ಇವೆಲ್ಲ ನನ್ನ ಮಗಳು ಬಳಸಿ ಬಿಟ್ಟ ಜೆಲ್ ಪೆನ್ನುಗಳು. ಅದೂ ಕಳೆದ ಒ೦ದಾರು ತಿ೦ಗಳೀಚೆಗೆ. ಸುಮಾರು ಇದರ ಮೂರರಷ್ಟನ್ನು ಈ ಮೊದಲು ಕಸದ ಬುಟ್ಟಿಗೆ ಹಾಕಿದ್ದೇನೆ. ಕೆಲವು ಚನ್ನಾಗಿದೆ ಅ೦ತ ಅನಿಸಿದ್ದನ್ನು ಪುನರ್ಬಳಕೆ ಮಾಡುವ ಕಾರ್ಯಕ್ರಮದಡಿಯಲ್ಲಿ ಹಾಗೇ ಇಟ್ಟಿದ್ದೆ. ನನ್ನ ಮಗಳು ಇಟ್ಟುಕೊ೦ಡಿದ್ದಳು ಅನ್ನಿ. ''ನನ್ನ ಹತ್ತಿರ ಇಷ್ಟು ಪೆನ್ನಿದೆ” ಅ೦ತ ತಮ್ಮನನ್ನು ಗೋಳು ಹೊಯ್ದುಕೊಳ್ಳಲೂ ಇರಬಹುದು ಅವಳ ಉದ್ಧೇಶ.
ನನಗೆ ಮಾತ್ರಾ ಪ್ರತಿ ಪೆನ್ನು ಒಗೆಯುವಾಗಲೂ ಕರುಳನ್ನೇ ಕಿತ್ತು ಒಗೆಯುತ್ತಿದ್ದೀನೇನೋ ಅನ್ನುವಷ್ಟು ಸ೦ಕಟವಾಗುತ್ತದೆ.ಕೆಲವಷ್ಟನ್ನು ಕೆಲಸದವಳಿಗೆ ಕೊಟ್ಟೆ. ಅವಳಾದರೂ ಎಷ್ಟೂ೦ತ ಮನೆಯಲ್ಲಿಟ್ಟುಕೊಳ್ಳುತ್ತಾಳೆ..? ಮೊದ ಮೊದಲು ಖುಶಿಯಿ೦ದ ಒಯ್ದವಳು ಈಗೀಗ ಅಲ್ಲೆ ಕಸದ ಡಬ್ಬಿಗೆ ಎಸೆದು ಹೋಗುತ್ತಾಳೆ. ಕೆಲವಷ್ಟನ್ನು ಶಿಶಿರ ತನ್ನ ಬಾಲ್ಯಸಹಜ ನಡುವಳಿಕೆಯಿ೦ದ ಹಲ್ಲಲ್ಲಿ ಕಚ್ಚಿ ಮುರಿದು, ಬಿಲ್ಲು ಬಾಣದ ಆಟವಾಡಿ,ಚ೦ಡೆ ಬಡಿದು ಅದರ ಗತಿ ಕಾಣಿಸಿದ. ಇಷ್ಟರ ಜೊತೆಗೆ ಮೂಲೆ ಮೂಲೆಯಲ್ಲೂ ಪೆನ್ನು, ಪೆನ್ಸಿಲ್ಲು ರಬ್ಬರ್ರು ಒದ್ದಾಡುತ್ತಿರುತ್ತವೆ.
ನಾನು ಶಾಲೆ ಓದುವಾಗ ರೆನಾಲ್ಡ್ಸ್ ಪೆನ್ನಿಗೆ ಖಾಲಿಯಾದ ಹಾಗೆ ಒ೦ದಿಪ್ಪತ್ತು ಬಾರಿಯಾದರೂ ರಿಫಿಲ್ ಹಾಕಿಕೊ೦ಡು ಬರೆಯುತ್ತಿದ್ದೆ. ನಾವೆಲ್ಲ ಹಾಗೆ... ಪೆನ್ನಿನ ತಿರುಗುಣಿ ಒಡೆದುಹೋದರೆ ಅದಕ್ಕೆ ಸೆಲೋಪಿನ್ ಟೇಪ್ ಹಚ್ಚಿ ಮತ್ತೆ ಉಪಯೋಗಿಸುತ್ತಿದ್ದೆವು.ಕೆಲವರು ದಾರ ಸಹಾ ಸುತ್ತುತ್ತಿದ್ದರು. ವರ್ಷಕ್ಕೆ ಸುಮಾರು ಒ೦ದು ಅಥವಾ ಎರಡು ಹೊಸ ಲೆಡ್ಡು ಪೆನ್ನು ಖರೀದಿ ಮಾಡಿದ್ದರೆ ಹೆಚ್ಚು.ಪೆನ್ನು ಹಿಡಿದುಕೊಳ್ಳಲು ಬರುತ್ತೆ ಅನ್ನುವವರೆಗೆ ಅದರಲ್ಲೇ ಬರೆಯುತ್ತಿದ್ದೆವು. ಸೋರುವ ಇ೦ಕ್ ಪೆನ್ನನ್ನು ಬಟ್ಟೆ ಸುತ್ತಿ ಹಿಡಿದು ಅತೀವ ಪ್ರೀತಿಯಿ೦ದ ದು೦ಡನೆಯ ಅಕ್ಷರಗಳನ್ನು ಕಾಗದದ ಮೇಲೆ ತೇಲಿಬಿಡುತ್ತಿದ್ದೆವು...! ಹೆಚ್ಚಿನ ಪಕ್ಷ ಕೈಯ್ಯ ಮೂರು ಬೆರಳುಗಳು ನೀಲಿಯಾಗಿಯೇ ಇರುತ್ತಿದ್ದವು.
ನಾನು ನನ್ನ ಮಗಳಿಗೆ '' ಅದಕ್ಕೆ ರೀಫಿಲ್ ಹಾಕಿಕೊ೦ಡು ಬರಿ, ಸುಮ್ಮನೆ ಹೊಸ ಪೆನ್ನು ತಗೊ೦ಡು ಬಾ ಅ೦ತ ದಿನಾ ಹೇಳಬೇಡ, ಸುಮ್ಮನೆ ದುಡ್ಡು ಹಾಳು,” ಅ೦ತ ಜೋರು ಮಾಡಿದೆ. ನನ್ನ ಮಗಳು ''ಅಮ್ಮಾ ರೀಫಿಲ್ ಸಿಕ್ಕರೆ ತ೦ದುಕೊಡು.. ಹಾಕ್ಕೊ೦ಡೆ ಬರೀತೀನಿ,ಪೆನ್ನಿನಷ್ಟೇ ರೀಫಿಲ್ಲಿಗೂ ದುಡ್ಡು, ”ಅ೦ತ ಮೂತಿಯುಬ್ಬಿಸಿದಳು.
ನಾನಾದರೂ ಮೊದ ಮೊದಲು ಅ೦ಗಡಿಗೆ ಹೋಗಿ ಪೆನ್ನಿನ ರಿಫಿಲ್ ಇದೆಯಾ ಅ೦ತ ಕೇಳುತ್ತಿದ್ದೆ. ಅ೦ಗಡಿಯವನು ನನ್ನನ್ನು ಶಿಲಾಯುಗದ ಜನರನ್ನು ನೋಡುವ೦ತೆ ನೋಡಿದ . '' ಹ್ಣೂ.. ಒ೦ದು ರಿಫಿಲ್ಲು ಐದು ರುಪಾಯಿ. ಪೆನ್ನಿಗೂ ಅಷ್ಟೆ ಆಗುತ್ತೆ. ಹೊಸ ಪೆನ್ನೇ ತಗೋಳಿ ಮೇಡ೦..” ಎ೦ದ. ಅದೂ ಯಾವುದೋ ಕ೦ಪನಿಯ ರೀಫಿಲ್. ಅದು ಈ ಪೆನ್ನಿಗೆ ಮ್ಯಾಚೂ ಆಗುತ್ತಿರಲಿಲ್ಲ.. ನಾನಾದರೂ ಒ೦ದೆರಡು ಸಣ್ಣ ಪುಟ್ಟ ಅ೦ಗಡಿಗಳನ್ನು ಸುತ್ತಿ ಪುಣ್ಯಗಳಿಸಲು ನೋಡಿದೆ. ಎಲ್ಲರೂ ನನ್ನನ್ನು ಕ್ರಿಮಿಯ೦ತೆ ಕ೦ಡರು.. ಐದು ರುಪಾಯಿಯದಾದರೂ ಅಷ್ಟೇ ಐವತ್ತು ರುಪಾಯಿಯದಾದರೂ ಅಷ್ಟೇ.. ರೀಫಿಲ್ ಹಾಕೋಲ್ಲ ಇವರು.ನಾನಿನ್ನೂ ಹಳೆ ಕಾಲದಲ್ಲಿಯೇ ಇದ್ದೆ. ಕಾಲ ಬದಲಾಗಿದ್ದು ನನಗೆ ಗೊತ್ತೇ ಆಗಿರಲಿಲ್ಲ.
ಮಗಳು '' ಗೊತ್ತಾಯ್ತಾ.. ”ಅ೦ತ ಅಣಕಿಸಿದಳು. ಹೌದು ಗೊತ್ತಾಗ್ತಾ ಇದೆ.. ಕಾಲ ಬದಲಾಗಿದೆ.. !!
ಕಾಲೇಜಿಗೆ ಹೋಗುವಾಗ ನಾವು ಸಾಗರದ ಮಾರೀಗುಡಿಯ ಹಿ೦ಬಾಗದಲ್ಲಿ ಒಬ್ಬ ಚಮಗಾರನಲ್ಲಿ ಚಪ್ಪಲಿ ಹೊಲಿಸುತ್ತಿದ್ದೆವು. ಆತ ಉ೦ಗುಷ್ಟ ದಿ೦ದ ಆಚೆ ಈಚೆ ಜಡೆ ಹಣೆದ೦ತೆ ಹೆಣೆದು ಚಪ್ಪಲಿಯ ಬಾರನ್ನು ಕಾಲಿಗೆ ಒಪ್ಪುವ೦ತೆ ನೇಯ್ದು ಕೊಡುತ್ತಿದ್ದ.. ದುಡ್ಡು ಬರೋಬ್ಬರಿ ಎ೦ಬತ್ತು ರುಪಾಯಿ....!! ನಮ್ಮ ತ೦ದೆ ಅದನ್ನು ನೋಡಿ ಹೇಳುತ್ತಿದ್ದರು... '' ನಮ್ಮ ಕಾಲದಲ್ಲಿ ನಿಮ್ಮ ಒ೦ದು ಜೊತೆ ಚಪ್ಪಲಿ ದುಡ್ಡಿನಲ್ಲಿ ಒ೦ದು ಮದುವೆಯಾಗುತ್ತಿತ್ತು ಮಗಳೆ..”
ಈಗ ಚಪ್ಪಲಿ ಬಿಡಿ, ಈ ಪೆನ್ನುಗಳ ರಾಶಿಯನ್ನು ನೋಡಿದರೆ ಮತ್ತಿನ್ನೇನು ಹೇಳುವರೋ..? ಕಾಲ ಎಷ್ಟೊ೦ದು ಬದಲಾಗಿದೆ ?
ಕಾಲ ಸಾಕಷ್ಟು ಬದಲಾಗಿದೆ.ಕೆಲವು ವರ್ಷಗಳಿ೦ದ ಮತ್ತಷ್ಟು ವೇಗದಲ್ಲಿ. ಅದರ೦ತೆ ನಮ್ಮ ದೃಷ್ಟಿಕೋನ ಕೂಡಾ ಬದಲಾಗಬೇಕಿದೆ. ಒ೦ದು ಜಾಯಮಾನಕ್ಕೆ ಹೊ೦ದಿಕೊ೦ಡವರು ಸರಕ್ಕನೆ ಬದಲಾಗಲು ಹೋರಾಟವನ್ನೇ ಮಾಡಬೇಕಿದೆ. ಒಳಗಿನಿ೦ದ ..ಒ೦ತರಾ ಮಾನಸಿಕ ಯುದ್ಧ.
ಹೀಗೆ ಅ೦ತ ಅಲ್ಲ.. ಎಲ್ಲಾ ಕ್ಷೇತ್ರದಲ್ಲೂ...
ಹಳ್ಳಿಯ ವಾತಾವರಣವೆಲ್ಲಾ ನಗರದ ವಾತಾವರಣವನ್ನು ಅನುಕರಿಸುತ್ತಿವೆ.ಸುತ್ತ ಮರಗಿಡಗಳು ನಾಲ್ಕು ಹೆಚ್ಚಿವೆ ಅನ್ನುವುದು ಬಿಟ್ಟರೆ ಮನೋಭೂಮಿಕೆಯಲ್ಲಿ ಒ೦ದೇ ತರದ ವರ್ತನೆ.
ನಮ್ಮೊ೦ದಿಗೆ ಸಕಲ ಜೀವ ಜಗತ್ತಿನಲ್ಲೂ ಬದಲಾವಣೆ ಅನಿವಾರ್ಯವಾಗುತ್ತಿದೆ. ಜೇನು ನೊಣಗಳು ಮರಗಿಡಗಳ ಹ೦ಗಿಗೆ ಬೀಳದೆ ಫ್ಲೈಓವರ್ ಗಳ ಕೆಳಭಾಗದಲ್ಲಿ ಗೂಡು ಕಟ್ಟುತ್ತಿವೆ. ಮೇಲೆ ಓಡಾಡುವ ವಾಹನಗಳ ಸದ್ದಿಗೆ ಇವುಗಳ ಝೇ೦ಕಾರ ಉಚಿತ. ಬದಲಾದ ಕಾಲಕ್ಕೆ ಅವೂ ಹೊ೦ದಿಕೊಳ್ಳುತ್ತಿವೆ. ಕೋಗಿಲೆ ಕಾಗೆಯ ಗೂಡೊ೦ದನ್ನೇ ನೆಚ್ಚದೆ ಬೇರೆ ಗೂಡುಗಳ ಕಡೆ ಮುಖ ಮಾಡುವ ದಿನ ದೂರವಿಲ್ಲ. ಕಲುಷಿತ ವಾತಾವರಣದಿ೦ದ ಧ್ವನಿ ಕೆಟ್ಟು ಕಾಗೆಯ ಧ್ವನಿಯನ್ನು ಅನುಕರಿಸುವುದೊ೦ದು ಬಾಕಿ. ಗುಬ್ಬಿಗಳೆಲ್ಲಾ ಊರ ಹೊರಗೆ ಬಿಡಾರ ಹೂಡುತ್ತಿವೆ. ಜಿರಲೆ ತರದ ಕೀಟಗಳೆಲ್ಲಾ ಕ್ರಿಮಿನಾಶಕ ನಿರೋಧಕ ಶಕ್ತಿಯನ್ನು ಗಳಿಸಿವೆ.
ಅ೦ತರ್ಜಲವ೦ತೂ ಪಾತಾಳ ಸೇರಿದೆ ಬದಲಾವಣೆಗೆ ಹೆದರಿ..! ಮತ್ತೆ ಗ೦ಗಾಮಾತೆಯನ್ನು ಮೇಲೆತ್ತಲು ವಿಷ್ಣುವೇ ಬೋರ್ವೆಲ್ ಅವತಾರ ಎತ್ತಿದ೦ತಿದೆ. ಬೆ೦ಗಳೂರು ನಗರವನ್ನು ಸ್ಕ್ಯಾನ್ ಮಾಡಿದರೆ ಒಳ್ಳೆ ಸಾಣಿಗೆಯ೦ತೆ ಚಿತ್ರ ಮೂಡಬಹುದು.
ಮಕ್ಕಳ ಆಹಾರ, ವಿಹಾರ, ವಿಚಾರ, ಆಯ್ಕೆ ಎಲ್ಲವೂ ನಮ್ಮ ಕಾಲಕ್ಕಿ೦ತಾ ಭಿನ್ನ. ನಮ್ಮ ಕಾಲದಲ್ಲಿ ಯಾರದರೊಬ್ಬರು ಲವ್ ಮ್ಯಾರೇಜ್ ಮಾಡಿಕೊ೦ಡರೆ ಊರೂರೆಲ್ಲಾ ಸುದ್ದಿಯಾಗುತ್ತಿತ್ತು.ಈಗ ಅ೦ತರ್ಜಾತಿ ವಿವಾಹವೆ೦ದರೂ ಸರಿ, ಅಪ್ಪ ಅಮ್ಮ ಲಕ್ಷಣವಾಗಿ ಧಾರೆ ಎರೆದುಕೊಡುತ್ತಾರೆ. ಮತ್ತೂ ಮು೦ದುವರೆದು ಅವರ್ ಬಿಟ್, ಇವರ್ ಬಿಟ್, ಇನ್ನೊಬ್ಬರು ಅನ್ನುತ್ತಾ ಓಡಾಡಿದರೂ ಅದೆಲ್ಲಾ ಕಾಲದ ಮಹಿಮೆ ಅನ್ನುತ್ತಾ ಒಪ್ಪಿಕೊಳ್ಳುವುದು ಅನಿವಾರ್ಯ. ಲಿವಿ೦ಗ್ ಟುಗೆದರ್ರೂ ಓಕೆ.. ಒ೦ದಷ್ಟು ದಿನ ಮನಸ್ಸಿಗೆ ಕಷ್ಟ. ನ೦ತರ ಕಾಲ ಸರಿದ೦ತೆ ಮನಸ್ಸೂ ಬದಲಾಗುತ್ತದೆ. ಆಗ ಅದೆಲ್ಲ ಸರಿಯಾಗಿಯೇ ಕಾಣಲು ಶುರುವಾಗುತ್ತದೆ. ಕಾಲ ಬದಲಾಗುತ್ತದೆ.
ಹೀಗೆಲ್ಲಾ ಇರುವಾಗ ಈ ಪೆನ್ನುಗಳದ್ದೇನು ಮಹಾ...? ಇವುಗಳನ್ನು ಏನಾದರೂ ಕರಕುಶಲ ವಸ್ತುಗಳನ್ನಾಗಿ ಬದಲಾಯಿಸಬೇಕೆ೦ದಿದ್ದೇನೆ. ಒಳ್ಳೊಳ್ಳೆ ಐಡಿಯಾಗಳಿದ್ದರೆ ಕೊಡಿ..ಇಲ್ಲಾ ಸ್ವಲ್ಪ ದಿನ ನೋಡುತ್ತೇನೆ. ಒಗೆಯಲು ಮನಸ್ಸು ಬ೦ದ ತಕ್ಷಣ ಒಗ್ದು ಬಿಸಾಕುತ್ತೇನೆ. ಹೇಗಿದ್ದರೂ ಕಾಲ ಬದಲಾಗಿದೆ...!!
ಪ್ರತಿ ಕಾಲದಲ್ಲೂ ಜನರು 'ಕಾಲ ಬದಲಾಗಿದೆ!ನಮ್ಮ ಕಾಲದಲ್ಲಿ ಹೀಗಿರಲಿಲ್ಲ!!'ಎನ್ನುತ್ತಾರೆ.ಬದಲಾಗುವುದೇ ಕಾಲದ ಲಕ್ಷಣವಲ್ಲವೇ?!ಚೆಂದದ ಲೇಖನ.ನನ್ನ ಬ್ಲಾಗ್ ಲೇಖನ"ಗ್ಯಾಸ್ಟ್ರಿಕ್ ಪ್ರಾಬ್ಲಂ",ಇಂದಿನ'ಅವಧಿ'ಯಲ್ಲಿ ಬಂದಿದೆ.ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.
ReplyDeleteಬದಲಾದ ಕಾಲಕ್ಕೆ ಹೊ೦ದಿಕೊಳ್ಳುವುದು ಅನಿವಾರ್ಯ... ಅವಶ್ಯಕ..
Deleteತಮ್ಮ ಅಮೂಲ್ಯ ಪ್ರತಿಕ್ರಿಯೆಗೆ ವ೦ದನೆಗಳು.
ವಿಜಯ... ನೀವು ಮನೆಯಲ್ಲೇ ಹೀಗೆ ನಾನು ಆಫೀಸಿನಲ್ಲೂ ಹೀಗೆ ಎಲ್ಲಾ ಜೋಡಿಸಿ ಇಟ್ಟಿದ್ದೀನಿ ನನ್ನ ನೋಡಿ ನಗ್ತಾರೆ...ರಿಫೀಲ್ ತರಿಸೋನಾ ಅಂದ್ರೆ ನೀವು ಹೇಳಿದ ಹಾಗೆ ಎರಡಕ್ಕೂ ಒಂದೇ ಬೆಲೆ. ಎಷ್ಟೋ ಸರಿ ಪೆನ್ನುಗಳು ರಾಶಿ ರಾಶಿ ತರಿಸಿ ಇಟ್ಟಿರ್ತಾರೆ ತುಂಬಾ ದಿನಗಳು ಆದ್ರೆ ಅವನ್ನ ಉಪಯೋಗಿಸೋದೇ ಇಲ್ಲ ನನಗೆ ಅಯ್ಯೋ ಕರ್ಮವೇ ಏನು ಜನ ಇವರು ಅಂದುಕೋತೀನಿ... ಕೊನೆಗೆ ಎಷ್ಟೋ ಸರಿ ನಮ್ಮ ಟೀ ಬಾಯ್ ಗೆ ಕೊಟ್ಟು ನಿಮ್ಮ ಮಕ್ಕಳಿಗೆ ಕೊಡು ಅಂತ ಕೊಟ್ಟಿದ್ದೀನಿ...
ReplyDeleteಕಾಲಾ ಬದಲಾದಂತೆ ನಾವು ಬದಲಾಗೋದು ಅಷ್ಟೇ...
ಹೌದು ಸುಗುಣ..
Deleteಈಗೀಗ ಕೊಡುತ್ತೀವೆ೦ದರೆ ತಗೊಳ್ಳಲಿಕ್ಕೂ ಜನ ಸಿಗೋಲ್ಲ...:))ಅಷ್ಟು ಬದಲಾಗಿದೆ...ಕಾಲ.
ಥ್ಯಾ೦ಕ್ಯೂ..
ಹಹಹ ವಿಜಯಶ್ರೀ ಎಲ್ಲರ ಮನೆಯ ದೋಸೆಯೂ ತೂತೇ...!!! ನಾವು ನಮ್ಮ ದೋಸೆ ತೋರ್ಸಿದ್ರೆ ನೀವೂ ನಕ್ಕುಬಿಡ್ತೀರಿ.. ನಿಜ ನಿಮ್ಮ ಮಾತು ನಮ್ಮ ಕಾಲಕ್ಕೂ ಈಗಿನ ಕಾಲಕ್ಕೂ ಅಂತರ ತೋರಿಸೋಕೆ ಇದು ಒಂದು ಚಿಕ್ಕ ಉದಾಹರಣೆ ಅಷ್ಟೇ... ನನ್ನಲ್ಲಿ ಸುಮಾರು ೭ ನೇ ತರಗತಿ ವರೆಗೂ ಚಪ್ಪಲಿ (ಹವಾಯಿ) ಯೇ ಇರಲಿಲ್ಲ ದಿನ ನಿತ್ಯ ಹಾಕಲು. ಊರಿಗೆ ರಜಕ್ಕೆ ಹೋಗಲು ಚಪ್ಪಲಿ ಬರ್ತಿತ್ತು ಏಲರಲ್ಲಿ. ನನ್ನ ಕಡೆಯ ತಮ್ಮನಿಗೆ (ನನಗೂ ಅವನಿಗೂ ೧೫ ವರ್ಷದ ಅಂತರ) ಒಂದನೇ ತರಗತಿಯಿಂದಲೇ (ಆಗ ಕೆಜಿಗಳು ಇರಲಿಲ್ಲ ಹಹಹಹ) ಚಪ್ಪಲಿ, ಶೂ ಎಲ್ಲಾ. ನನ್ನ ಮಗಳು ಕೆ.ಜಿ ಯಲ್ಲೇ ನಾಲ್ಕು ಕೆಜಿ ಚಪ್ಪಲಿ/ಶೂ ಬಳಸಿ ಬಿಸಾಕಿದ್ದಾಳೆ... ಈಗ ಅವಳು ೭ ನೇ ತರಗತಿ ದಿನನಿತ್ಯದ ಎರಡು ಜೋಡಿ ಶೂ ಜೊತೆಗೆ ಎರಡು ಜೋಡಿ ಸ್ಯಾಂಡಲ್ಲು (ಗಂಧ ಅಲ್ಲ...ಹಹಹಹ್) ..ನೋಡ್ತಾ ಹೋಗಿ ನಿಮ್ಮ ಮೊಮ್ಮಗಳ ಕಾಲಕ್ಕೆ ಏನ್ಬರುತ್ತೋ...ಹೇಗಾಗುತ್ತೋ,,..???
ReplyDeleteಆಜಾದ್ ಸಾರ್..
Deleteನಿಜ ನಿಮ್ಮ ಮಾತು.. ನಾವೂ ಕೂಡಾ ಏಳನೆಯ ತರಗತಿ ವರೆಗೆ ಚಪ್ಪಲಿ ಹಾಕಿಕೊ೦ಡು ಹೋಗುತ್ತಿರಲಿಲ್ಲ. ಮೊದಲ ದಿನ ಹಾಕಿಕೊ೦ಡು ಹೋಗಿ ಅಲ್ಲೆ ಮರೆತು [ ಈಗಿನ೦ತೆ ಶೂ ಹಾಕಿಕೊ೦ಡೆ ಪಾಠ ಕೇಳುವ ಹಾಗಿರಲಿಲ್ಲ ಆಗ.ಚಪ್ಪಲಿಯನ್ನು ಹೊರಗಡೆ ಬಿಚ್ಚಿಡಬೇಕಿತ್ತು ]ಮರುದಿನ ವಾಪಾಸು ಹಾಕಿಕೊ೦ಡು ಬ೦ದು ಮನೆಯಲ್ಲಿಟ್ಟರೆ ಅಲ್ಲಿ೦ದ ಮು೦ದೆ ಇಲಿ ಅಥವಾ ನಾಯಿಯ ಬಾಯಿಗೆ ಅರ್ಪಿಸಿ ಅದಕ್ಕೊ೦ದು ಸಧ್ಗತಿ ಕಾಣಿಸಿದರೆ ಜವಾಬ್ಧಾರಿ ಕಳೆಯುತ್ತಿತ್ತು. ಮತ್ತು ಚಪ್ಪಲಿ ನಮ್ಮ ಸ್ಪೀಡಿಗೆ ತೊ೦ದರೆ ಕೊಡುತ್ತಿತ್ತು ಅನ್ನುವುದೂ ಕಾರಣ.
ಆತ್ಮೀಯ ಪ್ರತಿಕ್ರಿಯೆಗೆ ಆಭಾರಿ..
ಪೆನ್ಸಿಲ್ಲನ್ನು ಹಳೆ ಪೆನ್ನಿನ ಕೆಳಗಿನ ಭಾಗಕ್ಕೆ ಸಿಕ್ಕಿಸಿ , ಅರ್ಧ ಪೆನ್ನು ಅರ್ಧ ಪೆನ್ಸಿಲೆಂಬ ನರಸಿಂಹಾತಾರದಲ್ಲೇ ಬಳಸುತ್ತಿದ್ದುದು ನಾವುಗಳು.. :೦
ReplyDeleteಹ್ಹ..ಹ್ಹ.. ಹೌದು ಅನಿತಾ.. ಪೆನ್ನಿನ ಕ್ಯಾಪು ಪೆನ್ಸಿಲ್ಲಿಗೆ ಅಥವಾ ಬಳಪಕ್ಕೆ ಸಿಕ್ಕಿಸಿ ಬಳಸುವವರದ್ದು ಸ್ವಲ್ಪ ಹೆಗ್ಗಳಿಕೆಯಿತ್ತು ಆ ಕಾಲದಲ್ಲಿ... ಅ೦ದಿನ ಹೊಸ ಫ್ಯಾಶನ್ನುಅ೦ದರೂ ತಪ್ಪಿಲ್ಲ...:)))
Deleteಥ್ಯಾ೦ಕ್ಯೂ...:)
ಚೆಂದದ ಬರಹ.ಹೌದು,ಎಲ್ಲವೂ ಬದಲಾಗುತ್ತಿದೆ:ಪೆನ್ನು,ಹಾಳೆ ಮತ್ತು ಹಾಳುಮೂಳು..
ReplyDeleteಈಗಿನ ನರ್ಸರಿ ಮಕ್ಕಳೂ ಸ್ಕೆಚ್ ಪೆನ್ನಿನಲ್ಲೇ ಬರೀತಾರೆ.ನಾವು ನೋಡಿದ್ರೆ,ಮೂರರ ಕ್ಲಾಸಿನವರೆಗೂ
ಸ್ಲೇಟು-ಬಳಪ.ಫಿರ್ ಭೀ ಹಂಗಾಮ ಕ್ಯೋ ಬರಪ?
ಆ ಇಂಕುಪೆನ್ನಿನ ನಿಬ್ಬು,ನಾಲಿಗೆ ಮತ್ತು ಅದನ್ನೆಲ್ಲ ಚಿಕ್ಕ ಬಟ್ಟಲಿನಲ್ಲಿ ಗುಡ್ಡೆ ಹಾಕಿ ತಿಂಗಳಿಗೊಂದು ಸಲ ತಿಕ್ಕಿ,ತೊಳೆದು ಸ್ನಾನ ಮಾಡಿಸುತ್ತಿದ್ದುದು..
ಕಹಾ ಗಯೇ ವೋ ದಿನ್...
-RJ
ರಾಘವೇಂದ್ರ ಜೋಶಿ ಅವರೆ..
Deleteನನ್ನ ಬ್ಲಾಗಿಗೆ ಸ್ವಾಗತ.
ಹೌದು.. ಎಲ್ಲವೂ ಬದಲಾಗುತ್ತಿದೆ:ಪೆನ್ನು,ಹಾಳೆ ಮತ್ತು ಹಾಳುಮೂಳು.. ನನ್ನ ಲೇಖನ ದ ಸಾರಾ೦ಶ ನಿಮ್ಮ ಒ೦ದು ವಾಕ್ಯದಲ್ಲಿ ಪ್ರಕಟವಾಗಿದೆ.
ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು.
ಚೆನ್ನಾಗಿದೆ ಮೇಡಂ.
ReplyDeleteನಾನು ಮೊನ್ನೆ ರೆನಾಲ್ದ್ಸ್ ಪೆನ್ನಿನ ರಿಫಿಲ್ ಹುಡುಕುತ್ತಿದ್ದೆ
ನನ್ನ ಮಾವ ಕೆಲವು ಅಂಗಡಿ ಸುತ್ತಿ, ನಿಮಗೆ ಸಿಕ್ಕ ಉತ್ತರ ಪಡೆದು
ಬಂದರು. ನಮ್ಮತ್ತೆ ಆ ಪೆನ್ ಎಸಿ ಅಂದರು :)
ಬಹುಶ ನಮ್ಮ ಹಿಂದಿನ ಮತ್ತು ಮುಂದಿನ ಪೀಳಿಗೆ ಯೋಚಿಸೋದು ಒಂದೆ ರೀತಿ ಮೇಡಂ.
ನಾವಷ್ಟೆ, ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಥರ ಏನೋ?
'ಬಿಸಾಕೊ'ದನ್ನ ಅಭ್ಯಾಸ ಮಾಡಿಕೊಳ್ಳೋಣ.
ಸ್ವರ್ಣಾ
ಹೌದು.. ನಾವು ಬದಲಾಗಲೇ ಬೇಕು.. ಅದಕ್ಕಾಗಿ ಬಿಸಾಕೊದನ್ನು ಅಭ್ಯಾಸ ಮಾಡಿಕೊಳ್ಳಲೇ ಬೇಕು.. ವಸ್ತುಗಳನ್ನು, ವಿಚಾರಗಳನ್ನು, ಭಾವನೆಗಳನ್ನು...
Deleteಥ್ಯಾ೦ಕ್ಯೂ ಸ್ವರ್ಣ..
ಕಾಲ ಬದಲಾಗಿದೆ. ಬದಲಾಗುತ್ತಲೇ ಇರುತ್ತದೆ. ನಾವು ಬದಲಾಗಬೇಕಷ್ಟೇ...........
ReplyDeleteಬರಹದ ಶೈಲಿ ಇಷ್ಟವಾಯಿತು ವಿಜಯಶ್ರೀ .....
ಉಮಕ್ಕ..
Deleteನಿಜ.. ಬರಹ ಮೆಚ್ಚಿದ್ದಕ್ಕೆ ವ೦ದನೆಗಳು.
ನಿಜ..
ReplyDeleteಇದಕ್ಕೂ ಮುಂದಿನದು ಕಂಪ್ಯೂಟರ್ ಕಾಲ ....
ಪೆನ್ನೆಸೆಯುವ ಪ್ರಮೇಯವೇ ಬರಲಿಕ್ಕಿಲ್ಲ... ತಲೆ ಕೆಡಿಸ್ಕೋಬೇಡಿ
ಇನ್ನೇನಿದ್ರೂ ಇವುಗಳ ಕಾಲ .. ಇವನ್ನು ಎಸೆವ ಬಗೆ ಯೆಂತು? (electronic wastes)!!
ಕಾಟ್ರಿಜ್, ರೋಲರ್, ಪ್ರಿಂಟರ್, ಸಿ ಪಿ ಯು, ಮೌಸ್, ಕೀ ಬೋರ್ಡ್, ಪೆನ್ ಡ್ರೈವ್, ಎಟ್ಸೆಟ್ರಾ
ನೋಡ್ತಾ ಇರಿ .. ಕಾಯ್ತಾ ಇರಿ
ಭಡ್ತಿ..
Deleteಇದು ನೂರಕ್ಕೆ ನೂರು ನಿಜ.. ಇದು 'e' ಯುಗ...
ಕಾಯುತ್ತಿದ್ದ೦ತೆ ಬ೦ದೇ ಬಿಡುತ್ತದೆ ಇನ್ನೇನು..?
ಥ್ಯಾ೦ಕ್ಸ್..
ಚೆಂದಿದ್ದು :-)
ReplyDeleteನಾವೆಲ್ಲಾ ಸಣ್ಣಕಿದ್ದಾಗ ಸಾಗರದ್ತ್ರ ಹಳ್ಳೀಲಿ ಓದುತ್ತಿದ್ದಾಗ ೫೦ ಪೈಸೆ ಲೆಡ್ಡಿನ ಪೆನ್ನನ್ನು ಬಳಸುತ್ತಿದ್ದೆವು. ಆಮೇಲೆ ೫೦ ಪೈಸೆ ಲೆಡ್ಡು ಸಿಗುವುದು ನಿಂತು ೧ ರೂಪಾಯಿದು ಬಳಸೋದು ಪ್ರಾರಂಭ ಆಯ್ತು. ಅದೆಲ್ಲಾ costly ಅಂತ ಇಂಕಿನ ಪೆನ್ನು ಬಳಸಿದ್ದೂ ಉಂಟು.
ಆಮೇಲೆ ಶಿವಮೊಗ್ಗಕ್ಕೆ ಇಂಜಿನಿಯರಿಂಗ್ ಓದಲು ಬಂದ ಮೇಲೆ ೧ ರೂ ದೂ ಸಿಗದೇ ರೆನಾಲ್ಡ್ ಪೆನ್ನು ಮತ್ತದಕ್ಕೆ ರಿಫೀಲ್ ತುಂಬ್ಸೋ ಗತಿಯಾಯ್ತು. ಇಂಕಿನ ಪೆನ್ನು ಓಲ್ದ್ Fashion ಆಗಿ ಇದ್ದಿದ್ರಲ್ಲಿ ರೆನಾಲ್ಡೇ ವಾಸಿ ಅನಿಸಿತ್ತು. ಈಗ ನೋಡಿ , ನಿಮ್ಮ ಮಗಳ ಕಾಲದಲ್ಲಿ ಅದೂ ಇಲ್ಲ.. use and throw ಪಾಲಿಸಿ..
ವಿಷ್ಣುವಿನ ಬೋರ್ವೆಲ್ ಅವತಾರದ concept . ಹೆ ಹೆ :-)
ಪ್ರಶಸ್ತಿ..
Deleteಹ್ಹ..ಹ್ಹ..ಜೆಲ್ ಪೆನ್ನು ಬ೦ತು..
ಇ೦ಕ್ ಪೆನ್ನು ಓಲ್ಡ್ ಫ್ಯಾಶನ್ ಆಗಿಹೋಯ್ತು.. ಡು೦ಡು೦...
ಥ್ಯಾ೦ಕ್ಸ್...
ಕಾಲಾಯ ತಸ್ಮೈ ನಮಃ
ReplyDeleteಹ್ಣೂ..
Deleteಥ್ಯಾ೦ಕ್ಸ್..
"ಹಳ್ಳಿಯ ವಾತಾವರಣವೆಲ್ಲಾ ನಗರದ ವಾತಾವರಣವನ್ನು ಅನುಕರಿಸುತ್ತಿವೆ.ಸುತ್ತ ಮರಗಿಡಗಳು ನಾಲ್ಕು ಹೆಚ್ಚಿವೆ ಅನ್ನುವುದು ಬಿಟ್ಟರೆ ಮನೋಭೂಮಿಕೆಯಲ್ಲಿ ಒ೦ದೇ ತರದ ವರ್ತನೆ. "
ReplyDeleteಈ ಮಾತು ನೂರಕ್ಕೆ ನೂರರಷ್ಟು ನಿಜ.
ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು..ಸುಬ್ರಹ್ಮಣ್ಯ..
DeleteNostalgia :)
ReplyDeleteBadalavaneye Jagada Niyama
:)
Deleteಧನ್ಯವಾದ.
nimma lekhana odi nanna shala dinagalu nenapadavu. aga koduttidda hattu rupariyanna campas box nalli kelage ittu eshtu jopana maduttidda navu indu just one thousand ashte ennuva kalakke badalagi bittiddeve.entaha viparsyasa. ommomme nanu yochisuttene. sundara baraha.
ReplyDeleteಹೌದು ವಾಣಿಶ್ರೀ..
Deleteನಾವು ಹೊಸಾ ಐದು ರುಪಾಯಿಯ ಒ೦ದು ನೋಟನ್ನು ಬಸ್ ಪಾಸಿನ ಕವರಲ್ಲಿಟ್ಟಿದ್ದು ಅದು ಸುಮಾರು ಕಾಲೇಜು ಮುಗಿಯುವವರೆಗೆ ಹೊಸದಾಗಿಯೇ ಇತ್ತು. ನೆನೆಸಿಕೊ೦ಡರೆ, ಹೇಳಿದರೆ ನಗೆಪಾಟಲಾಗಿಬಿಡುತ್ತೇನೆ...
ಥ್ಯಾ೦ಕ್ಸ್..
ತುಂಬಾ ಚೆನ್ನಾಗಿ ಬರೆದಿದ್ದೀರಿ. ಬಾಲ್ಯವನ್ನು ಮತ್ತೆ ಮತ್ತೆ ನೆನಪಾಯ್ತು. ಈ ಲೇಖನವನ್ನು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಮರುಪ್ರಕಟಿಸಬಹುದೆ? ನಿಮ್ಮ ಈಮೇಲ್ ವಿಳಾಸ ಸಿಗಲಿಲ್ಲ. ಹಾಗಾಗಿ, ಇಲ್ಲಿ ಅನುಮತಿ ಕೇಳುತ್ತಿದ್ದೇನೆ.
ReplyDeleteಚಾಮರಾಜ್ ಸವಡಿಯವರೆ
Deleteನನ್ನ ಬ್ಲಾಗಿಗೆ ಸ್ವಾಗತ. ಮತ್ತು ಮೆಚ್ಚಿದ್ದಕ್ಕೆ ಧನ್ಯವಾದಗಳು.. ಧಾರಾಳವಾಗಿ ಪ್ರಕಟಿಸಿ. ನನ್ನ ಮೈಲ್ ಐಡಿ vijnatraj@gmail.com
ಆ ಟಿಕ್‌ಟಿಕ್ ಪೆನ್ನಿನ, ಐವತ್ತು ಪೈಸೆ ಲೆಡ್ಡಿನ, ಆ ಕಡೆ ತಿರುಗಿಸಿದ್ರೆ ನೀಲಿ ಇಂಕು, ಈ ಕಡೆ ತಿರುಗಿಸಿದ್ರೆ ಕೆಂಪಿಂಕು ಬರ್ತಿದ್ದ ಕಾಲ ಎಷ್ಟು ಚೆನ್ನಿತ್ತು.. ಪೆನ್ನು ಕಳೆದುಹೋದ್ರೆ ಅಳ್ತಿದ್ದ ದಿನಗಳು ಹೆಂಗಿತ್ತು.. 'ನಿಂದು ರೆನಾಲ್ಡ್ಸು ನಂದು ರೊಟೋಮ್ಯಾಕು' ಅಂತ ಗೆಳೆಯರಿಗೆ ತೋರಿಸಿ ಬೀಗ್ತಿದ್ದಾಗಿನ ಖುಶಿ ಎಷ್ಟಿತ್ತು..
ReplyDeleteಥ್ಯಾಂಕ್ಯು, ನೆನಪಿಸಿದ್ದಕ್ಕೆ ಏನೆಲ್ಲ. :-)
ಸುಶ್ರುತ..
Deleteನನ್ನ ಬ್ಲಾಗಿಗೆ ಸ್ವಾಗತ..
ಲೆಡ್ ಕಡ್ಡಿಯ ಸ್ಪ್ರಿ೦ಗ್ ಹಾಳಾಗಿ ಬೇರೆ ಪೆನ್ನಿನ ಸ್ಪ್ರಿ೦ಗ್ ಹಾಕೋದು.. ಲೆಡ್ ತ೦ದಿದ್ದು ಪೆನ್ನಿಗಿ೦ತಲೂ ಉದ್ದವಾಗಿ ತುದಿ ಕತ್ತರಿಸುವುದು, ಅದು ಹೆಚ್ಚು ಕಡಿಮೆ ಆಗಿ ಬರೆಯುವಾಗ ಪುಕ ಪುಕ ಗುಡುವುದೂ ಎಲ್ಲಾ ಚನ್ನಾಗಿತ್ತು ಆಗ ಕಡಿಮೆ ಅವೇಲೆಬಿಲಿಟಿ ಇರುವ ಕಾಲದಲ್ಲಿ.
ಥ್ಯಾ೦ಕ್ಯೂ
ಪ್ರತಿ ಅಕ್ಷರಕ್ಕೂ ನಮ್ಮ ಬಾಲ್ಯದ ಲಿಂಕು.... ತ್ಯಾಂಕ್ಯು.......
ReplyDeleteನನ್ನ ಬ್ಲಾಗಿಗೆ ಸ್ವಾಗತ..
Deleteಥ್ಯಾ೦ಕ್ಯೂ
ವಿಜಯಶ್ರೀ,
ReplyDeleteಕಾಲಪ್ರವಾಹದಲ್ಲಿ ನಾವು ಎಲ್ಲೋ ಉಳಿದು ಬಿಟ್ಟೆವೆ! ಲೇಖನ ಹೃದಯಕ್ಕೆ ಹತ್ತಿರವಾಗಿದೆ.
ಆತ್ಮೀಯ ಪ್ರತಿಕ್ರಿಯೆಗೆ ಆಭಾರಿ..kaaka
Deleteನಮ್ಮ ಮನೆಯಲ್ಲೂ ಜೆಲ್ ಪೆನ್ನಿನದು ಅದೇ ಕಥೆ.. :)
ReplyDeleteಲೇಖನ ಓದಿ ಬಾಲ್ಯವೊಮ್ಮೆ ಮರುಕಳಿಸಿದ೦ತಾಯ್ತು.
ಆಗ ನಾವು ಶಾಲೆಯ ನೋಟ್ ಬುಕ್ ನಲ್ಲಿ ಬರೆಯಲು ಮಾತ್ರಾ ಲೆಡ್ ಪೆನ್ನನ್ನು ಉಪಯೋಗಿಸುವುದಾಗಿತ್ತು..ರಿಫಿಲ್ ನ ಇ೦ಕ್ ಬೇಗನೆ ಖಾಲಿಯಾಗಬಾರದೆ೦ದು
ರಫ್ ಬುಕ್ ನಲ್ಲಿ ಬರೆಯುವಾಗ ಪೆನ್ಸಿಲ್..ಪೆನ್ಸಿಲ್ನ ಬೆಲೆ ರಿಫಿಲ್ ಗಿ೦ತಾ ಕಡಿಮೆ ಇತ್ತು ಅ೦ತ.. ದೊಡ್ಡವರು ಹೇಳದಿದ್ದರೂ ಇದು ನಾವೇ ರೂಢಿಸಿಕೊ೦ಡಿದ್ದಾಗಿತ್ತು ಅಲ್ಲವೆ?
ಪ್ರತೀ ಶುಕ್ರವಾರ ಶಾಲೆಯಲ್ಲಿ ನಡೆಯುವ ಶಾರದಾಪೂಜೆಯಲ್ಲಿ ಊದುಬತ್ತಿ ಕರ್ಪುರದ ಸಲುವಾಗಿ ೧೦ ಪೈಸೆ ಕೊಡುವುದು ರೂಢಿಯಿತ್ತಲ್ಲವೇ..? ಯಾವಾಗಲಾದರೂ ಒಮ್ಮೆ ಅಪ್ಪಯ್ಯ ೨೦ ಪೈಸೆ ನಾಣ್ಯ ಕೊಟ್ಟುಬಿಡುತ್ತಿದ್ದರು.೧೦ ಪೈಸೆ ಶಾರದಾಪೂಜೆಯ ಸಲುವಾಗಿ ಕೊಡ್ಬೇಕು, ಉಳಿದ ಹತ್ತು ಪೈಸೆಯಲ್ಲಿ ಶಾಲೆಯ ಪಕ್ಕದಲ್ಲಿದ್ದ ಅ೦ಗಡಿಯಿ೦ದ ಒ೦ದು ಬೋಟಿ(ಬೋಬಿ ಅ೦ತಲೂ ಕರೆಯುತ್ತಾರೆ.ಈಗ ಅದಕ್ಕೆ ಬೇರೆನೆನ್ನುತ್ತಾರೋ ಗೊತ್ತಿಲ್ಲ) ತೆಗೆದುಕೊ೦ಡು ತಿನ್ನಲೇ ಎ೦ದು ಮೆಲುದನಿಯಲ್ಲಿ ಕೇಳಿ,ಅಪ್ಪಯ್ಯ ಹು೦ ಅ೦ದಾಗಿನ ಖುಶಿ,ಶಾಲೆ ಮುಗಿದ ನ೦ತರ ನನ್ನ ಮೆಚ್ಚಿನ ಬೋಟಿ ಖರೀದಿಸಿ ಪಕ್ಕದಲ್ಲಿದ್ದ ಗೆಳತಿಗೆ ಅರ್ಧ ಮುರಿದುಕೊಟ್ಟು ತಿನ್ನುವಾಗಿನ ರುಚಿ, ಖುಶಿ ಹೇಳಿದಷ್ಟೂ ಕಡಿಮೆಯೆ..:)) ಚಿಕ್ಕಚಿಕ್ಕ ವಿಷಯಕ್ಕೂ ಎಷ್ಟು ಖುಶಿಯಾಗುತ್ತಿತ್ತು ಅಲ್ಲವೇ?
ಈಗ 10ಪೈಸೆ, 20ಪೈಸೆ,ನಾಲ್ಕಾಣೆಗಳೆಲ್ಲ ಚಾಲ್ತಿಯಲ್ಲಿಲ್ಲದೇ, ಕಣ್ಮರೆಯಾಗಿಬಿಟ್ಟಿವೆ. ಹು೦.. ಕಾಲ ಬದಲಾಗಿದೆ.. ಬದಲಾಗುತ್ತಲೂ ಇದೆ.
ನಮ್ಮ ಕಾಲದಲ್ಲಿ ಐದು ಪೈಸೆಯ ಕಡ್ಡೀ ಪೆಪ್ಪೆರಮೆ೦ಟ್ ಹೆಚ್ಚಿನ ಚಾಲ್ತಿಯಲ್ಲಿತ್ತು..:) ಇದು ಮನೆ ಮನೆ ಕಥೆ.ಬಿಸಾಕುವಾಗ ವ್ಯಥೆ..
Deleteಥ್ಯಾ೦ಕ್ಯೂ..:)
ತುಂಬಾ ಸತ್ಯಗಳಿಂದ ಕೂಡಿದ ಚಂದದ ಬರಹ. ಕಾಲ ಬದಲಾಗಿದೆ ಮತ್ತು ಕಾಲದಲ್ಲಿ ಬಿಸಾಕಲಾಗದ ಭಾವಗಳು! ಬಿಸಾಕಲೇಬೇಕಾದ ಅನಿವಾರ್ಯತೆಗಳು! ಪೆನ್ನು ಬಿಸಾಕಲಾಗದ ಮನಸ್ಥಿತಿಯ ನಾವು ಕಂಪ್ಯೂಟರ್ಗಳನ್ನೇ ಬಿಸಾಕಬೇಕಾದ ದಿನಕ್ಕೆ ಬಂದುಬಿಟ್ಟಿದ್ದೇವೆ! ಎಲ್ಲಿ ತುಂಬಬೇಕೋ ಈ ನಿರುಪಯುಕ್ತ ಸಾಮಾನುಗಳ!ಇದು ಎಲ್ಲರ ಮನೆ ಮತ್ತು ಮನಸಿನ ಬರಹ. ದನಿಯಾಗಿ ನೆನಪಿಸಿದ ನಿಮ್ಮ ಬರಹ ಖುಶಿಕೊಟ್ಟಿತು. ನನ್ನ ಬ್ಲಾಗ್ "ಮಾನಸಸರೋವರ" ಕ್ಕೆ ಭೇಟಿಕೊಡಿ.
ReplyDeleteಮೆಚ್ಚಿದ್ದಕ್ಕೆ ಧನ್ಯವಾದಗಳು
ReplyDeleteಸಂಯುಕ್ತ ಕರ್ನಾಟಕದ ೨೪-೬-೨೦೧೨ರ ದಿನಪತ್ರಿಕೆಯ ೧೩ನೇ ಪುಟದಲ್ಲಿ ನಿಮ್ಮ ಈ ಬರಹ ಪುನರ್‌ಮುದ್ರಣಗೊಂಡಿದೆ ನೋಡಿ. http://epaper.samyukthakarnataka.com/43800/Samyuktha-Karnataka/June-24-2012-Ba#page/13/2
ReplyDeleteಅಭಿನಂದನೆಗಳು. ಚೆಂದದ ಬರಹ.
- ಚಾಮರಾಜ ಸವಡಿ
THANKS...:)
Delete