Monday, November 28, 2011

ಚೆಲುವಿಯ ಸ್ಕೂಟಿ ಖರೀದಿ

  ಬಾಗಿಲು ತೆರೆಯುತ್ತಲೇ  ’ಆಡ್ಡಾಡ್ರ  ಣಾಕು ಮುಕಾ ...    ಣಾಕುಮುಕಾ ”. ಎ೦ದು ಹಾಡುತ್ತಾ ಡ್ಯಾನ್ಸು ಮಾಡುತ್ತಲೇ ಒಳಬ೦ದಳು  ಚೆಲುವಿ.
ಲಕ್ಷ್ಮಿ ಬೆರಗಾಗಿ ಅವಳನ್ನೇ ನೋಡಿದಳು.”ಏನು  ಅಣ್ಣಮ್ಮನ್ನ ಇಟ್ಟೀದಾರೇನೇ.? ಬೆಳಬೆಳಗ್ಗೆಯೇ...”

’ಅಕ್ಕಾ ನಾ ಸ್ಕೂಟಿ ತಗ೦ತೀನಿ, ’ ಮತ್ತೆ ಅಣ್ಣಮ್ಮ ನ ಡ್ಯಾನ್ಸ್ ಮಾಡತೊಡಗಿದಳು  ಚೆಲುವಿ .
’ವಾರೆವ್ವಾ, ಅದಕ್ಕೋ ಈ  ಡ್ಯಾನ್ಸೆಲ್ಲಾ..!  ಸ್ಕೂಟಿ ಹೊಡೆಯಕ್ಕೆ ಬರುತ್ತಾ ನಿನಗೆ..?  ಅಲ್ಲವೇ ನಿನಗ್ಯಾಕೆ ಸ್ಕೂಟೀ ಅ೦ತ..!’ ಲಕ್ಷ್ಮಿಗೆ ಆಶ್ಚರ್ಯ.
”ನೋಡಕಾ, ಬೀದಿ ಕೊನೇಲೈತಲಾ..ಆ ಮನೆ ಹುಡ್ಗಿ ಸ್ಕೂಟಿ ತಗ೦ಡಿದಾಳೆ, ಅದ್ಕೆ ನ೦ಗೂ ಬೇಕು..”

ಮುಗ್ಧೆ  ಚೆಲುವಿ ಸಾಲಾಗಿ ಇರುವ ಲಕ್ಶ್ಮಿಯ ಮನೆಯೂ ಸೇರಿದ೦ತೆ  ನಾಲ್ಕು ಮನೆಗಳ ಕೆಲಸವನ್ನು ಶ್ರದ್ಧೆಯಿ೦ದ ಮಾಡುವ ಹುಡುಗಿ. ಹುಡುಗಿಯೇನು? ಹೆ೦ಗಸು. ಎರಡು ಮಕ್ಕಳ ತಾಯಿ, ಆದರೂ ಮನಸ್ಸು ಮಾತ್ರ ಹದಿನಾಲ್ಕರಲ್ಲೆ ಇದೆ ಎ೦ದೆನಿಸುತ್ತಿತ್ತು ಲಕ್ಷ್ಮಿಗೆ. ಕಪಟವಿಲ್ಲದ ಮಾತು, ತು೦ಟತನ, ನೇರವ೦ತಿಕೆ,  ಇವೆಲ್ಲವೂ ಮುಗ್ಧತೆಗೆ ಹೆಚ್ಚಿನ ಮೆರುಗನ್ನು ಕೊಡುತ್ತಿತ್ತು.ನೋಡಲು ಥೇಟ್ ಕಡ್ಡಿಹುಳದ೦ತೆ ಇದ್ದಳು. ಬಣ್ಣ ಎಣ್ಣೆಗಪ್ಪು.ನಗುವಾಗ  ಎಲೆಅಡಿಕೆ ಹಾಕಿ ಹಾಕಿ ಮುಸುಕಾದ ಹವಳದ ಬಣ್ಣದ ಹಲ್ಲುಗಳು ಆಗಾಗ ಹೊಳೆಯುತ್ತಾ    ಬಿಳಿ ಬಣ್ಣ  ಇರುವುದೆ೦ಬುದರ  ಸತ್ಯ ಗೋಚರವಾಗುತ್ತಿತ್ತು.ಸೊಣಬಿ ದಾರದ೦ತಹಾ ಜಡೆಯನ್ನು ಸುತ್ತಿ ತುರುಬು ಕಟ್ಟಿ ಅದಕ್ಕೊ೦ದು ರಬ್ಬರ್ ಬ್ಯಾ೦ಡ್ ಹಾಕಿದಳೆ೦ದರೆ ಅವಳು ಕುಲುಕಿದ೦ತೆಲ್ಲಾ  ಅವಳ ತುರುಬೂ ಕುಲುಕಿ ಒಳ್ಳೆ ಗೋಣು ಮುರಿದ ಬೆಕ್ಕಿನ ತಲೆಯ೦ತೆ  ಕಾಣಿಸುತ್ತಿತ್ತು. ಅವಳಿಗೆ ನೈಟಿಯ ಬಗೆಗೆ ಹೆಚ್ಚಿನ ಆದರ, ವಿಶ್ವಾಸ. ಕೆಲಸದ ಮನೆಗಳಲ್ಲಿ ಯಜಮಾನತಿಯರು ಹಾಕಿ ಬಿಟ್ಟ ನೈಟಿಗಳೆಲ್ಲಾ ಅವಳಿಗೆ ಒ೦ದೊ೦ದು ವರ್ಷದ ವರೆಗೆ ಜೊತೆ ಕೊಡುತ್ತಿದ್ದವು.ಅವಳ ಆಕೃತಿಗೆ  ನೈಟಿ ಮಾತ್ರ   ಒಳ್ಳೆ ಉದ್ದನೆಯ ಕರಿ ಕಟ್ಟಿಗೆಗೆ ಸಿಕ್ಕಿಸಿದ ಹಳೆಯ ಬಾವುಟದ೦ತೆ ಪಟ ಪಟಾ ಒದರಾಡುತ್ತಿತ್ತು. ಇದರ   ಹೊರತಾಗಿ ಅಪರೂಪಕ್ಕೊಮ್ಮೆ ಸೀರೆ. ಅದೂ ಶುಕ್ರವಾರದ೦ದು. ಎಲ್ಲ ಮನೆಗಳ ಕೆಲಸ ಮುಗಿಸಿ ಮನೆಗೆ ಹೋಗಿ ಮನೆ ಸ್ವಚ್ಚ ಮಾಡಿ ತಾನೂ ತಲೆಗೆ   ಸ್ನಾನ ಮಾಡಿ,   ಸಾಯ೦ಕಾಲ ಐದರ ಸುಮಾರಿಗೆ ಕಿವಿಯ ಎರಡೂ ಪಕ್ಕದಲ್ಲಿ ನಾಲ್ಕಿ೦ಚು ಅರಿಶಿನದ ಗಿಲಾಯದೊ೦ದಿಗೆ ಊದುಬತ್ತಿ ತೋರುತ್ತಾ  ಬಾಗಿಲಿಗೆ ಪೂಜಿಸುತ್ತ ಇರುವ ಸಮಯದಲ್ಲಿ ಅವಳನ್ನು ಸೀರೆಯಲ್ಲಿ ನೋಡುವ ಅವಕಾಶ ಸಿಗುತ್ತಿತ್ತು.  ವಾರಕ್ಕೆರಡು ಸ್ನಾನ. '' ಚೆಲುವಿನ ಚಿತ್ತಾರ ಶುರುವಾಯಿತು.. ಅಮ್ಮಾ.. ''ಎಂದು ಮಗಳು ನಿಧಿ ಉಧ್ಘರಿಸುತ್ತಿದ್ದಳು.

 ಚೆಲುವಿಗೆ ಅತ್ಯುತ್ಸಾಹ.  ತೊನೆಯುತ್ತಾ..ನುಲಿಯುತ್ತಾ ಡ್ಯಾನ್ಸ್ ಮಾಡುತ್ತಾ ಮನೆ  ಗುಡಿಸತೊಡಗಿದಳು. .. ''ನಿನ್ ಸ್ಕೂಟಿ ಎಲ್ಲಿ ಸಿಗುತ್ತಂತೆ..? ಯಾರು ಕೊಡುತ್ತಾರಂತೆ..?''
''ಅಕ್ಕಾ ಅದ್ಕೆಲ್ಲಾ ವ್ಯವಸ್ಥೆ ಆ ಹುಡ್ಗೀನೆ ಮಾಡ್ಕೊಡ್ತೀನಿ ಅಂದೈತೆ.. ಬರೀ ಏಳೂವರೆ ಸಾವಿರಕ್ಕೆ ಸ್ಕೂಟಿ ಸಿಗುತ್ತಂತೆ ಅಕ್ಕಾ... ನಾನೂ ಸ್ಕೂಟಿ ತಗಂತೀನಿ ನಾನೂ ಸ್ಕೂಟಿ ತಗಂತೀನಿ,''  ಮತ್ತೆ ಕಸಪೊರಕೆ ಹಿಡಿದು ಅತ್ತ ಇತ್ತ ಆಡಿಸುತ್ತಾ ನುಲಿಯಲು ಶುರುಮಾಡಿದಳು..
ಏಳು ಸಾವಿರಕ್ಕೆ ಎಂತಾ ಸ್ಕೂಟಿ ಸಿಗುತ್ತಂತೆ..?ಓಡತ್ತ೦ತಾ..? ಚಕ್ರ ಇದೆಯಾ..?ಸೀಟು ಮರದ್ದಾ..? ಸೀಮೆ ಎಣ್ಣೆ ಹಾಕೋದಾ..?ಪೆಟ್ರೋಲಾ?''  ನಿಧಿ ಕೆಣಕತೊಡಗಿದಳು.



 ಜೀವನದ ಅತಿ ಚಿಕ್ಕ ಸಂತಸದ ಕ್ಷಣವನ್ನೂ ಬಿಡದೆ  ಹೆಕ್ಕಿ ಹೆಕ್ಕಿ ಸಂಭ್ರಮ ಪಡುವಳು ಚೆಲುವಿ.ಸಂತಸವಾದರೂ ಅಷ್ಟೇ..ದುಃಖ ವಾದರೂ ಅಷ್ಟೇ.. ತಕ್ಷಣಕ್ಕೆ ಧುಮ್ಮಿಕ್ಕಿ ಬಿಡುತ್ತದೆ. ಒಮ್ಮೆ ಯಾವುದೋ ಬೀದಿಯಂಚಿನ ನಾಯಿಮರಿಯೊಂದನ್ನು ತಂದು ಸಾಕಿಕೊಂಡಿದ್ದಳು.ಅದಕ್ಕೆ ಸೇವೆಯೆಂದರೆ ಏನು ಕಥೆ...? ಈ ಲೋಕದ್ದೆ ಅಲ್ಲ ಅನ್ನುವಷ್ಟರ ಮಟ್ಟಿಗೆ ಸಾಕಿಯೇ ಸಾಕಿದಳು.
 ಲಕ್ಷ್ಮಿಯ ಮಗ ಚಿನ್ನು, ನಾಯಿಯೊಡನೆ ಆಡಲು ದಿನಾ ಅವಳ ಶೆಡ್ಡಿನ ಕಡೆ ಓಡುತ್ತಿದ್ದ.. ಬೈದರೂ ಕೇಳದೆ ಇಬ್ಬರೂ ನಾಯಿಯನ್ನು ಜೋಪಾನ ಮಾಡಿದ್ದೆ ಮಾಡಿದ್ದು.ಚಿನ್ನು  ಲಕ್ಷ್ಮಿಯನ್ನು ಕಾಡಿ ಬೇಡಿ  ಬಿಸ್ಕೇಟು,ಬ್ರೆಡ್ಡು ಎಲ್ಲಾ ತೆಗೆದುಕೊಂಡು ಹೋಗಿ  ಆ  ನಾಯಿಗೆ ಹಾಕತೊಡಗಿದ. ಒಂದಿನ ಅದು ಗೆಳತಿಯನ್ನು ಹುಡುಕಿಕೊಂಡು ಎಲ್ಲಿಗೋ  ಹೋಯ್ತು. ಎರಡು ದಿನ ಪತ್ತೆಯಿಲ್ಲ.    ಚೆಲುವಿ, ಚಿನ್ನು  ಇಬ್ಬರೂ ಗೊಳೋ ಎಂದು ಅತ್ತರು. ಮತ್ತೆ ಎರಡು ದಿನ ಕಳೆದ ನಂತರ ನಾಯಿ ಹಾಜರು.. 'ನಾಯಿ ಸಿಕ್ಕೈತೆ,' ಎಂದು ಕುಣಿದಾಟ, ಹಾರಾಟ ಮತ್ತೆ ಶುರುವಾಯಿತು.   ನಾಯಿ ಬುದ್ದಿ,.. ಅದು ಮತ್ತೆ ಓಡಿಹೋಯಿತು. ಈ ಸಲ ನೆಟಿಗೆ ಮುರಿದು ಶಾಪ ಹಾಕಿದಳು.. ''ಇಷ್ಟು ದಿನಾ ಸಾಕಿದೀನಿ.. ಅನ್ನ ಹಾಕಿದೀನಿ..  ಇನ್ನು ಬಂದ್ರೆ ನೋಡು.. ಒದ್ದು ಓಡುಸ್ತೀನಿ..'' ಲೆಕ್ಕ ಹಾಕಿ ಬೈಯ್ಯತೊಡಗಿದಳು.
ಮತ್ತೊಮ್ಮೆ ಹೀಗಾಗಿತ್ತು. ಪಾಪ ಓದು ಬರಹ ಬಾರದ ಇವಳು ಪಕ್ಕದ ಮನೆಯಾಕೆಯಲ್ಲಿ ಚೀಟಿ ಹಣ ಕಟ್ಟುತ್ತಿದ್ದಳು. ಅದೇನಾಯ್ತೋ ಇವಳ ಚೀಟಿ ಹಣ ಕೊಡೋಲ್ಲ ಅನ್ನಲಿಕ್ಕೆ ಶುರುಮಾಡಿದಳಂತೆ ಪಕ್ಕದ ಮನೆಯಾಕೆ. . ಗೊಳೋ ಅನ್ನುತ್ತಾ ಬಂದಳು. ''ಪೋಲಿಸ್ ಗೆ ಕಂಪ್ಲೇಂಟ್ ಕೊಡ್ತೀನಿ ಅನ್ನು ನೋಡೋಣ'' ಎಂದು ಲಕ್ಷ್ಮಿ ಉಪದೇಶ ಮಾಡಿದಳು ಇವಳ  ರಗಳೆ ತಾಳಲಾರದೆ.  ಸೀದಾ ಹೋದಳು  ಚೀಟಿಯಮ್ಮನ ಮನೆ ಬಾಗಿಲಿಗೆ ; ಕೈಲೊಂದು   ಕವರ್ರು ಹಿಡಿದು.. ''ಏ.. ದುಡ್ಡು ಕೊಡ್ತೀಯಾ ..? ನಿನ್ ಮನೆ ಬಾಗ್ಲಾಗೆ ಬಿದ್ದು ಸಾಯಲ..? ನನ್ನ ಸಾವಿಗೆ ನೀನೆ ಕಾರಣ ಅಂತ ಕೆಲಸ ಮಾಡೋರ ಮನೆಲೆಲ್ಲಾ ಬರದು ಮಡ್ಗಿವ್ನಿ.. ಇದನ ಪೋಲಿಸರಿಗೆ ಅಂತ ಬರ್ದಿವ್ನಿ.ಈಗ ಕೊಟ್ಟು ಬರ್ತೀನಿ..  ನಂ ದುಡ್ಡು ಕೊಟ್ಟೆ ಬಚಾವು,'' ಎಂದು ಕೂಗು ಹಾಕಿದಳಂತೆ..  ಅಂತೂ ದುಡ್ಡು ವಸೂಲು  ಮಾಡಿಯೇ  ಬಿಟ್ಟಳು.  ಇವಳೇನಾದರೂ ಒಂದಕ್ಷರ ಕಲಿತಿದ್ದಿದ್ದರೆ ಹಿಡಿಯುವುದೇ ಕಷ್ಟ ಆಗುತ್ತಿತ್ತು ಎಂದು ಎಷ್ಟೋ ಸಲ ಅನಿಸುತ್ತಿತ್ತು ಲಕ್ಷ್ಮಿಗೆ.
ಲಾಲಾ..ಲಾಲಾಲಾ... ದೇವ್ರೇ.. ಇವಳ ಕುಣಿತಕ್ಕೆ ಬ್ರೇಕೇ ಇಲ್ಲ.
ನಿಧಿ ಕೇಳಿದಳು,'' ಏ ಚೆಲುವಿ ಸ್ಕೂಟೀನ ಇದೇ ನೈಟಿ ಹಾಕ್ಕೊಂಡೆ ಬಿಡ್ತೀಯಾ...? ನನ್ನ   ಹಳೆ  ಜೀನ್ಸ್ ಇದೆ ಕೊಡ್ಲಾ...?''  ಅಣಕಿಸಿದಳು
''ಅಕ್ಕೋ,   ಈ ನಿಧಿ ಹತ್ರ ನನ್ ಸುದ್ದೀಗೆ ಬರಬೇಡಾ ಅಂತ ಹೇಳಕ್ಕೋ..   ನಾನೂ ಚೂಡಿದಾರ ಹೊಲಿಸ್ಕೊಂಡು ಸ್ಕೂಟಿ ಬಿಡದನ್ನ ಆವಾಗ ನೋಡ್ಬೋದಂತೆ ನಿಧೀ ...'' .ಮೂತಿ ತಿರುವಿದಳು.ದರ ಬರ ಕಸ ಎಳೆದಾಡತೊಡಗಿದಳು.

 ***

ಯಾವುದೋ ಗಾಡಿ ಸೋವಿಯಲ್ಲಿ ಸಿಗುತ್ತಂತೆ ಅನ್ನುವ ಸುದ್ದಿ ಸಿಕ್ಕು     ಅದನ್ನು  ತರಲು ಹೋಗಬೇಕೆಂದು ಗಡಿ ಬಿಡಿಯಲ್ಲಿ ಕೆಲಸ ಮುಗಿಸಿ ಓಡಿದ್ದಳು ಚೆಲುವಿ.ನಾಲ್ಕು ದಿನದಿಂದ ಸ್ಕೂಟಿ ಕೊಡಿಸುವ ಗೆಳತಿಯ ಸ್ಕೂಟಿಯನ್ನೇ ಹಿಡಿದು ಪ್ರಾಕ್ಟೀಸ್ ಮಾಡತೊಡಗಿದ್ದಳು.  ''ಅಮ್ಮಾ,  ಮ್ಯಾಟನೀ ಷೋ, ಫಸ್ಟ್ ಷೋ  ನಡೀತಿದೆ ಚೆಲುವೀದು'' ಎಂದು ನಿಧಿ ಹಲ್ಲು  ಕಿರಿದಳು.

ಮರುದಿನ ಬಾಗಿಲು ತೆಗೆಯುತ್ತಿದ್ದಂತೆಯೇ.. ಕಣ್ಣಲ್ಲಿ ನೀರು ಹಾಕುತ್ತಾ ಮುಸು ಮುಸು ಮಾಡುತ್ತಾ ಒಳಗೆ ಬಂದಳು ಚೆಲುವಿ.. ,ಏನಾಯ್ತೂ... ಸ್ಕೂಟಿ ತಂದ್ಯಾ..? ಕೇಳಿದಳು ಲಕ್ಷ್ಮಿ.
''ಆ ಸ್ಕೂಟಿ ಗ್ಯಾರೆಜವ್ನ ಮುಖ ಒಡ್ದ ಹೋಗ್ಲಿ.. ಅವನ್ ಗ್ಯಾರೇಜ್ ಮುಚ್ಚಿ ಹೋಗ್ಲಿ.. ನಾಕ್ಕಾಸ್ ಇಲ್ದೆ ಪರ್ದಾಡ್ಲಿ..'' ನೆಟಿಕೆ ಮುರಿ ಮುರಿದು ಬೈಯ್ಯತೊಡಗಿದಳು ಚೆಲುವಿ..
''ಸರಿಯಾಗಿ ಹೇಳು..'' ಗದರಿದಳು ಲಕ್ಷ್ಮಿ.

''ಅಕ್ಕೋ, ನಾನ್ ಹೋಗೋವಷ್ಟರಲ್ಲಿ ಆ ಸ್ಕೂಟಿನ್ನ ಬೇರೆ  ಯಾರಿಗೋ ಮಾರ್ಬುಟ್ಟವನಂತೆ ಅವ್ನ ಮುಖಕ್ಕೆ.. ನಾನೇನ್ ದುಡ್ಡು ಕೊಡ್ತಿರ್ಲಿಲ್ವಾ..? ಆಸೆ ಪಟ್ಕೊಂಡು ಹೋಗಿದ್ದೆ.. '' ಹೋ ಎಂದು ಗೋಳಾಡತೊಡಗಿದಳು.

''ಅದಕ್ಕ್ಯಾಕಿಷ್ಟು ರಾಧ್ಧಾಂತ ಮಾಡ್ತೀಯ..? ಇನ್ಯಾವ್ದಾದ್ರೂ ಸಿಕ್ಕುತ್ತೆ ಬಿಡು. ಅದೊಂದೆನಾ..? ನೀನು ಅಡ್ವಾನ್ಸ್ ಕೊಟ್ಟು ಬರೋದಲ್ವಾ..? ನೀನು ಬರ್ತೀಯ ಸ್ಕೂಟಿ ಖರೀದಿ ಮಾಡಕ್ಕೆ ಅಂತ ಅವನಿಗೆ ಗ್ಯಾರಂಟೀ ಬೇಡ್ವ..?ನಿನ್ನೇ ಕಾಯ್ಕೊಂಡಿರಕ್ಕೆ ಆಗುತ್ತಾ..? ''ಸಮಾಧಾನಿಸಲು ಪ್ರಯತ್ನಿಸಿದಳು ಲಕ್ಷ್ಮಿ.
''ಅಕ್ಕೋ ನಾನ್ಯಾವತ್ತೂ ಮಾತಿಗೆ ತಪ್ಪೊಳೆ ಅಲ್ಲ..ವಿಚಾರ ಮಾಡೋದು ಬ್ಯಾಡ್ವಾ..? ಅವನಿಗೆ ನ್ಯಾಯಾ ನೀತಿ ಐತಾ..? ''ವಾದಕ್ಕೆ ಶುರು ಮಾಡಿದಳು.

''ಅದು ನನಗೆ ಗೊತ್ತು..ನಿನಗೆ ಗೊತ್ತು.  ಅವನಿಗೆ ಹೇಗೆ ಗೊತ್ತಾಗುತ್ತೆ.. ? ಅದು ಸಿಗದೆ ಇದ್ದಿದ್ದೆ ಒಳ್ಳೆದಾಯ್ತು ಬಿಡು.. ಯಾರಿಗೆ ಯಾವ್ದು ಸಿಗಬೇಕು ಅಂತ ಇರುತ್ತೋ ಅದೇ ಸಿಗೋದು.. ಒಂದೊಮ್ಮೆ ಆ ಗಾಡಿ ಸಿಕ್ಕಿದರೂ ನೀನು ಏನಾದರೂ ಎಡವಟ್ಟು ಮಾಡಿಕೊಂಡೇ ಮಾಡಿಕೊಳ್ಳುತ್ತಿದ್ದೆ.. ಮಕ್ಳು ಮರಿ ಇಲ್ವೇನೆ ನಿಂಗೆ.  ದೇವ್ರೇ ತಪ್ಸಿದಾನೆ ಸುಮ್ನಿರು.  ಪಾತ್ರೆ ತೊಳಿ.. ಈಗ. ''  ದಿನದ ಹೆಚ್ಚಿನ ಭಾಗ ಇವಳ ಸಮಸ್ಯೆ ಸರಿ  ಮಾಡುವುದರಲ್ಲೇ ಕಳೆದುಹೋಗುತ್ತಿತ್ತು ಲಕ್ಷ್ಮಿಗೆ.

ಈ ಮಾತು ಒಳ್ಳೆಯ ಪರಿಣಾಮವನ್ನೇ ಬೀರಿದಂತೆನಿಸಿತು.. ಕಣ್ಣೊರೆಸಿಕೊಂಡು, ''ಹೌದಾಕ್ಕಾ.. ಹಂಗೈತಾ..?  '' ಎನ್ನುತ್ತಾ ಕೆಲಸಕ್ಕೆ ಶುರುಮಾಡಿದಳು. ತನ್ನ ವೇದಾಂತದ ಬಗ್ಗೆ ತನಗೇ ಹೆಮ್ಮೆಯಾಯಿತು ಲಕ್ಷ್ಮಿಗೆ...!

***

ಮರುವಾರ ಮತ್ತೊಂದು ಗ್ಯಾರೆಜಲ್ಲಿ  ಹಳೆ ಸ್ಕೂಟಿಯನ್ನು ಖರೀದಿ ಮಾಡಿಕೊಂಡು ಬಂದೆ ಬಿಟ್ಟಳು ಚೆಲುವಿ.ಏಳು ಸಾವಿರವಂತೆ.  ಲೈಸೆನ್ಸ್ ಇಲ್ಲ.. ಮತ್ತೆಂತಾ    ಸುಡುಗಾಡೂ ಮಾಡಿಸಿಕೊಳ್ಳಲಿಲ್ಲ. ಮನಸ್ಸಿಗೆ ಅನ್ನಿಸಿದ್ದನ್ನು ಮಾಡಿಯೇ ಬಿಡಬೇಕೆನ್ನುವ ಅವಳ ಪ್ರಾಮಾಣಿಕ ತವಕಕ್ಕೆ   ಮೆಚ್ಚಲೇ ಬೇಕು.  ದಿನಾ ಒಂದು ರೌಂಡ್ ಸ್ಕೂಟಿಯಲ್ಲಿ ಸುತ್ತಾಟ.ಈಗೀಗ ಅದೂ ಇಲ್ಲ. ಪೇರಳೆ ಮರದ  ಬುಡದಲ್ಲಿ  ಚಳಿ ಕಾಯಿಸುತ್ತಾ ಗೊಬ್ಬೆ ಕಟ್ಟಿಕೊಂಡು, ಧೂಳು ಹೊದ್ದುಕೊಂಡು, ಬಂದೇ ಬರುತಾದ ಕಾಲ ಎನ್ನುತ್ತಾ  ಮಿರುಗುತ್ತಾ ನಿಂತಿದೆ.



19 comments:

  1. ಮುಗ್ಧ ಮನಸ್ಸು... ಒಟ್ಟಲ್ಲಿ ಸ್ಕೂಟಿ ತಗೊಂಡಿದ್ದು ಆಯ್ತು... ಮೂಲೆನಲ್ಲಿ ನಿಲ್ಲಿಸಿದ್ದು ಆಯ್ತು ಹಹ

    ReplyDelete
  2. ಸೂಪರಾಗಿದ್ದು. ನಗಾಡಿ ನಗಾಡಿ ಸಾಕಾತು. ಕಟ್ಗೆ ಕೋಲಿಗೆ ಬಟ್ಟೆ ನೇತಾಕಿದಂಗೆ ಹೇಳ ಹೋಲಿಕೆಗಳು, ನಿಧಿಯ ಸೀಟು ಮರದ್ದಾ.. ಇತ್ಯಾದಿ ಟಾಂಟ್ಗಳು ಸೂಪರ್..

    ReplyDelete
  3. :)..ಚೆನ್ನಾಗಿದ್ದು ಕಥೆ. :)

    ReplyDelete
  4. ಒಳ್ಳೇ ಕತೆ :). ಲೈವ್ ಕಾಮೆಂಟರಿ ಇದ್ದಂಗಿತ್ತು. ಎಲ್ಲಾ ಪಾತ್ರಗಳೂ ಕಣ್ಣಮುಂದೆ ಬಂದು ಕುಣಿದು ಹೋದವು....ಆಗಾಗ ಬಂದು ಹೀಗೆ ನಗಿಸುತ್ತಿರಿ.

    ReplyDelete
  5. ಸ್ಕೂಟಿ ಪುರಾಣ ಪಸ೦ದಾಗೈತೆ..ಸುಖಾ೦ತ ಕಥಾ...ಅಭಿನ೦ದನೆಗಳು.

    ಅನ೦ತ್

    ReplyDelete
  6. ತುಂಬಾ ಸುಂದರ ನವೀರು ಭಾವದ ಶೈಲಿ ನಿಮ್ಮದು. ಪ್ರಾರಂಭದಲ್ಲೇ ಚೆಲುವಿಯ ಹಾಡನ್ನು ಓದುಗರ ಎದೆಯಲ್ಲಿ ಒತ್ತಿಬಿಟ್ಟಿದ್ದೀರಿ. ಶುಭವಾಗಲಿ. ಚೆನ್ನಾಗಿದೆ ಈ ಕಥೆ.

    ReplyDelete
  7. ಹೌದಲ್ವಾ !!! ಪ್ರತೀ ಮನುಷ್ಯರಿಗೂ ತಮ್ಮದೇ ಆಸೆ ಇರುತ್ತದೆ.ವ್ಯಕ್ತಿಯ ಹುದ್ದೆ ಯಾವುದೇ ಇರಲಿ, ಜೀವನದ ವ್ಯಾಪ್ತಿ ಎಷ್ಟೇ ಇರಲಿ, ಸ್ವಲ್ಪವಾದರೂ ಖುಷಿಯಾಗಿ ಜೀವಿಸಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ ,ನಿಮ್ಮ ತಿಳಿಹಾಸ್ಯದ ಲೇಖನ ಮನೆಕೆಲಸದ ಚೆಲುವಿಯ ಆಸೆ ಪೂರೈಸಿಕೊಳ್ಳುವ ತವಕ , ಆಗುವ ಅವಾಂತರಗಳು ಚೆನ್ನಾಗಿ ಮೂಡಿಬಂದಿದೆ.ಅಭಿನಂದನೆಗಳು.

    ReplyDelete
  8. ನೈಜವಾದ ಕಥೆ.ಖುಷಿ ಆತು.

    ReplyDelete
  9. ಅಕ್ಕಾ,

    ಸಕ್ಕತ್ ಚೆನಾಗಿದ್ದು ಕಥೆ. ಆಡುಭಾಷೆ ಮತ್ತು ಜೀವನಪ್ರೀತಿ ಪ್ರತಿ ಸಾಲುಗಳನ್ನೂ ಜೀವಂತವಾಗಿಸಿದ್ದು.

    ಓದಿ ಖುಶ್ ಖುಶ್ಯಾತು.

    ಪ್ರೀತಿಯಿಂದ,
    ಸಿಂಧು

    ReplyDelete
  10. good one..ಚೆನ್ನಾಗಿದ್ದು.... ಇಷ್ಟ ಆತು...:)

    ReplyDelete
  11. ಚೆನ್ನಾಗಿ ಬರೆಯುತ್ತೀರಿ. ಅಭಿನಂದನೆಗಳು.
    ರಾಜೇಂದ್ರ ಹಳೆಮನೆ.

    ReplyDelete
  12. ವಿಜಯಶ್ರೀ,
    ಚೆಲುವಿಯ ಮುಗ್ಧ ಮನಸ್ಸು ನಮ್ಮನ್ನು ಸೆರೆ ಹಿಡಿದು ಬಿಡುತ್ತದೆ.
    ಒಂದು ವಿರಳವಾದ ಪಾತ್ರ ಹಾಗು ನವಿರಾದ ವಿವರಣೆಯ ಶೈಲಿ
    ಸೊಗಸಾದ ಕತೆಯನ್ನು ಸೃಷ್ಟಿಸಿದೆ.

    ReplyDelete
  13. ಚೆಲುವಿ ಕಥೆ ಸಖತ್! ಸ್ಕೂಟಿ ಅಂತು ಇಂತೂ ಬಂತಲ್ಲಾ... ನವಿರಾದ ಹಾಸ್ಯ ಖುಷಿ ಕೊಡ್ತು!

    ReplyDelete
  14. hha hha... bareda riti chennaagode...

    aakeya manassige nemmadiyantu siktalvaa...

    ReplyDelete
  15. ನಿಮ್ಮ ನವಿರಾದ ಬರಹವನ್ನೊದಿ ಚೆಲುವಿಯ ಸ್ಕೂಟಿಯಲ್ಲೊಂದು ರೌಂಡ್ ಹೋಗಿ ಬಂದ ಅನುಭವವಾಯ್ತು. ಚೆಲುವಿ ಗುನುಗಿದ ಹಾಡು ಇನ್ನೂ ಇಷ್ಟವಾಯ್ತು. ಹ ಹ ಹ್ಹ ಣಕು ಮುಕಾ

    ReplyDelete
  16. ನನ್ನ ಸ್ಕೂಟಿ ನೆನಪಾಯಿತು.

    ReplyDelete
  17. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

    ReplyDelete
  18. ಕಥೆ ತುಂಬಾ ಚೆನ್ನಾಗಿದೆ. ಇನ್ನು ಹೆಚ್ಚೆಚ್ಚು ಕಥೆಗಳು ಮೂಡಿಬರಲಿ.

    ReplyDelete