Wednesday, April 3, 2013

ಬೇರಿನಲ್ಲೇನಿದೆ ಮಹಾ..!!

ಬಸ್ಸಿಳಿದು ಮನೆಗೆ ಬರುವ ದಾರಿಯಲ್ಲಿ  ಅಪ್ಪಯ್ಯನ ಜೊತೆ ಹೆಜ್ಜೆ ಹಾಕುವುದೆಂದರೆ ಅದು ಓಟಕ್ಕೆ ಸಮ.ದಾಪುಗಾಲಿಡುತ್ತಾ ಹೋಗುತ್ತಿರುವ  ಅಪ್ಪಯ್ಯನನ್ನು  ರಸ್ತೆಯ ಪಕ್ಕದ ಇಳಿಜಾರಿನ ದರೆಯಲ್ಲಿ ಚಾಚಿಕೊಂಡಿರುವ ಒಣ  ಮರದ ಬೇರೊಂದು ತಡೆದು ನಿಲ್ಲಿಸಿಬಿಡುತ್ತಿತ್ತು.    ನಾನು  ಓಡುತ್ತಾ  ಬಂದು ''ಯಂತಾ ಅಪ್ಯಾ ...'' ಎನ್ನುವ ಹೊತ್ತಿಗೆ ಅಪ್ಪಯ್ಯನ ತಲೆಯಲ್ಲೊಂದು ಆಕಾರ ಕುಣಿಯುತ್ತಿರುತ್ತಿತ್ತು. ''ಈ ಬೇರು ನೋಡಿದ್ಯಾ..  ಯಂತ್ ಕಂಡಂಗೆ  ಕಾಣ್ತು  ಹೇಳು ನೋಣ.....'' ಎನ್ನುತ್ತಾ ನಮ್ಮ ಕಲಾಪ್ರಜ್ನೆಗೆ ಸವಾಲು ಹಾಕುತ್ತಿದ್ದ. ಬೇರಿಗೆ ಮೊದಲ ಸಾಮ್ಯತೆ ಹಾವಾಗಿದ್ದರಿಂದ ''ಹಾವು ಮಾಡ್ಳಕ್ಕನಾ ಇದ್ರಲ್ಲಿ,?'' ಎನ್ನುತ್ತಾ  ನಾನೂ  ಅದರ ಹಾವ ಭಾವ ಪರಿಶೀಲಿಸುತ್ತಿದ್ದೆ. ''ಆನೆ ಸೊಂಡ್ಲಿದ್ದಂಗೆ ಇಲ್ಯನೇ,'' ಎನ್ನುತ್ತಾ ಅಪ್ಪಯ್ಯ  ''ಬಾ ಹೋಪನ''ಎನ್ನುತ್ತಾ ಕರೆದೊಯ್ಯುತ್ತಿದ್ದ. ಸಾಯಂಕಾಲದ ಹೊತ್ತಿಗೋ, ಮರುದಿನವೋ ಕತ್ತಿ  ತಂದು ಅದನ್ನು ನಿಧಾನಕ್ಕೆ ಬಿಡಿಸಿಕೊಂಡು ಮನೆಗೆ ತಂದು ಬಿಸಿನೀರಲ್ಲಿ ನೆನೆಸಿಟ್ಟು ಅದರ ತೊಗಟೆ ಬಿಡಿಸುವ ಯತ್ನದಲ್ಲಿರುತ್ತಿದ್ದ.ಅದನ್ನು ಒಣಗಿಸಿ ಅದನ್ನು ತಿದ್ದಿ ತೀಡಿ,  ಮರಳು ಪೇಪರ್ ಹಾಕಿ ಉಜ್ಜಿ, ಅದಕ್ಕೆ ಪಾಲಿಷ್  ಹಾಕಿ  ಅದರ ಅಸ್ಪಷ್ಟ ರೂಪಕ್ಕೊಂದು  ಸುಂದರ ರೂಪವನ್ನು ತೆರೆದಿಡುತ್ತಿದ್ದ. 

 ಅಪ್ಪಯ್ಯನ ಈ ಕಾಷ್ಠ ಶಿಲ್ಪದ ಪ್ರೇಮ ಬೆಳೆಯಲು ಪ್ರಾರಂಭವಾಗಿದ್ದು ಸುಮಾರು ಅವನ ಮಧ್ಯ ವಯಸ್ಸಿನ ನಂತರ.  ನಮಗೆಲ್ಲಾ ಪಾಠ ಕಲಿಸಿದ ನಮ್ಮೂರ ಪ್ರಾಥಮಿಕ ಶಾಲೆಯ ಮೇಷ್ಟರು   ಈ ರೀತಿಯ ಬೇರು ನಾರುಗಳ ಶಿಲ್ಪಗಳನ್ನು ಮಾಡುವ ಹವ್ಯಾಸದವರಾಗಿದ್ದರು. ಅಪ್ಪಯ್ಯನಿಗೆ ಯಾವುದನ್ನಾದರೂ ಮಾಡಬೇಕೆಂದು  ತಲೆಗೆ ಹೊಕ್ಕಿತೆಂದರೆ ಶತಾಯ ಗತಾಯ ಅದನ್ನು ಮಾಡಿಯೇ ಸಿದ್ಧ..  ಹೀಗೆ ಸುಮ್ಮನೆ ಯಾವುದೋ ಬೇರೊಂದನ್ನು ತಂದು ಅದನ್ನು ಕೆತ್ತಿ ಹಾವಿನ ರೂಪ ಕೊಟ್ಟ.  ಅಲ್ಲಿಂದ  ದಿನಗಳೆದಂತೆ ಅಪ್ಪಯ್ಯನ ಆಸಕ್ತಿ ಹೆಚ್ಚಾಗುತ್ತಲೇ ಹೊಯಿತು. ಒಂದಾದ ಮೇಲೊಂದರಂತೆ , ಕಂಡ ಕಂಡ ಒಣ ಮರಗಳನ್ನೆಲ್ಲಾ ಪರಿಶೀಲಿಸಿ ಬೇರು ಹುಡುಕುವುದೂ,   ಅದಕ್ಕೊಂದು ರೂಪ ಕೊಡುವುದೂ ನಿತ್ಯದ ಕೆಲಸವಾಯಿತು. ಅದಕ್ಕೆಂದೇ ಚಿಕ್ಕ ದೊಡ್ಡ ಚಾಣ, ಉಳಿ, ಈ ತರದ ಹತಾರಗಳನ್ನೆಲ್ಲಾ ಕೊಂಡು ತಂದು  ಮಧ್ಯ ರಾತ್ರಿಯ ವರೆಗೂ ಕೆತ್ತಿ ಉಜ್ಜಿ  ತಿರುಗಿಸಿ ಮುರುಗಿಸಿ ನೋಡುತ್ತಾ ಮನಸ್ಸಿನಲ್ಲಿಯೇ ಸಮಾಧಾನ ಪಡುತ್ತಿದ್ದ.    ನಾವೂ ಅಪ್ಪಯ್ಯನ ಪಕ್ಕ ಕುಕ್ಕರುಗಾಲಲ್ಲಿ  ಕುಳಿತುಕೊಂಡು  ಈ ಕೆಲಸಗಳನ್ನೆಲ್ಲಾ ನೋಡುತ್ತಿದ್ದೆವು. ಮೊದಮೊದಲಿಗೆ ಅದೇನು ಆಕಾರ ತಳೆಯುತ್ತದೆ ಅನ್ನುವುದು ನಮ್ಮ ಕಲ್ಪನೆಗೆ ನಿಲುಕುತ್ತಿರಲಿಲ್ಲ.  ಇದು ಅದರ ಹಾಗೆ ಕಾಣುತ್ತೆ, ಇದರ ಹಾಗೆ ಕಾಣುತ್ತೆ ಅನ್ನುತ್ತಾ ಸುಳ್ಳು ಸುಳ್ಳೇ  ಲೆಕ್ಕಾಚಾರ  ಹಾಕುತ್ತಿದ್ದೆವು.ಕೊನೆ ಕೊನೆಗೆ ರೂಪ ಸ್ಪಷ್ಟವಾಗುತ್ತಾ ಬಂದಂತೆ 'ಹೌದಲ್ವಾ, ನಮಗೆ ಗೊತ್ತೇ ಆಗ್ಲಿಲ್ಲ 'ಅನ್ನುತ್ತಾ ಪೆಚ್ಚುನಗು ಬೀರುತ್ತಿದ್ದೆವು.   ಕಲಾವಿದನಿಗಷ್ಟೇ ಗೊತ್ತು ಕಲೆಯ ಮರ್ಮ..!  ಸುಮ್ಮನೇ  ನೋಡಿದರೆ ಈ ಬೇರಿನಲ್ಲೇನಿದೆ  ಮಹಾ ಅನ್ನಿಸಿಬಿಡುತ್ತೆ..  ಬೇರು ಹುಡುಕಿದ್ದು, ಅದಕ್ಕೆ  ಸಂಸ್ಕಾರ ಕೊಟ್ಟಿದ್ದು,    ಕೊನೆಗೆ  ಕಲ್ಪನೆಗೆ ತಕ್ಕ ರೂಪು ತಾಳಲು ಮಾಡಿದ  ಶತಪ್ರಯತ್ನ,  ಇವೆಲ್ಲದರ ಕಥೆ  ಅಪ್ಪಯ್ಯನ ಬಾಯಲ್ಲೇ ಕೇಳಲು  ಚಂದ!


ಕೆಲವು ರೂಪಾಂತರಗೊಂಡ  ಬೇರುಗಳು 

 ಹಾವುಗಳು  ಮತ್ತು ಮುಂಗುಸಿ .. 


 ಆನೆ ಮುಖ 

 ಕೆಂಬೂತ ಮತ್ತು ನವಿಲು 

 ಕ್ರಿಕೆಟ್ ಬೌಲರ್ 

 ಪೀರ್ ಸಾಬ್  ಮತ್ತು ಮಹಮ್ಮದ್ ಸಾಬ್ 

 ನರ್ತಕಿ 


    ಅಪ್ಪಯ್ಯ ಮತ್ತು ಅವನ  ಕಾಷ್ಠ ಶಿಲ್ಪಗಳನ್ನು ಒತ್ತಾಯಪೂರ್ವಕವಾಗಿ ಚಿತ್ರಿಸಿದ್ದು.. [ ಈಗ ಯಂಗೆ ಪುರ್ಸೋತ್ತಿಲ್ಲೇ,  ಕಡಿಗೆ  ಫೋಟೋ ತೆಗಿಲಕ್ಕು  ಎನ್ನುವ ಅಪ್ಪಯ್ಯನನ್ನು ಹಿಡಿದು ಕೂರಿಸಿದ್ದು  ಹೀಗೆ ...:)   ] 


ಈಗೀಗ ಈ ಬೇರುಕೆತ್ತುವ ಕೆಲಸ  ಸ್ವಲ್ಪ ಕಡಿಮೆಯಾಗಿದೆ. ವಯಸ್ಸಿನ ಕಾರಣದಿಂದ ಹಾಗೂ ಆರೋಗ್ಯದ ಕಾರಣದಿಂದ ತುಂಬಾ ಹೊತ್ತು ಕುಳಿತುಕೊಳ್ಳಲು ಕಷ್ಟ .  ಆದರೂ  ಊರಿಗೆ  ಹೋದಾಗೆಲ್ಲಾ, ''ಇದೊಂದು ಹೊಸಾದು ನೋಡಿದ್ಯನೇ,'' ಅನ್ನುತ್ತಾ ಹೊಸದೊಂದು ಆಕೃತಿಯನ್ನು ತೋರಿಸುತ್ತಾನೆ ಅಪ್ಪಯ್ಯ..!

ವಂದನೆಗಳು

 . 

25 comments:

 1. ವಾಹ್ ತುಂಬಾ ಚೆನ್ನಾಗಿವೆ ... ಅಪ್ಪಯ್ಯ ಒಳ್ಳೆ ಕಲೆಗಾರರು

  ReplyDelete
 2. ವಾವ್! ಕೃಷಿಯನ್ನು ಆಸಕ್ತಿಕರ ವೃತ್ತಿಯನ್ನಾಗಿ ಮಾಡುವುದರ ಕುರಿತು ಈಗಷ್ಟೇ ನನ್ನ ಫೇಸ್ ಬುಕ್ ವಾಲ್ ಮೇಲೆ ಬರೆದಿದ್ದೆ. ಹೆಚ್ಚಿನಂಶ ಟೆನ್‍ಶನ್ನಿನಲ್ಲೇ ಬದುಕುವ ರೈತರೆಲ್ಲ ನಿಮ್ಮ ತಂದೆಯವರಂತೆ ಇಂಥ ಹವ್ಯಾಸಗಳ ಮೂಲಕ ಸಹನೀಯ ಮತ್ತು ಆಸಕ್ತಿದಾಯಕ ಮಾಡಿಕೊಳ್ಳಬಹುದಲ್ಲವೇ!! ಹಿಂದೊಮ್ಮೆ ನೀವು ನಿಮ್ಮ ಅಣ್ಣನವರ ವ್ಯವಸಾಯ ಬದುಕಿನ ಕುರಿತು ಬರೆದುದು ಇಲ್ಲಿ ನೆನಪಾಗುತ್ತಿದೆ ಈಗ.

  ReplyDelete
  Replies
  1. ಧನ್ಯವಾದಗಳು ಜಯಲಕ್ಷ್ಮಿ ಮೇಡಮ್,

   Delete
 3. ತುಂಬಾನೇ ಖುಷಿಯಾಯಿತು ಓದಿ. ಇಂತಹ ಅಪ್ಪಯ್ಯನನ್ನು ಪಡೆದ ನೀವು ತುಂಬಾ ಧನ್ಯರು!

  ReplyDelete
 4. ಈ ಕಾಷ್ಠ ಶಿಲ್ಪ ನೋಡಿದಾಗ ನಂಗೆ ಆದ ನಿಜ ಘಟನೆಯೊಂದು ಮನಸ್ಸಿಗೆ ಬಂತು . ನಮ್ಮ ಊರಿನ ಈಶ್ವರ ದೇವಸ್ಥಾನದ ಮುಖ್ಯ ದ್ವಾರದ ಮೇಲೊಂದು ಊ ಮಾದರಿಯ ಹಾವು ಇತ್ತು . ದೂರದಲ್ಲಿ ನೋಡಿದರೆ ಹಾವು ಕಂಡಂತೆ ಆಗುತ್ತೆ . ನ೦ಗೆ ಎಲ್ಲಿ ಹೋದರೂ ಕುತೂಹಲ ಜಾಸ್ತಿ . ದೇವಳದ ಆಫೀಸಿನಲ್ಲಿ ವಿಚಾರಿಸಿದಾಗ ನಿಜ ವಿಷಯ ತಿಳಿಯಿತು . ಹೀಗೆ ಹವ್ಯಾಸಿ ಕಾಷ್ಠ ಶಿಲ್ಪಿ ಮನೆಯಲ್ಲಿ ಮಾಡಿ ಇತ್ತು ಕೊಂಡಿದ್ದರಂತೆ ಅದು ಏನೋ ಭುಸುಗುಟ್ಟಿದಂತೆ ಭಾಸವಾಗ್ತಾ ಇತ್ತಂತೆ . ಅವರಿಗೆ ಭಯ ಕಾಡೋಕೆ ಶುರು . ದೇವಸ್ಥಾನದಲ್ಲಿ ಬಂದು ನಡೆಯುವ ದರ್ಶನದ ದಿನ ಅವರ ಕತೆ ಹೇಳಿ ಕೊಂಡರಂತೆ . ಆಗ ಸಿಕ್ಕ ಉತ್ತರ ಅದರ ಮೇಲೆ ನಂಗೆ ಆಸೆಯಾಗಿದೆ ಅದನ್ನ ತಂದು ನನ್ನ ಮುಂಬಾಗಿಲಲ್ಲಿ ತೂಗು ಹಾಕಿ ನಿಮಗೆ ಒಳ್ಳೆಯದಾಗುತ್ತೆ ಅಂತ ತೀರ್ಪು ಸಿಕ್ಕಿತಂತೆ ಹಾಗೆ ಆ ಹಾವು ನಮ್ಮ ದೇವಸ್ತಾನ ಸೇರಿದ್ದು .

  ReplyDelete
  Replies
  1. ಹ್ಹ..ಹ್ಹ.. ಚೆನ್ನಾಗಿದೆ ಹಾವಿನ ವಿಚಾರ.. ಧನ್ಯವಾದಗಳು

   Delete
 5. ನೀವು ಅಪ್ಪನ ಬಗ್ಗೆ ಅಂದಾಗ ಲೇಖನ ಅಪ್ಪನ ದುಡಿಮೆ ಜೀವನ ಹೀಗೆ ಬರೆದಿರುತ್ತೀರಾ ಎಂದುಕೊಂಡೆ...ಆದರೆ ಇದು..!! ಅಧ್ಬುತ, ಅಪ್ಪನ ಸೃಜನಶೀಲತೆಯ ಕಣ್ಣು ಗುರುತಿಸಿದ್ದು ಬೇರುಗಳನ್ನು...!!! (ಕಾಷ್ಠ ಶಿಲ್ಪ -ಒಂದು ಸುಂದರ ಪದ ಪರಿಚಯವೂ ಆಯಿತು). ಆ ಬೇರುಗಳಿಗೆ ನೀಡಿದ ಕಲಾರೂಪವನ್ನು ಪರಿಚಯಿಸಿ ಅಪ್ಪನ ಪರಿಚಯ ವಿಭಿನ್ನವಾಗಿರುವಂತೆ ಮಾಡಿದ್ದೀರ...ವಿಜಯಶ್ರೀ ಅಭಿನಂದನೆಗಳು.

  ReplyDelete
 6. ಮನಸು ಹೂವಿನಂತೆ ಅರಳುತ್ತದೆ ಈ ಚಿತ್ರಗಳನ್ನು ಅದರ ಹಿಂದಿನ ಶ್ರಮದ ಬಗ್ಗೆ ನೋಡಿದಾಗ, ಓದಿದಾಗ. ಅತಿ ಸುಂದರ, ಬೇರಿನಲ್ಲೂ, ಮರದ ತೊಗಟೆಯಲ್ಲೂ ಅರಳುವ ಕಲೆಯನ್ನು ಅದರ ಹಿಂದಿನ ಶಿಲ್ಪಿಯನ್ನು ಪರಿಚಯಿಸಿದ ನಿಮಗೆ ನಿಮ್ಮ ಲೇಖನಕ್ಕೆ ಅಭಿನಂದನೆಗಳು. ನಿಮ್ಮ ಪಿತಾಶ್ರಿಯವರ ಚರನಾರವಿಂದಗಳಿಗೆ ನನ್ನ ನಮಸ್ಕಾರಗಳು. ಉತ್ತಮ ಲೇಖನ ಉತ್ತಮ ಪ್ರಸ್ತುತಿ.

  ReplyDelete
 7. ಸೊಗಸಾದ ನೆನಕೆಗಳು. ನಿಮ್ಮ ತಂದೆಯವರ ಕೌಶಲ ಮತ್ತು ಅದನ್ನು ಕಂಡು, ಮೆಚ್ಚಿ ಪರಿಚಯಿಸಿದ ನಿಮ್ಮ ಪರಿ ಎರಡೂ ಸೊಗಸಾಗಿವೆ. ಉತ್ತಮ ಚಿತ್ರ-ಲೇಖನ.

  ReplyDelete
 8. ಬೇರೆ ಯಾವ ಲೇಖನ , ಪ್ರಶಸ್ತಿಗಳಿಗಿ೦ತ ಮಗಳು ಬರೆದ ಈ ಮೆಚ್ಚುಗೆಯ ಲೇಖನಕ್ಕೆ ಹೆಚ್ಚಿನ ಬೆಲೆ ಇರುವುದು . ಇಬ್ಬರಿಗೂ ಅಭಿನಂದನೆಗಳು

  ReplyDelete
 9. ನಿಮ್ಮ ತಂದೆಯವರ ಕಲಾಪ್ರೇಮಕ್ಕೆ ಹಾಗು ಕಲಾಕೌಶಲ್ಯಕ್ಕೆ ತಲೆ ಬಾಗುತ್ತೇನೆ. ಇದನ್ನು ನಮಗೆ ಪರಿಚಯಿಸಿದ ನಿಮಗೆ ಧನ್ಯವಾದಗಳು.

  ReplyDelete
 10. ಹ್ಮು.. ಪ್ರೀತಿಯ ಅಪ್ಪಯ್ಯನಿಗೆ ಅಪ್ಪಯ್ಯನೇ ಸಾಟಿ. ಲೇಖನ ಹಾಗೂ ಚಿತ್ರಗಳನ್ನು ನೋಡುತ್ತಾ ನೆನಪಿನ ಸುರುಳಿ ಬಿಚ್ಚಿಕೊ೦ಡು ಮನಸ್ಸನ್ನು ಮುದಗೊಳಿಸಿತು..... :)

  ReplyDelete
 11. hats off to ಅಪ್ಪಾ ... ಅದ್ಭುತ ಕಲೆ ವಿಜಯಕ್ಕ ... ನಾನು ನಮ್ಮನೆಗೆ ಬಂದ ಆಚಾರಿಯೊಬ್ಬ ಮಾಡುತ್ತಿದುದನ್ನು ಹಿಂಗೆ ಕುಳಿತು ನೋಡಿ ನನ್ನದೇ ಆದ ಕಲ್ಪನೆಯಲ್ಲಿ ಕೂರುತ್ತಿದ್ದೆ. ಅವನು ಕೂಡ ಇದೆಂತ ಕಂಡಂಗ್ ಅಕೈತ್ರ ಒಡತಿ ಅಂತ ಕೇಳುತ್ತಿದ್ದ... ಕಲ್ಪನೆಗೆ ರೂಪ ಕೊಡುವುದರಲ್ಲಿ ಮಜವಿರುತ್ತಿತ್ತು

  ReplyDelete
 12. ಕಾಷ್ಟ ಶಿಲ್ಪಗಳು ಮುದ ನೀಡುತ್ತದೆ. ನಾನು ಮಲೆನಾಡಿನ ಹೊರಗಿನ ಅಪರೂಪದ ಅಥಿತಿಗಳಿಗೆ ಕಾಷ್ಟ ಶಿಲ್ಪ ತರಯಾರಿಸಿ ಉಡುಗೊರೆ ಕೊಟ್ಟಿದ್ದೇನೆ. ಓದಿ ಖುಷಿ ಆಯಿತು.

  ReplyDelete
  Replies
  1. nija, neevoo koodaa ಕಾಷ್ಟ ಶಿಲ್ಪ havyaasigalendu tilidu khushiyaayitu..:)

   Delete
 13. ವಾವ್ ಛಂದಿದ್ದು...
  ಕಾಷ್ಟ ಶಿಲ್ಪ ಹೇಳ ಶಬ್ಧಕೇಳಿದಿದ್ನಿಲ್ಲೆ...
  ಖುಷಿ ಆತು...
  ಒಳ್ಳೆ ಕಲಾಪ್ರದರ್ಶನಕ್ಕೆ ಇಡಂಗೆ ಇದ್ದು...

  ReplyDelete