ಜಿಟಿ ಜಿಟಿ ಮಳೆ . ಇರುಚಲು ಬಡಿದು ಬಾಲ್ಕನಿಯಲ್ಲಿಟ್ಟ ಪಾಟುಗಳ ತುಂಬೆಲ್ಲ ನೀರು. ಹಾಕಿದ ಗಿಡಗಳೆಲ್ಲಾ ಕೊಳೆತು ಹೋಗುತ್ತವೋ ಏನೋ.. ?
ಯಾಕೋ ಮನಸಿಗೆ ಸೋಮಾರೀತನ. ಮಕ್ಕಳು ಶಾಲೆಯಿಂದ ಬರಲಿನ್ನೂ ತುಂಬಾ ಹೊತ್ತಿದೆ.
ಟೀಪಾಯಿಯ ಮೇಲೆ ಪಗಡೆ ಕಾಯಿಗಳು ಹರಡಿಕೊಂಡಿದ್ದು ಯಾಕೋ ಆಪ್ಯಾಯಮಾನ. ಮಗ ಬಂದವನೇ ಪಗಡೆ ಕಾಯಿ ಹುಡುಕುತ್ತಾನೆ.ಮಗಳು ಪಟ ಹಾಸುತ್ತಾಳೆ. ಅಮ್ಮ, ಅಪ್ಪ ಬರಲೆಷ್ಟು ಹೊತ್ತಿದೆ.? ಪಗಡೆ ಆಡೋಣ...
ಮನಸ್ಸು ಹಳೆಯದನ್ನೇ ಮೆಲುಕು ಹಾಕುತ್ತದೆ. ಚಿಕ್ಕವರಿರುವಾಗ ತಮ್ಮನೊ೦ದಿಗೆ ಅತ್ತೆಯ ಕೈ ಹಿಡಿದೆಳೆದು ಹೀಗೆ ಮಾಡುತ್ತಿದ್ದದ್ದು ನಿನ್ನೆ ಮೊನ್ನೆ ನಡೆದ೦ತಿದೆ. ಮಳೆಯ ಹನಿಗಳೆಡೆಯಿ೦ದ ನೆನಪುಗಳ ತು೦ತುರು ಮನಸ್ಸನ್ನು ಒದ್ದೆ ಮಾಡುತ್ತದೆ.ಮಳೆಯ ಮಹತ್ವ ಅದಲ್ಲವೇ ? ಅದಕ್ಕೂ ನೆನಪುಗಳ ಜರೂರತ್ತಿದೆ.!
ಅತ್ತೆಯಾದರೂ ಪಾಪ.., ಮದುವೆಯಾಗಿ ಮೂರು ವರುಷ ತು೦ಬುವುದರೊಳಗೆ, ಗ೦ಡ ತಿರುಗಿ ನೋಡದೇ ಮೋಡದೆಡೆ ನಡೆದು ಬಿಟ್ಟಿದ್ದ. ಮಗುವೊ೦ದು ಇತ್ತ೦ತೆ ಅತ್ತೆಗೂ. ಅದಕ್ಕೆ ಅದ್ಯಾವುದೊ ಜ್ವರ ಬಡಿದು ತೀರಿಕೊ೦ಡಿತ೦ತೆ. ಅತ್ತೆಯ ಕನಸುಗಳೆಲ್ಲಾ ಕಮರಿಹೋದವು. ಮತ್ತೆ ಭುಗಿಲೇಳದ೦ತೆ ಕನಸುಗಳ ಕ೦ಪಾರ್ಟ್ಮೆ೦ಟಿಗೆ ದೊಡ್ಡದೊ೦ದು ಬೀಗ ಹಾಕಿ ಕೀಲಿಯನ್ನು ಎಡಗೈಲೆಲ್ಲೋ ಇಟ್ಟು ಮರೆತುಬಿಟ್ಟಿದ್ದಳು.ಸಿಕ್ಕ೦ತಾಗಿ ಸಿಗದೇ ಹೋದ ಬಿಸಿಲ್ಗುದುರೆಯಾಯ್ತು ಅತ್ತೆಯ ಬಾಳು. ಮತ್ತೆ ಅತ್ತೆಗಾದರೂ ದಿಕ್ಕು ತವರೇ ಆಯಿತು. ತಮ್ಮನ ಮನೆ ತನ್ನದು, ತಮ್ಮನ ಮಕ್ಕಳು ತನ್ನವು.. ದನ ಕರು, ಕೊಟ್ಟಿಗೆ, ಗದ್ದೆ ನೆಟ್ಟಿ, ತೋಟದ ಕಳೆ ಎಲ್ಲಾ ಕಡೆಗೂ ಅತ್ತೆಯೇ ದಿಕ್ಕು, ''ಅಕ್ಕಿಯೊಂದಿದ್ದರೆ ಸಾಕ? ಬರೀ ಅನ್ನನೆ ತಿನ್ನಕಾಗ್ತಾ?ನಾಕು ಮಗೆ ಬೀಜ, ತಿಂಗಳವರೆ ಬೀಜ ಹಾಕಿರೆ ಮಳೆಗಾಲಿಡೀ ಮಾಯ್ನ್ಕಾಯಿ , ಹಲ್ಸಿನ್ಕಾಯಿ ಎರಡ್ರದ್ದೆ ಪದಾರ್ಥ ತಿಮ್ಬದು ತಪ್ಪ್ತು,'' ಎನ್ನುವವಳೂ ಆಕೆಯೇ. ಆಸರಿಗೆ ಮನೆಗೆ ಬಂದ ಆಳುಗಳ ಕೈಲಿ ಅಂಗಳದಲ್ಲಿ ಮಣ್ಣು ಹೊಯ್ಸಿ ಏರಿ ಮಾಡಿಸಿಕೊಂಡು ಅವರೇ ಕಾಯಿಯ ಒಂದೊಂದೇ ಬೀಜ ಹುಗಿಯುವವಳೂ ಅವಳೇ. ತ್ಯಾರಣದ ಏರಿ ಮಾಡಿ ಮನೆ ಮುಂದೆ ಉದ್ಯಾನವನ ಮಾಡುವವಳೂ ಅವಳೇ. ಎಲ್ಲರ ಕನಸುಗಳಿಗೆ ಬಣ್ಣ ಹಚ್ಚುವವಳೂ ಅವಳೇ!
ಶಾಲೆ ಬಿಟ್ಟ ಮೇಲೆ ಸ೦ಜೆ ಕಡೆಗೆ ಜೋರು ಮಳೆ ಹೊಯ್ಯುವಾಗ ಇನ್ನೇನು ಕೆಲಸ? ಅತ್ತೆಯ ಬಳಿ ಸಾರಿ ಕಥೆ ಹೇಳೆ ಅತ್ತೆ ಅ೦ದರೆ ಸಾಕು, '' ಕಥೆ ನಾ ಎ೦ತಾ ಹೇಳ್ತ್ನೆ..? ಅದಕ್ಕೆ ಮಾಚಬಟ್ಟರು ಇದ್ವಲೇ, ಅವ್ವಾದ್ರೆ ಚೊಲೋತ್ನಾಗಿ ಹೇಳ್ತ. ಬನ್ನಿ ಪಗಡೆ ಆಡನ. ಕೂಸೇ ಪಟ ಹಾಸಿ ಕಾಯಿ ಇಡು, ಈಗ ಬ೦ದಿ ಹಪ್ಳ ಸುಟ್ಕಂಬತ್ತಿ ನಾಕೆಯ. ಕಡಿಗೆ ಎಂತಾರೂ ತಿನ್ನಕ್ಕೊಡು ಹೇಳಿ ಅಮ್ಮಂಗೆ ಗೋಳ್ಹೊಯ್ಯಡಿ. ಆ ಚಾಳಿ ಎಮ್ಮೆ ಕರಿಯಕ್ಕೆ ಹೊಯ್ದ. ಆಗಿಂದ ನಾಕ್ ಬಾರಿ ಆತು, ಮೂರು ಸಲ ನಾ ನೋಡಿದ್ದಿ, ಇನ್ನೆಷ್ಟು ಬಾರೀ ನೋಡಕಾ ಏನ ? ಮತ್ತೆ ದೋಸೆ ಅಕ್ಕಿ ಸೈತ ಬೀಸದಿದ್ದು, ನಾ ಬರದು ಒಂದೇ ಆಟಕ್ಕೆ ಮತ್ತೆ ''
ಇಷ್ಟರ ಜೊತೆಗೆ ಮೊದಲೇ ಸುಟ್ಟು ಅಡಗಿಸಿಟ್ಟ ಹಲಸಿನ ಬೇಳೆ, ಹಪ್ಪಳ ಹಾಳೆ ತಟ್ಟೆಯಲ್ಲಿಟ್ಟುಕೊಂಡು ಬರುವ ಹೊತ್ತಿಗೆ ಅಕ್ಕ ತಮ್ಮನಲ್ಲಿ ಪಗಡೆ ಕಾಯಿಯ ಬಣ್ಣಕ್ಕಾಗಿ ಜಗಳ.
'ನಂಗೆ ಕೆಂಪಿದು ಬೇಕು.' ತಮ್ಮನ ಹಕ್ಕು.
'ಯಾವಾಗಲೂ ನಿಂಗೆ ಕೆಂಪಿ ಕಾಯಿ ಬೇಕಾ. ನಂಗೊತ್ತಿಲ್ಲೆ. ಇವತ್ತು ಕೆಂಪುಕಾಯಿ ನಾ ತಗತ್ತಿ., ಅತ್ತೆ ನೋಡೇ...'
ಜಗಳ ತಗಾದೆ ಮುಗಿದು ಅತ್ತೆಯ ಪ೦ಚಾಯ್ತಿಕೆ ನಡೆದು ಅಂತೂ ಆಟ ಶುರು. ಅತ್ತೆಯ ಕೈಯ್ಯೋ ಕಯ್ಯಿ , ಅದು ಹೇಗೆ ಕವಡೆ ಪಳಗಿಸಿದ್ದಳೋ. ಚಿತ್ತ, ನಾಕು , ಭಾರ ಬೇಕೆಂದಾಗಲೆಲ್ಲಾ ಒಚ್ಚಿ, ಮೂರು.. ಮೊದಲು ಕಾಯಿ ಇಳಿಸಿ ಜುಗ ಕಟ್ಟುವುದು ಅವಳೇ. ಉಳಿದ ಎಲ್ಲರ ಕಾಯಿಯೂ ಆಗಾಗ ಮನೆಗೆ,
ತಮ್ಮನದು ಬರೀ ಮೋಸ. ಒಚ್ಚಿ ಬಿದ್ದರೆ ಮೆಲ್ಲ ಮಗಚಿಟ್ಟು 'ಭಾರ' ಮಾಡುವುದು, ಹುಳ್ಳಗೆ ನಗುವುದು! ಚಿಮನೀ ಬುಡ್ಡಿಯ ದೀಪದ ಬೆಳಕಲ್ಲಿ ಹೌದೆಂದುಕೊಳ್ಳಬೇಕು!
ಅಂತೂ ಅತ್ತೆಯ ಕಾಯಿಯೇ ಮೊದಲು ತೆಗೆಯುವುದು. ಅತ್ತೆಯೇ ಗೆಲ್ಲುವುದು.! ಜೀವನದ ಎಲ್ಲಾ ಪರೀಕ್ಷೆಗಳನ್ನೂ ಅನಿವಾರ್ಯವಾಗಿ ಎದುರಿಸಿದವಳು ಅವಳು. ಗೆಲುವೋ, ಸೋಲೋ..? ಅರ್ಥವಾಗದ ವಯಸ್ಸುಅದು. ಅಪ್ಪ ಅಮ್ಮ ಆಗಾಗ ಹೇಳುತ್ತಿದ್ದುದು, ''ಪಾಪ ಇವಳ ಬಾಳು ಕಣ್ಣೀರಾದರೂ ಮೇಲೆ ಒಂಚೂರು ತೊಸ್ಕ್ಯತ್ಲಲ್ಲೇ, ಅವಳಿಗೆ ಹ್ಯಾಂಗೆ ಬೇಕಾ ಹಾಂಗೆ ಇರ್ಲಿ.''ಮಕ್ಕಳಿಗೆ ಅದೆಲ್ಲಿ ಅರ್ಥವಾದೀತು?
’ಅತ್ತೇನೆ ಯಾವಾಗ್ಲೂ ಗೆಲ್ತಾ...’
’ಅತ್ತೇನೆ ಯಾವಾಗ್ಲೂ ಗೆಲ್ತಾ...’
'ಆಮೇಲೆ, ಒಂದ್ ಕೈ ಆಡಿಕೊಡೆ ಅತ್ತೆ ಒಚ್ಚಿ ಬೀಳ್ತೆ ಇಲ್ಲೇ..'
'ಹುಗಿದ ಕಾಯಿ ತೆಗೆಯಲೇ ಆಗ್ತಿಲ್ಲೆ.. ಎರಡು ಬೀಳ್ಸಿಕೊಡು,' ಎನ್ನುತ್ತಾ ಅಕ್ಕ ತಮ್ಮನ ಗೋಳಾಟ..
'ಹುಗಿದ ಕಾಯಿ ತೆಗೆಯಲೇ ಆಗ್ತಿಲ್ಲೆ.. ಎರಡು ಬೀಳ್ಸಿಕೊಡು,' ಎನ್ನುತ್ತಾ ಅಕ್ಕ ತಮ್ಮನ ಗೋಳಾಟ..
''ಇನ್ ಸಾಕು. ಯಂಗೆ ಒಳಗೆ ಕೆಲಸ ಇದ್ದು. ನಿನ್ ಅಮ್ಮನೇ ದೋಸಿಗೆ ಬೀಸ್ತಾ ಇದ್ದ ಕಾಣ್ತು, ನಾ ಒಂಚೂರ್ ಕೈ ಹಾಕ್ತಿ. ನಿಂಗ ಇವತ್ತು ಶಾಲೆ ಬಿಟ್ ಬಂದವರು ಮಗ್ಗಿ ಹೇಳಿದ್ರ. ? ಬೇಗ ಬೇಗ ಬರ್ಕಂಡು ಓದ್ಕ್ಯ೦ಡು ಮಾಡ್ಕ್ಯಳಿ, ಅಪ್ಪ ಬಂದ್ರೆ ಬೈತ. ಸುಳ್ಳಲ್ಲ..ಮಾಚ್ ಭಟ್ರಿಗೆ ಸಂಧ್ಯಾವನ್ನೇ ಆತು ಕಾಣ್ತು. ಕಥೆ ಹೇಳ್ತ, ಕೇಳ್ಳಕ್ಕು. ಬೇಗ್ ಬರ್ಕಂಡು ಮುಗ್ಸಿ.''
ಆಯ್ತಪ್ಪಾ ...ಅದೂ ಮುಗಿಸಿಯಾಗುತ್ತಿತ್ತು.
ಈಗ ಮಾಚಭಟ್ಟರ ಸರದಿ. ಅವರು ಸಹಾ ಜೀವನದಲ್ಲಿ ಸಾಕಷ್ಟು ಕಷ್ಟ ನುಂಗಿದವರೇ ಅಲ್ಲವೇ...? ಅವರ ಬಗ್ಗೆ ವಿವರ ಯಾರಿಗ್ಗೊತ್ತು? ಮಗನೊಬ್ಬನಿದ್ದನಂತೆ, ಅವನ ಸಂಸಾರದೊಂದಿಗೆ ಬೇರೆ ಮನೆ ಮಾಡಿಕೊಂಡು.
ಇವರಿಗೆ ಹೆಂಡತಿ ಸತ್ತು ಸುಮಾರು ವರ್ಷಗಳೇ ಆಗಿತ್ತೇನೋ. ಅವರಿಗೂ ಎಪ್ಪತೈದರ ಮೇಲೆ ವಯಸ್ಸಾಗಿದ್ದಿರಬಹುದು. ಮಳೆಗಾಲ ಶುರುವಿನಲ್ಲಿ ಬಂದವರಿಗೆ ಮತ್ತೆ ಚೌತಿಯ ಗಣಪತಿಯನ್ನು ಮುಳುಗಿಸಿಯೇ ಹೋಗಬೇಕೆನ್ನುವುದು ಅಪ್ಪನ ಅಣತಿ.
ಅವರಿಗಾದರೂ ಮನೆಯಲ್ಲಿ ಕಾಯ್ದುಕೊಂಡಿರಲು ಯಾರಿದ್ದಾರೆ ? ಆದರೆ ಆಗ ಅರ್ಥವಾಗದ ಅವರ ನಿಟ್ಟುಸಿರು ಈಗ ಅರಿವಿಗೆ ಬರುತ್ತದೆ. ಅತ್ತೆಯ ಮದುವೆ ಮಾಡಿಸಿದ್ದು ಅವರೇ ಅಂತೆ. 'ಮಾಣಿ ಘನಾವ' ಎಂದು ಇಲ್ಲದ ತರಾತುರಿಯಲ್ಲಿ. 'ಯಾರ್ಯಾರ ಹಣೆ ಮೇಲೆ ಯಂತಾ ಬರದ್ದು ಹೇಳದನ್ನ ಯಾರಿಗೆ ಓದಲಾಗ್ತು, ತಲೆ ಬಿಸಿ ಮಾಡ್ಕ್ಯಳದು ಯಂತಕೆ ಭಟ್ರೇ,ನಮಗೆ ಶಿಕ್ಕಿದ್ದು ಇಷ್ಟೇಯ..' ಅಪ್ಪನ ಸಮಾಧಾನ.
ಕಥೆ ಕೇಳುವವರಿಗೆ ಕಥೆಯಾದರೆ ಸಾಕು, ಊಟ ಮುಗಿಸಿ ಮಾಚಭಟ್ಟರ ಒಂದು ಬದಿಗೆ ಅಕ್ಕ, ಇನ್ನೊಂದು ಬದಿಯಲ್ಲಿ ತಮ್ಮ ಆತು ಕುಳಿತರೆಂದರೆ ತಮ್ಮನಿಗೆ ಕಥೆ ಮುಗಿಯುವಷ್ಟರಲ್ಲಿಯೇ ತೊಡೆಮೇಲೆ ನಿದ್ದೆ.
ವೈವಿಧ್ಯಮಯ ಕಥೆಗಳು ಅವು . ರಾಜಕುಮಾರಿಯನ್ನು ಧುರುಳನೊಬ್ಬ ಅಪಹರಿಸಿಕೊಂಡು ಹೋದದ್ದು..ಅವಳನ್ನು ಉಪಾಯವಾಗಿ ಶೂರನೊಬ್ಬ ಕರೆದುಕೊಂಡು ಬಂದಿದ್ದು, ಬರುವಾಗ ಶತ್ರು ಬೆನ್ನಟ್ಟಿದ್ದು, ಪೊಟರೆಯೊಂದರಲ್ಲಿ ಇವರು ಅಡಗಿಕೊಂಡಿದ್ದು. ಹೆಜ್ಜೆ ಗುರುತು, ವಾಸನೆ ಕಂಡು ಹಿಡಿಯುವವರೊಂದಿಗೆ ಆತ ಇವರ ಪೊಟರೆಯನ್ನು ಗುರುತಿಸಿದ್ದು ಅಲ್ಲಿ ಈ ಮೊದಲು ವಾಸವಾಗಿದ್ದ ಭೂತವೊಂದು ಇವರಿಗೆ ಸಹಾಯಮಾಡಿದ್ದು., ಮಾಯದ ಕತ್ತಿಯಿಂದ ಹೋರಾಡಿದ್ದು.,
ಕಥೆ ತು೦ಬಾ ಉದ್ದ .ಉದ್ದ ... ಆಮೇಲೆ ಏನಾಯ್ತು..? ಕೇಳಿದಂತೆಲ್ಲಾ ಒಂದಕ್ಕೆ ಇನ್ನೊಂದು ಕಥೆ ಸೇರುವುದು, ಸರಕ್ಕೆ ಮಣಿ ಸುರುಗಿದಂತೆ. ಏಡಿ ಮನುಷ್ಯನ ಕಥೆ, ಕಪ್ಪೆ ರಾಣಿಯ ಕಥೆ, ಹುಲಿ ಬೆಟ್ಟದ ಕಥೆ, ಮಂತ್ರವಾದಿಯ ಕಥೆ, ಭೂತದ ಕಥೆ ಒಂದೇ ಎರಡೇ.. ಕಥೆಗಳ ಖಜಾನೆ. ಕಥೆಯ ಪಾತ್ರಗಳಲ್ಲೆಲ್ಲಲ್ಲ ತೇಲಿ ಹೋಗುವ ಸುಖ ಮರೆಯುವುದಾದರೂ ಹೇಗೆ..?
ಕಥೆ ಮುಗಿದ ಮೇಲೆ ಅತ್ತೆ ಮೆಲ್ಲನೆಬ್ಬಿಸಿ ಕರೆದುಕೊಂಡು ಹೋಗಿ ತನ್ನ ಆ ಪಕ್ಕ ಈ ಪಕ್ಕ ಇಬ್ಬರನ್ನೂ ಮಲಗಿಸಿಕೊಂಡು ಕಥೆಯ ಭೂತ ಕನಸಿನಲ್ಲಿ ಬ೦ದರೆ ಹೆದರಬಾರದೆಂದು ಇಬ್ಬರ ಮೈ ಮೇಲೂ ಕೈ ಇಟ್ಟು ಕೊಂಡು ಮಲಗಿಸಿಕೊಳ್ಳುತ್ತಿರಲಿಲ್ಲವೇ?
ಅತ್ತೆ ಅಂದರೆ ಹಾಗೆ ಇರೋದು!
ಮೋಡ ಕವಿದು ಕತ್ತಲೆ ಕವಿದಂತೆಲ್ಲ ನೆನಪುಗಳೆಲ್ಲ ಮಿಂಚು ಮಿಂಚು..
ಹನಿದು ಕಣ್ಣೆಲ್ಲ ನೀರ್ಕಾಲುವೆ..!
ಪಗಡೆಯ ಕಾಯಿಗಳನ್ನೆಲ್ಲ ಎತ್ತಿಡಲು ಹೋದರೆ ಕಾಯಿಗಳೆಲ್ಲಾ ಅತ್ತೆಯ ಮುಖಗಳೇ ಆದವಲ್ಲ..! ಕುಣಿಯುತ್ತಾ ಕರೆಯುತ್ತಿರುವಳೇ ? ಪಗಡೆ ಆಡೋಣವೆಂದು.... ಪಟದ ಚೌಕಗಳೆಲ್ಲಾ ಮಾಚಭಟ್ಟರ ಕತೆಯ ಪಾತ್ರಗಳಾಗಿ ಹೊರಳಿ ಹೊರಳಿ ನೋಡುತ್ತಿವೆಯೇಕೆ..?
ಮಕ್ಕಳು ಬಂದರೇ? ಇಷ್ಟು ಬೇಗ ಸಮಯ ಕಳೆದು ಹೋಯಿತೇ...?
ಮತ್ತೆ ಯಾಕೋ ಕಳೆದುಹೊಗಬೇಕೆನಿಸುತ್ತಿದೆ.....!
ಮತ್ತೆ ಯಾಕೋ ಕಳೆದುಹೊಗಬೇಕೆನಿಸುತ್ತಿದೆ.....!
ವಿಜಯಾ...
ReplyDeleteಓದುತ್ತ.. ಓದುತ್ತ.. ನಾನೂ ಕಳೆದು ಹೋದೆ...
ಹಳೆಯ ನೆನಪುಗಳು.. ಯಾವಾಗಲೂ ಹೀಗೆ...
ನಮ್ಮ ವರ್ತಮಾನ ಎಷ್ಟೇ ಸೊಗಸಿದ್ದರೂ..
ನಾವು ಭೂತಕಾಲದಲ್ಲಿ ವಿಹರಿಸಲಿಕ್ಕೆ ಬಯಸುತ್ತೇವೆ... ಯಾಕೆ?
ಅಭಿನಂದನೆಗಳು..
ವಿಜಯಶ್ರೀ,
ReplyDeleteತುಂಬಾ ಚೆನ್ನಾಗಿ ಬಂದಿದೆ... ಮನತಟ್ಟಿತು. ಕಥೆಯೊಳಗಿನ ವಾಸ್ತವ ಕಣ್ಣಿಗೆ ಕಟ್ಟುವಂತಿದೆ.
ಚನಾಗಿ ಬರದ್ದೆ ವಿಜಯಕ್ಕ. ನಾವು ಕೂಡ ಅಜ್ಜನ ಮನೆಗೆ ಬೇಸಿಗೆ ರಜೆಗೆ ಹೋಗಿ, ಮಳೆಗಾಲ ಶುರು ಆಯ್ತು, ಅಂದ್ರೆ ಸುಮಾರು ಮೇ ಕೊನೆಗೆ ವಾಪಾಸ್ ಬರುತ್ತಿದ್ದೆವು. ಅಷ್ಟರಲ್ಲಿ ಮಳೆಗಾಲ ಶುರು ಆಗಿರುತಿತ್ತು. ಮನೆಯಲ್ಲಿ ಹಪ್ಪಳ, ಹಲಸಿನ ಬೀಜ ಎಲ್ಲ ಅಜ್ಜಿ ಸುಟ್ಟು ಕೊಟ್ಟರೆ, ನಾವು ಮೊಮ್ಮಕ್ಕಳು...ಪಟ ಬಿಚ್ಚಿ ಕಾಯಿ ಇಟ್ಟು, ಪಗಡೆ ಆಟದ ಪೂಜೆಗೆ ಕೂರುತಿದ್ದೆವು. ಇಡೀ ದಿನ ಅದನ್ನೇ ಆಡುತ್ತಿರುವುದನ್ನು ಕಂಡು..ಅಜ್ಜ.."ಬರ್ತಿ ಅಡ್ಲಾಗದ್ರೆ ಹುಡ್ರಾ..ತೋಟಕ್ಕೆ ಕಳೆ ಬತ್ತು ಅಂತ ಹೇಳ್ತಿದ್ರೂ"..ನಮಗದು ಕೇಳುತ್ತಿರಲಿಲ್ಲ. ಅಂದದ ಬರಹ. ಈ ಮಳೆಗಾಲನೆ ಹಿಂಗೆ ನೋಡು!..
ReplyDeleteನೆನಪುಗಳು ಅನ್ನೋ ಮಣ್ಣನ್ನ ಹಸಿ ಮಾಡ್ತು, ಭಾವನೆಗಳು ಅನ್ನೋ ಹೊಳೆನೆ ಹರಸ್ತು!..:-)
ಅಕ್ಕಿಯೊಂದಿದ್ದರೆ ಸಾಕ...? ಬರೀ ಅನ್ನನೆ ತಿನ್ನಕಾಗ್ತಾ...?ನಾಕು ಮಗೆ ಬೀಜ, ತಿಂಗಳವರೆ ಬೀಜ ಹಾಕಿರೆ ಮಳೆಗಾಲಿಡೀ ಮಯ್ನ್ಕಾಯಿ, ಹಲ್ಸಿನ್ಕಾಯಿ ಎರಡ್ರದ್ದೆ ಪದಾರ್ಥ ತಿಮ್ಬದು ತಪ್ಪ್ತು,''
ReplyDeleteವಿಜಯಕ್ಕಾ .. ತೀರಾ ನಮ್ಮದೇ ಅನಿಸುವಂತಹ ಸಾಲುಗಳು.... ನನ್ ಆಯೀನೇ ಮಾತಾಡಿದಂಗಿದ್ದು... ಮತ್ತೆ .. "ಕೆಂಪೀದು ನಂದು..." ಅಂದ್ಯಲೇ... ಇದೇ ವಿಷ್ಯಕ್ಕೆ ನಂಗೆ ನನ್ ತಂಗೀಗೂ ಜಗ್ಳಾ ಆಗ್ತಿತ್ತು....
ಹೂಂ.... ಹಳೆಯ ನೆನಪುಗಳು ಮೊಗೆದಂತೆಲ್ಲಾ ಮತ್ತೆ ಚಿಮ್ಮುತ್ತವೆ...
ಗಂಡ ತಿರುಗಿ ನೋಡದೇ ಮೋಡದ ಕಡೆಗೆ ನಡೆದೇ ಬಿಟ್ಟ..... ಶಬ್ಧ ಪ್ರಯೋಗ ತುಂಬಾ ಇಷ್ಟ ಆತು....
ತುಂಬಾ ಚನ್ನಾಗಿ ಬರದ್ದೆ.
ಒಳ್ಳೆ ಮಾತ್ರ....!!!!
oduttaa oduttaa ello haleya lokakke hodantaagi baalya marali kannu tumbidavu -santoshakko kaleda aa dinakko enthado naa kaane tumbida kannaali dhummikkuvadaralli eno kaledukonda anubhava kaledaddannu padeda anubhava. aaptateya baraha manavannu ardravavannaagisitu
ReplyDeleteತು೦ಬಾ ಖುಷಿ ನೀಡಿತು ಬರಹ... ಕಳೆದು ಹೋಗ ಬಯಸುವ೦ತೆ ಮಾಡಿತು....
ReplyDeleteಬಾಲ್ಯದ ನೆನಪು ಅದರಲ್ಲೂ ಭಾವನೆಗಳ ಬೆನ್ನೇರಿ ಸಾಗುವ ಹೆಣ್ಣು ಮಕ್ಕಳಿಗೆ ತವರಿನ, ಬಾಲ್ಯದ ನೆನಪು ಮನಕೆ ತಂಪಾಗಿಸುವ ತೊರೆಯಿದ್ದಂತೆ. ನಿಮ್ಮ ಬಾಲ್ಯದ ನೆನಪು ನನ್ನ ಮನಸನ್ನೂ ತೊಯ್ಸಿದ್ದಂತೂ ನಿಜ. ತುಂಬಾ ಸುಂದರ ಬರಹ.
ReplyDeleteಪ್ರಕಾಶಣ್ಣ..
ReplyDeleteಈ ಕಥೆಯಲ್ಲಿ ಬರುವ ಅತ್ತೆ, ಮಾಚಭಟ್ಟರು.. ಒ೦ದಲ್ಲ ಒ೦ದು ವೇಶದಲ್ಲಿ ನಮಗೆ ಸ೦ಭ೦ಧಿಸಿದವರೇ ಆಗಿರುತ್ತಾರೆ.. ಅಜ್ಜನೊ, ಅಜ್ಜಿಯೋ, ಮತ್ಯಾರದ್ದೋ ರೂಪದಲ್ಲಿ..
ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.
ಪಗಡೆ-ಕಾಯಿ-ಘಟ್ಟ-ಹುಟ್ಟುವುದು-ಗರ-ದಾಳ-ಜೋಡಿ-ಹಣ್ಣಾಗುವುದು-ಎಲ್ಲಾ ಜ್ಞಾಪಕಕ್ಕೆ ಬಂದವು!!!
ReplyDeleteವಿಜಯ ಚೆನ್ನಾಗಿದೆ ... ನಾನು ಕೂಡಾ ಕಳೆದು ಹೋದೆ ಸ್ವಲ್ಪ ಹೊತ್ತಿಗೆ..ಪಕ್ಕ ಆಡು ಮಾತುಗಳು ಇಷ್ಟ ಆಯಿತು.
ReplyDeleteಮನ ಮುಟ್ಟುವ ನಿರೂಪಣೆ, ಸನ್ನಿವೇಶಗಳು ನಿಜಕ್ಕೂ ಭೂತಕಾಲಕ್ಕೆ ಒಯ್ದುಬಿಟ್ಟವು. ಅಭಿನ೦ದನೆಗಳು ವಿಜಯಶ್ರೀ ಅವರೆ.
ReplyDeleteಅನ೦ತ್
ವಿಜಯಶ್ರೀ,
ReplyDeleteಮನಸ್ಸನ್ನು ಮಿಡಿಯುವ ಲೇಖನ. ಹಿರಿಯ ಆಪ್ತರೊಬ್ಬರು ಚಿಕ್ಕಮಕ್ಕಳಿಗೆ ಬೇಕೇ ಬೇಕು. ಅಂತಹ ಬಾಲ್ಯದ ನೆನಪುಗಳೇ ಮಧುರ.
ತೇಜಸ್ವಿನಿ
ReplyDeleteಕಥೆಯಲ್ಲಿನ ಅತ್ತೆಯ ಆಪ್ಯಾಯತೆಯನ್ನು ಬಹುಷ: ಎಲ್ಲರೂ ಒ೦ದಲ್ಲಾ ಒ೦ದು ವ್ಯಕ್ತಿಯಿ೦ದ ಪಡೆದವರೆ ಇರುತ್ತೇವೆ ನಾವೆಲ್ಲಾ..
ಮೆಚ್ಚಿದ್ದಕ್ಕೆ ವ೦ದನೆಗಳು.
ದಿವ್ಯಾ..
ReplyDeleteಅಲ್ದನೇ... ಅಜ್ಜನ ಮನೆಯಲ್ಲಿ ಅತ್ತಿಗೆ ಬಾವಯ್ಯ೦ದಿರ ಹತ್ತಿರ ಜಗಳ ಮಾಡ್ತಾ ಪಗಡೇ ಆಡದಿದ್ದಲೆ ಅದು ಇನ್ನೂ ಸಾವಿರ ಕಥೆ ಹೇಳ್ತು.. ನೆ೦ಟ್ರು ಹುಡ್ರು ಹೇಳಿ ಅವ್ಕೆ ಬಯ್ಯ ಹ೦ಗೂ ಇರ್ತಲ್ಲೆ.. ಜೋರ್ ಜಗಳಾ ಮಾಡಹ೦ಗೂ ಇರ್ತಲ್ಲೆ.. ಅಜ್ಜಿ ಇದ್ರ೦ತೂ ಮೊಮ್ಮಕ್ಕಳನ್ನು ಹಿಡಿಯಲೇ ಆಗ್ತಲ್ಲೆ.ಈ ಕಥೆಯಲ್ಲಿ ಬರಾ ಅತ್ತೆ ತರದ ಹೋಲಿಕೆ ಇರ ವ್ಯಕ್ತಿಗಳು ಅನೇಕ ರೀತಿಲಿ ಸಿಗ್ತಾ ಅಲ್ದಾ..?
ಚ೦ದದ ಪ್ರತಿಕ್ರಿಯೆಗೆ ವ೦ದನೆ..
ಪಗಡೆ ಆಡದು,ಚನ್ನೆ ಮಣೆ ಆಟ, ಎತ್ಗಲ್ಲಾಟ..ಅಣ್ಣ೦ದ್ರು ಗೇರ್ ಬೀಜ ಸುಟ್ ಕೊಡದು, ಎಲ್ಲಾ ನೆನ್ಪಾತು..
ReplyDeleteಬರ್ದಿದ್ದು ಚೆ೦ದ್ ಅಯ್ದು...:)
ತುಂಬಾ ಚೆನ್ನಾಗಿ ಬರೆದಿದ್ದೀರಿ... ತವರಿನ ಸೆಳೆತ ಹಾಗೆ... ಸ್ವಲ್ಪ ಹೊತ್ತು ಕಳೆದುಹೋದದ್ದು ನಿಜ..
ReplyDeleteನಿಜಜೀವನಕ್ಕೆ ಹತ್ತಿರವಾದ ಕಥೆ ತುಂಬಾ ಇಷ್ಟವಾಯಿತು. ಮಳೆಗಾಲ ಪ್ರಾರಂಭದಿಂದ ನವರಾತ್ರಿಯವರೆಗೆ ಮಲೆನಾಡಿನ ಬದುಕು ಸುಂದರ. ವಿಭಿನ್ನ.
ReplyDeleteಸುಮಧುರ ನೆನಪುಗಳು!
ReplyDeleteತುಂಬಾ ಚೆಂದದ ನಿರೂಪಣೆ... ...
ReplyDeleteನೆನಪುಗಳೊಂದಿಗೆ ಕಳೆದುಹೋದಂಗೆ ಆಯ್ತು.....
ಕಥೆ ತುಂಬಾ ಚೆನ್ನಾಗಿದೆ..
ReplyDeleteನಿಮ್ಮವ,
ರಾಘು.
ನಿಮ್ಮ ನೆನಪಿನ ಲೋಕಕ್ಕೆ ಪುಕ್ಕಟೆ ಕರೆದುಕೊಂಡು ಹೋದದ್ದಕ್ಕೆ
ReplyDeleteಧನ್ಯೋಸ್ಮಿ.ತುಂಬಾ ಚೆನ್ನಾಗಿತ್ತು
ವಿಜಯಶ್ರೀ...ಮನೆಯ ಹೊರಗಿನ ಕಲ್ಲಿನ ಜಗುಲಿ ಆಗಲಿ, ಬೀದಿ ಮಕ್ಕಳಜೊತೆ ಜೂಟಾಟ ಆಗಲಿ, ಹೆಣ್ಣುಮಕ್ಕಳನ್ನು ಛೇಡಿಸುವುದಾಗಲಿ..ಅದಕ್ಕೆ ಒದೆ ತಿಂದದ್ದಾಗಲೀ ಎಲ್ಲಾ..ಇನ್ನೂ ಹಸಿ ಹಸಿ ನೆನಪಿಸಿಬಿಟ್ರಿ...ಚನ್ನಾಗಿದೆ..ಮೆಲುಕು...
ReplyDeleteಚಿಕ್ಕಂದಿನಲ್ಲಿ ನೋಡಿದ ಹಲವರ ನೆನಪಾಯಿತು. ನಾನೂ ಕೆಲ ಹೊತ್ತು ಕಳೆದು ಹೋಗಿದ್ದೆ.
ReplyDeleteಕನಸು ಕಂಗಳ ತಮ್ಮಯ್ಯ..
ReplyDeleteಆಯಿ ನೆನಪಾತ..?
ಆತ್ಮೀಯ ಪ್ರತಿಕ್ರಿಯೆಗೆ ರಾಶೀ ಥ್ಯಾ೦ಕ್ಸ್
ಸೀತಾರಾ೦ ಸರ್
ReplyDeleteತಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ವ೦ದನೆಗಳು.
ಸುಬ್ರಮಣ್ಯ ಮಾಚಿಕೊಪ್ಪ
ReplyDeleteಪಗಡೆ ಆಟ ತು೦ಬಾ ಚ೦ದ..
ಥ್ಯಾ೦ಕ್ಸ್..
ಸುಧೇಶ್..
ReplyDeleteತು೦ಬಾ ಥ್ಯಾ೦ಕ್ಸ್ ...
ಓ ಮನಸೇ, ನೀನೇಕೆ ಹೀಗೆ...?
ReplyDeleteಎಲ್ಲಾ ನೆನಪುಗಳನ್ನೂ ಒ೦ದೆಡೆ ಸೇರಿಸಿ ಕಥೆಯ ರೂಪ ಕೊಟ್ಟಿದ್ದೇನೇ..
ಆತ್ಮೀಯತೆಗೆ ವ೦ದನೆಗಳು.
ಆಶಾ..
ReplyDeleteಥ್ಯಾ೦ಕ್ಸ್ ಇಷ್ಟ ಪಟ್ಟಿದ್ದಕ್ಕೆ..
ಅನಂತ್ ಸರ್..
ReplyDeleteಆತ್ಮೀಯ ಪ್ರತಿಕ್ರಿಯೆಗೆ ಆಭಾರಿ..
ಕಾಕ..
ReplyDeleteದೊಡ್ಡವರೊಬ್ಬರಿದ್ದರೆ ಮಕ್ಕಳಿಗೆ ನಿಜಕ್ಕೂ ನೈತಿಕ ಬಲ ಹೆಚ್ಚಾಗುತ್ತದೆ..
ವ೦ದನೆಗಳು..
ಮನಮುಕ್ತಾ ..
ReplyDeleteಈ ಸಲ ಎತ್ಗಲ್ಲು ಒಟ್ ಮಾಡ್ಕ್ಯ೦ಡು ಬರಕು...
ಥ್ಯಾ೦ಕ್ಸ್..
ತುಂಬಾ ಸೊಗಸಾದ ಕಥೆ. ನಾನಂತೂ ಕಳೆದುಹೋಗಿದ್ದೆ! ಟಿಕೆಟ್ ಚಾರ್ಚ್ಜಿಲ್ಲದೇ ಒಂದು ಸಲ ಊರಿಗೆ ಕಳುಗಿಸಿದ್ದಕ್ಕೆ ಧನ್ಯವಾದಗಳು.
ReplyDeleteಮನಸು
ReplyDeleteಥ್ಯಾ೦ಕ್ಸ್,,,
ಶಿವರಾಮ
ReplyDeleteಹೌದಲ್ಲವೇ..
ಮಳೆಗಾಲದ ಕಥೆಗಳು ವೈವಿಧ್ಯಮಯ...
ಥ್ಯಾ೦ಕ್ಸ್
Pradeep ,ಸವಿಗನಸು,Raghu,umesh desai
ReplyDeleteತಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಅಭಿಮಾನಕ್ಕೆ ವ೦ದನೆಗಳು..
ಜಲನಯನ ಸರ್..
ReplyDeleteಬಾಲ್ಯದ ನೆನಪುಗಳು ಚ೦ದ..
ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.
ಆನಂದ ,
ReplyDeleteಸಿದ್ಧಾರ್ಥ
ತಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ವ೦ದನೆಗಳು.
ಮೇಡಮ್,
ReplyDeleteಬಾಲ್ಯದಲ್ಲಿ ಮಳೆಯಲ್ಲಿ ಆಡಿ ನಲಿದಿದ್ದು ನೆನಪಾಗಿ ಮೈಮರೆತೆ..ಈಗಿನ ಸಮಯದಲ್ಲಿ ಇದೆಲ್ಲ ಅನುಭವಿಸಲು ಸಾಧ್ಯವಿದ್ದರೂ ಹಳೆಯ ನೆನಪುಗಳ ಮರುಕಳಿಕೆಯಲ್ಲಿ ಕಳೆದುಹೋಗುವುದರಲ್ಲಿ ಎಂಥ ಖುಷಿ ಅಲ್ವಾ...ಇಂಥ ಭಾವನಾತ್ಮಕ ಬರಹವನ್ನು ಕೊಟ್ಟಿದ್ದಕ್ಕೆ ಥ್ಯಾಂಕ್ಸ್.
ನೆನಪುಗಳ ವಿಹಾರ ಬೆಚ್ಚಗಿನ ಅನುಭವ ನೀಡಿತು..ಹವ್ಯಕ ಭಾಷೆಯ ಸೊಗಡು ವಿಶೇಷ ಮೆರುಗನ್ನು ನೀಡಿದೆ..
ReplyDelete"ಮಳೆಯ ಹನಿಗಳೆಡೆಯಿ೦ದ ನೆನಪುಗಳ ತು೦ತುರು ಮನಸ್ಸನ್ನು ಒದ್ದೆ ಮಾಡುತ್ತದೆ"- ಈ ಸಾಲು ಇಷ್ಟ ಆಯ್ತು...
ಪಾತ್ರಗಳು ಬದಲಾದರೂ, ಬಾಲ್ಯದಲ್ಲಿ ಅತ್ತೆ, ಮಾಚಭಟ್ಟರಂಥ ಆಪ್ತರ ಒಡನಾಟ ಬದುಕಿನ ಚಿತ್ರಣ ನೀಡಿ, ನಮ್ಮ ವ್ಯಕ್ತಿತ್ವ ರೂಪಿಸಲು ಕೊಡುಗೆ ನೀಡುತ್ತಾರೆ..
ನಮ್ಮ ಮೇಲೆ ಪ್ರಭಾವ ಬೀರುತ್ತಾರೆ..ಮನಸ್ಸಿನಲ್ಲಿ ಉಳಿಯುತ್ತಾರೆ..ಇವರಿಂದ ತುಂಬ ಕಲಿಯುತ್ತೇವೆ..
ವಿಜಯಕ್ಕ, ಈಗ ನೆನಪುಗಳ ಲೋಕಕ್ಕೆ ಕರೆದೊಯ್ದಂತೆ ಮುಂದೊಮ್ಮೆ ನಮ್ಮನ್ನು ಕನಸುಗಳ ಲೋಕಕ್ಕೂ ಕರೆದೊಯ್ಯುವಿರಿ ತಾನೆ ? :)
ಧನ್ಯವಾದಗಳು..
ನೆನಪುಗಳ ವಿಹಾರ ಬೆಚ್ಚಗಿನ ಅನುಭವ ನೀಡಿತು..ಹವ್ಯಕ ಭಾಷೆಯ ಸೊಗಡು ವಿಶೇಷ ಮೆರುಗನ್ನು ನೀಡಿದೆ..
ReplyDelete"ಮಳೆಯ ಹನಿಗಳೆಡೆಯಿ೦ದ ನೆನಪುಗಳ ತು೦ತುರು ಮನಸ್ಸನ್ನು ಒದ್ದೆ ಮಾಡುತ್ತದೆ",
"ಮೋಡ ಕವಿದು ಕತ್ತಲೆ ಕವಿದಂತೆಲ್ಲ ನೆನಪುಗಳೆಲ್ಲ ಮಿಂಚು ಮಿಂಚು.. ಪರಿಣಾಮ ಕಣ್ಣೆಲ್ಲ ನೀರ್ಕಾಲುವೆ..!" ಈ ಸಾಲುಗಳು ಇಷ್ಟ ಆಯ್ತು...
ಪಾತ್ರಗಳು ಬದಲಾದರೂ, ಬಾಲ್ಯದಲ್ಲಿ ಅತ್ತೆ, ಮಾಚಭಟ್ಟರಂಥ ಆಪ್ತರ ಒಡನಾಟ ಬದುಕಿನ ಚಿತ್ರಣ ನೀಡಿ, ನಮ್ಮ ವ್ಯಕ್ತಿತ್ವ ರೂಪಿಸಲು ಕೊಡುಗೆ ನೀಡುತ್ತಾರೆ..
ನಮ್ಮ ಮೇಲೆ ಪ್ರಭಾವ ಬೀರುತ್ತಾರೆ..ಮನಸ್ಸಿನಲ್ಲಿ ಉಳಿಯುತ್ತಾರೆ..ಇವರಿಂದ ತುಂಬ ಕಲಿಯುತ್ತೇವೆ..
ವಿಜಯಕ್ಕ, ಈಗ ನೆನಪುಗಳ ಲೋಕಕ್ಕೆ ಕರೆದೊಯ್ದಂತೆ ಮುಂದೊಮ್ಮೆ ನಮ್ಮನ್ನು ಕನಸುಗಳ ಲೋಕಕ್ಕೂ ಕರೆದೊಯ್ಯುವಿರಿ ತಾನೆ ? :)
ಧನ್ಯವಾದಗಳು..
chennagide vijaya. kaledhu hodha dhinagala nenapayithu.
ReplyDeleteshivu sir,
ReplyDeletensru,
raghu,
mery..
ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.