಿಕೆಯಾಗಿದ್ದಕ್ಕೆ ಧನ್ಯವಾದಗಳು.

  ReplyDelete
 15. ಧತ್ತುವಿನ ಕತೆ ಕೇಳಿ ಸಕ್ಕತ್ ನಗುಬಂತು. ಎರಡು ಗೋಣಿಚೀಲಗಳಲ್ಲಿ ಕ್ಯಾಪ್ಸೂಲ್‍ನಂತೆ ನಿದ್ರಿಸುವುದು. ಇದು ಒಳ್ಳೇ ಉಪಮೆ.

  ಚೆನ್ನಾಗಿ ಬರೆದಿದ್ದೀರಿ...
  ಧನ್ಯವಾದಗಳು.

  ReplyDelete
 16. ಚೆನ್ನಾಗಿತ್ತು ಮೇಡಂ ನಿಮ್ಮ ದತ್ತಾತ್ರೇಯನ ಕಥೆ.. :) :) ಜೀವನದ ಬಗ್ಗೆ ಚೆನ್ನಾಗಿ ಹೇಳಿರುವಿರಿ..ಧನ್ಯವಾದಗಳು

  ಸುಮಾ

  ReplyDelete