ನಮ್ಮ ಮನೆಗೆ ಯಾರಾದರೂ ನೆಂಟರು ಬರುತ್ತಾರೆಂದು ಗೊತ್ತಾದ ಹಿಂದಿನ ದಿನ ನಾವು ಮನೆಗೆ ಬಣ್ಣ ಹೊಡೆಸುವುದರ ಬಗ್ಗೆ ಚರ್ಚಿಸುತ್ತೇವೆ. ಮನೆಗೆ ಕಾಲಿಟ್ಟ ಪ್ರತಿ ನೆಂಟರೂ ''ಓಹ್ಹೋ .. ಗೋಡೆಯ ತುಂಬಾ ಬರೆದು ಮುಗಿಸಿದ್ದಾನೆ.. ಮಗರಾಯ,'' ಎನ್ನುತ್ತಾ ದೇಶಾವರೀ ನಗೆ ಬೀರುತ್ತಾರೆ. ನೀವೇನಾದರೂ ಬಂದು ಸೋಫಾದ ಮೇಲೆ ಕೂತು ಎದುರಿನ ಗೋಡೆಯನ್ನು ಸಹಜವಾಗಿ ದಿಟ್ಟಿಸಿದಿರೋ ನೀವು ಮೂರ್ಚೆಹೊಗುತ್ತೀರಿ. ಎದುರಿಗೆ ಅಷ್ಟೂ ಹಲ್ಲುಗಳನ್ನೂ ಕಿರಿದು ಹೆದರಿಸುತ್ತಿರುವ ದೊಡ್ಡ ಬಾಯಿಯ ರಾಕ್ಷಸನಿದ್ದಾನೆ. ರಾಕ್ಷಸನ ಚಿತ್ರವಿದೆ! ಶಿಶಿರನ ಕರ ನೈಪುಣ್ಯ!
ಸುಮಾರು ಅವನಿಗೆ ಎರಡು ವರ್ಷಗಳಿದ್ದಾಗ ನಾವೂ ಬಾಡಿಗೆ ಮನೆ ಬಿಟ್ಟು ಹೊಸದಾಗಿ ನಮ್ಮದೇ ಮನೆ ಕಟ್ಟಿಸಿಕೊಂಡು ಚಂದದ ಬಣ್ಣ ಹುಡುಕಿ ಹೊಡೆಸಿಕೊಂಡು ಗೃಹ ಪ್ರವೇಶಿಸಿದೆವು.ಹೊಸಾ ಮನೆ, ಹೊಸ ಬಣ್ಣ, ನಮ್ಮ ಟೇಸ್ಟಿಗೆ ನಾವೇ ಮೆಚ್ಚಿಕೊಳ್ಳುತ್ತಾ ಇರುವ ಒಂದು ದಿನ ನಮ್ಮವರು ಸ್ನಾನ ಮುಗಿಸಿ ಹೊರ ಬಂದವರೇ ಅತ್ಯಾಶ್ಚರ್ಯಕರವಾದ ಧ್ವನಿಯಲ್ಲಿ ನನ್ನನ್ನು ಕರೆದರು, 'ನೋಡಿಲ್ಲಿ ಎಷ್ಟ್ ಚನಾಗಿ ಬರೆದಿದ್ದಾನೆ,' ಎನ್ನುತ್ತಾ! ನಾನಾದರೂ ಕೈಯಲ್ಲಿ ದೋಸೆ ಸೌಟನ್ನು ಹಿಡಿದುಕೊಂಡು ಬೆಡ್ ರೂಮಿಗೆ ಓಡಿದೆ. ನಮ್ಮವರು ಮುಖದಲ್ಲಿ ಸಾವಿರ ಕ್ಯಾಂಡಲ್ ಲೈಟ್ ಬೀರುತ್ತಾ, ಹಿಗ್ಗುತ್ತಾ ನಿಂತಿದ್ದು ಕಾಣಿಸಿ ಅವರ ದೃಷ್ಟಿಯನ್ನು ಹಿಂಬಾಲಿಸಿದರೆ ಅಲ್ಲಿ ಕಾಣಿಸಿತು. ABCD ಎನ್ನುವ ಹೊಳೆಯುವ ಅಕ್ಷರಗಳು. ಮಗ ಇಂಜಿನಿಯರೋ, ಡಾಕ್ಟರೋ ಆದನೇನೋ ಎನ್ನುವ ಸಂಭ್ರಮದಲ್ಲಿ ಬರೆದ ಅಕ್ಷರಗಳನ್ನು ನೋಡುತ್ತಿದ್ದಂತೆ ಒಮ್ಮೆಲೇ ಉಸಿರು ಅರ್ಧವಾಯಿತು! ಬೆಡ್ ರೂಮಿನ ಗೋಡೆಯ ಮೇಲೆ ಕ್ರೆಯಾನ್ಸ್ ನಿಂದ ಮುದ್ದಾದ ಅಕ್ಷರಗಳು ನಳ ನಳಿಸುತ್ತಿದ್ದವು! ''ಪುಟ್ಟಾ ಗೋಡೆಯ ಮೇಲೆ ಬರೀ ಬಾರದು,'' ಎನ್ನುತ್ತಾ ನಾನಾದರೂ ಗೋಡೆ ಹಾಳಾಯಿತೆಂದು ತೀವ್ರವಾದ ಸಂತಾಪದಿಂದ ಕೈಯಲ್ಲಿರುವ ಕ್ರೆಯಾನ್ಸ್ ಕಸಿದು ಬಚ್ಚಿಟ್ಟೆ. ಮಗಳಿಗೆ ''ಕಂಡ ಕಂಡಲ್ಲಿ ಪೆನ್ಸಿಲ್ಲು, ಕ್ರೆಯಾನ್ಸು ಒಗೆದರೆ ನೋಡು,'' ಎನ್ನುತ್ತಾ ಸುಮ್ಮನೆ ಅವಳಿಗೆ ಜೋರು ಮಾಡಿದೆ.ನನ್ನವರು ಮಾತ್ರಾ ಗೋಡೆಯ ಮೇಲೆ ಬರೆದ ಅನ್ನುವುದಕ್ಕಿಂತ ಎಷ್ಟು ಚನ್ನಾಗಿ ಬರೆದಿದ್ದಾನೆ, ಅನ್ನುವ ಆನಂದಾನುಭೂತಿಯಿಂದ ಹೊರಬಂದಂತೆ ಕಾಣಿಸಲಿಲ್ಲ.ನಾನು ಇವರ ಹಳೆ ಬನಿಯನ್ನನ್ನು ನೆನೆಸಿ ಹಿಂಡಿ ಬರೆದದ್ದನ್ನು ಮೆಲ್ಲಗೆ ಒರೆಸಿ ಅಳಿಸಲು ಶುರು ಮಾಡಿದೆ.
ಅವನು ಬರೆದಂತೆಲ್ಲಾ ನನ್ನದು ಒರೆಸುವ ಕೆಲಸ. ಹೀಗೆ ಸುಮಾರು ದಿನ.
ಅವನಿಗೆ ಗೋಡೆಯ ಮೇಲೆ ಬರೆಯುವ ಆಸೆ ಅದೆಷ್ಟು ತೀವ್ರವೆಂದರೆ ಎಲ್ಲಿ ಏನಾದರೂ ಚಿಕ್ಕ ಪೆನ್ಸಿಲ್ಲೋ ಕ್ರೆಯಾನ್ಸೋ ಸಿಕ್ಕರೆ ಸಾಕು ಬಚ್ಚಿಟ್ಟುಕೊಂಡು ಬರೆಯುತ್ತಿದ್ದ. ಮೊದ ಮೊದಲು ಅಕ್ಷರಗಳು, ಸೊನ್ನೆ ಸುತ್ತುವುದು,ಗೆರೆ ಎಳೆಯುವುದು ಹೀಗೆ. ಪ್ರಿ ಕೇಜಿಗೆ ಸೇರಿಸಿದ ಮೇಲೆ ಅದು ಕಥಾರೂಪಗಳನ್ನು ಪಡೆಯಲು ಶುರುವಾಯಿತು. ಆಗವನಿಗೆ ಯಕ್ಷಗಾನವೆಂದರೆ ಸಿಕ್ಕಾಪಟ್ಟೆ ಆಸಕ್ತಿ. ಅದರ ಕಿರೀಟಗಳನ್ನು ಅಪ್ಪನಿಂದ ಪೇಪರ್ ಮೇಲೆ ಬರೆಸಿಕೊಳ್ಳುತ್ತಿದ್ದ. ತದನಂತರ ಗೋಡೆಯ ಮೇಲೆ ನಾನಾ ತರದ ಕಿರೀಟಗಳು. ಆದಿಶೇಷನ ಚಿತ್ರ, ಕೆಳಗೆ ವಸುದೇವ ಕೃಷ್ಣನನ್ನು ಬುಟ್ಟಿಯಲ್ಲಿ ಎತ್ತಿಕೊಂಡು ಹೋಗುವಂತೆ. ಜೊತೆಗೆ ಅವನ ಸಂಗಡಿಗರು ಒಂದಷ್ಟು ಚಿಕ್ಕ, ದೊಡ್ಡ ಹಾವುಗಳು.ಉದ್ದ ಹಾವು ಬರೆಯುತ್ತೀನೆಂದು ಚೇರ್ ಹತ್ತಿ ಮೇಲಿನಿಂದ ಕೆಳವರೆಗೆ ಬರೆದಿದ್ದು. ಶಾಲೆಯಲ್ಲಿ ಪಾಠ ಮಾಡಿದಂತೆಲ್ಲಾ ಅದು ನಮ್ಮ ಮನೆಯ ಗೋಡೆಯ ಮೇಲೆ. ಸೋಲಾರ್ ಸಿಸ್ಟಂ, ಅದರಲ್ಲಿ ಸೂರ್ಯ ಮತ್ತು ಚಂದ್ರ ಜೊತೆ ಜೊತೆಯಲ್ಲೇ ಇರುತ್ತಾರೆ! ಶನಿಗ್ರಹವಂತೂ ನೋಡಲು ಎರಡು ಕಣ್ಣು ಸಾಲದು. ಪರ್ಮನೆಂಟ್ ಮಾರ್ಕರ್ ಎಲ್ಲಿ ಸಿಕ್ಕಿತ್ತೋ ಏನೋ ಅದರಲ್ಲೇ ಬರೆದಿದ್ದ. ಬಿಲ್ಲು ಬಾಣ ಬತ್ತಳಿಕೆಗಳ ಚಿತ್ರವಂತೂ ಹೇರಳವಾಗಿ ಕಾಣ ಸಿಗುತ್ತವೆ. ಅಷ್ಟೊತ್ತಿಗೆ ಯಕ್ಷಗಾನದ ಖಯಾಲಿ ಕಡಿಮೆಯಾಗಿ ಕಾರ್ಟೂನುಗಳ ಮೇಲೆ ತಲೆ ಹಾಯ ತೊಡಗಿತು. ಬೆನ್ ಟೆನ್ ನ ಅಷ್ಟೂ ಕ್ಯಾರೆಕ್ಟರ್ಗಳೂ, ಸ್ಪೈಡರ್ ಮ್ಯಾನ್, ಬ್ಯಾಟ್ ಮಾನ್, ಆ ಮ್ಯಾನ್, ಈ ಮ್ಯಾನ್ ಅನ್ನುವ ಹೊತ್ತಿಗೆ ಒರೆಸಿ ಒರೆಸಿ ನಾನು ನಿಶ್ಯಕ್ತಿ ಮ್ಯಾನು !
ಅವನು ಬರೆದಂತೆಲ್ಲಾ ಹಿಂದೆ ಹಿಂದೆ ನಾನು ಖಡ್ಗವನ್ನು ಹಿರಿದು ದಕ್ಷಯಜ್ನವನ್ನು ಧ್ವಂಸ ಮಾಡುವ ವೀರಭದ್ರನಂತೆ ಇವರ ಹಳೆ ಬನಿಯನ್ ಹಿಡಿದು ಎಲ್ಲವನ್ನೂ ಒರೆಸುತ್ತಾ ವೀರಗಾಸೆ ಶುರುಮಾಡಿದೆ. ಒರೆಸುವಾಗ ನನಗೆ ತೀವ್ರವಾಗಿ ಬೇಜಾರಾಗುತ್ತಿತ್ತು. 'ಎಷ್ಟ್ ಚನ್ನಾಗ್ ಬರ್ದಿದಾನೆ. ಪೇಪರ್ ಮೇಲೆ ಬರೆಯಕ್ಕೆ ಏನ್ ಧಾಡಿ ಇದಕ್ಕೆ,' ಎನ್ನುತ್ತಾ ಬಹಳ ಸಂತಾಪದಲ್ಲಿಯೇ ಒರೆಸುತ್ತಿದ್ದೆ. ನಾನು ಒರೆಸಿದ್ದರಿಂದ ಅವನಿಗೆ ತುಸುವಾದರೂ ಬೇಜಾರಿಲ್ಲದೆ ನಾನು ಮುಂದೆ ಮುಂದೆ ಹೋದಂತೆ ಹಿಂದೆ ಹಿಂದೆ ಬರುತ್ತಿದ್ದ ಹೊಸ ಚಿತ್ರಗಳ ಸರಣಿಯೊಂದಿಗೆ. ಇವರ ತೂತಾದ ಬನಿಯನ್ ಗಳೆಲ್ಲಾ ಹರಿದು ಚಿಂದಿಯಾದವು. ಈಗ ಸ್ವಲ್ಪ ಮಾಸಲಾದ ಬನಿಯನ್ನುಗಳನ್ನು ನಾನು ನನ್ನ ಗೋಡೆ ವರೆಸುವ ಬಟ್ಟೆಯನ್ನಾಗಿ ಮಾಡಿಕೊಳ್ಳುವ ಹೊತ್ತಿಗೆ ಇವರು ಹೌಹಾರ ತೊಡಗಿದರು. ಬೇರೆ ಬಣ್ಣದ ಬಟ್ಟೆಯಾದರೆ ಬಟ್ಟೆಯ ಬಣ್ಣ ಮತ್ತೆ ಗೋಡೆಗೆ ಮೆತ್ತುವುದಿಲ್ಲವೇ..? ಅಂತೆಯೇ ನನ್ನ ಪ್ಲಾನು. ನಾನು ಒರೆಸಿದ ಪರಿಣಾಮಕ್ಕೆ ಗೋಡೆ ಅಲ್ಲಲ್ಲಿ ಬಣ್ಣ ಬಿಟ್ಟುಕೊಂಡು ಮತ್ತಷ್ಟು ವಿಕಾರವಾಗಿ ಕಾಣಿಸತೊಡಗಿತು.
ಮೆತ್ತಗೆ ಹೇಳಿದರಿಲ್ಲ, ಜೋರು ಮಾಡಿ ಹೇಳಿದರಿಲ್ಲ. ಎರಡು ಕೊಟ್ಟು ಹೇಳಿದರೂ ಊಹ್ಞೂ .. ಗೋಡೆಯ ಮೇಲೆ ಬರೆಯುವುದನ್ನು ತಪ್ಪಿಸಲಾಗಲೇ ಇಲ್ಲ. ಡ್ರಾಯಿಂಗ್ ಪುಸ್ತಕವಾಯ್ತು, ಬಿಳೀ ಬೋರ್ಡ್ ಆಯ್ತು. ಅದೆಲ್ಲಾ ಬೋರಾಗಿ ಮತ್ತೆ ಗೋಡೆಯೇ ಬೇಕಾಯ್ತು. ಮತ್ತೆ ಬಂದವರೆಲ್ಲಾ ಹೇಳತೊಡಗಿದರು. ''ಬರ್ಕೊಳ್ಳಿ ಬಿಡಿ. ಆಮೇಲೆ ಒಂದೇ ಸಲ ಬಣ್ಣ ಹೊಡೆಸಿದರಾಯ್ತು..'' ಎಂದು ಸಮಾಧಾನ ಪಡಿಸಿದರು. ಗೆಳತಿಯೊಬ್ಬಳು, ''ನೀವು ಎಲ್ಲಾ ಹುಟ್ಟಾ ಕಲಾವಿದರಲ್ಲವೇ..? ಬರ್ಕೊಳ್ಳಿ ಬಿಡೇ,'' ನನಗೇ ಅಂದಳು. ಬಿಟ್ಟರೂ ಸೈ, ಬಿಡದಿದ್ದರೂ ಸೈ.
ಅಷ್ಟೊತ್ತಿಗೆ ಸುಧಾದಲ್ಲಿ ಯಾರೋ ಪುಣ್ಯಾತ್ಮನ ಬಗೆಗೆ ಬರೆಯಲಾಗಿತ್ತು.ಹೆಸರು ಮರೆತೆ, ಆತ ತುಂಬಾ ಕ್ರಿಯೇಟಿವ್ ವ್ಯಕ್ತಿ. ಆತನೂ ಗೋಡೆಯ ಮೇಲೆ ಬರೆಯುತ್ತಿದ್ದನಂತೆ! ಮತ್ತು ಮಕ್ಕಳಿಗೆ ಗೋಡೆಯ ಮೇಲೆ ಬರೆಯಲು ಬಿಡಿ, ಅವರ ಕಲ್ಪನಾ ಶಕ್ತಿ ಕ್ರಿಯೇಟಿವಿಟಿ ಹೆಚ್ಚುತ್ತದೆ, ಎಂದೆಲ್ಲಾ ಸಂದೇಶ ಕೊಟ್ಟಿದ್ದ. ಅದನ್ನು ಓದಿದ ಮೇಲೆ ನಮಗೆ ಮತ್ತಷ್ಟು ಸಮಾಧಾನವಾಯಿತು. ಪ್ಹಾರಿನ್ನಿನವರು ಹೇಳಿದ್ದಾರೆಂದರೆ ಅದು ಸರಿಯೇ ಸರಿ, ಎನ್ನುತ್ತಾ ಅಲ್ಲಿಂದ ನನ್ನ ಹರಕು ಬನಿಯನ್ ಹಿಡಿದುಕೊಂಡು ಮಾಡುವ ಯಕ್ಷಗಾನ, ತಾಳ ಮದ್ದಲೆ, ವೀರ ಗಾಸೆ ಎಲ್ಲವನ್ನೂ ಬಿಟ್ ಹಾಕಿ 'ಅಮ್ಮಾ ಬೋರು' ಅಂದರೆ 'ಅಲ್ಲೇ ಗೋಡೆ ಮೇಲೆ ಏನಾರು ಬರೀ' ಅನ್ನುವಷ್ಟರ ಮಟ್ಟಿಗೆ ಒಳ್ಳೆಯವಳಾದೆ.
ಈಗ ಗೋಡೆಯ ಮೇಲೆ ನಾನೇನಾದ್ರೂ ಬರೀಬೇಕಂದ್ರೂ ಚೂರೂ ಜಾಗವಿಲ್ಲ! ಪಕ್ಕದ ಮನೆಗೆ ಹೋಗಿ ಸಖೇದಾಶ್ಚರ್ಯಗಳಿಂದ ಕೇಳುತ್ತಾನಂತೆ, 'ನಿಮ್ಮ ಮನೆಯಲ್ಲಿ ಗೋಡೆಯೆಲ್ಲಾ ಖಾಲಿ ಇದೆಯಲ್ಲಾ..?' ಅಂತ. ಆವತ್ತು ಅಪ್ಪನ ಹತ್ತಿರ ಹೇಳುತ್ತಿದ್ದ. ''ನನಗೂ ಹೆಲಿಕ್ಯಾಪ್ಟರಿಗೆ ಕೀ ಕೊಟ್ಟರೆ ಹಾರುವಂತೆ ಕೀ ಇದ್ದಿದ್ದರೆ ನಾನೂ ಹಾರಿಕೊಂಡು ಮನೆಯ ಸೀಲಿಂಗ್ ಮೇಲೆ ಬರೆಯುತ್ತಿದ್ದೆ,'' ಅಂತ. ಮಗನ ಈ ಘನಂಧಾರೀ ಪ್ಲಾನಿಗೆ ಇವರು ಬೆಚ್ಚಿಬಿದ್ದದ್ದು ಹೌದು.
ಮಕ್ಕಳ ಕಲ್ಪನೆಗಳನ್ನು ಹಿಂಬಾಲಿಸಿಕೊಂಡು ಹೋದರೆ ನಮಗಾದರೂ ಎಷ್ಟೊಂದು ಉಪಾಯಗಳು ಹೊಳೆದು ಬಿಡುತ್ತವೆ. ಅವರನ್ನು ಇರುವಂತೆಯೇ ಬೆಳೆಯಲು ಬಿಡಿ. ಆ ಕಲ್ಪನೆಗಳನ್ನೆಲ್ಲಾ ಹಳೆ ಬನಿಯನ್ನಿನಿಂದ ತಾಯಂದಿರು ಒರೆಸ ಬಾರದು ಅಷ್ಟೇ.
ಆವತ್ತು ಶಾಲೆಯಿಂದ ಬರುತ್ತಾ ಎದುರು ಮನೆ ಆಂಟಿಗೆ ಹೇಳುತ್ತಿದ್ದ. ''ಆಂಟೀ ನಂಗೆ ಫಸ್ಟ್ ಪ್ರೈಸು.. ಡ್ರಾಯಿಂಗ್ ಕಾಂಪಿಟೆಶನ್ ನಲ್ಲಿ.!'' ಮನೆಗೆ ಬಂದು ಪ್ರೈಸ್ ತೋರಿಸಿದ. ಒಂದು ಆರ್ಟ್ ಸೀಡಿ.ಡ್ರಾಯಿಂಗ್ ಬುಕ್, ಕಲರಿಂಗ್ ಪೆನ್ಸಿಲ್ಸ್ . ನಾನು ಅಂತಾದರೂ ಬಿಡದೆ, ''ಎಲ್ಲರಿಗೂ ಕೊಟ್ರಾ ನಿನಗೊಂದೆ ಕೊಟ್ರಾ?'' ಕೇಳಿದೆ. ಗೋಡೆಯ ಮೇಲೆ ಬರೆದದ್ದು ಬಿಟ್ರೆ ಉಳಿದಂತೆ ಅವನ ಸಾಮರ್ಥ್ಯ ನನಗೆ ಗೊತ್ತಿರಲಿಲ್ಲ!
''ನನಗೊಬ್ಬನಿಗೆ..'' ನನಗೆ ಅನುಮಾನ, ನಾಲ್ಕಾರು ಬಾರಿ ಕೇಳಿದೆ, ''ಅಮ್ಮಾ ಎಷ್ಟು ಸಲ ಹೇಳಲಿ, ಪಸ್ಟು ಪ್ರೈಸನ್ನು ಒಬ್ಬರಿಗೇ ಕೊಡೋದು'' ಅಂದ. ನಾನು ಬಾಯಿ ಮುಚ್ಚಿಕೊಂಡೆ.
ಅವನಿಗೆ ಈಗೀಗ ನಾಚಿಕೆಯಾಗುತ್ತದೆ. ಯಾರಾದರೂ ನೆಂಟರು ಬಂದವರು ಸೀದಾ ಅವನಲ್ಲೇ ಕೇಳುತ್ತಾರೆ, ಅಕ್ಕನ ಗೆಳತಿಯರ ಮುಂದೆ ನಾಚಿಕೆ ತುಸು ಜಾಸ್ತಿ.. ''ಅಮ್ಮಾ ಗೋಡೆಗೆ ಬಣ್ಣ ಹೊಡೆಸಿ'' ಅನ್ನುವ ರಾಗ ಶುರು ಮಾಡಿದ್ದಾನೆ.ನನಗೆ ಮಾತ್ರ ಇಷ್ಟವಿಲ್ಲ.
ನನಗೆ ಅವನ ಕಲ್ಪನೆಗಳನ್ನು ಒರೆಸಿ, ಅಳಿಸಿ ಹಾಳು ಮಾಡಿದ್ದಕ್ಕೆ ಬಹಳ ಬೇಜಾರಿದೆ. ಒರೆಸಿದರೂ ಮತ್ತೆ ಮತ್ತೆ ಬರೆದು ಸ್ವಲ್ಪ ಮಟ್ಟಿಗೆ ನನ್ನ ತಪ್ಪಿತಸ್ತ ಭಾವವನ್ನು ಕಡಿಮೆ ಮಾಡಿದ್ದಾನೆ. ಅದಕ್ಕೆ ನಮಗೀಗ ಮನೆಗೆ ಬಣ್ಣ ಹೊಡೆಸಿದರೆ ಗೋಡೆಯ ತುಂಬಾ ಇರುವ ಅವನ ಮುಗ್ಧತೆಯೆಲ್ಲಾ ಕಳೆದು ಹೋಗಿಬಿಡುತ್ತದಲ್ಲಾ ಅನ್ನುವ ಚಿಂತೆ. ಮೊನ್ನೆ ಮೊನ್ನೆ ವರೆಗೂ ಬರೆದ. ನಾಳೆಯೂ ಬರೆದರೆ ಬರೆಯಲಿ ಬಿಡಿ. ನಿಮ್ಮ ಮಕ್ಕಳಿಗೂ ಬಿಟ್ಟು ಬಿಡಿ, ಬರೆದರೆ ಬರೆದುಕೊಳ್ಳಲಿ.
[ಅವನ ಗೋಡೆಯ ಮೇಲಿನ ಚಿತ್ರಗಳು ತುಂಬಾ ಮಬ್ಬು ಮಬ್ಬಾಗಿವೆ. ಅದಕ್ಕೆ ಅದರ ಪರಿಚಯ ನಿಮಗೆ ಇಲ್ಲ..:)]
ವಂದನೆಗಳು.
I feel that your son has a very good sense of art. Please encourage him. I am sure he will become a good artiste.
ReplyDeleteeಎಲ್ಲ ಮಕ್ಕಳ ಕತೆಯೂ ಇದೇ ಅನ್ಸುತ್ತೆ... ಸುರಯ್ಯಾಗೂ ಬರೆಯೋಕೆ ಚಿತ್ರ ಬಿಡಿಸೋಕೆ ಅಂತ ದೊಡ್ಡ ವೈಟ್ ಬೋರ್ಡ್ ತಂದುಕೊಟ್ಟೆ, ಡ್ರಾಯಿಂಗ್ ಶೀಟ್ಸ್ ಎಲ್ಲಾ...ಇದ್ರು ನಮ್ಮ ಕಪ್ಪು ಹಲಗೆಯ ಬಾಗಿಲಮೇಲೇ ಬರೆಯಬೇಕು ಸೀಮೆ ಸುಣ್ಣದಲ್ಲಿ ಮತ್ತೆ ಒರೆಸಿ ಕಪ್ಪುಬಾಗಿಲನ್ನು ಬಿಳಿ ಬಿಳಿ ಮಾಡಿಬಿಡ್ತಿದ್ದಳು... ಗೋಡೆಗಳಿಗೆ ಬಣ್ನದಲೇಪನ...ಹಹಹಹ ಹೌದು ಕೆಲವೊಮ್ಮೆ ಒರೆಸೋಕೆ ಮನಸಾಗೊಲ್ಲ...
ReplyDeleteಸಣ್ಣ ಪುಟ್ಟ ಘಟನೆಗಳ ಹೆಣೆದು ಬರೆಯೋ ನಿಮ್ಮ ಲೇಖನಗಳು ಬಹಳ ಇಷ್ಟವಾಗುತ್ತವೆ.
"ಅವರನ್ನು ಇರುವಂತೆಯೇ ಬೆಳೆಯಲು ಬಿಡಿ. ಆ ಕಲ್ಪನೆಗಳನ್ನೆಲ್ಲಾ ಹಳೆ ಬನಿಯನ್ನಿನಿಂದ ತಾಯಂದಿರು ಒರೆಸ ಬಾರದು ಅಷ್ಟೇ."
ReplyDeleteಹೌದು. ೧೦೦% Correct .
ಸುಂದರ ಲೇಖನ...ಸಾಮಾನ್ಯ ಅಪ್ಪ, ಅಮ್ಮ ತಮ್ಮ ಆಸೆ ಆಕಾಂಕ್ಷೆಗಳನ್ನ ಮಕ್ಕಳ ಮೇಲೆ ಹೇರಿ..ಅವರ ಕ್ರಿಯಾಶೀಲತೆಯನ್ನು ಕೆಲಮಟ್ಟಿಗೆ ಮೂಲೆ ಸೇರಿಸುವುದುಂಟು...ಮಕ್ಕಳ ಆಸೆಯನ್ನ ತಮ್ಮ ಗುರಿ ಮಾಡಿಕೊಂಡು ಅವರ ಗುರಿಗೆ ತಾಳ ಹಾಕುವುದು ವಿರಳ..ನಿಮ್ಮ ಪ್ರಯತ್ನ ಖಂಡಿತ ಶ್ಲಾಘನೀಯ..ಅಭಿನಂದನೆಗಳು..ನಿಮಗೆ, ನಿಮ್ಮ ಲೇಖನಕ್ಕೆ ಹಾಗು ನಿಮ್ಮ ಮುದ್ದಾದ ಚಿತ್ರಗಾರ ಕಂದನಿಗೆ..(ನನ್ನ ಅಣ್ಣನ ಮಗ ಕೂಡ ಹೀಗೆ..ಅವನಿಗೆ ಈಗ ಏಳು ವರುಷ..ಸುಮಾರು ಎರಡು ವರುಷವಿದ್ದಾಗಿಂದ ಗಣೇಶನ ಚಿತ್ರ ಬರೆಯಲು ಶುರು ಮಾಡಿದ...ಈಗ ಎಲ್ಲ ದೇವತೆಗಳು ಕಾಗದದಲ್ಲಿ ಇಳಿದಿದ್ದಾರೆ...ಕಣ್ಣು ಮೂಗು, ಬಾಯಿ ಅತಿ ಸುಂದರವಾಗಿ ಬರೆಯುವುದು ಅವನ ವಿಶೇಷ..)
ReplyDeleteಶೇ..ಶೇ..ವಿಜಯಶ್ರೀ, ನೀವು ಹಿಂದೆ ಬರೆದದ್ದು ಒರೆಸಿಬಿಟ್ಟು ತಪ್ಪು ಮಾಡಿದ್ರಿ...ಯಾರಿಗೆ ಗೊತ್ತು...ನಾಳೆ ನಿಮ್ಮ ಮಗ ದೊಡ್ಡ ಆರ್ಟಿಸ್ಟ್ ಆದಾಗ ಆ ಗೋಡೆಗೆ ಎಲ್ಲಿಲ್ಲದ ಬೆಲೆ ಬಂದು ಬಿಡ್ತಿತ್ತು..ಪರವಾಗಿಲ್ಲ ಇನ್ನು ಮುಂದೆಯಾದ್ರೂ ಒರಸ್ಬೇಡಿ...ಪುಟ್ಟೂ, ದೊಡ್ಡ ದೊಡ್ಡ ಕಲಾವಿದನಾಗಿ ಅಪ್ಪ ಅಮ್ಮನಿಗೆ ಕೀರ್ತಿ ತಾರಪ್ಪಾ!
ReplyDeleteGod bless you Shishir!
ಚೆನ್ನಾಗಿದೆ ವಿಜಯಶ್ರೀಯವರೇ.
ReplyDeleteನಿಮ್ಮ ಮಗನ ಕಲೆ ಮತ್ತು ನೀವದನು ಪೋಷಿಸಿದ ರೀತಿ.
ಸ್ವರ್ಣಾ
ವಿಜಯಾ..
ReplyDeleteನನ್ನ ಅಳಿಯ ತುಂಬಾ ಇಷ್ಟವಾಗಿಬಿಟ್ಟ...
ವಿದೇಶಗಳಲ್ಲಿ ಮಕ್ಕಳ ರೂಮಿನಲ್ಲಿ ಒಂದು ಗೋಡೆಯನ್ನು ಅವರಿಗೆ ಗೀಚಲು ಎಂದೇ ಇಟ್ಟಿರುತ್ತಾರೆ...
ಆ ಥರಹ ಗೀಚುವದರಿಂದ..
ಅವರಿಗೆ ತಿಳಿಯದಂತೆ ಮಾನಸಿಕವಾಗಿ ಖುಷಿಯಾಗುತ್ತದಂತೆ...
but painting walls these days is too costly so teach him economy thats my suggestion only...
ReplyDeleteನಮ್ಮನೆಲೂ ಇದೇ ಕತೆ....ನಾನು ಒರೆಸಿ,ಒರೆಸಿ ನಿನ್ನ ಹಾಗೆ ನಿಶ್ಯಕ್ತಿ ಮ್ಯಾನ್ ಆಗ್ಬಿಟ್ಟಿದ್ದಿ!!!!!ಆದರೆ ನಾನು ಇನ್ನು ಮು೦ದೆ ಅವನಿಗೆ ಬರೆಯೋದಕ್ಕೆ ಪ್ರೋತ್ಸಾಹ ಕೊಡ್ತಿ.ನಿನ್ನ ಸಲಹೆಗೆ ತು೦ಬಾ ಧನ್ಯವಾದಗಳು ವಿಜಿಯಕ್ಕ..
ReplyDeleteನಮ್ಮನೇಲೂ ಇದೇ ಕತೆ..ನಾನು ಒರೆಸಿ,ಒರೆಸಿ ನಿನ್ನ ಹಾಗೆ ನಿಶ್ಯಕ್ತಿ ಮ್ಯಾನ್ ಆಗ್ಬಿಟ್ಟಿದ್ದಿ!!!ಆದರೆ,ಇವತ್ತಿ೦ದ ನಾನು ನನ್ನ ಮಗನಿಗೆ ಗೋಡೆ ಮೇಲೆ ಬರಿಲಿಕ್ಕೆ ಪ್ರೋತ್ಸಾಹ ನೀಡ್ತಿ...
ReplyDeletesmart boy.. avanige sada protsaha needi..
ReplyDeleteನಮ್ಮನೆಗೆ ಬಂದಾಗಲೆಲ್ಲ "ಚಿಕ್ಕಮ್ಮ ನಿಮ್ಮನೆ ಗೋಡೆಯಲ್ಲಿ ಎಷ್ಟು ಜಾಗ ಇದ್ದೆ! ನಮ್ಮನೆ ಗೋಡೆಲಿ ಜಾಗನೆ ಇಲ್ಲೆ" ಅಂತ ಆಸೆಯಿಂದ ಹೇಳ್ತಿದ್ದ. ಅವನು ಹೇಳೋ ರೀತಿಗೆ ಎಂತವರೂ ಮರುಳಾಗಿ ಪೆನ್ಸಿಲ್ ಕೊಟ್ಟು ಬರಿ ಮರಾಯ ಅಂತ ಹೇಳಬೇಕು ಹಾಗಿರುತ್ತಿತ್ತು .
ReplyDeletenanna maga igiga shuru hachchiddaanae. namma maneyavaru nimma kelasa prarambhisiddare....
ReplyDeleteai ho1 olle lekhana
ನನ್ನ ಮಗ ಸಿಂಗಾಪುರ್ ಹೋಟೆಲನ್ನ ಟೇಬಲ್, ಫೋನ್, ವೈಟ್ ಸೋಫಾ, ಬೆಡ್, ಹಾಗು ಮೆನು ಪುಸ್ತಕದಲ್ಲಿ ಅಲ್ಲಿದ್ದ ಪೆನ್ಸಿಲ್ನಿಂದ ಗೆರೆಗಳನ್ನು ಹಾಕಿಬಿಟ್ಟಿದ್ದ,,, !!!
ReplyDeleteನಾನು ಕಡೆಗೆ ಬರೆಯುವ ಪ್ಯಾಡನ ಪೇಪರ್ ಕೊಟ್ಟಿದ್ದೆ ಕುಳಿತು ಗೀಚಿದ್ದಾನೆ ಅದನ್ನು ತೆಗೆದುಕೊಂಡು ಬಂದು ಎತ್ತಿಟ್ಟಿದ್ದೇನೆ.
Namma Shreya kooda godeli baritidlu..but USA hoda mele bareebardu helida mele stop maadidlu..Nice to hear Shishir's story with ur superb narration :)
ReplyDeleteNammaneyalloo Shreya godeli bardiddale, but USA hoda mele stop maadidlu..Nice to hear Shishir's story with your beautiful narration :)
ReplyDeleteಚೆನ್ನಾಗಿ ಬರದ್ದಿ ವಿಜಯಕ್ಕ..
ReplyDeleteನಿಶ್ಯಕ್ತಿಮ್ಯಾನ್ :-) :-) , ಕೀಲಿ ಕೊಟ್ರೆ ಹೆಲಿಕ್ಯಾಪ್ಟರ್ ತರಾ ಹೋಗಿ ತಾರಸಿ ಮೇಲೂ ಬರ್ಯ ಪ್ಲಾನು.. ಏನೇ ಕೊಟ್ರೂ ಸಮಾಧಾನ ಆಗ್ದೇ ಗೋಡೆ ಮೇಲೇ ಬರ್ಯದು.. ಇದೆಲ್ಲಾ ಮಕ್ಕಳ ಮುಗ್ದತೆ, ಕ್ರಿಯಾಶೀಲತೆಗೆ ಸಾಕ್ಷಿ. ಕೊನೇ ಪ್ಯಾರಾದಲ್ಲಿ ಮತ್ತೆ ವಾಸ್ತವದ ಚಿತ್ರಣ.. ಅಕ್ಕನ ಗೆಳೆಯರು ಬಂದರೆ ತುಸು ನಾಚಿಕೆ, ಗೋಡೆಗೆ ಬಣ್ಣ ಹೊಡೆಸಿ ಅಂತ ಹೇಳೋದು ಇದೆಲ್ಲಾ ಮುಗ್ದತನ ಸ್ವಲ್ಪ ಸ್ವಲ್ಪವೇ ಮಾಯವಾಗಿ ಪ್ರೌಢಿಗೆ ಮೂಡುತ್ತಿರುವ ಸಂಕೇತವೇನೋ..
ಮಕ್ಕಳು ಬೆಳೆದಂತೆಲ್ಲಾ ಅವ್ರಲ್ಲಿರೋ ಕ್ರಿಯಾಶೀಲತೆ ಕಮ್ಮಿಯಾಗ್ತಾ ಬತ್ತು.. ಅದು ಹಂಗಾಗದಿರ್ಲಿ ಹೇಳಿ ಹಾರೈಕೆ.. ನಿಮ್ಮಗನ ಸಾಧನೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗ್ಲಿ :-)
ಶಿಶಿರನ ಕಲ್ಪನೆಯ ಗೆರೆಗಳನ್ನು ಫೋಟೋ ತೆಗೆದಿಡು..
ReplyDeleteಪುಟ್ಟ ಕಲಾವಿದನಿಗೆ, ಬಹುಮಾನ ಪಡೆದಿದ್ದಕ್ಕೆ ಅಭಿನ೦ದನೆಗಳು. :)
ವಿಜಯಕ್ಕ......
ReplyDeleteಸೇಮ್ ಪಿಂಚ್.....ಸೋಫಾದ ಮೇಲೆ ಕುಳಿತರೆ ಕಾಣುವುದು ನನ್ನ ಮೂರುವರೆ ವರ್ಷದ ಮಗಳ ಕಲಾ ಪರಾಕ್ರಮ....ನನ್ನಾಕೆ ಗೋಡೆಗೆ ಫುಲ್ ಟೈಲ್ಸ್ ಹಾಕಿ ಬಿಡೋಣ ಅಂತ ಹೇಳ್ತಾನೆ ಇದ್ದಾಳೆ....
ಸುಂದರ ಬರಹ.....ನಮ್ಮನೆ ಕಥೆನೇ ನೀವು ಬರೆದ ಹಾಗೆ ಇತ್ತು....
ಬಹಳ ಒಳ್ಳೆಯ ಅನುಭವ ನಿಮ್ಮದು. ಮೊದಲು ನಿಮ್ಮ ಮಗನ ಕ್ರಿಯಾಶೀಲತೆಗೆ ಜೈ ಎನ್ನಬೇಕು. ಹಾಗು ಮಗುವಿನ ಕ್ರಿಯಾಶೀಲತೆಯನ್ನು ಗುರುತಿಸಿ ಅವನಿಗೆ ಪ್ರೋತ್ಸಾಹ ನೀಡಿದ್ದಕ್ಕೆ ನಿಮಗೂ ಸಹ ಜೈ ಎನ್ನ ಬೇಕು. ಮಕ್ಕಳು ಗೋಡೆ ಮೇಲೆ ಬರೆದರೆ ಸಾಕೂ ಅವರನ್ನು ಶತ್ರುಗಳಂತೆ ಕಂಡು ಶಿಕ್ಷಿಸುವ ತಂದೆ ತಾಯಿಗಳನ್ನು ನೋಡಿದ್ದೇನೆ. ನಿಮ್ಮ ಈ ಅನುಭವ ಅನುಕರಣೀಯ.
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಇನ್ನೂ ಸರಿಯಾಗಿ ೨ ತುಂಬದ ಪೋರ ನನ್ನ ಅಕ್ಕನ ಮಗ ಪಾರ್ಥನೂ ಅಷ್ಟೇ ಗೋಡೆ ಮೇಲೆಲ್ಲಾ ರೇಖಾ ಚಿತ್ರ ಬಿಡಿಸಿಟ್ಟಿದ್ದಾನೆ..:) ಪ್ರಿಡ್ಜ್ ಮೇಲೆ ಪರ್ಮನೆಂಟ್ ಮಾರ್ಕರ್ ನಿಂದ ಬರೆದ ನವ್ಯ ಕಲೆಗಂತೂ ಇನ್ನೂ ಅರ್ಥ ಹೊಳೆದಿಲ್ಲ ನಮ್ಮಿಬ್ಬರಿಗೂ.:) ಚಂದದ ನಿರೂಪಣೆ ವಿಜಯಕ್ಕ.. ಮಕ್ಕಳ ಕಲ್ಪನೆಗಳನ್ನೆಲ್ಲಾ ಹಳೆ ಬನಿಯನ್ನಿನಿಂದ ತಾಯಂದಿರು ಒರೆಸ ಬಾರದು ಅಷ್ಟೇ. ತುಂಬಾ ಇಷ್ಟವಾಯಿತು ಈ ವಾಕ್ಯ.
ReplyDeleteನನಗೆ "ತಾರೆ ಜಮೀನ್ ಪರ್" ಚಿತ್ರ ನೆನಪಾಯಿತು :). ಮಗುವಿನಲ್ಲಿ ಕ್ರಿಯಾಶೀಲತೆ ಇದೆ. ನಿಮ್ಮ ಪ್ರೋತ್ಸಾಹವೂ ಇದೆ. ಇನ್ನೇನು ಬೇಕು ?. all the best
ReplyDeleteಬಿಡಿ ಬಿಡಿ ಬರೆಯಲು ಬಿಡಿ... ಆ ಗೋಡೆ ಶಿಶಿರನ ಕ್ರಿಯಾಶೀಲತೆಗೆ ಕನ್ನಡಿಯಾಗಲಿ. ಶುಭವಾಗಲಿ
ReplyDeleteಈ ಬ್ಲಾಗ್ ಗೋಡೆಯ ಮೇಲೂ ನಿಮ್ಮ ಈ ಚಿತ್ತಾರವೂ ಚೆನ್ನಾಗಿ ಮೂಡಿಬಂದಿದೆ.
ನನಗೆ ನಾನು ೧೯ ಒಂದಲೇ ಮಗ್ಗಿಯನ್ನು ಗೋಡೆಯ ಮೇಲೆ ಕಲಿತದ್ದು ನೆನಪಾಯ್ತು...೧೮ ಒಂದಲೇ ತನಕ ಸರಾಗವಾಗಿ ಬರುತ್ತಿದ್ದ ಮಗ್ಗಿ ಹತ್ತೊಂಬತ್ತಕ್ಕೆ ಅದ್ಯಾಕೋ ನಿಂತುಬಿಡುತ್ತಿತ್ತು... ಆಮೇಲೊಂದು ದಿನ ಅಮ್ಮ ಒಂದು ಪಾಟಿ ಕಡ್ಡಿ ಕೊಟ್ಟು ಕೂರಿಸಿ ಮಜ್ಜಿಗೆ ಕಡೆಯಲು ಒಳಗೆ ಹೋದರೆ ನಾನು,ಅಲ್ಲಿಯೇ ಅಪ್ಪಾಜಿ ಟಿಪಾಯಿ ಮೇಲಿದ್ದ ಪೆನ್ಸಿಲ್ಲು ತೆಗೆದುಕೊಂಡು ಮಗ್ಗಿ ಕಲಿತಿದ್ದೆ,ಗೋಡೆ ಮೇಲೇ ಬರೆದೇ...
ReplyDeleteಇನ್ನು ಹೈಸ್ಕೂಲಿನಲ್ಲಿ ಹೇಳಿಕೊಡುತ್ತಿದ್ದ ಚಿತ್ರಕಲೆಯ ಮೊದಲ ಪ್ರಯೋಗವೂ ಮೆತ್ತಿಯ ನನ್ನ ಕೋಣೆಯ ಗೋಡೆಯ ಮೇಲೆಯೇ....ಅದೆಷ್ಟು ರೀತಿಯ "ಚಿನ್ಮಯ"ಗಳು ಆ ಗೋಡೆಯ ಮೇಲಿವೆಯೋ ಎಣಿಸಿಲ್ಲ...
ಇನ್ನು ಪೀಯೂಸಿಯಿಂದ ಚಿತ್ರ ಬರೆಯುವುದು ಕಡಿಮೆಯಾಗಿ,ಕವನಗಳನ್ನು ಗೀಚುವ ಚಟ ಶುರುವಾಯ್ತು...ಅದಕ್ಕೆ ಪಟ್ಟಿಯ ಕೊನೆಯ ಹಾಳೆಗಳು ಆಹಾರವಾದವು...
ಇಂಜಿನಿಯರಿಂಗಿನಲ್ಲಿ ಮೆಸ್ಸೆಜುಗಳೇ ಕವನಗಳಿಗೆ ಮಾಧ್ಯಮವಾದವು..ಇನ್ನು ಈಗ, ಎಲ್ಲಾದರೂ ತಿಂಗಳಿಗೊಮ್ಮೆ ಎನನ್ನಾದರೂ ಬ್ಲಾಗಿಸಿದರೆ ಅದನ್ನು ಒಂದು ಗೋಡೆಯ ಮೇಲೆ ಗೀಚುತ್ತೇನೆ,ಎಲ್ಲಿ ಅಂತ ಕೇಳ್ದ್ರಾ????
facebook ನ ಗೋಡೆ,wall ನಲ್ಲಿ !!!!
ಹಾಂ ಹೇಳೋದ್ ಮರೆತೆ...ನಮ್ಮ ಕಡೆ,ಗೋಡೆ ಮೇಲೆ ಬರಿಯೋಕೆ ಒಂದು ಸಲ ಮಕ್ಕಳಿಗೆ ಪೂರ್ತಿ ಅಧಿಕಾರವಿದೆ..ಅದು ಮನೆಗೆ ಹಾವು ಗೀವು ಬಂದಾಗ....ಒಮ್ಮೆ ನಮ್ಮೆನೆನಲ್ಲಿ ಹೀಗೇ ಆದಾಗ ಅಬ್ಬೆಯ(ಅಜ್ಜಿ) ಸಲಹೆಯ ಮೇರೆಗೆ ,,ನಾನು ತಂಗಿ ಸೇರಿ ಮನೆಯ ಗೋಡೆ ತುಂಬಾ "ಆಸ್ತಿಕ" "ಆಸ್ತಿಕ" ಎಂದು ಬರೆದಿದ್ದುದು ನೆನೆಪು..
ಏನೇ ಇರಲಿ..... ಶಿಶಿರನಿಗೆ ಶುಭಮಸ್ತು...ಲೇಖನ ಆಪ್ತವಾಗಿದೆ,ನಿಮ್ಮನೆಗೇ ಬಂದು ಮಾತನಾಡುತ್ತಿರುವಂತೆ ಬರೆದಿದ್ದೀರಿ...ಧನ್ಯವಾದ ಒಳ್ಳೆಯ ಲೇಖನಕ್ಕಾಗಿ...ನಮಸ್ತೆ,
ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್