Sunday, December 6, 2009

ಗೀಳು

ಅವಳಿಗೆ ಕಥೆ ಪುಸ್ತಕದ ಗೀಳು....
ಇವನಿಗೆ ಸಿನಿಮಾದ ಗೀಳು...
ಅದು ಏನು ಕಂಪ್ಯೂಟರಿನ ಗೀಳು ನಿನಗೆ ....
ಈ ರೀತಿಯ ಮಾತುಗಳನ್ನು ನಾವು ಕೇಳಿರುತ್ತೇವೆ ಹಾಗು ಆಡಿರುತ್ತೇವೆ.ಈ ಮೇಲಿನ ತರದವು ಅತಿರೇಕಕ್ಕೆ ಹೋದಾಗ ಅದು ಗೀಳು ರೋಗ ಎಂದು ಪರಿಗಣಿಸಲ್ಪಡುತ್ತದೆ.

ಗೀಳು ರೋಗ..... ಇದೊಂದು ಮಾನಸಿಕ ತೊಂದರೆ''ಪುನರಾವರ್ತನೆಗೊಳ್ಳುವ ಆಲೋಚನೆಗಳಿಂದ ಆತಂಕ . ಹುಟ್ಟುತ್ತದೆ. ಆತಂಕವನ್ನು ಹತ್ತಿಕ್ಕಲು , ಅದರಿಂದ ಬಿಡುಗಡೆಗೊಳ್ಳಲು ವ್ಯಕ್ತಿ ಪುನರಾವರ್ತಿತ ಕ್ರಿಯೆಯಲ್ಲಿ ತೊಡಗುತ್ತಾನೆ.'' ಇದು ಆತಂಕದಿಂದ ಹುಟ್ಟುವ ಖಾಯಿಲೆ [anxiety disorder]
ಉದಾ : ಪದೇ ಪದೇ ಕೈ ತೊಳೆಯುವುದು. ದೇವರ ಪೂಜೆ ಮಾಡುತ್ತಲೇ ಇರುವುದು , ಬಾಗಿಲ ಅಗಳೀ ಹಾಕಿದೆಯೋ ಇಲ್ಲವೋ ಎಂದು ಪದೇ ಪದೇ ಪರೀಕ್ಷಿಸುವುದು , ಹಿಂಸಿಸುವ ಆಲೋಚನೆಗಳು. ಲೈಂಗಿಕ ಅಸಂಬದ್ಧತೆಗಳು, ..ಇತ್ಯಾದಿ ...

ಈ ತೊಂದರೆ ಹೆಂಗಸರಿಗಿಂತಾ ಗಂಡಸರಲ್ಲಿ ದುಪ್ಪಟ್ಟು ಹೆಚ್ಚು ಕಾಣಿಸಿಕೊಳ್ಳುತ್ತದೆ.ಪ್ರತಿಶತ ೨ ರಿಂದ ೩ ಜನರಲ್ಲಿ ಈ ಖಾಯಿಲೆ ಕಾಣಿಸಿಕೊಳ್ಳುತ್ತದೆ . ಈ ಗೀಳು ತೊಂದರೆಗೆ ಮೆದುಳಿನ ಅಸಮರ್ಪಕ ಬೆಳವಣಿಗೆ, ನರ ಚೋದಕಗಳ ಸ್ರವಿಸುವಿಕೆಯಲ್ಲಿನ ಏರು ಪೇರು, ಜೀನ್ ಗಳಲ್ಲಿನ ಮಾರ್ಪಾಡು [Gene mutation] ಕಾರಣಗಳಾಗಬಹುದು . ಅನುವಂಶೀಯವಾಗಿಯೂ ಬರಬಹುದು.

ಸ್ವಚ್ಚತೆಯ ಗೀಳು : ಈ ವ್ಯಕ್ತಿಗಳು ಪದೇ ಪದೇ ಕೈ ತೊಳೆಯುತ್ತಲೇ ಇರುವರು.ಬಾಗಿಲ ಹಿಡಿಕೆ ಮುಟ್ಟಿದರೆ , ಕೈ ಚೀಲ ಮುಟ್ಟಿದರೆ, ಕಡೆಗೆ ತಮ್ಮದೇ ತಲೆ, ಕೈ, ಕಾಲು ಮುಟ್ಟಿಕೊಂಡರೂ ತಕ್ಷಣ ಹೋಗಿ ಕೈ ತೊಳೆಯುತ್ತಾರೆ.ಕೈ ತೊಳೆಯುವುದಾದರೂ ಹೇಗೆ..? ಒಮ್ಮೆ ತೊಳೆದದ್ದು ಸರಿಯಾಗಿಲ್ಲವೇನೋ ಎಂಬ ಅನುಮಾನ ಕಾಡಿ ಮತ್ತೆ ಸಾಬೂನು ,ಡೆಟ್ಟಾಲ್ ಇತ್ಯಾದಿಗಳನ್ನೆಲ್ಲಾ ಉಪಯೋಗಿಸಿ ಕೈ ತೊಳೆಯುವುದು. ಹೀಗೆಯೇ ಅರ್ಧ ತಾಸು ಕೈ ತೊಳೆಯುತ್ತಲೇ ಇರುವರು. ಯಾವಾಗಲೂ ಕೈ ತೊಳೆಯುತ್ತಲೇ ಇರುವುದರಿಂದ ಚರ್ಮ ಸುಲಿದು ಹುಣ್ಣುಗಳಾಗಬಹುದು [Dermatitis].

ಬಾಗಿಲ ಹಿಡಿಕೆಯಲ್ಲಿ ರೋಗಾಣುಗಳಿರುತ್ತವೆ .ಅದನ್ನು ಮುಟ್ಟಿ ಕೈ ತೊಳೆಯದೇ ಉಳಿದ ಕಡೆ ಮುಟ್ಟಿದರೆ ರೋಗಾಣುಗಳು ಹರಡುತ್ತವೆ. ಎಲ್ಲರಿಗೂ ರೋಗ ಬರುತ್ತದೆ ಎನ್ನುವುದು ಇವರ ಸಮರ್ಥನೆ.ಬಾರಿ ಬಾರಿಗೂ ಕೈ ತೊಳೆಯುವುದು ಇವರ ಆತಂಕ ನಿವಾರಣೆಗಾಗಿ....! ಈ ರೀತಿ ಅರ್ಥ ಹೀನವಾಗಿ ವರ್ತಿಸುವುದು ಅವರ ಗಮನದಲ್ಲೇ ಇದ್ದರೂ ಬಿಡಲಾರರು.

ಹಿಂಸೆಯಲ್ಲಿ : ಕೆಲವರಿಗೆ ಬೇರೆಯವರನ್ನು ಹಿಂಸಿಸಬೇಕೆನ್ನುವ ಆಲೋಚನೆಗಳು ಬರುತ್ತವೆ. ಆದರೆ ಇವರು ಹಿಂಸಾ ವಿನೋದಿಗಳಲ್ಲ. ಈ ರೀತಿ ಆಲೋಚನೆಗಳು ಬರುತ್ತವೆ ಎಂದು ಸ್ವತಹ ಆತಂಕಕ್ಕೊಳಗಾಗುತ್ತಾರೆ.

ವಸ್ತುಗಳ ಸಂಗ್ರಹ [compulsive hoarding] : ಇದು ಒಂದು ತರಹ ಅನುಪಯೋಗಿ ವಸ್ತುಗಳ ಮೇಲಿನ ಮೋಹ. ನಾವು ಯಾವ ವಸ್ತುಗಳನ್ನು ಕಸ ಎಂದು ತೊಟ್ಟಿಗೆ ಎಸೆಯುತ್ತೆವೋ ಅಂತಹಾ ವಸ್ತುಗಳೆಲ್ಲವೂ ಈ ವ್ಯಕ್ತಿಗೆ ಅತ್ಯಮೂಲ್ಯವಾದುದಾಗಿರುತ್ತದೆ.ಕೋಣೆಯ ತುಂಬಾ ಹಳೆ ಪೇಪರ್ ರಾಶಿ, ಗೋಣಿ ಚೀಲಗಳು, ಹರಕು ಬಟ್ಟೆ ,ಒಡಕು ಡಬ್ಬ ,ಹಣ್ಣುಗಳ ಸಿಪ್ಪೆ,ಹೀಗೆ ಎಲ್ಲಾ ರೀತಿಯ ಕಸಗಳನ್ನೂ ಕೂಡಿಟ್ಟುಕೊಂಡಿರುತ್ತಾರೆ.ಈ ಕೊಳಕುತನದಿಂದಾಗಿ ದುರ್ವಾಸನೆ ಮತ್ತು ಇಲಿಗಳ ಒಡನಾಟ ಸಾಕಷ್ಟಿರುತ್ತದೆ. ಯಾವಾಗಲಾದರೂ ಬೇಕಾಗಬಹುದು ಎಂಬ ದೂರದೃಷ್ಟಿ....! ಬೇರೆಯವರಿಂದ ಕಡ ತಂದ ವಸ್ತುಗಳನ್ನು ಹಿಂತಿರುಗಿಸಲಾರದ ವ್ಯಾಮೋಹ .. ಮತ್ತು ಕೆಲವೊಮ್ಮೆ ಕಳ್ಳತನದ ಸ್ವಭಾವ [kleptomania]ವನ್ನು ಸಹಾ ಹೊಂದಿರುತ್ತಾರೆ.ಯಾವುದೇ ಭಾವನಾತ್ಮಕ ಸಂಬಂಧವಿರದಿದ್ದರೂ ಕೂಡಾ ಹಾಳಾದ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿರುತ್ತಾರೆ. ಅವು ವಸ್ತುಗಳಾಗಲೀ,ಪ್ರಾಣಿಗಳಾಗಲೀ, ಹಣವಾದರೂ ಆಗಲಿ. ಅನಗತ್ಯ ಸಂಗ್ರಹ ಒಂದು ಗೀಳೇ......

ಲೈಂಗಿಕತೆಯಲ್ಲಿ ಗೀಳು [sexual obsessions] : ಈ ಗೀಳಿರುವವರಲ್ಲಿ ಅವರಿಗೆ ಯಾವ ವ್ಯಕ್ತಿಯೇ ಇರಲಿ, ಅಪರಿಚಿತರು,ಬಂಧುಗಳು, ಮಕ್ಕಳು, ಸಹವರ್ತಿಗಳು, ಪೋಷಕರು,ಅಲ್ಲದೆ ಪ್ರಾಣಿಗಳ ಜೊತೆಯಲ್ಲಿ ಕೂಡ ಲೈಂಗಿಕತೆಗೆ ಸಂಬಂಧಿಸಿದ ಅರ್ಥಹೀನ ಯೋಚನೆಗಳು ಪದೇ ಪದೇ ಬರ ತೊಡಗುತ್ತವೆ.ಇಂತಹಾ ಆಲೋಚನೆಗಳಿಂದ ಆತಂಕಕ್ಕೊಳಗಾಗಿ ಕೀಳರಿಮೆಯಿಂದ ತನ್ನನ್ನೇ ಟೀಕಿಸಿಕೊಳ್ಳತೊಡಗುತ್ತಾನೆ. ಸದಾ ಆತಂಕದಲ್ಲಿಯೇ ಇರುವುದರಿಂದ ಲೈಂಗಿಕ ಅಸಾಮರ್ಥ್ಯ ಕಾಣಿಸಿಕೊಳ್ಳುತ್ತದೆ. ಮತ್ತೆ ಆತಂಕ.....ತಾನೇನಾದರೂ ಸಲಿಂಗ ಕಾಮಿಯಿರಬಹುದೇ... ? ಸಂಗಾತಿಯೊಂದಿಗಿನ ನಿರಾಸಕ್ತಿ ಈ ರೀತಿಯ ಆಲೋಚನೆಗಳಿಗೆ ಕಾರಣವಾಗುತ್ತದೆ.
ಕೆಲವೊಮ್ಮೆ ಹೀಗೂ ಇರುತ್ತದೆ . ಈ ಗೀಳಿರುವವರು ಯಾವುದೇ ಹೆಂಗಸಿನೊಂದಿಗೆ ಹಸ್ತಲಾಘವ ಮಾಡಲು ಹಿಂಜರಿಯುತ್ತಾರೆ.ಕಾರಣ... ಇದರಿಂದ ಹೇಗಾದರೂ [?] ಆಕೆ ಗರ್ಭಿಣಿಯಾಗಿಬಿಟ್ಟರೆ........??? ಹೀಗೆಲ್ಲಾ ಆಗುವುದಿಲ್ಲ ಎನ್ನುವುದು ಗೊತ್ತಿದ್ದರೂ ಕೂಡ ತಮ್ಮ ಆಲೋಚನೆಯನ್ನು ಹತ್ತಿಕ್ಕಲಾರದವರಾಗುತ್ತಾರೆ.

ಈ ಗೀಳು ರೋಗದವರಿಗೆ ತಮ್ಮ ಆಲೋಚನೆಗಳೆಲ್ಲಾ ಅಸಂಬದ್ಧ ಎಂದು ಗೊತ್ತಾಗುತ್ತದೆ . ತಾವ್ಯಾಕೆ ಈ ರೀತಿ ವರ್ತಿಸುತ್ತೇವೆ ಎಂದು ಆತಂಕ ಪಡುತ್ತಲೇ ಮತ್ತೆ ಸಂಬಂಧಪಟ್ಟ ಕ್ರಿಯೆಯಲ್ಲಿ ತೊಡಗುತ್ತಾರೆ. ಮತ್ತೆ ಆತಂಕ..... ಮತ್ತೆ ಕ್ರಿಯೆ... ವರ್ತುಲದಲ್ಲಿ ಸಿಲುಕಿಕೊಳ್ಳುತ್ತಾರೆ.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಗೀಳುರೋಗ [obsessive compulsive disorder] ದವರಿಗೂ ಗೀಳು ವ್ಯಕ್ತಿತ್ವ [obsessive compulsive personality disorder] ದವರಿಗೂ ವ್ಯತ್ಯಾಸವಿದೆ.

ಗೀಳು ರೋಗದವರು ತಮ್ಮ ಆಲೋಚನೆಗಳು ಅರ್ಥವಿಲ್ಲದ್ದು ಎಂದು ಅರಿತಿರುತ್ತಾರೆ. ಆದರೆ ಅದನ್ನು
ಸರಿಪಡಿಸಿಕೊಳ್ಳಲಾರದವರಾಗಿರುತ್ತಾರೆ.

ಆದರೆ ಈ ಗೀಳು ವ್ಯಕ್ತಿತ್ವದವರದ್ದು ಮಾತ್ರಾ ಸ್ವಲ್ಪ ಕಷ್ಟವೇ .ಈ ವ್ಯಕ್ತಿಗಳು ಗೀಳು ರೋಗದ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರೂ ಕೂಡಾ ಅದನ್ನು ಒಪ್ಪಿಕೊಳ್ಳಲಾರರು....!ಪ್ರತಿಯೊಂದರಲ್ಲೂ ಪರಿಪೂರ್ಣತೆ, ಅಚ್ಚುಕಟ್ಟುತನ ,ನಿಯಮ ಪರಿಪಾಲನೆ ಇವುಗಳನ್ನು ಅಗತ್ಯಕ್ಕಿಂತಲೂ ಹೆಚ್ಚು ನಿರೀಕ್ಷಿಸುತ್ತಾರೆ. ಹೀಗೇ ಇರಬೇಕು ಎಂಬ ಪೂರ್ವ ನಿರ್ಧಾರಿತರಾಗಿರುವ ಇವರು ಅದು ಸರಿಯಿಲ್ಲ ,ಇದು ಸರಿಯಿಲ್ಲ ಎಂಬ ಆತಂಕದಲ್ಲಿಯೇ ಯಾವಾಗಲೂ ಇರುತ್ತಾರೆ. ಅತಿ ನಿರೀಕ್ಷೆಯಿಂದ ಯಾವ ಕೆಲಸವನ್ನೂ ಪೂರೈಸಲು ಸಾಧ್ಯವಾಗುವುದಿಲ್ಲ.ಇದು ತಮ್ಮದೊಂದು ಖಾಯಿಲೆ ಎಂದು ಸುತರಾಂ ಒಪ್ಪಿಕೊಳ್ಳಲಾರರು. Perfectionist ಎಂಬ ಸ್ವಯಂ ಬಿರುದಿನಿಂದ ಕಂಗೊಳಿಸುತ್ತಿರುತ್ತಾರಲ್ಲ ....!!! ತಮ್ಮ ಕೆಲಸಗಳು ಎಷ್ಟು ಸರಿ ಎಂಬುದನ್ನೂ , ಕೈ ತೊಳೆಯದಿದ್ದರೆ ರೋಗ ಹೇಗೆ ಹರಡುತ್ತದೆ ಎನ್ನುವುದಕ್ಕೆ ಬೇಕಾದರೆ ಒಂದು ಘಂಟೆ ಉಪನ್ಯಾಸ ಕೊಡಬಲ್ಲರು . ದುಡ್ಡು ಕೂಡಿ ಇಡದಿದ್ದರೆ ಮುಂದೆ ಏನೇನು ಕಷ್ಟ ಅನುಭವಿಸ ಬೇಕಾಗುವುದೋ ಎಂಬ ಆತಂಕದಿಂದ ಖರ್ಚೇ [ಅತಿ ಮಿತ ] ಮಾಡದೆ ಕೂಡಿ ಇಡುತ್ತಲೇ ಹೋಗುವರು ....!!

ಒರಟುತನ , ಅತಿಯಾದ , ಅನಗತ್ಯ ನೈತಿಕ ಪ್ರದರ್ಶನ, ವಿರಾಮದಲ್ಲೂ ಅಗತ್ಯವಿಲ್ಲದಿದ್ದರೂ ಕೆಲಸ ಮಾಡುತ್ತಲೇ ಇರುವುದು ಇತರ ಲಕ್ಷಣಗಳು.ಅತಿ ನಿರೀಕ್ಷೆಯಿಂದ ಕೆಲವೊಮ್ಮೆ ಸಂಬಂಧಗಳೇ ಕಳಚಿಕೊಳ್ಳುವುವು. [ಗಂಡ ಹೆಂಡಿರಲ್ಲಿ,ತಂದೆ ಮಕ್ಕಳ ನಡುವೆ ]

ಸೈಕೋ ಥೆರಪಿ ಮತ್ತು ಔಷಧಿಗಳಿಂದ ಗೀಳನ್ನು ಹೋಗಲಾಡಿಸಬಹುದು . ಚಿಕಿತ್ಸೆ ಹೆಚ್ಚಿನ ಸಮಯವನ್ನು ಬೇಡಿದರೂ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯ. ಬಂಧುಗಳೂ ಮತ್ತು ಸಮಾಜದ ಸಹಾಯವಿದ್ದಲ್ಲಿ ಈ ಗೀಳಿನಿಂದ ಮುಕ್ತರಾಗಬಹುದು.

ಹಾಗಾಗಿ ನಮಗೇನಾದರೂ ಈ ರೀತಿಯ ವ್ಯಕ್ತಿಗಳು ಎದುರಾದಲ್ಲಿ ನಾವು ಕಿರಿಕಿರಿಗೊಳಗಾಗದೆ ಸುಮ್ಮನಿದ್ದು ಸೌಹಾರ್ಧತೆಯನ್ನು ಪ್ರದರ್ಶಿಸುವುದು ಒಳಿತು.

ಕೊನೆ ತುತ್ತು :ಅನಗತ್ಯವಾಗಿ ಪುಸ್ತಕಗಳ ಸಂಗ್ರಹ ಮತ್ತು ಒಂದೇ ಪುಸ್ತಕದ ಅನೇಕಪ್ರತಿಗಳನ್ನು ಕಾರಣವಿಲ್ಲದೆ ಸಂಗ್ರಹಿಸಿಟ್ಟುಕೊಳ್ಳುವುದನ್ನು Bibliomaniya ಎನ್ನುತ್ತಾರೆ.

16 comments:

 1. ವಿಜಯಶ್ರೀ ಮೇಡಂ,
  ಈ ಗೀಳಿನ ಗೋಳು ಓದುತ್ತಾ ಹೋದಂತೆ ಗಾಬರಿಯಾಯಿತು..... ಗಂಭೀರ ವಿಷಯವನ್ನ ತುಂಬಾ ಸರಳವಾಗಿ ಹೇಳಿದ್ದೀರಾ... ಥ್ಯಾಂಕ್ಸ್.....

  ReplyDelete
 2. ನಾನು ಇಂಥಹ ಕೆಲವು ವಿಚಿತ್ರ ಜನರನನ್ನ ನೋಡಿದ್ದೀನಿ, ಸ್ವಲ್ಪ ಲೂಸು ಅಂತ ಸುಮ್ಮನಿದ್ದದ್ದು ಇದೆ, ಆದರೆ ನನ್ನೆಲ್ಲ ಅನುಮಾನಗಳಿಗೆ ಇಗ ಉತ್ತರ ಸಿಕ್ಕಿದೆ.

  ಇತ್ತೀಚಿಗೆ ರೇಡಿಯೋ ದಲ್ಲೂ ಕೂಡ ಸೈಕೊಸಿಸ್ ಬಗ್ಗೆ ವಿವರಣೆ ಕೊಡುತ್ತಾ ಇರುತ್ತಾರೆ.

  ReplyDelete
 3. ವಿಜಯಶ್ರೀ ಮೇಡಂ,
  ಬಹಳಷ್ಟು ವಿಷಯಗಳನ್ನು ಸರಳ ಮಾತಿನಲ್ಲಿ ಸುಂದರವಾಗಿ ತಿಳಿಸಿದ್ದಿರ
  ಗೀಳುಗಳು ಹಚ್ಚಿಕೊಳ್ಳುವುದು ಸುಲಭ ಆದರೆ ಬಿಡುವುದು ಕಷ್ಟ

  ReplyDelete
 4. obsessive compulsive disorder ಹಾಗು obsessive compulsive personality disorder ಎನ್ನುವ ಎರಡು ವಿಷಯಗಳ ಬಗೆಗೆ ಬಹಳ ತಿಳಿಯಾಗಿ ತಿಳಿಸಿದ್ದೀರಿ.

  ReplyDelete
 5. ಸರಳವಾಗಿ ಆದರೆ ಸ್ವಾರಸ್ಯವಾಗಿ ಬರೆದಿದ್ದೀರಿ!

  ReplyDelete
 6. ಗೀಳುರೋಗದ ಬಗ್ಗೆ ಅನೇಕ ವಿಚಾರ ತಿಳಿಯಿತು. ಅತಿ ಸರ್ವತ್ರ ವರ್ಜಯೇತ್ ಅ೦ದ೦ತೆ ಯಾವುದೂ ಅತಿಯಾದಲ್ಲಿ ಕಷ್ಟವೇ ಸರಿ. ಸರಿಯಾದ ಸಮಯದಲ್ಲಿ ಅತಿಯ ಮಿತಿಯನ್ನು ತಿಳಿದಲ್ಲಿ ಮು೦ಬರುವ ಸಮಸ್ಯೆಯಿ೦ದ ಪಾರಾಗಬಹುದು. ನನಗನ್ನಿಸುವ೦ತೆ ಗೀಳು ರೋಗ ನಿಧಾನವಾಗಿ ವ್ಯಕ್ತಿಯನ್ನು ಆವರಿಸುತ್ತದೆ.ಸ್ವಲ್ಪ ಜಾಗರೂಕತೆಯಿ೦ದ ತಮ್ಮನ್ನು ತಾವು ವಿಮರ್ಶಿಸಿಕೊಳ್ಳುವವರಿಗೆ ಇದು ಬರುವುದಿಲ್ಲವೇನೊ ಅಲ್ವಾ?

  ReplyDelete
 7. ಮಾಹಿತಿಗೆ ಧನ್ಯವಾದಗಳು..
  ಅಂದಹಾಗೆ, ನನಗು ಸ್ವಲ್ಪ ಕಂಪ್ಯೂಟರ್ ನ ಗೀಳಿದೆ.. ಜಾಸ್ತಿ ಏನು ಇಲ್ಲ ಬಿಡಿ :)

  ReplyDelete
 8. ಪೇಪರಿನಲ್ಲಿ ಬ೦ದದ್ದು... ಏನೆ೦ದರೆ,
  ತಜ್ನರು ಶೋದಿಸಿದ ಹಾಗೆ ಹದಿಹರಯದವರಲ್ಲಿ ಇ೦ಟರ್ ನೆಟ್ ಚಟ ಹೆಚ್ಚಾಗುತ್ತಿದ್ದು, ಖಿನ್ನತೆಗೆ ಕಾರಣವಾಗುತ್ತಿದೆಯ೦ತೆ.ಚಾಟ್ ಮಾಡುವಾಗ ಬಯಸಿದವರು ಆನ್ ಲೈನ್ ನಲ್ಲಿ ಸಿಗದಿದ್ದಾಗ ತಲೆಗೂದಲೆಲ್ಲಾ ಕಿತ್ತುಕೊಳ್ಳುವುದು, ಗೋಡೆಗೆ ತಲೆ ಜಪ್ಪಿಕೊಳ್ಳುವುದೂ ಈ ರೀತಿಯೆಲ್ಲಾ ಮಾಡುತ್ತಾರ೦ತೆ...!ಉಳಿದ ಅಡಿಕ್ಶನ್ ತರಹವೇ ಇದರಿ೦ದ ಪಾರಾಗುವುದು ಕಷ್ಟವಾಗುವುದ೦ತೆ.. ಆದ್ದರಿ೦ದ ನಮ್ಮ ಜಾಗ್ರತೆಯಲ್ಲಿ ನಾವಿರುವುದು ಒಳ್ಳೆಯದು...ಅಲ್ಲವೇ..?
  ಪ್ರತಿಕ್ರಿಯಿಸಿದ ಮೊಗೇರ..
  ಬಾಲು..
  ಗುರು...
  ಸುನಾತ್ ಸರ್..
  ಸುಪ್ತವರ್ಣ..
  ಮನಮುಕ್ತಾ...
  ಹಾಗೂ ಶಿವಪ್ರಕಾಶ್..
  ಧನ್ಯವಾದಗಳು

  ReplyDelete
 9. ವಿಜಯಶ್ರೀ, ನಿಮ್ಮ ಲೇಖನ ಓದುತ್ತಾ ಇರುವಾಗ ನನಗೆ ಒಂದು ಇಂತಹುದೇ ಗೀಳು ಗೋಳಾಡಿಸುತ್ತಿದೆ ಅನಿಸುತ್ತಿದೆ..ಹಹಹ....ಅದೇ ಈ ತರಹ ಬ್ಲಾಗ್ ಗಳನ್ನ ನೋಡಿ ಪ್ರತಿಕ್ರಿಯಿಸುವ ಗೀಳು.....ಹಹಹ...ಬಹಳ ಮಾಹಿತಿಪೂರ್ಣ ಲೇಖನ ..Medical field ನಲ್ಲೂ ಇದರ ವಿಶೇಷ ಅಧ್ಯಯನಗಳ ಪ್ರಬಂಧಗಳು ಪ್ರಕಟಗೊಂಡಿವೆ.

  ReplyDelete
 10. ಒಳ್ಳೆಯ ವಿಷಯ... ಚೆನ್ನಾಗಿದೆ.. ಜಲನಯನ ಅವರು ಹೇಳಿದಹಾಗೆ ನನಗೆ ಬ್ಲಾಗ್ ಓದುವ ಗೀಳು...! ಏನ್ ಮಾಡ್ಲಿ..
  ನಿಮ್ಮವ,
  ರಾಘು.

  ReplyDelete
 11. ಜಲನಯನ ಸರ್,
  ನಿಮ್ಮದು ಒಳ್ಳೆಯ ಗೀಳು..!!!!
  ಪ್ರತಿಕ್ರಿಯಿಸಿದ೦ತೆ ಬರೆಯುವ ಉತ್ಸಾಹ ಹೆಚ್ಚಾಗುತ್ತದೆ... ನಮಗೆ..
  ನಿಮ್ಮ ಪ್ರತಿಕ್ರಿಯೆಗೆ , ಪ್ರೋತ್ಸಾಹಕ್ಕೆ ಧನ್ಯವಾದಗಳು.

  ರಾಘು ಅವರೇ,ನಿಮ್ಮ ಬ್ಲಾಗ್ ಓದುವ ಗೀಳಿನಿ೦ದ ಹೊಸ ಬಗೆಯ ಕವನ ಹುಟ್ಲಿಕ್ಕು೦ಟು ಮತ್ತೆ ಅಲ್ಲವಾ....!!!ಹ್ಹ..ಹ್ಹ..ಹ್ಹ್ಹಾ..Keep it up.

  ನಿಮ್ಮ ಪ್ರೊತ್ಸಾಹಕ್ಕೆ ಧನ್ಯವಾದಗಳು.

  ReplyDelete
 12. ಇದನ್ನು ಒದ್ತಾ ಇದ್ದ ಹಾಗೇ ನನಗಿರುವ ಗೀಳೊ೦ದರ ಪ್ರಜ್ಞೆ ಬರುತ್ತಿದೆ. ಬ್ಲೊಗ್-ಓದೋದು, ಪ್ರತಿಕ್ರಿಯಿಸೋದು, ಬ್ಲೊಗ್-ಬರೆಯೋದು-ಪ್ರತಿಕ್ರಿಯೆ ನೀರೀಕ್ಷಿಸೋದು -
  ಸರಳ ಮಾತಿನಲ್ಲಿ ಗೀಳಿನ ಅಪಾಯಕಾರಿ ಅ೦ಶಗಳನ್ನು ತೆರೆದಿದ್ದಿರಾ.....

  ReplyDelete
 13. ವಿಜಯಾ..

  ಒಳ್ಳೆಯ ಲೇಖನ...
  ನನಗೆ ಏನು ಗೀಳಿದೆ ಅಂತ ನೋಡಿಕೊಳ್ಳುವಂತಾಯಿತು...

  ReplyDelete
 14. vijaya oLLe maahiti dhanyavadagaLu...

  ReplyDelete
 15. ಗೀಳುರೋಗ ಮತ್ತು ಗೀಳುವ್ಯಕ್ತಿತ್ವದ ಬಗ್ಗೆ ಉತ್ತಮ ಮಾಹಿತಿ ಲೇಖನವನ್ನು ಸಾದರಪಡಿಸಿದ್ದೀರಿ, ವಿಜಯಶ್ರೀ ಅವರೆ.
  ಧನ್ಯವಾದಗಳು
  ಅನ೦ತ್

  ReplyDelete