Monday, February 3, 2014

ಎಲ್ಲರೂ ಬನ್ನಿ, ಪ್ರೋತ್ಸಾಹಿಸಿ.

ಕನಸು ಕಾಣಲು ಯಾರ ಅಪ್ಪಣೆಯು  ಬೇಕಿಲ್ಲದಿದ್ದರೂ ಅದನ್ನು ನನಸಾಗಿಸಿಕೊಳ್ಳಲು ಸಮಯ ಮತ್ತು ಅವಕಾಶ ಬೇಕೇ ಬೇಕಾಗುತ್ತದೆ. ನಮ್ಮಂತಹಾ ಗೃಹಿಣಿಯರಿಗಂತೂ ಇನ್ನೂ ಅನೇಕ ವಿಚಾರಗಳು ಸರಿ ಸಮದೂಗಬೇಕಾಗುತ್ತದೆ.  ಅದೇ ವಿಚಾರಕ್ಕೆ ಬರುವೆ, ಈಗೊಂದು ಆರು ತಿಂಗಳಿಂದ ನಾನು ಭಯಂಕರ ಬ್ಯುಸಿ ಮತ್ತು ಆ ಕಾರಣಗಳಿಂದಲೇ ಸಧ್ಯಕ್ಕೆ  ಹೆಮ್ಮೆಪಟ್ಟುಕೊಳ್ಳುತ್ತಾ ಓಡಾಡುತ್ತಿದ್ದೇನೆ ಅಂದರೆ ಆ ಖುಷಿಗೆ ನೀವೂ ಪಾಲುದಾರರು ....!! 

ನಾನು ಆಗಾಗ ಚಿತ್ರ ಚಿತ್ರ  ಅನ್ನುತ್ತಾ ವಿಚಿತ್ರಗಳನ್ನೆಲ್ಲಾ ಬರೆಯುತ್ತಾ, ಕೊರೆಯುತ್ತಾ ಎಲ್ಲರ ತಲೆ ತಿನ್ನುತ್ತಿದ್ದೆನಲ್ಲ.  ಅದನ್ನೆಲ್ಲಾ ಇನ್ನೂ ಸ್ವಲ್ಪ ಪ್ರೋಫೆಶನಲ್ಲಾಗಿ  ಮಾಡೋಣವೆಂದು ಒಂದುಶುಭ ಮುಹೂರ್ತದಲ್ಲಿ ನಿಶ್ಚಯಿಸಿ ಕರ್ನಾಟಕ  ಚಿತ್ರಕಲಾ  ಪರಿಷತ್ತಿನವರು  ಆರು ತಿಂಗಳ ಅವಧಿಯಲ್ಲಿ ನಡೆಸುವ ಹಾಬಿ ಕೋರ್ಸ್ ಗೆ ಸೇರಿಕೊಂಡಾಯ್ತು..  ಚಿತ್ರಕಲಾಪರಿಷತ್ತಿನವರದು ಅದೊಂದು ಒಳ್ಳೆಯ ನಿರ್ಧಾರ ಮತ್ತು ಕೆಲಸ.  ರೆಗ್ಯುಲರ್  ಕ್ಲಾಸ್ ಗೆ ಹೋಗಿ ಕಲಿಯುವ ಅವಕಾಶವಾಗದೇ  ಹೇಗಾದರೂ ಕಲಾಭ್ಯಾಸ ಮಾಡಬೇಕೆನ್ನುವ ಹಪಾಹಪಿ ಇರುವವರಿಗೆ ಅತ್ಯುತ್ತಮ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.ನನ್ನಂತಹಾ ಅನೇಕರ ಕನಸುಗಳ 'ಬಿಟ್ಟ ಸ್ಥಳ' ತುಂಬಿಕೊಳ್ಳಲು ಒಂದು ಸದವಕಾಶ. ಪರಿಷತ್ತಿನ  ಸೆಕ್ರೆಟರಿಯವರಾದ ಡಿ. ಕೆ. ಚೌಟ ಅವರ  ಪ್ರಯತ್ನದ ಫಲವಾಗಿ   ಹತ್ತು ವರ್ಷಗಳಿಂದ ಈ ತರಗತಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ನನಗೆ ಗೊತ್ತಾಗಿದ್ದು ಈ ವರ್ಷ..  
ಅಂತೂ ನಾನು ಈಗ ಜ್ಞಾನೋದಯವಾಗಿ ಈ ಕೋರ್ಸ್ ಗೆ ಸೇರಿಕೊಂಡು ಬಿಟ್ಟಿದ್ದೇನೆ ಎನ್ನುತ್ತಾ ಸಂಕೋಚ ಪಡುತ್ತಾ ಮೊದಲ ದಿನ ಅಲ್ಲಿ ಹೋಗಿ ನೋಡಿದರೆ ಅಲ್ಲೇನು ... ?   ನನ್ನಂತಹಾ ಅನೇಕರು ಅಲ್ಲಿದ್ದಾರೆ..!!   ನಾನೇನು ಮಹಾ ..? ಕಾಲೇಜಿಗೆ ಹೋಗುವ ಮಕ್ಕಳಿಂದ ಹಿಡಿದು   ಗ್ರಾಂಡ್ ಪೇರೆಂಟ್ಸ್ ಗಳು   ಕೂಡಾ ಸಡಗರದಿಂದ ಬಂದು ಪೇಂಟಿಂಗ್ ಕಲಿಯುವುದನ್ನು ನೋಡಿದರೆ ಎಂಥವರಿಗೂ ಒಮ್ಮೆ ಮುಖ ಮತ್ತು ಮನಸ್ಸು ಅರಳುತ್ತದೆ. ಒಂದು ಧನ್ಯತಾ ಭಾವ ಮನಸ್ಸನ್ನು ಆವರಿಸುವುದು ಸತ್ಯ. 
ಗೆರೆ ಹಾಕುವುದರಿಂದ ಮೊದಲ್ಗೊಂಡು ಈಗ ಉದ್ದಾನುದ್ದದ ಅಕ್ರಿಲಿಕ್, ಆಯಿಲ್ ಪೇಂಟಿಂಗ್ ಗಳನ್ನೆಲ್ಲಾ ಮಾಡಿ ಮಾಡಿ ರಾಶಿ ಹಾಕಿದ್ದೇವೆ ಅಂದರೆ ಅದನ್ನೆಲ್ಲಾ ನೀವು ನೋಡಿಯೇ  ಅರಿತುಕೊಳ್ಳಬೇಕು..:)
ಮತ್ತು ಗೆರೆ ಹಾಕಲು ಕಷ್ಟ ಪಡುವವರೂ ಕೂಡಾ ಕೋರ್ಸ್ ಮುಗಿಯುವುದರೊಳಗೆ ಸುಂದರ  ಕಲಾಕೃತಿಗಳನ್ನು   ತಯಾರಿಸಿದ್ದಾರೆಂದರೆ,   ನಮ್ಮ ಅಂತಃಸತ್ವ ಮತ್ತು ಹಾರ್ಡ್ ವರ್ಕ್   ಜೊತೆಗೆ ನಮ್ಮ ಪೇಂಟಿಂಗ್ ಶಿಕ್ಷಕಿ  ಇನ್ಷಾ ಉಮ್ಮೆಹಾ  ಅವರ ಹೃತ್ಪೂರ್ವಕ ಕಲಿಸುವಿಕೆಯನ್ನು ಕೂಡಾ ಸ್ಮರಿಸಲೇ  ಬೇಕಾಗಿದೆ.  ಯಾವುದೇ ನಿರಾಕರಣೆ  ಇಲ್ಲದೇ ಕ್ಷಣ ಕ್ಷಣಕ್ಕೂ  ನಮಗೆ  ಪ್ರೇರಣೆ ನೀಡುತ್ತಾ, ಕಲೆಯ ಮಾರ್ಗದರ್ಶನ ಮಾಡುತ್ತಾ ನಮ್ಮನ್ನು ಕಲಾವಿದರನ್ನಾಗಿ ಮಾಡಿದ್ದಾರೆ.  

 ಈ  ಆರು ತಿಂಗಳ ಪ್ರಯತ್ನದ ಫಲವಾಗಿ ಮೂಡಿಬಂದ ಕಲಾಕೃತಿಗಳ ಪ್ರದರ್ಶನವನ್ನು ಇದೇ ಫೆಬ್ರವರಿ 8  ಶನಿವಾರದಂದು  ಆಯೋಜಿಸಲಾಗಿದೆ.  ಸಮಯ  ಬೆಳಿಗ್ಗೆ  ಹತ್ತೂವರೆಯಿಂದ  ಸಾಯಂಕಾಲ ಐದೂವರೆವರೆಗೆ. ದಯವಿಟ್ಟು ಎಲ್ಲರೂ ಬನ್ನಿ, ನೋಡಿ ಆನಂದಿಸಿ, ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿ.


ವಂದನೆಗಳು.
 

10 comments:

  1. ನಾನೂ ನಿಯ ಹಾಗೇ ಕಲೆಯ ಆಸಕ್ತ.ಓದುವಾಗ ಚಿತ್ರಕಲೆಯ ಅಭ್ಯಾಸವಿತ್ತು.ನಂತರ ವೃತ್ತಿ ಜೀವನದ ಜಂಜಾಟದಲ್ಲಿ ಬಿಟ್ಟು ಹೋಯಿತು.ಈಗ ನಿವೃತ್ತಿ ಜೀವನ.ನಾನೂ ನಿಮ್ಮ ಕೋರ್ಸ್ ಗೆ ಸೇರಿಕೊಳ್ಳ ಬಹುದೇ ನೋಡುತ್ತೇನೆ.ಪ್ರದರ್ಶನಕ್ಕೆ ಖಂಡಿತಾ ಬರುತ್ತೇನೆ.

    ReplyDelete
  2. ಅಭಿನಂದನೆಗಳು ಹಾಗು ಶುಭಾಶಯಗಳು.

    ReplyDelete
  3. ಇದು ಸಂತೋಷದ ವಿಷಯ. ಆಗಾಗ ನಿಮ್ಮ ರಚನೆಗಳನ್ನು ನೋಡಿ ಅಂದುಕೊಳ್ಳುತ್ತಿದ್ದೆ, ನಿಮಗೆ ಈಗಾಗಲೇ ಚಿತ್ರಕಲೆ ಬರುತ್ತಿದ್ದಿರಬೇಕೆಂದು. ಒಳ್ಳೆಯ ಪ್ರಗತಿ. ಶುಭವಾಗಲಿ. ಬೆಂಗಳೂರಿನಲ್ಲಿದ್ದರೆ ಖಂಡಿತಾ ಬರುವೆ.

    ReplyDelete
  4. ಅಭಿನಂದನೆಗಳು ವಿಜಯಾ...
    ನಾವೆಲ್ಲ ಬರ್ತೇವೆ.... ಜೈ ಹೋ !

    ReplyDelete
  5. ಸಂತೋಷದ ವಿಚಾರ , ನಿಮ್ಮಿಂದ ಒಳ್ಳೆಯ ಕಲಾಕೃತಿಗಳು ಮೂಡಿಬರಲಿ

    ReplyDelete
  6. ಮನಪೂರ್ವಕವಾದ ಅಭಿನಂದನೆಗಳು ವಿಜಯಶ್ರೀ..ನಿಮ್ಮ ಸಂಭ್ರಮ ನೋಡುವ ಅವಕಾಶ ತಪ್ಪಿದುದಕ್ಕಾಗಿ ತುಂಬಾ ವಿಷಾದವಿದೆ.. ನಮ್ಮ ಇತರ ಸ್ನೇಹಿತೆಯರು ಖಂಡಿತ ಬಂದು ಪ್ರೋತ್ಸಾಹಿಸುತ್ತಾರೆಂಬ ನಂಬಿಕೆ ಇದೆ..ನಿಮ್ಮಿಂದ ಇನ್ನಷ್ಟು ಅದ್ಬುತ ಕಲಾಕೃತಿಗಳು ಹೊರಬರಲಿ .. ನಮ್ಮಂತವರಿಗೆ ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ.

    ReplyDelete
  7. ಮನಪೂರ್ವಕವಾದ ಅಭಿನಂದನೆಗಳು.. ನಾನು ನಿಮ್ಮ ಸಂಭ್ರಮ ನೋಡಲು ಸಾಧ್ಯವಾಗುದದಕ್ಕೆ ವಿಷಾದವೂ ಇದೆ.. ಆದರೂ ನಮ್ಮ ಇತರ ಸ್ನೇಹಿತೆಯರು ನನ್ನ ಪರವಾಗಿ ನಿಮಗೆ ಪ್ರೋತ್ಸಾಹಿಸಲು ಬರುವರೆಂಬ ನಂಬಿಕೆ ಇದೆ.. ನಿಮ್ಮಿಂದ ಇನ್ನಷ್ಟು ಒಳ್ಳೆಯ ಕಲಾಕೃತಿ ಹೊರಬಂದು ನಮ್ಮನ್ತವರಿಹೆ ಸ್ಫೂರ್ತಿ ನೀಡಲಿ ಎಂದು ಆಶಿಸುತ್ತೇನೆ.

    ReplyDelete
  8. ಸೂಪರ್ ವಿಜಯಶ್ರೀ, ಖಂಡಿತಾ ಬರ್ತೇವೆ. ಶುಭಾಶಯಗಳು

    ReplyDelete