Sunday, April 24, 2011

ಅಪ್ಪಯ್ಯನ ಹಳೆ ಸೈಕಲ್ಲೂ.. ಕೆಂಪಿ ದನವೂ..

 ನನ್ನ ತಂದೆಯವರ ಬಳಿ ಒಂದು ಹಳೆ ಸೈಕಲ್ ಇದೆ.ಸಾವಿರದೊ೦ಬೈನೂರಾ  ಐವತ್ತೇಳನೆ ಇಸವಿಯಲ್ಲಿ ನೂರಾ ಐವತ್ತೈದು ರೂಪಾಯಿಗಳಿಗೆ ಅವರು ಚೌಕಾಸಿ ಮಾಡಿ ಖರೀದಿಸಿದ್ದು ಅದು.  ಅದು ಎಷ್ಟು ಹಳೆಯದು ಎಂದು  ಅವರಿಗೂ  ಗೊತ್ತಿಲ್ಲ..! ಆವರು ಖರೀದಿಸಿದ್ದೇ ಸೆಕೆಂಡ್ ಹ್ಯಾಂಡ್ ಸೈಕಲ್ಲು.. ಈಗ  ಅದರ ಬಹುತೇಕ ಎಲ್ಲಾ ಭಾಗಗಳನ್ನೂ ಬದಲಾಯಿಸಲಾಗಿದೆ.. ! ಎಲ್ಲಾ ಪಾರ್ಟ್ಸೂ ಒಟ್ಟಿಗೆ  ಹಾಳಾಗದು.ಅಂತೆಯೇ   ಹೊಸ ಬಿಡಿ ಭಾಗ ಜೋಡಿಸಿದಾಗ ಹಳೆ ಭಾಗದ ಹಳೆತನ ಮುಂದುವರೆದುಕೊಂಡು ಹೋಗುತ್ತಿರುತ್ತದೆ. ಅಂತೂ   ಅಪ್ಪಯ್ಯನಿಗೆ [ನಮ್ಮ ತಂದೆ ] ವಯಸ್ಸು  ಈಗ ಎಪ್ಪತ್ತೈದು ದಾಟಿದ ಹಾಗೆ ಅದಕ್ಕೂ ಐವತ್ತೊಂದೆರಡಾದರೂ ದಾಟಿದ್ದಿರಲೇ ಬೇಕು!

ಅಪ್ಪಯ್ಯ ಕಷ್ಟ ಜೀವಿ.. ಬಹು ಕಷ್ಟದ ಬಾಲ್ಯ . ಅಪ್ಪಯ್ಯನ ಬದುಕನ್ನು ಅವನೇ ಬದುಕಿದ್ದಾನೆ. ಕಿತ್ತಳೆ ಹಣ್ಣಿನ ಬುಟ್ಟಿಯನ್ನು ತಲೆ ಮೇಲೆ ಹೊತ್ತು  ಹದಿನೈದು ಮೈಲಿ ದೂರದ ಸಂತೆಗೆ ಹೋಗಿ ಮಾರಿ ಸಿಕ್ಕ ಹಣದಲ್ಲಿ ದಿನಸಿ ತಂದು ಆವತ್ತಿನ ಊಟ ಉಣ್ಣುವ ಪರಿಸ್ಥಿತಿ ಇತ್ತಾಗ.   ಪರಿಸ್ಥಿತಿ ಸ್ವಲ್ಪ ಸುಧಾರಿಸಿದಾಗ ಖರೀದಿಸಿದ ಸೈಕಲ್ಲು ಅವನ ಬಹುತೇಕ ಕಷ್ಟಗಳನ್ನು ತಾನೂ ಹಂಚಿಕೊಂಡಿದೆ. ಅದಕ್ಕಾಗಿಯೇ ಏನೋ ಅದರ ಮೇಲೆ ತೀವ್ರ  ಅಭಿಮಾನ ಆಪ್ಪಯ್ಯನಿಗೆ. ಜೀವನದ ಕಷ್ಟದ ಸಮಯದಲ್ಲಿ ಜೊತೆ ಕೊಟ್ಟ ಯಾರೇ ಆಗಲಿ, ಅದು ಜೀವವೇ ಆಗಲೀ ಜಡವೇ ಆಗಲೀ ಅದರೆಡೆಗೊಂದು ಅಭಿಮಾನ ಕೊನೆವರೆಗೂ  ಮನುಷ್ಯನಲ್ಲಿ ಬೇರೂರಿರುತ್ತದೆ.ಅದನ್ನು ಬಾರಿ ಬಾರಿಗೂ ವ್ಯಕ್ತ ಪಡಿಸಲೇ ಬೇಕೆಂದಿಲ್ಲ..  

ಬಸ್ಸು, ಇನ್ನಿತರೇ ವಾಹನಾದಿ ಸೌಕರ್ಯಗಳಾದ ಮೇಲೆ ಅಪ್ಪಯ್ಯ ಅದನ್ನು ಚಲಾಯಿಸುವುದನ್ನು ಬಿಟ್ಟಿದ್ದಾನೆ. ಆದರೆ ಮನೆಗೆ ಬರುವ ನೆಂಟರ ಮಕ್ಕಳಾದಿಯಾಗಿ ಅನೇಕ ಜನರು ಸೈಕಲ್ ಹೊಡೆಯುವುದನ್ನು ಅಪ್ಪಯ್ಯನ ಸೈಕಲ್ಲಿನಲ್ಲಿಯೇ ಕಲಿತಿದ್ದಾರೆ. ದೂರದ ಊರಿಂದ ಕೂಲಿಗೆ ಬರುವ ಕೂಲಿಯಾಳುಗಳಿಗೂ ವಾರಕ್ಕೆ ಮೂರು, ನಾಲ್ಕು ದಿನ ದಾರಿ ಹಾಯಿಸುತ್ತಿದ್ದುದು ಅದರ ಚರಿತ್ರೆಯ ಪುಟಗಳಲ್ಲಿದೆ. ಈಗಲೂ ವರ್ಷಕ್ಕೊಮ್ಮೆ ಅದರ ಒವರ್ಹ್ವಾಲಿಂಗ್ ಮಾಡಿಸಿ ಜತನ ಮಾಡುತ್ತಿರುತ್ತಾನೆ.
 ಅಪ್ಪಯ್ಯ ಎಷ್ಟೋ ಕಷ್ಟಗಳನ್ನು ಸೈಕಲ್ಲಿನ ಜೊತೆಯಲ್ಲಿಯೇ ಅನುಭವಿಸಿದ್ದಾನೆ.  ಹೋರಾಡಿದ್ದಾನೆ, ಬಿದ್ದಿದ್ದಾನೆ, ಗೆದ್ದಿದ್ದಾನೆ.ಈಗ ಮನೆಯಲ್ಲಿ ಮೊಮ್ಮೊಕ್ಕಳದು ಚಿಕ್ಕ ಪುಟ್ಟ ಸೈಕಲ್ಲಿನಿಂದ ಹಿಡಿದು ಗೇರ್ ಸೈಕಲ್ಲಿನ ವರೆಗೆ ಇದೆ. ಆದರೆ ಅವ್ಯಾವುವೂ ಅಪ್ಪಯ್ಯನ ಸೈಕಲ್ಲಿನ ಯೋಗ್ಯತೆಗೆ ಬರವು. 'ಈಗಿನ  ಹತ್ ಸೈಕಲ್ಲಿನ  ಯೋಗ್ಯತೆ ಯನ್ ಒಂದ್ ಸೈಕಲ್ಲಿನ ಯೋಗ್ಯತಿಗೆ ಸರಿ  ಬತಲೇ..' ಎಂದು ಆಗಾಗ  ಸ್ವಗತದಲ್ಲಿ ಉದ್ಘರಿಸುತ್ತಿರುತ್ತಾನೆ.
'ಬರ್ ಬರ್ತಿದ್ದಂಗೆ ಹಾಳಾಕ್ಯಂಡೆ  ಇರ್ತು...  ಎಂತಾ ಸೈಕಲ್ ಮಾಡ್ತ್ವೆನ..'  ಅಂಗಳದಲ್ಲಿ ಸೈಕಲ್ ಕಸರತ್ತು ನಡೆಸುವ ಮೊಮ್ಮೊಕ್ಕಳನ್ನು  ಕಿಟಕಿಯಿಂದ ನೋಡುತ್ತಾ ತಾಂಬೂಲ ಮೆಲ್ಲುತ್ತಿರುತ್ತಾನೆ..
ಅಪ್ಪಯ್ಯನ ಹಳೆ ಕಷ್ಟದ  ಕಥೆಯಲ್ಲಿ ಸೈಕಲ್ಲಿನದು  ಒಂದು ಪ್ರಮುಖ ಪಾತ್ರ. ಆಗ ಕಷ್ಟ ಪಟ್ಟಿದ್ದೆಲ್ಲವೂ ಈಗ ಅಪ್ಪಯ್ಯನದು  ನೆನಪು ಅಷ್ಟೇ.    ಅದು ಹಾಗೆಯೇ..  ಸುಖದ ಮೆಟ್ಟಿಲಿನಲ್ಲಿ ನಿಂತು ತಿರುಗಿ ನೋಡಿದಾಗ ಪಟ್ಟ ಕಷ್ಟ, ನೋವುಗಳೆಲ್ಲವೂ ಸುಖದ ನೋವುಗಳಾಗೆ ಕಾಣಿಸುತ್ತವೆ. ಜಯಿಸಿದ ಸಾರ್ಥಕ ಭಾವ ಅನ್ನುವುದು  ಕಷ್ಟದ ಎಸೆನ್ಸ್ ಒಂದನ್ನು  ಮಾತ್ರ ಉಳಿಸುತ್ತದೆ.

ಹೀಗಿದ್ದಾಗಲೂ ಒಮ್ಮೆ  ಅಪ್ಪಯ್ಯನಿಗೆ ಆ ಸೈಕಲ್ಲನ್ನು ಮಾರುವ ಆಲೋಚನೆ ಬಂದು ಬಿಟ್ಟಿತ್ತು. ''ನಮಗಂತೂ ಇದು ಇನ್ನು ಉಪಯೋಗಿಲ್ಲೇ. . ಸುಮ್ನೆ ಮನೇಲಿ ತುಕ್ಕು ಹಿಡಿಸ ಬದ್ಲು ಹುಟ್ಟಿದಷ್ಟಕ್ಕೆ ಕೊಟ್ ಹಣದ್ರಾತು.   ಲಾಭಕ್ಕಲ್ಲ, ಪುಗಸಟ್ಟೆ ಕೊಡದು ಬ್ಯಾಡ ಹೇಳಿ.. ಏನ್ ಹೇಳ್ತ್ಯ ಗಣಪಯ್ಯ ನೀನು..'' ಎಂದು ಅಪ್ಪಯ್ಯ ತನ್ನ ಸ್ನೇಹಿತನಲ್ಲಿ ವಿಷಯ ಪ್ರಸ್ತಾಪ ಮಾಡಿದ್ದು ಹೌದು.  ಅಪ್ಪಯ್ಯನ ಕಷ್ಟ ಸುಖಗಳನ್ನೆಲ್ಲಾ ಕಣ್ಣಾರೆ ಕಂಡ ಆ ಸ್ನೇಹಿತ ಹೇಳಿದ್ದಿಷ್ಟು.'' ಹೌದೌದು.. ನಿಂಗೆ ಇದೊಂದು ಸೈಕಲ್ಲೂ ..ಮತ್ತೆ ಕೆಂಪಿ ದನಾನೂ ಮಾರ್ಕ್ಯಂಡೆ  ಅರಮನೆ ಕಟ್ಸಕೂ ಅಂತ ವಿಚಾರಿದ್ದು  ಕಾಣ್ತು'' ಎಂದು ಒಂದೇ ಮಾತಿನಲ್ಲಿ ಅಪ್ಪಯ್ಯನ
ವಿಚಾರಕ್ಕೆ ಕೊಡಲಿ ಏಟು ಹಾಕಿದ. ಅಪ್ಪಯ್ಯ ನಿಜಕ್ಕೂ ತಾನು ಈ ತರಾ ವಿಚಾರ ಮಾಡಿದೆನಲ್ಲಾ ಎಂದು ಭಾರೀ ಬೇಜಾರು ಮಾಡಿಕೊಂಡದ್ದು ನನಗಿನ್ನೂ ನೆನಪಿದೆ.


ಕೆಂಪಿ ದನವೂ ಅಷ್ಟೇ.ಅದು ನಮ್ಮನೆಯಲ್ಲೇ ಹುಟ್ಟಿದ ಕರು ದೊಡ್ಡದಾಗಿದ್ದು. ಬಹುಷಃ ನಮ್ಮೂರಲ್ಲಿ ಯಾರ ಮನೆಗೆ ಹೋದರು ಕೆಂಪಿ ಅನ್ನುವ ಹೆಸರಿನ ದನವೊಂದಿರುತ್ತದೆ. ದನಗಳಿಗೆ ಕೆಂಪಿ, ಗಂಗೆ, ಗೌರಿ, ಕಪಿಲೆ, ಬೆಳ್ಳಿ, ಈ ಹೆಸರುಗಳು ಮಾಮೂಲು. ಅದು ಹೇಗಿತ್ತಪ್ಪಾ ಅಂದ್ರೆ, ಗಾ೦ವಟೀ ದನ ಕುಳ್ಳಕ್ಕೆ, ಚಿಕ್ಕದಾಗಿ,  ಮುದ್ದಾಗಿ ಇತ್ತು.ಬಣ್ಣ ಕೂಡಾ ಕೆಂಪೇ.  ಕರು ಹಾಕಿದ ದಿನದಿಂದ ಹಾಲು ಕೊಡಲು ಶುರು ಮಾಡಿದರೆ ಮತ್ತೆ ಮೂರು ವರ್ಷಕ್ಕೆ ಮತ್ತೊಂದು  ಕರು ಹಾಕುವ ಹಿಂದಿನ ದಿನದ ವರೆಗೂ ಒಂದು ದಿನವೂ ಬಿಟ್ಟದ್ದಿಲ್ಲ. ಕರು ಹಾಕಿದ ಶುರುವಿನಲ್ಲಿ ಕರುವಿಗೆ ಬಿಟ್ಟು  ಅರ್ಧ ಲೀಟರಿನಷ್ಟು ಹಾಲು  ಕೊಡುತ್ತಾ ಕೊನೆಯಲ್ಲಿ ಅರ್ಧ ಕಾಫೀ ಕಪ್ಪಿನ ಪ್ರಮಾಣಕ್ಕೆ ಇಳಿಯುತ್ತಿತ್ತು. ಅದನ್ನಾದರೂ ಆಯಿ ಎಲ್ಲದಕ್ಕೂ ಮೊದಲಾಗಿ ಕರೆದು ನೋಡುವವರ ಕಣ್ಣು ಬೀಳಬಾರದೆಂದು ಸೆರಗು ಮುಚ್ಚಿ ಅಡುಗೆ ಮನೆಗೆ ಒಯ್ಯುತ್ತಿದ್ದಳು.   ಒಂದು ದಿನ ಒದ್ದಿದ್ದಿಲ್ಲ. ಹಾಯ್ದಿದ್ದಿಲ್ಲ. ದೇವರಿಗೆ ಹೂ ತಪ್ಪಿದರೂ ಕೆಂಪಿ ದನದ ಹಾಲು ತಪ್ಪದು. ಅದು ಇರುವ ವರೆಗೆ ದೊಡ್ದಹಬ್ಬದ   ಗೋ ಪೂಜೆಗೆ  ಬೇರೆ ದನಗಳಿಗೆ ಪ್ರವೇಶವಿರಲಿಲ್ಲ. ಕರು ಹಾಕಿದ ಹತ್ತು ದಿನ ಸೂತಕ ಎಂದು ದೇವರಿಗೆ ನೈವೇದ್ಯಕ್ಕೆ ಅದರ ಹಾಲಿರಲಿಲ್ಲ ಹೊರತಾಗಿ ಕಾಫೀ ಬಳಕೆಗೆ ಅದರದ್ದೇ ಹಾಲು. ಕರು ಹಾಕಿತು ಗಿಣ್ಣ ಸಿಗುವುದೆಂಬ ಭರವಸೆಯನ್ನೆಲ್ಲಾ  ನಾವ್ಯಾರೂ ಇಟ್ಟು ಕೊಳ್ಳುವ ಹಾಗೆಯೇ ಇರಲಿಲ್ಲ.ಸಾರ್ವಕಾಲಿಕ ಹಾಲು ಸರಬರಾಜು ಹಾಗಾಗಿ ಗಿಣ್ಣವಾಗುವುದು ಹೇಗೆ..? ಈ ದನವೇ ಹೆಚ್ಚುಗಾರಿಕೆಗೆ ಕಾರಣವಾಗುವ ಬಗೆ ಹೇಗೆ ಎಂದರೆ ಎಷ್ಟೊತ್ತಿಗೆ ಹೋಗಿ ಹಾಲು ಕರೆದರೂ ಇದ್ದಷ್ಟನ್ನು ಕೊಡುವ ಪರಿ.ಬಂದ ನೆಂಟರಿಗೆ ಕಾಫೀ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಲು ಈ ದನವೇ ಕಾರಣ. ಉಳಿದಂತೆ ನಾಲ್ಕಾರು  ದನಗಳು ಕೊಟ್ಟಿಗೆ ತುಂಬಾ  ಇದ್ದವು ಕೂಡಾ.  ಎಲ್ಲವೂ ಕಾಟು ದನಗಳೇ ಆದರೂ ಅದರಲ್ಲಿ ಎರಡು ಬರಡು, ಒಂದು ಇನ್ನೂ ಕರು ಹಾಕದ  ಮಣಕ, ಇನ್ನೆರಡು ಚಾಳಿ.  ಚಾಳಿ ಮಾಡುವ ದನಗಳೆಂದಾದರೂ ಹೇಗೆ, ಅರ್ಧ ಲೋಟ ಹಾಲು ಕರೆಯಲು ಆಯಿ ಇಪ್ಪತ್ತು ಬಾರಿ ಕೊಟ್ಟಿಗೆಗೂ ಮನೆಗೂ ಓಡಾಡಬೇಕಿತ್ತು.



ಹಾಗಾಗಿ ಈ ಎರಡು ಸಂಗತಿಗಳಲ್ಲಿ ಅಪ್ಪಯ್ಯನಿಗೆ ನಿಯತ್ತಿಗಿಂತಾ ಬೇರೆ ಯಾವುದೂ ಕಾಣಿಸಿಲ್ಲ. ತನ್ನ ಕಷ್ಟದ ಸಮಯದಲ್ಲಿ ಇವೆರಡೂ ತನ್ನ ಕೈ ಬಿಟ್ಟಿಲ್ಲ ಎನ್ನುವ ಸಮಾಧಾನ ಅವನಿಗೆ.ಎಷ್ಟೋ ದೊಡ್ಡ ದೊಡ್ಡ ಸಂಗತಿಗಳು ಇದ್ದರೂ ಕೂಡಾ ಕೆಲವೊಮ್ಮೆ ಚಿಕ್ಕ ಚಿಕ್ಕ ವಿಷಯಗಳಲ್ಲಿ ಸಿಗುವ ಸಾಂತ್ವಾನ ಹೆಚ್ಚಾಗಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ.

ಈಗ ಕೊಟ್ಟಿಗೆ ತು೦ಬಾ ದೊಡ್ಡ ಜಾತಿಯ ದನಗಳೇ ಇವೆ. ಬೇಕಷ್ಟು ಹಾಲು ಕೊಡುತ್ತವೆ. ಆದರೂ ಕಷ್ಟ ಪಟ್ಟು ಪಡೆದಿದ್ದರ ಸುಖ ಇದರಲ್ಲಿಲ್ಲ..! ಆಗ ಪ್ರತಿ ಕ್ಷಣವೂ ಅನುಭವಕ್ಕೆ ಬರುತ್ತಿತ್ತು.. ಕಷ್ಟದ್ದು.!   ಸುಲಭವಾಗಿ ಸಿಕ್ಕುವುದರೆಡೆಗೆ ಯಾವಾಗಲೂ ತಾತ್ಸಾರವೇ ನಮಗೆ. ಮೊಸರು ತಾಡನೆಗೊಳಗಾಗಿ ಆಗಿ ಕೊನೆಯಲ್ಲಿ ಬೆಣ್ಣೆ ಸಿಗುವುದಿಲ್ಲವೇ..?ಹಾಗೆ..ಜೀವನ ಕೂಡ.. ಅಪ್ಪಯ್ಯನ ಪ್ರಕಾರ. ಸುಖದ ಬೆಲೆ ಗೊತ್ತಾಗಬೇಕಿದ್ದರೆ ಅದಕ್ಕಾಗಿ ಹಗಲಿರುಳೂ  ಹಂಬಲಿಸ ಬೇಕು.

ಕೆಂಪಿ ದನ ಈಗಿಲ್ಲ.. ಆದರೆ ಸೈಕಲ್ಲು ಮಾತ್ರಾ ಅಪ್ಪಯ್ಯನ ಕಷ್ಟಗಳಿಗೆ ಸಾಕ್ಷಿಯಾಗಿ ಇನ್ನೂ ಬಳಕೆಯಲ್ಲಿದೆ.


ವಂದನೆಗಳು.

38 comments:

  1. nija nimma appayyanavara maatu... kastadalle sukhavagirodu.. nice article

    ReplyDelete
  2. ನಮ್ಮ ಜೀವನದ ಕೆಲವೊಂದು ವಿಷಯಗಳಿಗೆ ನಮ್ಮಲ್ಲಿರುವ ವಸ್ತುಗಳು ಸಾಕ್ಷಿಗಳಾಗಿಬಿಡುತ್ತವೆ.ನಮ್ಮ ಜೀವನದ ನೆನಪನ್ನ ಮರುಕಳಿಸುತ್ತದೆ..

    ReplyDelete
  3. ಕಷ್ಟಸುಖಗಳಲ್ಲಿ ಜೊತೆಯಾದವರೇ ಕಡೆತನಕ ಆಪ್ತವಾಗಿರೋರು,ಅಲ್ಲವೆ? ನಿಮ್ಮ ತಂದೆಯವರ ಹೃದಯವಂತಿಕೆಗೆ ನನ್ನ ವಂದನೆಗಳು.

    ReplyDelete
  4. ಎಷ್ಟೇ ಆದರು ಹಸು ಕಾಮಧೇನು ಅಲ್ಲವೇ?

    ReplyDelete
  5. ವಿಜಯಶ್ರೀ ಮೇಡಂ ನಮಸ್ತೆ,
    ನಾನು ಹೊಸ ಸೈಕಲ್ ಬೇಕೆಂದು ನಮ್ಮಪ್ಪನಿಗೆ ಕೇಳಿದ್ದು.
    ಅದಕ್ಕವರು, ಊರಲ್ಲಿ ಇರೋ ಸೈಕಲ್ ತರ್ತೇನೆ ಹೊಸಾದು ಯಾಕೆ ಅಂದಿದ್ದು ನೆನಪಾಯಿತು.
    ಈಗಿನ ಗಾಡಿಗಳ ಸದ್ದಿನಲ್ಲೂ ಸೈಕಲ್ ಕಳೆದು ಹೋಗಲಿಲ್ಲ ಅನ್ನೋದು ನಿಜಕ್ಕೂ ಸಂತೋಷದ ವಿಷಯ.
    ನಿಮ್ಮ ತಂದೆಯವರ ಹಾಗೇನೆ ಸೈಕಲ್ ಮೇಲಿನ ಪ್ರೀತಿಯಿರುವವರನ್ನು ನೋಡಿದ್ದೇನೆ.
    ಹಾಗೂ 'ಕೆಂಪಿ' ಯನ್ನು ನೋಡಿದ್ದೇನೆ. :) :)
    ಎಷ್ಟೊಂದು ಮಧುರ ನೆನಪುಗಳು.. !
    "ದಿ ಬೈಸಿಕಲ್ ಥಿವ್ಸ್" ಅಂತ ಒಂದು ಸುಂದರವಾದ ಸಿನಿಮಾ ಇದೇ, ನೀವು ನೋಡಿಲ್ಲವಾದಲ್ಲಿ
    ದಯವಿಟ್ಟು ತಪ್ಪದೆ ನೋಡಿ. ಮನ ಮುಟ್ಟುವ ಚಿತ್ರ.
    ಚೆಂದದ ಲೇಖನ
    ಧನ್ಯವಾದಗಳು.

    ReplyDelete
  6. ಜೀವನದಲ್ಲಿ ಕಷ್ಟಕಾಲದಲ್ಲಿ ನೆರವಾದ ಜೀವವಿರಲಿ, ವಸ್ತುಗಳಿರಲಿ,ಜೀವನದುದ್ದಕ್ಕೂ ಅದರೆಡೆ ಅಭಿಮಾನ ಮನದಲ್ಲಿ ಬೇರೂರಿಬಿಡುತ್ತದೆ.
    ಉತ್ತಮ ವಿಚಾರಗಳನ್ನು ಚಿಕ್ಕ೦ದಿನಿ೦ದಲೇ ಮನದೊಳಗೆ ಬೇರೂರಿಸಿದ ಅಪ್ಪಯ್ಯ ಆಯಿಗೆ ವ೦ದನೆಗಳು.

    ReplyDelete
  7. ವಿಜಯಶ್ರೀ ದೀದಿ... ಸಖತ್ ಬರದ್ಯೇ.....
    ಎಷ್ಟೇ ಹಳೆಯದಾದರೂ ಕೆಲವೊಂದನ್ನು ಮಾರಲಾಗ್ತಿಲ್ಲೆ....
    ಅದೇನೋ ಹೇಳ್ತ್ವಲೆ.... ಸಾರಾವಳಿ ಸೈಕಲ್.... ಸಾರಾವಳಿ ಬೈಕ್ ಅಂತಾ.... ಹಂಗೆ ಅದು....
    ಚಂದ ಅನ್ಸಿತ್ತು.

    ReplyDelete
  8. ಸುಗುಣ..
    ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.
    ಆಶಾ..
    ಅದೂ ಹೌದು.. ಥ್ಯಾ೦ಕ್ಸ್ ರೀ..

    ReplyDelete
  9. ಕಾಕ..
    ನಿಜ ನಿಮ್ಮ ಮಾತು..
    ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  10. ಗಿರೀಶ್..
    ಹೌದು..
    ನಿಮ್ಮ ಪ್ರೋತ್ಸಾಹಕ್ಕೆ ವ೦ದನೆಗಳು.

    ReplyDelete
  11. 'A-NIL'

    ಅಲ್ವೆ ಮತ್ತೆ.. ಹಳೇವಸ್ತುಗಳ ಮೇಲಿನ ಅಭಿಮಾನವೇ ಅ೦ತದ್ದು. ನೀವು ಹೇಳಿದ ಸಿನಿಮಾ ಖ೦ಡಿತಾ ನೋಡುತ್ತೇನೆ. ಯಾವ ಚಾನಲ್ನಲ್ಲಾದರೂ ಬರುವುದು ನಿಮಗೆ ಗೊತ್ತಾದರೆ ನ೦ಗೊ೦ದು ಸುದ್ದಿ ಕಳಿಸಿ.
    ಥ್ಯಾ೦ಕ್ಸ್ ತು೦ಬಾ...:)

    ReplyDelete
  12. ಮನಮುಕ್ತಾ..
    ಆತ್ಮೀಯ ಪ್ರತಿಕ್ರಿಯೆಗೆ ಥ್ಯಾ೦ಕ್ಸು....

    ReplyDelete
  13. ಕನಸು ಕಂಗಳ ತಮ್ಮಯ್ಯ..
    ಹೌದೊ ನೀ ಹೇಳಿದ್ದು.. ಕೆಲು ವಸ್ತು ಸಾಲಾವಳಿ ಇದ್ದು ಹೇಳಿ ಮನಸ್ಸಿಗೆ ಅನ್ನಿಸಿದ್ರೆ ಅದ್ನ ಮಾರಲಾಗ್ತಲ್ಲೆ.. ಮೀರಾಲಾಗ್ತಲ್ಲೆ..

    ಥ್ಯಾ೦ಕ್ಸು..

    ReplyDelete
  14. 'ಸವಿ ಸವಿ ನೆನಪು. ಸಾವಿರ ನೆನಪು'- ಎಷ್ಟು ಚಂದ ಅಲ್ವಾ ಸುದೀಪ್ ಸಿನಿಮಾದ ಆ ಹಾಡು!!!

    ReplyDelete
  15. ಹಳೆ ನೆನಪುಗಳು ಮನಸ್ಸಿಗೆ ಅದೆಷ್ಟು ಹಿತ ನೀಡುತ್ತವೆ! ಚೆನ್ನಾಗಿ ಬರೆದಿದ್ದೀರ ಮೇಡಂ.

    ReplyDelete
  16. nimma baravaNige cannagide.
    nammalu keMpi dana ittu.
    karu hakidaga 'ame' helta allada? sutaka andre ashoucha.

    ReplyDelete
  17. ಆತ್ಮೀಯ ನೆನಪುಗಳನ್ನು ಸಾಲುಗಳಲ್ಲಿ ತೆರೆದಿಟ್ಟ ನಿಮಗೆ ಅಭಿನಂದನೆಗಳು. ಸುಂದರವಾದ ಬರಹ. :)

    ReplyDelete
  18. ಗುಬ್ಬಚ್ಚಿ ಸತೀಶ್..
    ಥ್ಯಾ೦ಕ್ಸ್...

    ReplyDelete
  19. ಜಗದೀಶ್...
    ಥ್ಯಾ೦ಕ್ಸ್..
    ನಮ್ ಕಡಿಗೆ ಕರು ಹಾಕಿದ್ ಸೂತಕ ಹೇಳೆ ಬಳಸ್ತ್ವಕ್ಕು. ಮನುಷ್ಯರಲ್ಲಿ ಮಾತ್ರ ಅಮೆ ಶಬ್ಧ ಬಳಸ್ತ ಹೇಳಿ ಅ೦ದ್ಕೈ೦ದಿ. ಸ್ವಲ್ಪ ಗೊ೦ದ್ಲ ಇದ್ದು. ಯ೦ತು ಹೇಳಿ ಬಲ್ಲರನ್ನ ಕೇಳ್ತಿ. ಇನ್ನೊ೦ದ್ಸಲ...

    :)

    ReplyDelete
  20. ಸೌಮ್ಯ..
    ತು೦ಬಾ ಥ್ಯಾ೦ಕ್ಸ್..:)

    ReplyDelete
  21. Howdu kashtagalellavoo kaledu sukha aavarisikondaaga kashtada novella sihinovante nenapaaguttave..

    ReplyDelete
  22. .....ನಿಮ್ಮ ಬರಹವೂ, ಚೆನ್ನಾಗಿತ್ತು :)

    ReplyDelete
  23. ಮೇಡಮ್,

    ನನ್ನ ಬದುಕಿನ ಅನೇಕ ವಿಚಾರಗಳು ಮತ್ತು ವಸ್ತುಗಳು ನೆನಪಾದವು ನಿಮ್ಮ ಲೇಖನದಿಂದಾಗಿ. ಮತ್ತೆ ನಿಮ್ಮ ತಂದೆಯವರ ಹಾಗೆ ನಮ್ಮ ತಂದೆಗೆ ಸೈಕಲ್ ಮೇಲೆ ಪ್ರೀತಿಯಿರಲಿಲ್ಲ. ಆ ಕಾರಣಕ್ಕೆ ನಾನು ಚಿಕ್ಕವಯಸ್ಸಿನಲ್ಲಿ ಸೈಕಲ್ ಕಲಿಯಲು ಬಿಟ್ಟಿರಲಿಲ್ಲ. ಆದ್ರೂ ನಾನು ಕದ್ದು ಮುಚ್ಚಿ ಕಲಿತಿದ್ದೆ.
    ನೆನಪಿನ ಬುಟ್ಟಿಯನ್ನು ಬಿಚ್ಚಿಡುವ ನಿಮ್ಮ ಲೇಖನ ಚೆಂದವಾಗಿದೆ..

    ReplyDelete
  24. ವಿಜಯ್ ಶ್ರೀ ಮೇಡಂ ಲೇಖನ ಅರ್ಥಪೂರ್ಣವಾಗಿದೆ. ಇಷ್ಟ ಆಯ್ತು.

    ReplyDelete
  25. thumba chennagide lekhana :)

    beLLi, kempi, kapile, mangaLa... i dhanagaLannu namma oorinalloo nodiddene :)

    beLLi namma maneyalli thumba varshagaLavarege ittu :)

    manasige hitha needitu nimma baraha ;)

    ReplyDelete
  26. nenapugalu bhavanatmakavagiruttave. hosa talemaarinalli miss aguttiruva apoorva jeevana moulagyagalu illive, hrudayavantike ide. nirupaneyalli aaptate ide. abhinandenagalu vijayashree avarige.

    ananth

    ReplyDelete
  27. ಕೂಸೇ...ಚೆನಾಗಿದ್ದು ಲೇಖನ! ಎಲ್ಲರೂ ಇದರೊಂದಿಗೆ ತಮ್ಮಿರುವನ್ನ ಕಾನ್ಳಕ್ಕು!

    ReplyDelete
  28. ವಿಜಯಶ್ರೀ....ಸೈಕಲ್ ನಾಸ್ಟಾಲ್ಜಿಯಾ ನಮಗೂ ಸ್ಕೂಲ್ ದಿನಗಳಲ್ಲಿ ಇರ್ತಿತ್ತು... ನಮ್ಮಲ್ಲೂ ಒಂದು ಸಾಕು ಮೇಕೆಯಿತ್ತು (ಎತ್ತುಗಳು ನೇಗಿಲು, ನೊಗಕ್ಕೆ, ಬಂಡಿಗೆ ಮೀಸಲು)....
    ನನ್ನಲ್ಲಿ ಅಟ್ಲಾಸ್ ಇತ್ತು ಆಗ ರಾಲಿ ಸೈಕಲ್ ಇಟ್ರೆ ಅದು ಸ್ಟೇಟಸ್ಸು ಹುಡುಗ್ರಲ್ಲಿ...
    ಎಲ್ಲಾ ನೆನಪಾಯ್ತು ನಿಮ್ಮ ಬ್ಲಾಗ್ ನೋಡಿದ್ರಿಂದ...

    ReplyDelete
  29. nanna appayyana gadi, ondu dodda radio, eradu kiviyole avara baala sangaatigalu.. avugalannu anna avaru teeri muvattu varshavaadaru avara nenapige innu jatanavaagisittiddaane....
    ella baalyada nenapaayitu...

    ReplyDelete