Sunday, October 13, 2013

ಅಂಧಕಾರವೂ.. ಜ್ಞಾನೋದಯವೂ ..

ಆ ಐ ಕೇರ್ ಸೆಂಟರಿನ ಕುರ್ಚಿಗೆ ತಲೆಯಾನಿಸಿ ಕೂತಿದ್ದೆ.  ಸ್ವಲ್ಪ ಹೊತ್ತಿನ ಮೊದಲು  ಕಣ್ಣಿಗೆ ಡ್ರಾಪ್ಸ್ ಹಾಕಿಸಿಕೊಂಡು..
ತಲೆಯಲ್ಲಿ ಸಾವಿರ ಯೋಚನೆಗಳು.. ಒಂದರ ಮೇಲೊಂದು, ಎಲ್ಲಾ ಒಟ್ಟೊಟ್ಟಿಗೆ, ಯಾವುದು ಮೊದಲು ಬರುತ್ತೆ ಯಾವುದು ಕೊನೆಗೆ ಗೊತ್ತಾಗದಷ್ಟು .
 ಇಷ್ಟು ನಡೆದಿದ್ದು,
 ನಮ್ಮ ಅತ್ತೆಯವರಿಗೆ ಕಣ್ಣಿನ ಪೊರೆಯ  ತೊಂದರೆ  ಶುರು ಆಗಿತ್ತು. ಸರಿ, ಐ ಸ್ಪೆಶಲಿಷ್ಟರಿಗೆ ತೋರಿಸುವುದು ಅಂತಾಯಿತು. ಹತ್ತಿರದಲ್ಲೇ ಒಂದು ಪ್ರಸಿದ್ಧ  ಐ ಕೇರ್ ಸೆಂಟರಿನಲ್ಲಿ ಚೆಕ್ ಮಾಡಿಸುವುದು ಅಂತ ತೀರ್ಮಾನವಾಯಿತು. ಇವರು ಹೇಳಿದರು, ''ಅಮ್ಮನ ಜೊತೆಯಲ್ಲೇ ನೀನೂ ಕಣ್ಣು ಟೆಸ್ಟ್ ಮಾಡಿಸಿಕೊಂಡು ಬಾ, ನಿನಗೂ ಕಣ್ಣಿನ ತೊಂದರೆ ಇದೆ ! ''
''ಅದು ಹೇಗೆ  ನನ್ನ ಕಣ್ಣಿನ ವಿಚಾರ ನಿಮಗೆ   ಗೊತ್ತಾಯಿತು..?'' ನನ್ನ ಪ್ರಶ್ನೆ..
''ನಾನು ಎದುರಿಗೇ  ಇದ್ದರೂ ಜೋರಾಗಿ ಕಿರುಚುತ್ತೀಯಲ್ಲ, ಅದಕ್ಕೆ ನಿನ್ನ ಕಣ್ಣೂ ಚೆಕ್ ಮಾಡಿಸ ಬೇಕು.. ತೊಂದರೆ ಇದ್ದೆ ಇದೆ..!!
ಅತ್ತೆಯ ಎದುರಿಗೇ ಹೇಳುತ್ತಾರೆ. ನೋಡಿ ಅಮ್ಮನ ಎದುರಿಗೆ ಮಕ್ಕಳಿಗೆ  ಧೈರ್ಯ ಜಾಸ್ತಿ.. 
  '' ಗಂಡಂದಿರಿಗೆ  ಕಿವಿ ದೂರ ಅನ್ನುವುದು ಲೋಕಕ್ಕೆಲ್ಲಾ ಗೊತ್ತು, ಕೂಗದೆ ಮತ್ತಿನ್ನೇನು? '' ನಾನು ಸುಮ್ಮನಿರಲಾ..?
''ಅದು ಹಾಗಲ್ಲ, ನಿನಗೆ ನಾನೆಲ್ಲೋ ದೂರದಲ್ಲಿದ್ದಂತೆ ಕಾಣಿಸುತ್ತದೆ, ಶಬ್ಧದ ವೇಗ ಕಡಿಮೆ,   ಅದಕ್ಕೆ ನೀನು ಕೂಗುವುದು ಅಂತ ನನಗೆ ಚೆನ್ನಾಗಿ ಗೊತ್ತು..''ಎಂದು ರಾಜಿಗೆ ಬಂದರು.. ಎಷ್ಟು ಒಳ್ಳೆಯವರು ..!!

ಸರಿ, ಇಷ್ಟೆಲ್ಲಾ ಆದಮೇಲೆ   ನಮ್ಮತ್ತೆಯವರನ್ನು ಕರೆದುಕೊಂಡು ಆ ಐ ಕೇರ್ ಸೆಂಟರಿಗೆ ಹೋದೆ. ಅಲ್ಲಿ ಅವರು ನಮ್ಮ ಹೆಸರು, ವಿಳಾಸ ತಗೊಂಡು ನಾ ನಿನ್ನ ಮರೆಯಲಾರೆ,  ಅನ್ನುತ್ತಾ ಕಂಪ್ಯೂಟರ್ ನಲ್ಲಿ  ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳುವ ವ್ಯವಸ್ಥೆ  ಮಾಡಿಕೊಂಡರು.
ನಮ್ಮ ಅತ್ತೆಯ ಪರೀಕ್ಷೆಯಾಯಿತು.. ಈಗ ನನ್ನ ಸರದಿ, ಐ ಟೆಸ್ಟಿಂಗ್  ಮಷೀನ್ ಮೇಲೆ ಗದ್ದ  ಊರಿ ಕೂರಲು ತಿಳಿಸಿ ಅದೇನೋ ಟೆಸ್ಟ್ ಮಾಡಿದ್ರು ಅಲ್ಲಿ ಒಬ್ರು ಲೇಡಿ. ಮತ್ತೆ ಇನ್ನೊಂದು ಮಷೀನ್, ಕಣ್ಣಿನ ಪ್ರೆಶರ್ ಟೆಸ್ಟ್ ಮಾಡುವುದು.  ಮತ್ತೆ  ಮಷೀನ್ ಗೆ ಗದ್ದ ಊರಿ ಕುಳಿತುಕೊಂಡೆ.  ''ಏನಿಲ್ಲ  ಸ್ವಲ್ಪ ಗಾಳಿ ಊದುತ್ತೇವೆ ಹೆದರಬೇಡಿ ಅಂದ್ರು.  ಸರಿ, ಸ್ವಲ್ಪ ಫೋರ್ಸ್ ಇಂದ ಕಣ್ಣಿಗೆ ಗಾಳಿ ಬಂತು. ನನಗೆ ಇಷ್ಟುದ್ದಾ ನಾಲಿಗೆ ಸುಳಿಯುವ ಹಸಿರು ಹಾವಿನ ನೆನಪಾಯಿತು.  ತೊಂಡೆ ಚಪ್ಪರದ ಮೇಲೆ, ಬೇಲಿಗೆ ಅಲ್ಲಿ ಇಲ್ಲಿ ಕಾಣ ಸಿಗುವ ಪಾಪದ ಹಾವನ್ನು ಕೆಲವು ತುಂಟ ಹುಡುಗರು ಬಾಲ ಹಿಡಿದು ತಿರುಗಿಸಿ ದೂರಕ್ಕೆ ಒಗೆಯುತ್ತಿದ್ದರು ..  ಆಗ ದೊಡ್ಡವರು  ಹಸಿರುಳ್ಳೆ  ಹಾವು   ಕಣ್ಣಿಗೆ ಊದುತ್ತೆ . ಕಣ್ಣು ಕುರುಡೇ ಆಗಿ ಬಿಡುತ್ತೆ ಅದರ ಸುದ್ದಿಗೆ ಹೋಗಬೇಡಿ ಎಂದು ಹೆದರಿಸುತ್ತಿದ್ದರು. ಯಾವತ್ತೂ ಯಾರಿಗೂ  ಅದು ಕಣ್ಣು ಊದಿದ್ದಿಲ್ಲ ಎಂತಿಲ್ಲ, ಆದರೂ ಊದಿದರೆ ಹೀಗೆ ಊದಬಹುದೇನೋ ಅನ್ನಿಸಿತು.

ಮತ್ತೆ ಅದರಿಂದ ರಿಪೋರ್ಟ್ ತೆಗೆದುಕೊಡುತ್ತಾ , ಸುಮ್ಮನೆ ಕೊಡಬಹುದಿತ್ತು.. ''ನಿಮಗೆ  ಪ್ರೆಶರ್ ಇದೆ ಅಂತೇನಾದ್ರೂ ಈ ಮೊದಲು  ಡಾಕ್ಟರ್ ಹೇಳಿದ್ರಾ ..? ''ಅಂತ ಲೋಕಾಭಿರಾಮವಾಗಿ ಆಕೆ ಕೇಳಿದರು.    ಅವರು ಕೇಳಿದ್ದೆ ಸರಿ,,  'ಇಲ್ಲವಲ್ಲ'  ಅಂತ ತಕ್ಷಣಕ್ಕೆ  ಅಂದು ಹೊರಬಂದರೂ ನನಗೆ ತಲೆಯಲ್ಲಿ ಹುಳ ಕೊರೆಯಲಾರಂಬಿಸಿತು.. ಒಂಥರಾ ವಿವರಿಸಲಾಗದ ದುಗುಡ,

ಈಗ ಇನ್ನೊಬ್ಬರು phoropter ನಲ್ಲಿ ಒಂದಿಪ್ಪತ್ತು ಲೆನ್ಸ್ ಗಳನ್ನೂ ಹಾಕಿ ತೆಗೆದು ಮಾಡಿ ದೃಷ್ಟಿ ಚೆಕ್ ಮಾಡಿದರು. ಆ ರಿಪೋರ್ಟ್ ನೋಡಿ,'' ಏನ್ರೀ  ಕಣ್ಣಿನ ಪ್ರೆಶರ್ ೨೩, ೨೨  ಇದೆ.. ''ಅಂತಾ ರಾಗ ಎಳೆದರು.. ನನ್ನ ತಲೆಯಲ್ಲಿ ಈಗ ಸಾವಿರ ಹುಳುಗಳ ನರ್ತನ..ಮತ್ತೊಮ್ಮೆ ಚೆಕ್ ಮಾಡಿಸಲು ಅದೇ ಪ್ರೆಶರ್ ಮಶಿನ್ನಿನ ಬಳಿ ಕಳಿಸಿದರು. ಆದರ ಪಾಲಕ ಅದಕ್ಕೆ ಇಯರ್ಬಡ್  ಹಾಕಿ ಧೂಳು ಎಲ್ಲಾ ಒರೆಸಿ ಮತ್ತೆ ಕಣ್ಣಿನ ಚೆಕ್ ಮಾಡಿದ..!
ಚೇರ್ ನಲ್ಲಿ ಕೂರಿಸಿ ಅತ್ತೆ ಮತ್ತು ನನಗೆ ಕಣ್ಣಿಗೆ ಅದೆಂತದೋ ಡ್ರಾಪ್ಸ್ ಬಿಟ್ಟು ಕೂರಿಸಿದರು.. ''ಕಣ್ಣು ಮುಚ್ಚಿ ಕುಳಿತುಕೊಳ್ಳಿ.. ಕೆಲವು ಘಂಟೆ ಕಣ್ಣು ಮಂಜಾಗಿರುತ್ತೆ.. ಕ್ಲಾರಿಟಿ ಇರೋಲ್ಲ..ಮುಕ್ಕಾಲು ಘಂಟೆ ಬಿಟ್ಟು ಕಣ್ಣಿನ ಡಾಕ್ಟ್ರು ಟೆಸ್ಟ್ ಮಾಡ್ತಾರೆ,'' ಅಂದರು.

ಈಗ ಕಣ್ಣಿನ ಮುಂದೆ ಅಂಧಕಾರ..!

ಇಲ್ಲಿಂದ ಶುರು ಆಲೋಚನೆಗಳ ಸಂತೆ..         ೨೩, ೨೨  ಪ್ರೆಶರ್ ಇದೆ ಅಂದರೆ ಏನರ್ಥ ..? ಗ್ಲೂಕೋಮ ಇದೆ ಅಂತ ಅಲ್ಲವೇ..? ಅಂದರೆ ಈಗಲೇ ಶುರು ಆಯ್ತು ಅಂದರೆ ಮುಂದೆ ಏನು ಕಥೆ,  ಕಣ್ಣೇ  ಕಾಣಿಸುತ್ತೋ ಇಲ್ವೋ,,? ಸ್ವಲ್ಪವಾದರೂ ಕಾಣಿಸಬಹುದ..? ಕಾಣಿಸದಿದ್ರೆ ಏನು ಮಾಡೋದು..? ಹೇಗೆ ಓದೋದು ? ಬರಿಯೋದು..? ಚಿತ್ರ ಬರಿಯೋದು ? ಕೆಲಸ ಮಾಡೋದು..? ಮಕ್ಕಳ ಹೋಂ ವರ್ಕ್ ಕಥೆ ಏನು..?   ಇಂಟರ್ ನೆಟ್ಟು , ಬ್ಲಾಗು, ಫೇಸ್ ಬುಕ್ಕು  ಕಥೆ ಏನು..?

ಅತ್ತೆ,  ಪಕ್ಕದಲ್ಲಿ ಕುಳಿತವರಿಗೆ ಅವರ ಸಂಕಟ ಅವರದ್ದು.. ಯಾವ ಕಾರಣಕ್ಕೂ ಇಲ್ಲಿಯವರೆಗೆ ಯಾವುದಕ್ಕೂ  ಆಪರೇಶನ್ ಗೀಪರೆಶನ್ ಗೆ ಒಳಗಾಗದ ಘಟ್ಟಿ  ಆರೋಗ್ಯವಂತ ಜೀವ ಅವರದು,  ಅಂತಾದ್ದರಲ್ಲಿ ಕಣ್ಣಿಗೆ ಪೊರೆ ಬಂದಿದೆ! ಅದನ್ನು ಆಪರೇಟ್ ಮಾಡಿ ತೆಗೆಯಬೇಕು ಅಂದಿದ್ದು ಮತ್ತು ಕೂಡಲೇ  ಮಾಡಿಸಬೇಕು ಅಂದಿದ್ದು ಅವರಿಗೆ ಸಿಕ್ಕಾಪಟ್ಟೆ  ತಲೆ ಬಿಸಿ ..  '' ವಿಜಯ, ಕಣ್ಣು ಒಂದು ಕಾಣಿಸುವುದಿಲ್ಲ  ಅಂದರೆ   ಮನುಷ್ಯ ಸತ್ತಂತೆ..'' ಅಂದರು!  ಅತ್ತೆ ಬೇರೆ ಹಾಗಂದರು.

ಹುಟ್ಟುಗುರುಡರಾದರೆ ಅದೊಂದು ಕಥೆ, ಈಗ ಮಧ್ಯದಲ್ಲಿ ಈ ಗ್ಲೂಕೋಮ   ಅನ್ನುವ ರಾಕ್ಷಸನ ಕೈಯಲ್ಲಿ ಸಿಲುಕಿ ಕಣ್ಣೆ ಹೋಗಿಬಿಟ್ಟರೆ ?  ಯಾಕೋ ಒಂಟಿ ಕಣ್ಣಿನ ರಾಕ್ಷಸನ ಕಥೆ  ನೆನಪಾಯಿತು. ಈಗ ನನ್ನ ಕಣ್ಣು ಪೂರಾ ಹೋಯಿತು ಅಂತಿಟ್ಟುಕೊಳ್ಳೋಣ. ಅಡುಗೆ ಮಾಡೋದು ಹೇಗೆ..? ಅಲ್ಲ ಒಂದು ರೂಮಿಂದ ಇನ್ನೊಂದು ರೂಮಿಗೆ ಓಡಾಡೋದು ಹೇಗೆ..? ನಿಧಾನ ಕಲಿತುಕೊಳ್ಳಬೇಕು. ಚಿತ್ರ ಬರೆಯೋದು ಮಾತ್ರ ಕಷ್ಟ ಆಗಬಹುದು.ಯಾವುದೋ ಅಂಧ ಆರ್ಟಿಸ್ಟ್  ಬಗ್ಗೆ  ಎಲ್ಲೋ ಓದಿದ್ದು ಮಸುಕಾಗಿ ನೆನಪಾಯಿತು. ಎಷ್ಟೋ ಕಾದಂಬರಿಗಳು ಓದದೇ ಇರುವುದು ಸಾಕಷ್ಟಿವೆ.   ಮೊದಲು ಬ್ರೈಲ್ ಕಲಿತುಕೊಳ್ಳಬೇಕು. ಅದಕ್ಕೂ ಮೊದಲು ಕೋಲು ಬೇಕಲ್ಲ..!     ಪ್ರತಿಯೊಂದಕ್ಕೂ ಅವರಿವರನ್ನು  ಆಶ್ರಯಿಸುವುದು ಕಷ್ಟ ಕಷ್ಟ . ಹತ್ತು ಹಲವು ಬಗೆಯ ಸಂಕಟಗಳು.  ಹಾಳಾಗ್ಲಿ  ಫೇಸ್ ಬುಕ್ ನೋಡುವುದು ಹೇಗೆ..?  ಸುಮಾರು ದಿನ ಯಾವುದೇ ಸ್ಟೇಟಸ್,  ಪ್ರೊಫೈಲ್ ಚಿತ್ರ  ಚೇಂಜ್ ಇರದಿದ್ದುದನ್ನು ನೋಡಿ ಫೇಸ್ ಬುಕ್ಕಿನ ಫ್ರೆಂಡ್ಸ್,  ಅಂತಃಪುರದ ಸಖಿಯರು  ಎಲ್ಲಿ,  ಎಲ್ಲಿ ವಿಜಯಶ್ರೀ?   ಅನ್ನಬಹುದು.. ಆಮೇಲೆ ಹೇಗೋ   ಹೀಗೆ  ಆಗಿ ಹೀಗಾಗಿದೆ ಅಂತ ಸುದ್ದಿ ಹೋಗಿರುತ್ತೆ.. ಅಯ್ಯೋ ಪಾಪ, ಹೀಗಾಗ್ಬಾರ್ದಿತ್ತು,  ಅಂತ ಅವರೆಲ್ಲಾ ಅಲವತ್ತು ಕೊಳ್ಳುತ್ತಿರಬಹುದಾ..? ನನಗೆ ಕಾಣಿಸಲ್ವೆ.  :)   ನನ್ನ ಕಣ್ಣಿನ ಬಗ್ಗೆ ಹೀಗೆ  ಒಂದಷ್ಟು ಶ್ರದ್ಧಾಂಜಲಿ  ಕಾಮೆಂಟುಗಳು ಇರಬಹುದೇ..?    :)  ಎಲ್ಲದಕ್ಕೂ ಸೊಲ್ಯುಶನ್ಸ್ ಇರುತ್ತೆ ಸುಮ್ನಿರೇ,  ಅಂದ ಹಾಗಾಯ್ತು ಇವರು ಕಿವಿಯಲ್ಲಿ..

ಆಲೋಚನೆಗಳು ಸಾಗುತ್ತಾ ಸಾಗುತ್ತಾ ಇರುವಂತೆಯೇ ಡಾಕ್ಟರು ನಮ್ಮನ್ನು ಕರೆದು ಆಪ್ಥಾಲ್ಮೊಸ್ಕೊಪಿ ಯಿಂದ ಕೂಲಂಕುಶವಾಗಿ ಟೆಸ್ಟ್ ಮಾಡಿ,  ಅಷ್ಟೊತ್ತಿಗೆ ಪುನಃ ಮಾಡಿಸಿದ ಟೆಸ್ಟ್ ರಿಪೋರ್ಟ್ ಕೂಡಾ ಬಂದಿದ್ದು ಪ್ರೆಶರ್ ನಾರ್ಮಲ್   ಇತ್ತು.. ಎಂತ ಸಮಸ್ಯೆಯೂ ಇಲ್ಲ..ಗ್ಲೂಕೊಮಾವೂ  ಇಲ್ಲ, ಕೊಮಾವೂ  ಇಲ್ಲ ಅಂತ ರಿಪೋರ್ಟ್ ಕೊಟ್ಟರು.  ಹ್ಹಾ ... ಸುಮ್ಮನೆ ಇಷ್ಟೊತ್ತು ತಲೆ ಹಾಳು ಮಾಡಿಕೊಂಡಿದ್ದೆ ಬಂತು.   ಸುಖಾ ಸುಮ್ಮನೆ  ಹುಳಬಿಟ್ಟಿರಿ,  ಅಂತ ಆ ಡಾಕ್ಟರಿಗೆ ಹೇಳಿಯೇ ಹೊರ ಬಂದೆ.ಕರೆದು ಕೊಂಡು  ಹೋಗಲು ಬಂದ ನನ್ನವರ ಮೇಲೆ ಈಗ ಸಿಟ್ಟು. ಅವರೇ ಕಳಿಸಿದ್ದಲ್ವಾ..? ಮುಕ್ಕಾಲು ಘಂಟೆಯ ಅಂಧಕಾರದಲ್ಲಿ ಎಷ್ಟೆಲ್ಲಾ  ಅನುಭವ.. 

ನೋಡಿ, ಈ ದುಗುಡ ಅನ್ನುವುದು ಸುಮ್ಮನೆ ಗೊತ್ತಿಲ್ಲದೇನೆ ಮನಸ್ಸಿನೊಳಗೆ ಸೇರಿಕೊಂಡು ಬಿಡುತ್ತೆ.. ಎಲ್ಲದಕ್ಕೂಈ ಕಾಲದಲ್ಲಿ   ಪರಿಹಾರ ಇದೆ ಅನ್ನುವುದು ಗೊತ್ತಿದ್ದರೂ ಸುಮ್ಮನೆ ಉದ್ವೇಗ,
  ಈ ಭಾವಗಳು  ಒಂಥರಾ ನಮಗೆ ಗೊತ್ತಿಲ್ಲದೇನೆ ನಮ್ಮನ್ನು ಆಳುತ್ತಿರುತ್ತದೆ. ಭಯ, ಗೊಂದಲ, ದುಗುಡ,  ಉದ್ವೇಗ ಹೀಗೆ. ಕೆಲವೊಮ್ಮೆ ಎಲ್ಲವೂ !  ಪರಿಹಾರ ಇದೆ ಅನ್ನುವುದು  ಗೊತ್ತಿಲ್ಲದ್ದೇನೂ ಅಲ್ಲ.   ಸುಮ್ಮ ಸುಮ್ಮನೆ ತಲೆ ಬಿಸಿ ಮಾಡುತ್ತಿರುತ್ತದೆ..  ಎಷ್ಟೋ ಸಲ ನಮಗೆ ಆಗುತ್ತಿರುವ ಭಾವ  ಏನು  ಅಂತ ಗೊತ್ತಾಗುವುದೂ ಇಲ್ಲ..   ಬೇರೆಯವರ ವಿಚಾರದಲ್ಲಾದರೆ  ಕೆಲವೊಮ್ಮೆ  ಅದಕ್ಕೆ ಜಾಗ್ರತೆ ಅನ್ನುವ ಹೆಸರು ಕೊಟ್ಟು ಮರ್ಯಾದೆ ಉಳಿಸಿಕೊಳ್ಳಬಹುದು ಬೇಕಿದ್ದರೆ.  ಕೆಟ್ಟ ಅಡುಗೆಯ ಮೇಲೆ ಕಾಯಿ ತುರಿ, ಕೊತ್ತಂಬರಿ ಸೊಪ್ಪಿನ ಅಲಂಕಾರ ಮಾಡಿದ ಹಾಗೆ.


 ಮೊನ್ನೆ ಉತ್ತರ ಭಾರತದ ಕಡೆ ಪ್ರವಾಸ ಹೋಗಿದ್ದೆವಲ್ಲ.. ಮಧ್ಯದಲ್ಲಿ ನಮ್ಮ ಟ್ಯಾಕ್ಸಿಯವನು ಯಾವುದೋ ಒಂದು  ಹೋಟೆಲ್ ಗೆ ಕರೆದೊಯ್ದ. ನೋಡುತ್ತಿದ್ದಂತೆಯೇ   ನಾಲ್ಕಾರು ಅಂಧ ಕುಟುಂಬಗಳು ಅದೇ ಹೋಟೆಲಿಗೆ ಬಂದವು..  ಗಂಡ, ಹೆಂಡತಿ ಇಬ್ಬರೂ ಕುರುಡರೇ, ಮಕ್ಕಳು ಮಾತ್ರಾ ಅಲ್ಲ.. ಅವರಿಗೆ ಶಬ್ಧ ಮಾಧ್ಯಮವೇ ಮುಖ್ಯ.  ಹೋಟೆಲಿನಲ್ಲಿ ಗೌಜು.  ಹೋಟೆಲ್ ಸೂಪರ್ವೈಸರ್ ಕೂಡಾ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದ ಕಾಣುತ್ತೆ..    ನಮಗೆ  ಊಟ ಮಾಡುವುದಕ್ಕಿಂತ ಅವರನ್ನು ಗಮನಿಸುವುದೇ ಸೋಜಿಗದ ವಿಚಾರವಾಗಿತ್ತು.   ಕಣ್ಣಿದ್ದವರಾಗಿದ್ದರೆ ಯಾಕ್ಲಾ .. ಗುರಾಯಿಸ್ತೀಯಾ.. ಹೆಂಗೈತೆ ಮೈಗೆ?  ಅನ್ನುವಷ್ಟು.    ಅವರು ಊಟ ಮಾಡುವಾಗ ಬಟ್ಟಲನ್ನು  ಹೇಗೆ ನಿಧಾನಕ್ಕೆ ತಡವಿ  ಪರೀಕ್ಷಿಸುತ್ತಾರೆ.    ರೋಟಿ, ದಾಲ್ . ಸಬ್ಜಿ ಗಳನ್ನೆಲ್ಲಾ ಕೈ ಬೆರಳುಗಳಿಂದ ಮುಟ್ಟಿದಿಕ್ಕು ಗುರುತಿಸಿಕೊಂಡರು.    ಎಲ್ಲರೂ ಅದೆಷ್ಟು ಆತ್ಮ ವಿಶ್ವಾಸದಿಂದಿದ್ದರು  ಅಂದ್ರೆ   ನನಗೆ   ಐ ಕೇರ್ ಸೆಂಟರಿನ ಕಥೆ ನೆನಪಾಗಿ ನಗು ಬಂತು. ಯಾರೊಬ್ಬರೂ ಕಂಬ , ಟೇಬಲ್ಲು, ಕುರ್ಚಿ ಇನ್ನಿತರೇ ವಸ್ತುಗಳನ್ನು ಎಡವಲಿಲ್ಲ.. ಬೀಳಲಿಲ್ಲ.. ಯಾರಿಗೆಲ್ಲಾ ಫೋನ್ ಮಾಡಿದರು..! ಮನಸ್ಸು ಒಂಥರಾ ಒದ್ದೆ ಒದ್ದೆ .   ನನ್ನ ಮಗಳು  ತಮ್ಮನಿಗೆ ಹೇಳುತ್ತಿದ್ದಳು.. ಅವರು ಮೊಬೈಲನ್ನು ಬಳಸುವ ಬಗೆ ಕುರಿತು .. ಐದು ಸಂಖ್ಯೆಯ ಮೇಲೊಂದು ಚುಕ್ಕಿ ಇರುತ್ತೆ, ಅದನ್ನು ಗುರುತಿಸಿಕೊಂಡು  ಅದರ ಆಚೀಚೆ, ಮೇಲೆ ಕೆಳಗೆ  ಇರುವ ಸಂಖ್ಯೆಗಳನ್ನು  ನೆನಪಿಟ್ಟುಕೊಂಡು ಬಳಸುತ್ತಾರೆ ಅಂತ..
ಅವರ ಸೂಕ್ಷ್ಮತೆಗೆ,  ಆತ್ಮ ವಿಶ್ವಾಸಕ್ಕೆ ಶರಣು ಶರಣೆನ್ನುವೆ..  

 ಜೀವನ ಅನ್ನುವುದು ಯಾವ್ಯಾವುದೋ ಸಂದರ್ಭದಲ್ಲಿ  ಏನೇನನ್ನೋ ಕಲಿಸುತ್ತೆ !   ಗೊತ್ತಿಲ್ಲದೇನೇ,  ಕಷ್ಟ ಪಡದೇ  ಜ್ಞಾನದ ಹನಿ ಶೇಖರವಾಗುತ್ತೆ ತುಸುವಾದರೂ. 

 ಹೀಗೆ ಅಲ್ಪ ಸ್ವಲ್ಪ ಜೀವನವನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ   ಅನ್ನುವ ಹೆಮ್ಮೆಯೊಂದಿಗೆ ನಾನಿರಬೇಕಾದರೆ  ನನ್ನ ಬ್ಲಾಗು   ನಾಲ್ಕು ಕಳೆದು ಐದನೇ  ವರ್ಷಕ್ಕೆ ಕಾಲಿಡುತ್ತಾ ಇದೆ ಅನ್ನುವ ಜ್ಞಾನವೂ ಆಗಿ ಅದನ್ನೇ ಎಲ್ಲರಲ್ಲಿ   ಟಾ೦  .. ಟಾ೦ ಹೊಡೆಯುತ್ತಿದ್ದೇನೆ.

ವಂದನೆಗಳು.  


38 comments:

 1. ವಿಜಯಶ್ರೀ,
  ತುಂಬ ಆಪ್ತವಾದ ಬರವಣಿಗೆ. ವಿನೋದದ ಜೊತೆಗೆ ಜೀವನದರ್ಶನವನ್ನು ಮಾಡಿಸಿದ್ದೀರಿ. ಕಣ್ಣು ತೆರೆಯಿಸುವಂತಹ ಲೇಖನ ಎಂದು ಹೇಳಲೆ!

  ReplyDelete
  Replies
  1. ಕಾಕಾ, ಗಂಭೀರ ವಿಷಯವನ್ನೂ ವಿನೋದ ಮಾಡುವುದು ಒಂಥರಾ ಚಟವಾಗಿ ಬಿಟ್ಟಿದೆ.. :) ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.

   Delete
 2. ಒಂದು ಒಳ್ಳೆಯ ಲೇಖನ ವಿಜಯಕ್ಕಾ.. ಹೀಗೇ ಬ್ಲಾಗ್ ಬರಹ ಮುಂದುವರೀಲಿ :) ಅಭಿನಂದನೆಗಳು

  ReplyDelete
 3. ಅಂಧಕಾರವನ್ನು ಕಳೆಯುತ್ತಾ ನಾಲ್ಕು ವರುಷಗಳ ಕಾಲ ನಮಗೆ ಜ್ನಾನವನ್ನು ಹಂಚಿದ್ದೀರಿ. ಹೀಗೆ ಬ್ಲಾಗಿಸುತ್ತಾ ಇರಿ.

  ReplyDelete
  Replies
  1. ಹ್ಹ.. ಹ್ಹ.. ಸುಬ್ರಹ್ಮಣ್ಯ .. ಆಪ್ತವಾಗಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

   Delete
 4. ಪಾಪ...
  ಸುಮ್ನೆ ಭಯ ಪಟ್ಟು ಏನೇನೆಲ್ಲ ಯೋಚನೆ ಮಾಡ್ಬಿಟ್ರಲ್ಲ?
  ಲಘು ಹಾಸ್ಯದ ಜೊತೆಗೆ ಮೂಡಿಬಂದ ಲೇಖನ ಮನಸ್ಸಿಗೆ ಖುಷಿ ನೀಡಿತು.
  ಹಾಗೆಯೇ ಐದನೇ ವರ್ಷಕ್ಕೆ ಕಾಲಿಟ್ಟ ನಿಮ್ಮ ಬ್ಲಾಗಿಗೆ ಅಭಿನಂದನೆಗಳು
  ಹೀಗೆ ನಿರಂತರವಾಗಿ ಬರವಣಿಗೆಗಳು ಹರಿದು ಬರುತ್ತಿರಲಿ.........

  ReplyDelete
  Replies
  1. ಪ್ರವೀಣ, ಸುಮ್ಮನೆ ಕೂತಾಗ ಎಲ್ಲಾ ಆಲೋಚನೆ ಬಂದುಬಿಡುತ್ತದೆ..:) ಥ್ಯಾಂಕ್ಸ್ ..

   Delete
 5. ವಿಜಯಕ್ಕಾ ಈ ಮನಸ್ಸೇ ಎಷ್ಟು ವಿಚಿತ್ರ ಅಲ್ವಾ?? ಕಥೆ ಕವನ ಬರ್ಯಕ್ಕೆ ಅಂತಾ ಹೋದಾಗ ಮಾಯವಾಗುವ ಕಲ್ಪನೆಗಳು ಇಂಥದ ಎನಾದ್ರೂ ತಲೆ ಒಳಗೆ ಹೊಕ್ಕಿದ್ರೆ ಅದ ಹೆಂಗೆ ವಿವಿಧ ಸಂಚಿಕೆಗಳಾಗಿ ಬಂದ್ ಬಿಡತ್ತೆ....
  ನಂಗೂ ಪರೀಕ್ಷೆ ಹೊತ್ನಲ್ಲಿ ಇಂಥದೇ ಅಲೋಚ್ನೆ ...ನಾಳೆ ಪೇಪರ ಕಷ್ಟ ಬರತ್ತಂತೆ ಅನ್ನೋ ಗಾಳಿ ಸುದ್ದಿ ಬಂದ್ರೆ ಸಾಕು ಶುರು ಫೇಲ್ ಆದ್ರೆ ?? ಏನ್ ಮಾಡ್ಲಿ,ಇಂಜಿನಿಯರಿಂಗ್ ಬಿಟ್ ಬಿಡ್ಲಾ?? ಎಲ್ಲಾದ್ರೂ ಗಡ್ಡ ಬಿಟ್ಕೊಂಡು ಜೋಳಿಗೆ ಹಾಕಿ ಹೊರಟು ಬಿಡ್ಲಾ,ಅಮ್ಮಂಗೆ ಎಂತಾ ಹೇಳದು..ಮುಗಿಯದ ಧಾರಾವಾಹಿ ಈ ಯೋಚನೆಗಳು!!!!!
  ಚೆನಾಗಿದೆ ಬರೆದ ರೀತಿ :) ಬರೀತಾ ಇರಿ,...

  ReplyDelete
  Replies
  1. ಚಿನ್ಮಯ, ಹೌದು ಮಾರಾಯ, ಮುಗಿಯದ ಆಲೋಚನೆಗಳು .. ಮೆಘಾ ಸೀರಿಯಲ್ಲುಗಳೇ ..:)

   Delete
 6. ಒಳ್ಳೆಯ ನಿರೂಪಣೆ ಮನ ಮುಟ್ಟುವ ಬರವಣಿಗೆ. ಖುಶಿಯಾಯಿತು ಓದಿ. ಐದನೇ ವರ್ಷಕ್ಕೆ ಕಾಲಿಡುತ್ತಿರುವುದಕ್ಕೆ ಅಭಿನಂದನೆಗಳು.

  ReplyDelete
  Replies
  1. ಮೇಡಂ, ನನ್ನ ಬ್ಲಾಗಿಗೆ ಸ್ವಾಗತ.. ನನ್ನ ಬರವಣಿಗೆಗೆ ತಮ್ಮಂತವರೆ ಸ್ಫೂರ್ತಿ.. ಓದಿ ಖುಷಿ ಪಟ್ಟಿದ್ದು ನನಗೂ ಸಂತಸವನ್ನೇ ತಂದಿತು. ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು.

   Delete
 7. ಹಾಗೆಲ್ಲ ಆಗೋದಿಲ್ಲ ಬಿಡಿ.. ಇನ್ನೂ ಎಷ್ಟೊಂದು ಬರ್ಯೋದು, ಓದೋದು, ಬಿಡಿಸೋದು ಇದೆ.. ಹಾಗೆಯೇ ಬ್ಲಾಗ್ ಗೆ ನಾಲ್ಕು ತುಂಬಿದ್ದಕ್ಕೆ ಅಭಿನಂದನೆಗಳು.. ಓದುತ್ತೀರಿ.. ಬರೆಯುತ್ತೀರಿ. ಬಿಡಿಸುತ್ತೀರಿ..

  ReplyDelete
  Replies
  1. ಹೌದು ದಿಲೀಪ.. ಸುಮಾರು ಕೆಲಸ ಇದ್ದು.. ಕೆಲವ್ಯು ಸಮಯ ಹಾಗೆ ಇದ್ದಿದ್ದಕ್ಕೆ ಎಷ್ಟೆಲ್ಲಾ ಆಲೋಚನೆ ಬಂದಿತು.. ಹೀಗೆ ಸುಮ್ಮನೆ..
   ತುಂಬಾ ಥ್ಯಾಂಕ್ಸ್ ..

   Delete

 8. ಅಭಿನಂದನೆಗಳು...
  ಬ್ಲಾಗಿನ ಹುಟ್ಟು ಹಬ್ಬಕ್ಕೆ..
  ಚಂದದ ಬರವಣಿಗೆಗೆ...

  ReplyDelete
 9. ಜೀವನ ಅನ್ನುವುದು ಯಾವ್ಯಾವುದೋ ಸಂದರ್ಭದಲ್ಲಿ ಏನೇನನ್ನೋ ಕಲಿಸುತ್ತೆ ! ಗೊತ್ತಿಲ್ಲದೇನೇ, ಕಷ್ಟ ಪಡದೇ ಜ್ಞಾನದ ಹನಿ ಶೇಖರವಾಗುತ್ತೆ ತುಸುವಾದರೂ. >>> 100% True VIjayakka... :) Nice article... Congrats for Chukkichittara :)

  ReplyDelete
 10. ಇಲ್ಲದಿದ್ದಾಗಲೇ ಅಲ್ವಾ ವಸ್ತುವಿನ ಬೆಲೆ ತಿಳಿಯೋದು.. ಚೆಂದದ ಬರಹ.. ಬ್ಲಾಗಿನ ಹುಟ್ಟುಹಬ್ಬಕ್ಕೆ ಶುಭಾಶಯಗಳು

  ReplyDelete
 11. ಇರುವುದು ಇಲ್ಲ ಅಂತ ಆಗುತ್ತೆ ಅಂದಾಗಲೇ ಅದರ ಬೆಲೆ ಗೊತ್ತಾಗೋದು ಅಲ್ವಾ.. ಸುಂದರ ಬರಹ.. ನಿಮ್ಮ ಸಣ್ಣ ಕೂಸಿಗೆ ಹುಟ್ಟುಹಬ್ಬದ ಶುಭಾಶಯಗಳು

  ReplyDelete
  Replies
  1. ಥ್ಯಾಂಕ್ಸ್ ಅನಿತಾ .. ಇಲ್ಲದಿದ್ದಿದ್ದೆ ಬೇಕು ಅನ್ನಿಸುವುದು ಕೂಡಾ ..

   Delete
 12. ಚಂದದ ಲೇಖನ..... ನಿಮ್ಮ ಸಾಲುಗಳ ಜೊತೆ ಆ ಪರಿಸ್ಥಿತಿಯನ್ನು ನಾನು ಅನುಭವಿಸುತ್ತಿದ್ದೆ.... ಮತ್ತೊಮ್ಮೆ ಶುಭಾಶಯಗಳು.... :-)

  ReplyDelete
 13. ನನಗೂ ಕೆಲವೊಮ್ಮೆ ನಾನು ಆಕಸ್ಮಾತ್ ಸತ್ತು ಹೋದರೆ ಏನೆಲ್ಲಾ ಆಗಬಹುದು..ಎಂಬ ಆಲೋಚನೆ ತಲೆಯಲ್ಲಿ ಬಂದು ನಿಮ್ಮಂತೆಯೇ ಚಡಪಡಿಸಿದ್ದೇನೆ.ನಿಮ್ಮ ಲೇಖನ ನನ್ನನ್ನು ಓದಿಸಿಕೊಂಡೊಯಿತು.

  ReplyDelete
  Replies
  1. ನಿಜ ಸುಮ್ಮನೆ ಕೂತಾಗ ಬೇಡದಿದ್ದಿದ್ದೆಲ್ಲಾ ಯೋಚನೆಯಾಗುತ್ತೆ.. ಥ್ಯಾಂಕ್ಸ್

   Delete
 14. ಅಕ್ಕಾ...
  ಎಷ್ಟ್ ಚೆನಾಗಿ ಬರದ್ದೆ ಅಂದ್ರೆ ಸುಲಲಿತ ಪ್ರಬಂಧ.
  ಫಷ್ಟ್ ಫಷ್ಟಿಗೆ ಖುಶ್ಯಾತು ಆಮೇಲೆ ಹೆದ್ರಿಕೆಯಾತು. ಕೊನಿ ಕೊನಿಗೆ ಸಮಾಧಾನ ಆತು.
  ಬರಹದ ವಿನೋದದ ಬಟ್ಟಲಲ್ಲಿ ವಿವೇಕದ ಪಾಕ!
  ಕಣ್ಣಿಲ್ಲದೆ ಬದುಕುವವರ ಆತ್ಮವಿಶ್ವಾಸ ದೊಡ್ಡದು.
  ಕಣ್ಣಿದ್ದೂ ಕಾಣದವರ ಹಾಗೆ ಬದುಕೋದು ನಮ್ಮ ಅಭ್ಯಾಸ.
  ಓದಿ, ಒಳ್ಳೆಯ ಓದಿನ ಖುಶಿ ಸಿಕ್ಚು.
  ನಿನ್ ಬ್ಲಾಗ್ ಮರೀಗೆ ಐದನೇ ವರ್ಷದ ಹಾರ್ದಿಕ ಶುಭಾಶಯ. ಬ್ಲಾಗಮ್ಮನಿಗೆ ಅಭಿನಂದನೆಗಳು.
  -ಸಿಂಧು

  ReplyDelete
  Replies
  1. ಥ್ಯಾಂಕ್ಸ್ ಸಿಂಧು,

   ಬರಹ ಓದಿ ಕುಶಿ ಪಟ್ಟಿದ್ದಕ್ಕೆ,
   ಆಲೋಚನೆ ಮಾಡ್ತಾ ಹೋದ್ರೆ ತಲೆ ತುಂಬಾ ಹೀಗೆ ವಿಚಾರ ಬರುತ್ತೆ ..:)

   Delete
 15. ಕತ್ತಲು ಕವಿದಾಗಲೇ....
  ಬೆಳಕಿನ ಮೌಲ್ಯ ಅರಿವಾದದ್ದು....

  ನಿಮ್ಮ ನೇತ್ರ ಪುರಾಣ ಚೆನ್ನಾಗಿದೆ...
  ಮನಸಿನ ತಳಮಳಗಳನ್ನು ಮನಮುಟ್ಟುವಂತೆ ಅತ್ಯಂತ ಸರಳವಾಗಿ ಮತ್ತು ರಸಮಯವಾಗಿ ಬರೆದಿದ್ದೀರಿ....
  ಅಭಿನಂದನೆಗಳು...

  ReplyDelete
  Replies
  1. ನಿಜ, ಕತ್ತಲಿನಲ್ಲಿಯೇ ಬೆಳಕಿನ ಮಹತ್ವ ಅರಿವಾಗುವುದು..:) ಆತ್ಮೀಯ ಪ್ರತಿಕ್ರಿಯೆಗೆ ವಂದನೆಗಳು ..

   Delete
 16. ತುಂಬಾ ಒಳ್ಳೆಯ ಲೇಖನ.

  ReplyDelete
 17. ಹೌದು ನಾನು ಹಲವು ಬಾರಿ ಕಣ್ಣಿಲ್ಲದವರನ್ನು ಗಮನಿಸಿ ಅವರ ಚಾಣಾಕ್ಷತನ ಕಂಡು ಆಶ್ಚರ್ಯಪಟ್ಟಿದ್ದೇನೆ... ಜೀವನದಲ್ಲಿ ಎಲ್ಲರಿಗೂ ಎಲ್ಲವೂ ದೊರೆಯುವುದಿಲ್ಲ. ಆದರೆ ಇಲ್ಲದ್ದಕ್ಕೆ ಕೊರಗದೆ ಆ ಕೊರತೆಯನ್ನು ಮೆಟ್ಟಿ ನಿಲ್ಲುವುದೇ ಜೀವನದ ಸಾರ್ಥಕತೆ! ತುಂಬಾ ಚೆನ್ನಾಗಿದೆ ಲೇಖನ.
  ನಾನು ನಿಮ್ಮ ಬ್ಲಾಗಿನ ಹಳೆಯ ಸದಸ್ಯ... ಈ ನಡುವೆ ಅಪರೂಪವಾಗಿಬಿಟ್ಟಿದ್ದೆ.. ಐದನೇ ವರ್ಷಕ್ಕೆ ಕಾಲಿಡುತ್ತಿರುವ ನಿಮ್ಮ ಬ್ಲಾಗಿಗೆ ಶುಭಾಶಯಗಳು. ಸಮಯವಾದಾಗ ನನ್ನ ಬ್ಲಾಗಿಗೊಮ್ಮೆ ಬನ್ನಿ. ಧನ್ಯವಾದಗಳು!

  ReplyDelete
  Replies
  1. ಜೀವನದಲ್ಲಿ ಎಲ್ಲರಿಗೂ ಎಲ್ಲವೂ ದೊರೆಯುವುದಿಲ್ಲ.ಇಲ್ಲದ್ದಕ್ಕೆ ಕೊರಗದೆ ಆ ಕೊರತೆಯನ್ನು ಮೆಟ್ಟಿ ನಿಲ್ಲುವುದೇ ಜೀವನದ ಸಾರ್ಥಕತೆ! ಸತ್ಯದ ಮಾತು.. ನೆನಪಿದೆ ನಿಮ್ಮನ್ನು ..:) ಧನ್ಯವಾದಗಳು

   Delete
 18. ನಾನು ಒಮ್ಮೆ ಕಣ್ಣಿಗೆ ಡ್ರಾಪ್ಸ್ ಹಾಕ್ಯಂಡ್ ಕುತ್ಗಂಡು ಅಮ್ಮನ ಕೇಳಿದ್ದೆ, " ಕುರುಡು ಆದ್ರೆ ಏನಮ್ಮ ಮಾಡ್ಲಿ " ಹೇಳಿ. ಅದಿಕ್ಕೆ ಅಮ್ಮ ಪ್ರೀತಿಯಿಂದ ಬೈದಿದ್ದು " ಈ ನಮ್ನಿ ಹಲಬತೆ, ಕಣ್ಣ ಬದ್ಲು ಮಾತು ಹೋಗಿದ್ರೆ ತಲೆಹರಟೆ ಕಡಮೆ ಆಗಿ ಯಂಗ ಒಂಚೂರು ಅರಾಮಿರ್ತಿದ್ಯ..!! " ಹೇಳಿ.

  ಸುಮ್ನೆ ಕುಂತ್ರೆ ಹಂಗೆ ಕಾಣ್ತು, ಇಲ್ಲದ್ದೆಲ್ಲ ತಲಿಗೆ ಬರ್ತು. ಅದಕ್ಕೆ ಇನ್ನಷ್ಟು ಬರಿತಾ, ಓದ್ತಾ, ಚಿತ್ರ ಬಿಡಸ್ತ, ನಂಗಳ ಅಜ್ನಾನಾನೂ ದೂರ ಮಾಡ್ತಾ ಇರು ವಿಜಯಕ್ಕ,...

  ಐದು ವರುಷದ ಖುಷಿ ಹೀಗೆ ಇರಲಿ ..

  ReplyDelete
  Replies
  1. ಹ್ಞೂ ಸಂಧ್ಯಾ .. ನನ್ನಮ್ಮನೂ ಹೇಳ್ತಾ ಇರ್ತ ಮರದ ಬಾಯಾಗಿದ್ರೆ ಇಷ್ಟೊತ್ತಿಗೆ ಒಡೆದು ಚೂರಾಗ್ತಿತ್ತು ಹೇಳಿ ... ಬ್ಯಾಡದೇ ಇದ್ದಿದ್ದೆ ಮೊದ್ಲು ನೆನಪಾಗ್ತು ಹೌದಾ..? ಪ್ರೀತಿಯ ಕಾಮೆಂಟಿಗೆ ಥ್ಯಾಂಕ್ಸ್ಉ

   Delete
 19. ಈ ಮನಸ್ಸು ಎಂಥ ವಿಚಿತ್ರ. ಎಷ್ಟು ಬೇಗ ಎಲ್ಲೆಲ್ಲೆ ವಿಹರಿಸುತ್ತೆ, ಎಷ್ಟೆಲ್ಲ ಚಿಂತೆಗಳನ್ನು ಕೊಡುತ್ತೆ, ಹಾಗೆಯೇ ನಿರಾಳವನ್ನೂ.
  ನಾಳ್ಕು ತುಂಬಿದ ಬ್ಲಾಗಿನ ಒಡತಿಗೆ ಶುಭಾಶಯ.

  ReplyDelete
  Replies
  1. ರುಕ್ಮಿಣಕ್ಕ... ಮನಸು ಹೇಳೋದನ್ನ ನಿಲ್ಲಿಸಲು ಬಂದಿದ್ರೆ ಚನ್ನಾಗಿರ್ತಾ ಇತ್ತು.. :) ಥ್ಯಾಂಕ್ಸ್

   Delete
 20. ಚಿಂತೆಯೆನ್ನುವುದು ವಿಕ್ರಮನ ಬೆನ್ನಿಗೆ ಏರಿದ ಬೇತಾಳದಂತೆ.. ಬೇಕೋ ಬೇಡವೋ ಹೆಗಲಿಗೇರಿದ ಮೇಲೆ ಅದು ಕೇಳುವ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಹೇಳಲೇಬೇಕು.. ಹೇಳಿದಾಗ ಇನ್ನೊಂದು ಪ್ರಶ್ನೆ ಸಿದ್ಧವಾಗಿರುತ್ತದೆ. ಸುಂದರ ಬರಹ ಮೆಟ್ಟಿಲುಗಳನ್ನು ಏರುತ್ತಾ ಹೋದಂತೆ ಇನ್ನೊಂದು ಪ್ರಪಂಚ ಅರಿವಿಗೆ ಬರುವಂತೆ ಲೇಖನ ಓದುತ್ತಾ ಹೋದ ಹಾಗೆಲ್ಲ ಹೊಸ ಪ್ರಪಂಚವನ್ನು ನಮ್ಮೆದುರಿಗೆ ತೆರೆದಿಟ್ಟಂತೆ ಭಾಸವಾಯಿತು. ಸೂಪರ್ ಮೇಡಂ

  ReplyDelete