Monday, May 28, 2012

ಎಕ್ಸ್ಲಮೇಟ್ರೀ ಮಾರ್ಕುಗಳೂ, ಕ್ವಶ್ಚನ್ ಮಾರ್ಕುಗಳೂ, ದೊರೆಯದ ಫುಲ್ ಸ್ಟಾಪುಗಳೂ...


ಊರಿಗೆ ಹೋಗುವಾಗಿನ ಅವಸರ, ಉದ್ವೇಗ ಬರುವಾಗ ಇರೋಲ್ಲ.  ಮಕ್ಕಳಿಗೆ  ಪರೀಕ್ಷೆ ಮುಗಿಯುತ್ತಿದ್ದಂತೆ ಊರಿಗೆ ಹೋಗುವ ತರಾತುರಿ. ಬಟ್ಟೆ ಬರೆಯನ್ನೆಲ್ಲಾ ನೀಟಾಗಿ ಬ್ಯಾಗಿಗೆ  ತುಂಬಿಕೊಂಡು ಹೋದರೆ ಬರುವಾಗ ಬೇಕಾಬಿಟ್ಟಿ ತುರುಕಿಕೊಂಡು ಬರುವುದು. ಮಕ್ಕಳನ್ನು ಊರಿ0ದ ವಾಪಾಸು ಬೆಂಗಳೂರಿಗೆ ಹೊರಡಿಸುವುದು ಮತ್ತೆ ಪರೀಕ್ಷೆ ತಯಾರಿ ನಡೆಸಿದಂತೆಯೇ, ವಾರದ ಮೊದಲಿಂದ ಟ್ಯೂನ್ ಮಾಡಬೇಕಾಗುತ್ತದೆ. ನಮಗಾದರೂ ಅಷ್ಟೇ.. !

 ಊರಲ್ಲಿ ಮಕ್ಕಳು  ಕಂಡ ಕಂಡದ್ದೆಲ್ಲ ಕಂಡು ಪ್ರಶ್ನೆ ಮಾಡುತ್ತಾ ಕಂಡ ಕಂಡವರ ತಲೆನೆಲ್ಲಾ ಕೆಂಡವಾಗಿಸಿ ಬಿಡುತ್ತಾರೆ. 
ನಮ್ಮ ತಂದೆ ಚಿಕ್ಕವಳಿದಾಗ ನನಗೆ ಹೇಳುತ್ತಿದ್ದರು, ''ಏನ್ ಪ್ರಶ್ನೆ ಕೇಳತೆ ಕೂಸೇ.''

ಅವರಿಗೆ ಕಂಡದ್ದೆಲ್ಲಾ ಆಶ್ಚರ್ಯಸೂಚಕ ಚಿನ್ಹೆಯೇ.   ಆಮೇಲೆ  ನಮ್ಮಲ್ಲಿ  ಪ್ರಶ್ನಾರ್ಥಕ  ಚಿನ್ಹೆ .  ಆಶ್ಚರ್ಯ ಸೂಚಕ  ಚಿನ್ಹೆಗಳೆಲ್ಲಾ  ಒ೦ದರ ಪಕ್ಕ ಒ೦ದು ನಿಲ್ಲುತ್ತಾ ಕೋಟೆಯ ಗೋಡೆ ಯ೦ತಾಗಿ ಮು೦ದೆ  ಮಾಡಿಫೈ   ಆಗುತ್ತಾ   ಡೊಂಕಾಗಿ   ಏಕೆ ? ಹೇಗೆ..?  ಎಲ್ಲಿ? ಏನು? ಎತ್ತ..?ಎನ್ನುತ್ತಾ ಕ್ವಶ್ಚನ್ ಮಾರ್ಕುಗಳಾಗಿ    ಬದಲಾಗುತ್ತವೆ..! ಯೋಚಿಸುತ್ತಾ,ಯೋಚಿಸುತ್ತಾ  ಬೆನ್ನೂ ಮುಡುಗುತ್ತದೆಯಲ್ಲವೇ]   ವಿಜ್ಞಾನಿಗಳೆಲ್ಲಾ ಆಗಿದ್ದು ಹೇಗೆ ಮತ್ತೆ..?ಕ್ವಶ್ಚನ್ ಮಾರ್ಕುಗಳಿಗೆಲ್ಲಾ ತಲೆ ಕೆಡಿಸಿಕೊಂಡಿದ್ದಕ್ಕಾಗಿ ಅಂತೂ ಉತ್ತರ ಹುಡುಕಿ ಫುಲ್ ಸ್ಟಾಪ್ ಇಟ್ಟು ಪ್ರಶಸ್ತಿಗಳನ್ನೆಲ್ಲ    ತೆಗೆದುಕೊ೦ಡರು..!!!   ಕಂಡದ್ದನ್ನು ಸುಮ್ಮನೆ ಒಪ್ಪಿಕೊಂಡಿದ್ದರೆ ಯಾರೊಬ್ಬರೂ ಯಾವ ಸಾಧನೆಯನ್ನೂ ಮಾಡುತ್ತಿರಲಿಲ್ಲ.  ಹಾಗಾಗಿ ನಾನೂ ಸಮಾಧಾನದಲ್ಲೆ ತಿಳಿದಷ್ಟಕ್ಕೆ ಉತ್ತರ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ..!  ಉತ್ತರಿಸುವ ಹೊತ್ತಿಗೆ ಸಾಕುಬೇಕಾಗಿ ಬಿ೦ದುವೊ೦ದನ್ನಿಡಲೂ ನಿಶ್ಯಕ್ತಳಾಗುತ್ತೇನೆ.


ಊರಲ್ಲಿ ಗುಡ್ಡ, ಬೆಟ್ಟ,  ತೋಟ, ಗದ್ದೆ ತಿರುಗಲು ಹೋಗಿ  ಐಶು  ಹಕ್ಕೆ ಮನೆಯೊಂದರ ಫೋಟೋ ಹೊಡೆದುಕೊಂಡು ಬಂದಿದ್ದಳು.ರಾತ್ರಿ  ಗದ್ದೆ ಕಾಯಲು ಎಷ್ಟೊಳ್ಳೆ ಉಪಾಯ ಎಂದುಕೊಂಡು   ಒಂದಿಪ್ಪತ್ತು ಎಕ್ಸಲಮೆಟ್ರಿ  ಮಾರ್ಕುಗಳೊಂದಿಗೆ ಅದರ ಇನ್ನಿತರ ವಿಚಾರಗಳಿಗೆ ನಾಲ್ಕಾರು ಕ್ವಶ್ಚನ್  ಮಾರ್ಕುಗಳನ್ನೂ  ಎಸೆದಿದ್ದಳು.

ನಾಲ್ಕು ಗಳ ಹುಗಿದು ನಾಲ್ಕಾರು ಸೋಗೆ ಹೊದಿಸಿ  ಮಧ್ಯದಲ್ಲಿ ಅಟ್ಟಣಿಗೆ ಮಾಡಿದರೆ ಅದೇ ಹಕ್ಕೆ ಕಾಯುವವನ ಅರಮನೆ. ಹಕ್ಕೆ ಅ೦ದರೆ ಹಾಸಿಗೆ ಅಥವಾ ವಿಶ್ರಾ೦ತಿ ಸ್ಥಳ ಅನ್ನುವ ಅರ್ಥವಿದೆ.ಹಕ್ಕೆ ಕಾಯುವವರ ಅನುಭವಗಳೂ, ಅವರದೇ ಫಜೀತಿಗಳೂ ತುಂಬಾ  ಇಂಟರೆಸ್ಟಿಂಗ್ ಇರುತ್ತವೆ. ಒಂದು ಲಾಟೀನೂ, ಒಂದು ನಾಯಿಯೂ ಹಕ್ಕೆ ಕಾಯುವವನ ಒಡನಾಡಿಗಳು.  ಮತ್ತು  ಒಂದೇ ಕಂಬಳಿ ಪ್ಲಸ್  ಒಂದು ದೊಣ್ಣೆ .  ನಾಯಿ ತು೦ಬಾ ಸೂಕ್ಶ್ಮ ಸದ್ದಿಗೂ ಸ್ಪ೦ದಿಸಿ ಒಡೆಯನನ್ನು ಎಬ್ಬಿಸುವುದರಿ೦ದ ಮತ್ತು ಕಾಯುವ ಅದರ ಸ್ವಾಭಾವಿಕ ಗುಣದಿ೦ದ ನಾಯಿ ಅತ್ಯಗತ್ಯ. ಬ್ಯಾಟರಿ ಎಲ್ಲಾ ವಿಶೇಷವಾಗಿ ಇರುತ್ತಿರಲಿಲ್ಲ.. ಕೆಳಗಡೆ ಹಕ್ಕೆ ಕಾಯುವವನ  ಭಯ ಮತ್ತು ಚಳಿ ದೂರಮಾಡಲು ಒ೦ದು ಹೊಡ್ಸಲು. ಕೆಲವೊಮ್ಮೆಕೇರೆ ಹಾವುಗಳು ಇಲಿ , ಹೆಗ್ಗಣ ಹಿಡಿಯಲು  ಬ೦ದು ಗೋಳು ಗುಟ್ಟಿಸುವುದೂ ಇರುತ್ತದೆ.  ರೈತನ ಗೆಳೆಯ ಕೇರೆ ಹಾವು. ಆದರೂ ಅದು ಹಾವಾಗಿದ್ದಕ್ಕೆ ಹೆದರುವುದು  ಸಹಜ. ಮಲೆನಾಡಿನ ತೋಟಗಳಲ್ಲಿ ಮತ್ತು ಗದ್ದೆಗಳಲ್ಲಿ ಹಂದಿ, ಕಾಡುಕೋಣಗಳ ಹಾವಳಿ ಬಹಳ.  ಕಾಡೆಲ್ಲಾ ಕಡಿದು  ಅವುಗಳ ಸಾಮ್ರಾಜ್ಯಕ್ಕೆ ಮನುಷ್ಯ ಧಾಳಿಯಿಟ್ಟ0ತೆ ಅದಕ್ಕೆ ಪ್ರತೀಕಾರವೆಂಬಂತೆ    ತಮ್ಮ ಕುಟು೦ಬ ಸಮೇತ ನೆ೦ಟರಿಸ್ಟರ  ಜೊತೆ ಈ ನಿಶಾಚರಿಗಳು  ಮನುಷ್ಯರ  ಆಕ್ರಮಿತ ಪ್ರದೇಶಗಳ ಮೇಲೆ ಧಾಳಿಯಿಡುತ್ತವೆ. ಪ್ರಾಣಿಗಳು ತೋಟಕ್ಕೆ ನುಗ್ಗಿದರೆ ಜಾಗಟೆ, ಗರ್ನಾಲು ಇವುಗಳ ಸಹಾಯದಿ೦ದ ಗದ್ದಲ ಮಾಡಿ ಅವುಗಳನ್ನು ಹಿಮ್ಮೆಟ್ಟಿಸುವುದು  ಗುರಿ. 

 ಹಕ್ಕೆ ಕಾಯುವುದು ಅನ್ನುವುದನ್ನು ಇಂಗ್ಲೀಷಿನಲ್ಲಿ ಮರ್ಯಾದೆಯುತವಾಗಿ ಹೇಳುವುದಾದರೆ ನೈಟ್ ವಾಚಮನ್..  ಎಷ್ಟೋಸಲ  ಹಕ್ಕೆ ಮನೆಯಲ್ಲಿ ಹಕ್ಕೆ ಕಾಯುವವನೂ ನಾಯಿಯೂ ಸೇರಿಯೇ ಗೊರಕೆ ಹೊಡೆದದ್ದು೦ಟು. ಮರುದಿನ ಫಸಲೆಲ್ಲಾ ಹಾವಳಿಯಾದ ಮೇಲೆ  ''ಅಯ್ಯೊ ಎಲ್ಲೊ ಒ೦ದ್ ಗಳಿಗೆ ಮಟ್ಟಿಗೆ ಕಣ್ಮುಚ್ಚಿದ್ದೆ ಅನ್ನಿಸುತ್ತದೆ.. ಆವಾಗ್ಲೆ ಹೀಗೆಲ್ಲಾ ಆಗಿಹೋಗಿದೆ” ಎ೦ದು ಹಳಹಳಿಸಿ ಎಡವಟ್ಟುಮಾಡಿಕೊಳ್ಳುವುದು ಸಾಮಾನ್ಯ.

ಒಮ್ಮೆ ನಾಲ್ಕು ಜನ ಗೆಳೆಯರು   ಮಗೆ ಗದ್ದೆ ಕಾಯಲು ಹೋದರ೦ತೆ. ಇಸ್ಪೀಟಿನ ಚಟ  ಅವರಿಗೆ. ರಾತ್ರೆ ಬೆಳಗೂ ಆಡಿದರ೦ತೆ. ಮರುದಿನ ಬೆಳಗ್ಗೆ ನೋಡಿದರೆ ಬೆಳೆಯಲು ಬಿಟ್ಟ ಮಗೆ ಕಾಯಿಗಳು ಒ೦ದೂ ಇರಲಿಲ್ಲವ೦ತೆ. ಇಸ್ಪೀಟಿನ ಎಲೆಗಳ ಮುಖಗಳಲ್ಲಿ ಮುಳುಗಿಹೋದ ಆ ಕಾವಲುಗಾರರಿಗೆ    ಮಗೆ ಕಾಯಿ ಯಾರು ಎಷ್ಟೊತ್ತಿಗೆ  ಕೊಯ್ದುಕೊ೦ಡು ಹೋದರೆ೦ದೇ  ಗೊತ್ತಾಗಲಿಲ್ಲವ೦ತೆ.

ಒಮ್ಮೆ ಕಾಡುಕೋಣಗಳು ಬ೦ದವೆ೦ದು   ಗರ್ನಾಲು ಹೊಡೆಯುತ್ತಿದ್ದಾಗ  ಅವುಗಳ ಸದ್ದಿಗೆ ಭಯಗೊ೦ಡ ಒ೦ದು ಕೋಣ ಸೀದಾ ಹಕ್ಕೆ ಮನೆಯ ಕಡೆಗೇ ನುಗ್ಗಿ ಓಡಿದ ರಭಸಕ್ಕೆ ಹಕ್ಕೆ ಮನೆಯ   ಗಳುಗಳು ಕಿತ್ತುಬ೦ದು ಅದರ ಕೊ೦ಬಿಗೆ ಸಿಕ್ಕಿ ಅ೦ಬಾರಿಯ೦ತೆ ಹೊತ್ತುಕೊ೦ಡುಹೋಗಿ ಅಲ್ಲೆಲ್ಲೋ ಗದ್ದೆಯ ಮರುಕಲಲ್ಲಿ ಕೊಡವಿಕೊ೦ಡಿತ್ತ೦ತೆ. ಆ ಹೊತ್ತಿಗೆ ಹಕ್ಕೆ ಕಾಯುವವನು ಗರ್ನಾಲು ಹೊಡೆಯಲು ಗದ್ದೆಯ ಬದಿಗೆ ನಿ೦ತಿದ್ದರಿ೦ದ ತಪ್ಪಿಸಿಕೊ೦ಡ. ಇಲ್ಲದಿದ್ದರೆ ಯಮನ ವಾಹನದ ಧಾಳಿಗೆ ಸಿಲುಕಿ  ' ಕೇರ‍್ ಆಫ್ ಯಮ ' ಆಗಿಬಿಡುವ ಸಾಧ್ಯತೆಗಳೇ ಹೆಚ್ಚಿಗೆ ಇದ್ದವು.

ನನಗೆ ಸಣ್ಣವಳಿದ್ದಾಗ ಹಕ್ಕೆಮನೆ ಅ೦ದ್ರೆ  ತು೦ಬಾ ಆಸಕ್ತಿಕರವಾದ ವಿಚಾರವಾಗಿತ್ತು.ನೆ೦ಟರೊಬ್ಬರ ಮನೆಯ ಗದ್ದೆಯಲ್ಲಿ  ಹಕ್ಕೆಮನೆ  ಇತ್ತು.  ಹಗಲಿಗೆ ಅದು ನಮ್ಮ ಆಟದ ಮನೆಯಾಗುತ್ತಿತ್ತು.   ಒಮ್ಮೆ ಅಲ್ಲಿ ನಾವು ಆಡುವಾಗ  ಹಸಿರುಳ್ಳೆ ಹಾವು ಬ೦ದು 'ಹಾಯ್ '  ಅ೦ದಿತ್ತು.ನನಗೆ ಭಯವಾಗಿ ' ಅಯ್ಯಯ್ಯೊ' ಎ೦ದು ಉತ್ತರಿಸಿದ್ದೆ. ಸುಮಾರು ದಿನ ಹಕ್ಕೆ ಮನೆ ಕಡೆ ಸುಳಿದಿರಲಿಲ್ಲ.

ಈಗೀಗ ಐಬೆಕ್ಸ್ ಬೇಲಿಗಳು ಬ೦ದು ಹಕ್ಕೆ ಮನೆಗಳು ಅಷ್ಟೆಲ್ಲಾ ವ್ಯಾಪಕವಾಗಿ ಕಾಣಸಿಗುವುದಿಲ್ಲ.  ಆದರೆ      ಹಸಿರು   ಗದ್ದೆಯ ಮಧ್ಯದಲ್ಲಿ ಕಾಣುವ ಹಕ್ಕೆ ಮನೆಗಳು ದೂರದಿ೦ದ ನೋಡಲು ಮನಸ್ಸಿಗೆ ಮುದನೀಡುತ್ತವೆ.

ಹೀಗೆ ಚಿಕ್ಕದಾಗಿ ಮಕ್ಕಳ  ವ್ಯಾಕರಣ ಚಿನ್ಹೆಗಳಿಗೆ ನಿಶ್ಯಕ್ತಿಯಿ೦ದ ಬಿ೦ದುವೊದನ್ನು ಇಟ್ಟು ಪೂರ್ಣಗೊಳಿಸುವಲ್ಲಿ ಶಕ್ತಳಾಗಿದ್ದೇನೆ...!

ಅಲ್ಲದೇ ಇನ್ನೊ೦ದು ಕ್ವಶ್ಚನ್ ಮಾರ್ಕ್ ಹಾಕಬಹುದು ಎ೦ದರೆ,   ನಾವು ಬಳಸುವ ಈ ವ್ಯಾಕರಣ ಚಿನ್ಹೆಗಳು ಯಾವ ಭಾಷೆಯದು?  ಸ೦ಸ್ಕೃತ ಮತ್ತು ಹಿ೦ದಿಯಲ್ಲಿ ಫುಲ್ ಸ್ಟಾಪಿಗೆ ಗೆರೆಯೆಳೆದು ಗೋಡೆ ಕಟ್ಟಿಬಿಡುತ್ತಾರೆ. ಉಳಿದಿದ್ದೆಲ್ಲ ಒ೦ದೇತರಾ. ಕನ್ನಡದಲ್ಲಿ ನಾವು ಬಳಸುವ ಚಿನ್ಹೆಗಳು ಇ೦ಗ್ಲೀಷಿನದೇ..?   ಅಥವಾ ಕಾಕತಾಳೀಯವಾಗಿ ಎರಡೂ ಒ೦ದೇ ತರದವಾಗಿವೆಯೇ..? ಪದ್ಯ ಬರೆಯುವವರು ಪಲ್ಲ ಅನುಪಲ್ಲಕ್ಕೆ ಆಚೀಚೆ ಎರಡೆರಡು ಗೆರೆ ಎಳೆಯುವುದು ಏಕೆ..? ಅಥವಾ ಇನ್ನಾವುದಾದರೂ ಚರಿತ್ರೆಗಳಿವೆಯೇ..? ಗೊತ್ತಿದ್ದವರು ತಿಳಿಹೇಳಿದರೆ ನನ್ನ ಎಕ್ಸ್ಲ ಮೇಟ್ರಿ ಮಾರ್ಕುಗಳಿಗೂ, ಕ್ವಶ್ಚನ್ ಮಾರ್ಕುಗಳಿಗೂ ಫುಲ್ ಸ್ಟಾಪ್ ದೊರೆಯುತ್ತದೆ.


ವ೦ದನೆಗಳು.

14 comments:

 1. ೧)!!!!!!!!!!!!!
  ೨)??????????????

  ಮೊದಲನೇಯದು ಈ ಲೇಖನ ಎಷ್ಟು ಚೆನ್ನಾಗಿದೆ ಎಂದು ಹೇಳಲು
  ಎರಡನೇಯದು ಇನ್ನೂ ಇದೇ ತರ ಎಷ್ಟು ಬೆಳಕಿಗೆ ಬಾರದ ಸಂಗತಿಗಳಿವೆ ಎಂಬುದು.
  ಆಲೇಮನೆಯವರ ಕಥೆಗಳು,ಗದ್ದೇ ತರಹವೇ ರಾತ್ರಿ ಚಾಲಿಕಣದಲ್ಲಿ ಅಡಿಕೆ ಕಾಯುವವರ ಕಥೆಗಳು,ಹಳೆಯ ಕಾಲದಲ್ಲಿ ಅಟ್ಟ ಕಾಯಲು ಅಂಗಳದಡಿ ಮಲಗುತ್ತಿರುವವರ ಕಥೆಗಳು ಸುಮಾರಿದೆ.ಅಲ್ವೇ??? ಮಾಳ ಕಾಯದು ಎನ್ನುವ ಪದವೂ ಬಳಕೆಯಲ್ಲಿದೆ.

  ಹಾಗೆ ಒಮ್ಮೆ ನನ್ನ ನಿದ್ರಾ ತನ್ಮಯತೆಯನ್ನು ನೋಡಿ ಅಪ್ಪಾಜಿ ಹೇಳಿದ್ದು ನೆನಪಾಗುತ್ತಿದೆ
  "ಈ ಮಾಣಿಯಾ ಎಲ್ಲಾದ್ರು ಅಟ್ಟಾ ಕಾಯಲ್ ಬಿಟ್ರೆ ಅಡ್ಕೆ ಅಲ್ಲಾ, ಅಟ್ಟ ಹೊತ್ಕಂಡ ಹೊದ್ರು ಗೊತ್ತಾಗ್ತಿಲ್ಲೆ ಇವಂಗೆ !"

  ಒಳ್ಳೆಯ ಲೇಖನ ,ಗದ್ದೆಗೆ ಕೊಂಡೊಯ್ದಿರಿ ನನ್ನ...
  ಸವತೆಕಾಯಿ ಮಿಡಿ ಹುಡ್ಕಕ್ ಹೊರ್ಟೆ ಟಾಟಾ....

  ಬನ್ನಿ ನಮ್ಮನೆಗೂ ಒಂದ್ ಏನೋ ಗೀಚಿದ್ದೇನೆ.
  http://chinmaysbhat.blogspot.com/

  ಇತಿ ನಿಮ್ಮನೆ ಹುಡುಗ,
  ಚಿನ್ಮಯ ಭಟ್

  ReplyDelete
 2. ಟೈಟಲ್ ನೋಡಿ ನಾನು ಸ್ವಲ್ಪ ಎಕ್ಷ್ಲಮೆಟರೀ ಮತ್ತು ಕ್ವೆಶ್ಚನ್ ಮಾರ್ಕ್ ಗಳೊಂದಿಗೆ ಒಳಗೆ ಬಂದೆ. ಲೇಖನ ಓದಿ ಅವೆಲ್ಲಕ್ಕೂ ಒಂದು ಫುಲ್ ಸ್ಟಾಪ್ ಸಿಕ್ಕಿತು. ತುಂಬಾ ಚೆನ್ನಾಗಿದೆ. ನಮ್ಮ ಕಡೆಗೆ ಅದಕ್ಕೆ ಮಾಳ ಕಾಯುವುದು ಅನ್ನುತ್ತಾರೆ. ಈ ಮಾಳ ಕಾಯುವರ ಕಥೆ, ಫಚಿತಿ ಎರಡು ಸೊಗಸಾಗಿರುತ್ತವೆ. ಅಂತಹ ಒಂದೆರಡು ಉದಾಹರಣೆ ಕೊಟ್ಟಿದ್ದು ತುಂಬಾ ಖುಷಿ ಕೊಟ್ಟಿತು. ನನಗು ಮಾಳ ಕಾಯುವ ಆಸೆ ಇತ್ತು. ಆದರೆ "ಜರ್ಲೆ ಕಂಡ್ರೆ ಹೆದ್ರವ.. ಬೆಳಿಗ್ಗೆ ಎಬ್ಸಿದಂತು ಎಚರಾಗದೆ ಹೋದವಾ ನೀ ಮಾಳ ಕಾಯಲ್ ಹೊಪವನ ??" ಹೇಳುವಂತ ಕ್ವೆಶ್ಚನ್ ಮಾರ್ಕ್ ಹಾಕಿ ನನ್ ಆಸೆ ಗೆ ಫುಲ್ ಸ್ಟಾಪ್ ಹಾಕಿದ್ದಾರೆ ಮನೆಯಲ್ಲಿ..

  ReplyDelete
 3. chennagide lekhana vijaya, nanagu esto dina ee tara ques kaaDide.. !!,.;?""\() elladakku uttara kaayabeku yaaradru tiLisidre heLi :)

  ReplyDelete
 4. ವಿಜಯಶ್ರೀ ಮೇಡಂ,
  ಮೊದಲು ಹಕ್ಕೆಮನೆಯ ಫೋಟೋ ನೋಡಿ ಸಂತೋಷಗೊಂಡೆ, ನಂತರ ಈ ಲೇಖನ ಓಡಿದ ಮೇಲಂತೂ ನಮ್ಮ ಗದ್ದೆಯಲ್ಲಿರುವ ಹಕ್ಕೆಮನೆಯಲ್ಲಿ ಮಲಗೆದ್ದು ಬಂದೆ!

  ಚಂದದ ಬರಹ, ಹಲವಾರು ನೆನಪುಗಳನ್ನು ಬಡಿದೆಬ್ಬಿಸಿತು.

  ReplyDelete
 5. ವಿಜಯಶ್ರೀ,
  ಹಕ್ಕೆಮನೆ ವರ್ಣನೆ ತುಂಬ ಸೊಗಸಾಗಿದೆ. ಕನ್ನಡದಲ್ಲಿ ಬಳಸುತ್ತಿರುವ ಎಲ್ಲ ಚಿಹ್ನೆಗಳೂ ಇಂಗ್ಲೀಶಿನಿಂದ ಆಮದಾಗಿವೆ!

  ReplyDelete
 6. ವಿಜಯಶ್ರೀ,
  ಬಾಲ್ಯದ ಬೆರಗಿನ ಲೋಕಕ್ಕೆ ಕರೆದೊಯ್ದಿರಿ;ಧನ್ಯವಾದಗಳು.
  ಕನ್ನಡದಲ್ಲಿ ಬಳಸುತ್ತಿರುವ ಎಲ್ಲ ಚಿಹ್ನೆಗಳು ಇಂಗ್ಲೀಶಿನಿಂದ ಆಮದಾಗಿವೆ. ಸಂಸ್ಕೃತದಲ್ಲಿ ಒಂದು ಅಡ್ಡಗೆರೆ ಮಾತ್ರ ಬಳಕೆಯಲ್ಲಿದೆ. ಅನುಪಲ್ಲ ಹಾಗು ಪಲ್ಲಗಳಿಗೆ ಒಂದು ಹಾಗು ಮತ್ತೊಂದನ್ನು ಬಳಸುತ್ತಿದ್ದಾರಷ್ಟೆ!

  ReplyDelete
 7. ವಿಜಯಶ್ರೀ, ಊರಿಗೆ ಹೋಗಿ ಬಂದಮೇಲೆ ಜಿಜ್ಞಾಸೆಗಳ ಸರಮಾಲೆನಾ?? ಹಹಹ ಎರಡು ಕನ್ನಡ ಪದ ಪುಷ್ಟಿ ನಿಮ್ಮ ಲೇಖನದಲ್ಲಿ..... ಫುಲ್ ಸ್ಟಾಪಲ್ಲ...ಕಾಮ...ಅಯ್ಯಯ್ಯೋ ಕೋಮಾ ಅನ್ನೋಣವೇ..?? ಹಹಹಹ
  ಇನ್ನು ಅಶ್ವರ್ಯ ಸೂಚಕ, ಸೆಮಿಕೋಲನ್...ಎಲ್ಲಾ ಹುಡುಕಿದೆ ಸಿಕ್ಕ ಮಾಹಿತಿ ಫೇಸ್ ಬುಕ್ ನಿಮ್ಅಗೆ ಪ್ರತಿಕ್ರಿಯೆಯಲ್ಲಿ ಹಾಕಿದ್ದೇನೆ.

  ReplyDelete
 8. ವಿನೋದದೊಂದಿಗೆ ವಿಚಾರಪೂರ್ಣವಾಗಿಯೂ ಇದೆ ನಿಮ್ಮ ಬರಹ.

  ReplyDelete
 9. ತುಂಬಾ ಸುಂದರ ಲೇಖನ.. ನಮ್ಮ ಹಳ್ಳಿ ಬದುಕು ಎಷ್ಟೊಂದು ರಂಗನ್ನು ತನ್ನೊಳಗೆ ತುಂಬಿಕೊಂಡಿರುತ್ತೆ ಅಲ್ವಾ. :)

  ReplyDelete
 10. ಹ್ಮು.. ನ೦ದೂ ಅದೇಯಾ :)
  ಎಕ್ಸ್ಕ್ಲಮೇಟ್ರಿ ಮಾರ್ಕು, ಕ್ವೆಸ್ಚನ್ಮಾರ್ಕೆಯ :)

  ReplyDelete
 11. ಚೆಂದದ ಲೇಖನ ವಿಜಯಕ್ಕ.. ಹಕ್ಕೆಮನೆ, ಕೇರೆ ಹಾವು, ಮಗೆ ಗದ್ದೆ ಕಾಯೋರ ಇಸ್ಪೀಟು, ಕೋಣನ ಹಾವಳಿ .. ಎಲ್ಲಾ ಮಜವಾಗಿತ್ತು.

  ವಿರಾಮ ಚಿಹ್ನೆಗಳ ಬಗ್ಗೆ
  ದೇವನಾಗರಿ ಲಿಪಿಯಲ್ಲಿ "|" ಅನ್ನು ಪೂರ್ಣವಿರಾಮಕ್ಕೆ ಉಪಯೋಗಿಸುತ್ತಾರೆ. ಕನ್ನಡದಲ್ಲೂ ಕವಿತೆಗಳಲ್ಲಿ ಆ ಸಂಪ್ರದಾಯ ಇನ್ನೂ ಮುಂದುವರಿದಿದೆ. ಷಟ್ಪದಿಗಳಲ್ಲಿ ಮೂರನೆಯ ಲೈನಿಗೆ "|" ಅನ್ನು ಪ್ಯಾರಾದ ಕೊನೆಗೆ(೬ನೆಯ ಲೈನಿಗೆ) "||" ಅನ್ನು ಬಳಸುವುದೂ ಉಂಟು. ಛಂದೋ ಬದ್ದವಾದ ಸಂಸ್ಕೃತ ಶ್ಲೋಕಗಳಲ್ಲೂ , ಪದ್ಯಗಳಲ್ಲೂ, ಸೂಕ್ತಿಗಳಲ್ಲೂ ಈ ಪರಿಪಾಟವಿದೆ. ಲಯಕ್ಕೆ ಹೊರತಾಗಿ ಕನ್ನಡದಲ್ಲಿ ಕವನ ರಚನೆ ಶುರುವಾದ ಮೇಲೆ, ಚುಟುಕು, ಹನಿಗವನಗಳು, ಹಾಯ್ಕಗಳಂತವು ಬಂದ ಮೇಲೆ ಈ ರೂಢಿ ಕಮ್ಮಿಯಾಗಿದೆ ಅನಿಸುತ್ತದೆ. ಈ ತರದ ಪದ್ಯಗಳಲ್ಲಿ ಇಂತಿಷ್ಟೇ ಸಾಲುಗಳು ಎಂಬ ನಿಯಮ ಹಲವೆಡೆ ಇಲ್ಲದಿರುವುದರಿಂದಲೋ ಅಥವಾ ಪ್ಯಾರಾದ ಸರಿಯಾದ ಮಧ್ಯವನ್ನು ನಿರ್ಧರಿಸಲಾಗದ ಕಾರಣದಿಂದಲೋ ಏನೋ "|" ಮತ್ತು "||" ಬಳಕೆ ಇಲ್ಲದಿರಬಹುದು.

  ಆಶ್ಚರ್ಯಸೂಚಕ ಚಿಹ್ನೆಗಳು ನಾ ನೋಡಿದ ಎಲ್ಲಾ ಭಾರತೀಯ ಭಾಷೆಗಳಲ್ಲೂ ಇವೆ. ಅವು ಇಂಗ್ಲೀಷಿನಿಂದ ಬಂದಿರಬಹುದು ಎಂಬ ಅಂಶ ನನಗೆ ಸರಿ ಎನಿಸಲಿಲ್ಲ. ಯಾಕೆಂದರೆ ಇಂಗ್ಲೀಷರು ಇಲ್ಲಿಗೆ ಬರುವ ಹಲವಾರು ಶತಮಾನಗಳ ಮುಂಚೆಯೇ ಕನ್ನಡ, ತಮಿಳು ಹೀಗೆ ಇಂದಿನ ಬಹುತೇಕ ಎಲ್ಲಾ ಭಾರತೀಯ ಭಾಷೆಗಳ ಲಿಪಿ ಉಗಮವಾಗಿ ಜನಸಾಮಾನ್ಯರ ಬಳಕೆಯಲ್ಲಿತ್ತು ಎಂದು ಇತಿಹಾಸದ ಶಾಸನಗಳಿಂದ, ಕೃತಿಗಳಿಂದ ಅರಿಯಬಹುದು.

  ReplyDelete
 12. ಹಕ್ಕೆ ಮನೆಗೆ "ಮಾಳ" ಪರ್ಯಾಯ ಪದ .
  ಮೂರುವರ್ಷ ಮಾಳ ಕಾದ ಸ್ವ-ಅನುಭವ ನನಗಿದೆ.
  ಚಿನ್ಹೆಗಳ ಬಗ್ಗೆ ಹೆಚ್ಚು ಜೋರಾಗಿ ಪ್ರಶ್ನೆ ಕೇಳಬೇಡಿ.
  ಚಿನ್ಹೆಗಳೆಲ್ಲ ಪಾಶ್ಚಿಮಾತ್ಯರ ಅನುಕರಣೆ ಎಂದು ಕನ್ನಡದ ಉಟ್ಟು ಓರಾಟಗಾರರು, ಇಂಗ್ಲೀಷು ವಿರೋಧಿಗಳು ಹೊಸ ಚಳುವಳಿ ಬಂದ್ ಗೆ ಕರೆಕೊಟ್ಟರೆ??

  ReplyDelete
 13. ಎಲ್ಲರಿಗೂ ಧನ್ಯವಾದಗಳು.

  ReplyDelete