Tuesday, April 12, 2011

ಲ೦ಚದ ಮೂಲ..ಇಲ್ಲೂ ಇರಬಹುದು...

ಅಣ್ಣಾಹಜಾರೆಯವರು  ಭ್ರಷ್ಟಾಚಾರ  ವಿರೋಧಿ ಆಂದೋಲನದ ಪ್ರಯುಕ್ತ ಹಮ್ಮಿಕೊಂಡಿದ್ದ ನಿರಶನ ಸತ್ಯಾಗ್ರಹ ತಾತ್ಕಾಲಿಕವಾಗಿ ಮುಗಿದಿದೆ. ಲೋಕಪಾಲ್  ವಿಧೇಯಕವನ್ನು ಮಳೆಗಾಲದಲ್ಲಿ ಮಂಡಿಸುತ್ತೇವೆನ್ನುವ  ಹೇಳಿಕೆಗಳು ಸರಕಾರದಿಂದ ಹೊರಟಿವೆ. ಮಳೆಗಾಲದ ಮಳೆಯಲ್ಲಿ ಕೊಚ್ಚಿಕೊಂಡು ಹೋಗದಿದ್ದರೆ ಸಾಕು. ಅಥವಾ ಚೂರು ಪಾರು ಮಳೆಯಿಂದ ಮುಗ್ಗುಲು ಹಿಡಿಸದಿದ್ದರೆ ಸಾಕು. ಜಾರಿಗೆ ಬರುವಲ್ಲಿ ಅದಿನ್ನೆಷ್ಟು ಭ್ರಷ್ಟವಾಗಿರುತ್ತದೋ  ಕಾಣೆ. 
ಈ ಕೆಲ ದಿನಗಳಿಂದ ದಿನಪತ್ರಿಕೆ ಓದಲು   ಹೆಮ್ಮೆ ಆಗುತ್ತಿರುವುದು ನಿಜ. ಅಣ್ಣಾ ಹಜಾರೆಯವರೊಂದಿಗೆ ಅದೆಷ್ಟೊಂದು ಬೆಂಬಲದ ಕೈಗಳು.ಸಾವಿರವಲ್ಲ. ಕೋಟಿ ..! ಆ ಮಾಹಾಕಾಳಿಗೂ ಇಷ್ಟು ಕೈಗಳಿರಲಿಲ್ಲ...!  

ಓದುತ್ತ ಓದುತ್ತ ಹೋದಂತೆ ಅರಿವಿಲ್ಲದೆ ಎದ್ದು ನಿಲ್ಲುವಂತಹಾ ವೀರಾವೇಶ ನನಗೆ. ಈ ಎಲ್ಲಾ ತರದ ಲಂಚ, ಆಮಿಷ, ಹಿಂಸೆ,  ಮೋಸಾದಿ ಭ್ರಷ್ಟಾಚಾರಗಳನ್ನೂ ಒಮ್ಮೆಲೇ ಯಾವುದಾದರೂ ಫಿನಾಯಿಲ್ಲೋ, ಮಾರ್ಜಕದಿಂದಲೋ  ತೊಳೆದು ಬಿಡುವ ಆಸೆ ನನಗೆ. ಹಾಗೆ ಮಾಡಲು ಸಾಧ್ಯವಾಗಿದ್ದಿದ್ದರೆ ತೊಳೆದ ನಂತರ ಸುತ್ತಲೂ ಲಕ್ಷ್ಮಣ ರೇಖೆ ಎಳೆದು,   ಮೈದಾಹಿಟ್ಟಿಗೆ ಬೋರಿಕ್ ಪೌಡರ್ ಬೆರೆಸಿ ಉಂಡೆ ಮಾಡಿ ಅಲ್ಲಲ್ಲಿ ಇಟ್ಟು ಮತ್ತೆ ಬಾರದಂತೆ  ಬಂದೋಬಸ್ತ್ ಮಾಡುವ ಬಯಕೆ ನನಗೆ.
ಇಷ್ಟು ವರ್ಷದ ಭ್ರಷ್ಟಾಚಾರದ ಬೇರನ್ನು ಕೀಳಲು ಹೀಗೆಲ್ಲಾ ಮಾಡಿದರೆ ಆದೀತೆ ...?    ಅನಿಸುತ್ತಿದ್ದಂತೆ   ಮತ್ತೆ ತಣ್ಣಗೆ ಕುಳಿತುಕೊಳ್ಳುವುದು...! 
ನಾನಾದರೂ ಏನು ಮಾಡಲು ಸಾಧ್ಯ.. ಮಾಡುವುದಿದ್ದರೆ ನನ್ನ ಪರಿಧಿಯಲ್ಲಿಯೇ ಮಾಡಬೇಕು. ಗಂಡ, ಮನೆ,  ಮಕ್ಕಳು..... ಗೃಹಿಣಿಯಾಗಿ, ತಾಯಿಯಾಗಿ ನಾನೇನು ಮಾಡಬಲ್ಲೆ .. ?  ಯೋಚಿಸುತ್ತಿರುವೆ.

ನಾಲ್ಕು ಜನ ತಾಯಂದಿರ ಗುಂಪಿನಲ್ಲಿ ಕೇಳಿಸುವ ಮಾತುಗಳು ಮಕ್ಕಳ ಹೊರತಾಗಿ ಬೇರೆ ಇರುವುದೇ ಇಲ್ಲ..!.

ತಾಯಂದಿರಂತೂ ಮಕ್ಕಳ ಹೋಂ ವರ್ಕೂ, ಅವರ ಟ್ಯೂಷನ್ನು, ಅವರ ಊಟ,ಅವರ ಕಾಟ  ಇವುಗಳ ಬಗೆಗೆ ಚಿಂತನೆ ನಡೆಸುವರು.

ಮಕ್ಕಳು ಊಟ ಮಾಡೋಲ್ಲ , ಹೋಂ ವರ್ಕ್ ಮಾಡೋಲ್ಲ.. ಓದೋಲ್ಲ ., ಬರಿಯೋಲ್ಲ,  
ಬರೀ ಟೀವಿ ನೋಡು, ಕಂಪ್ಯೂಟರ್ ನೋಡು, ಗೇಂ ಆಡು.  

ಈ ಮಾಡದಿರುವ ಕೆಲಸಗಳನ್ನು ಮಾಡಿಸಲೇ ಬೇಕೆಂಬ ' ಅನಿವಾರ್ಯತೆ 'ಹೆತ್ತವರಿಗೂ.. 

ಊಟ ಮಾಡಿದ್ರೆ ಚಾಕ್ಲೆಟ್ ಕೊಡ್ತೀನಿ.. 
 ದಿನಾ ಹೋಂ ವರ್ಕ್ ಮಾಡಿದ್ರೆ ಮುಂದಿನ ವಾರ ಬೆನ್ 10  ವಾಚು ಕೊಡಿಸ್ತೀನಿ.. 
ಫಸ್ಟ್ ರ್ಯಾಂಕ್  ಬಂದ್ರೆ ವೀಡಿಯೋ ಗೇಮ್ ಕೊಡಿಸ್ತೀನಿ..

ಚಾಕ್ಲೆಟ್ ಗಾಗಿ, ಟಾಯ್ ವಾಚ್ ಗಾಗಿ, ವೀಡಿಯೋ ಗೇಂ ಗಾಗಿ [ ಸ್ವಲ್ಪ ಹೆಚ್ಚು ಕಡಿಮೆ ] ಹೇಳಿದ    ಕೆಲಸವಾಗುವುದು ...! 
  ಮತ್ತು ಮುಂದೆ  ಕೆಲಸವಾಗಲು ಈ ತರದ   'reinforcement 'ಅನಿವಾರ್ಯವಾಗಿ ಹೆಚ್ಚು ಹೆಚ್ಚು ಬೇಕಾಗಲು ಶುರುವಾಗುವುದು...! 


ಮಕ್ಕಳಿಗೆ ಉತ್ತೇಜನ, ಪ್ರೋತ್ಸಾಹ ಬೇಕೇ ಬೇಕು .. ಅನ್ನುವ ಮಾತು ನಿಜ.  ಮೊದ ಮೊದಲು ಊಟದಲ್ಲಾಗಲೀ, ಓದಿನಲ್ಲಾಗಲೀ ಆಸಕ್ತಿ ಮೂಡಿಸಲು ಈ ರೀತಿಯ ಬಾಹ್ಯ   ಉತ್ತೇಜನ ಅವಶ್ಯವೇ.   ಆದರೆ ನಂತರದಲ್ಲಿ ಅದು ಕ್ರಮೇಣ ಕಡಿಮೆಯಾಗಿ ಆಂತರಿಕವಾಗಿ  ಉತ್ತೇಜಿಸಲ್ಪಡಬೇಕು. ಆದರೆ ಆಗುತ್ತಿಲ್ಲ . ಏಕಿರಬಹುದು...? ಉತ್ತರ ನಿಮಗೂ ಗೊತ್ತಿಲ್ಲದ್ದಲ್ಲ. 
 ಪ್ರಕೃತಿಯೊಂದಿಗೆ ಬೆರೆಯಲೇ ಆಗುತ್ತಿಲ್ಲ..   ಮಕ್ಕಳಿಗೆ ಹೊರಾಂಗಣ ಆಟವಾಡಲೇ  ಸಾಧ್ಯವಾಗುತ್ತಿಲ್ಲ.  ಆಟದಲ್ಲಿ ಮೈ ಮರೆಯುತ್ತಿಲ್ಲ. ಶಾಂತತೆಯಿಂದ ನಿದ್ರಿಸಲಾರರು.

ಒಂದನೆಯದಾಗಿ  ಟ್ಯೂಷನ್ನು,  ಹೋಂ ವರ್ಕಿನಿಂದ ಆಡಲು  ಸಮಯವಿಲ್ಲ. ಇನ್ನೊಂದು ಆಡಲು ಮನೆ ಎದುರಿಗೆ ಅಂಗಳವೇ ಇಲ್ಲ. ಈಗಿನ ಶಾಲೆಗಳಲ್ಲೂ ಕೂಡಾ ಆಟದ ಬಯಲು ಇರದು.. ಇರುವ ಜಾಗದಲ್ಲೆಲ್ಲಾ ಗೋಡೆಗಳನ್ನು ಕಟ್ಟಿ ಮತ್ತಷ್ಟು ಮಕ್ಕಳನ್ನು ತುಂಬಿದರೆ ಆಡಲು ಜಾಗವೆಲ್ಲಿ..?  


ಮಕ್ಕಳಿಗೆ ಆಟದಿಂದ ದೈಹಿಕ ಶ್ರಮದೊಂದಿಗೆ ಮಾನಸಿಕ ವಿಕಾಸವೂ ಆಗುವುದು ..ಹಸಿವೂ ಆಗುವುದು , ಹಠವೂ ಕಡಿಮೆಯಾಗುವುದು .. ಅನ್ನುವುದನ್ನು  ಪತ್ರಿಕೆಗಳಲ್ಲಿ ಓದುವೆವು. ಹಿರಿಯರು ಹೇಳುವರು. ನಮಗೂ ಗೊತ್ತು. ಎಲ್ಲಾ ಸರಿ. ಆಡಲು ಎಲ್ಲಿಗೆ ಕಳಿಸೋಣ..? ದಿನಾಲು ಎಲ್ಲರಿಗೂ  ದೂರದ  ಪಾರ್ಕ್ ಗೆ ಕರೆದೊಯ್ಯಲು ಸಾಧ್ಯವೇ?  

ನಗರಗಳಲ್ಲಿ  ಆಡಲು ರಸ್ತೆಯೇ ಗತಿ.. ಅಲ್ಲಿ ವಾಹನಗಳ ಭೀತಿ, ಮಕ್ಕಳನ್ನು ಅಪಹರಿಸುವವರ ಭೀತಿ.. ಬೀದಿ ನಾಯಿಗಳ ಭೀತಿ.. ಹೀಗೆ ಭೀತಿಗಳ ಮೂಟೆಯನ್ನೇ ಮಕ್ಕಳಲ್ಲಿ ತುಂಬಿ ಕಳುಹಿಸುವವರು ನಾವು.  ಹೀಗಿರುವಾಗ  ಮಕ್ಕಳ ಕಣ್ಣುಗಳಲ್ಲಿ ಭೀತಿಯ ಹೊರತಾಗಿ ಬಣ್ಣಗಳು ಮೂಡಲು ಸಾಧ್ಯವೇ..? ರಸ್ತೆಯ ಧೂಳಿನಲ್ಲಿ, ತಾರಿನಲ್ಲಿ, ಕಸದ ಬುಟ್ಟಿಗಳಲ್ಲಿ, ಚರಂಡಿಯಂಚಿನಲ್ಲಿ  ಕನಸುಗಳು  ಅರಳಬಲ್ಲದೇ..? ಪ್ರಪಂಚದೆಡೆಗೊಂದು ಸಾತ್ವಿಕ ಕುತೂಹಲ ಸೃಷ್ಟಿಯಾಗ ಬಲ್ಲದೇ..? ಅವರ ಸುತ್ತಲಿನ   ಪರಿಸರ  ಅವರಿಗೆ  ಆಪ್ಯಾಯಮಾನವಾಗಬಲ್ಲುದೆ..?

ಏನು ಮಾಡೋಣ..? ಅವರಿಗೆ  ಬಣ್ಣಗಳನ್ನು, ಕನಸುಗಳನ್ನು, ಕುತೂಹಲವನ್ನು  ಕೊಡಲು ಸಾಧ್ಯವಿಲ್ಲದ ಗಿಲ್ಟಿನಲ್ಲಿ ನಾಲ್ಕು ಗೋಡೆಗಳ ಮಧ್ಯದಲ್ಲಿ ಏನೇನು ಸವಲತ್ತುಗಳನ್ನು ಕೊಡಲು ಸಾಧ್ಯವಾಗುವುದೋ ಅವೆಲ್ಲವನ್ನೂ ಕೊಡಲು ಶುರುಮಾಡುವೆವು ನಾವು. 

ಪ್ರಕೃತಿಯ ಸಾಂಗತ್ಯದ ಸವಿ  ನಾಲ್ಕು ಗೋಡೆಗಳ ಮಧ್ಯ ಸಿಗುವುದೇ..? ಹೊಳೆಯ ನೀರು,   ಮಾವಿನ ಮರ, ಗುಬ್ಬಚ್ಚಿ, ಕಾಕಮಟ್ಲೆ ಹಣ್ಣು,  ನಾನಾ ತರದ ಪ್ರಾಣಿ ಪಕ್ಷಿಗಳೂ, ಗುಡ್ಡ, ಬೆಟ್ಟ ಇವುಗಳನ್ನೆಲ್ಲಾ  ನಗರದಲ್ಲಿ ಎಲ್ಲಿಂದ ತರಲು ಸಾಧ್ಯ..?  ತಂದೆ, ತಾಯಿ ಇಬ್ಬರೂ ಕೆಲಸಕ್ಕೆ ಹೋಗುವಲ್ಲಿ ಅವರ ಸಾಂಗತ್ಯದಿಂದಲೂ ವಂಚಿತರು ಈ ಮಕ್ಕಳು.    ಪರಿಧಿಯೊಳಗಣ ಬದುಕು.ವಿಸ್ತಾರಕ್ಕೆಲ್ಲಿದೆ ಬಯಲು..?  ಮಕ್ಕಳ ಮನಸ್ಸು ವ್ಯಗ್ರ ಗೊಳ್ಳದೆ  ಮತ್ತೇನಾಗುವುದು..? 

ಅಳಬಾರದೆನ್ನುವುದಕ್ಕೆ ಲಂಚ.. ಊಟಕ್ಕೆ ಲಂಚ, ಓದಲು ಲಂಚ. ಬರೆಯಲು ಲಂಚ..  ಹೀಗೆ ಪ್ರತಿಯೊಂದಕ್ಕೂ ಲಂಚ ಕೊಡುವುದಷ್ಟೇ ನಮಗೆ ಉಳಿಯುವುದು.. !

 ನಾನಂತೂ ಅಂದುಕೊಂಡಿದ್ದೇನೆ,   ಲಂಚಕ್ಕೆ ಮನೆಯೇ ಮೊದಲ ಪಾಠ ಶಾಲೆ..!
[ಅನಿವಾರ್ಯವಾಗಿ ] ಪೋಷಕರೇ ಮೊದಲ ಗುರು.. !!!
ಇಂದಿನ ಮಕ್ಕಳೇ ಮುಂದಿನ ..............?

ಮನುಷ್ಯ ಬಾಲ್ಯದಲ್ಲಿ ಸ್ವಚ್ಚವಾಗಿ, ನೇರವಾಗಿಯೇ ಇರುವನು.. ಹಂತಗಳು ಬದಲಾಗುತ್ತಾ ಬಂದಂತೆ ಪರಿಸ್ಥಿತಿಯ  ಸಾಂದ್ರತೆಗನುಗುಣವಾಗಿ ಬಾಗುತ್ತಾ ಹೋಗುವನು...  


ಈ ಜೀವನ ವಕ್ರೀಭವನ ...  !  ಅಲ್ಲವೇ..?



ಇದು ಒಂದು ದಿನದ ಸಮಸ್ಯೆಯಲ್ಲ. ಮಕ್ಕಳ ಪೂರಾ ಬಾಲ್ಯದ ಸಮಸ್ಯೆ.. ಅಪ್ಪ, ಅಮ್ಮಂದಿರ ಅನಿವಾರ್ಯತೆ..

ಹೇಗೆ ಇದರ ವಿರುದ್ಧ ಹೋರಾಡೋಣ ಹೇಳಿ..?   ಪರಿಹಾರ ಹುಡುಕಲು  ಶುರು ಮಾಡಿರುವೆ.

ವಂದನೆಗಳು.

16 comments:

  1. ಲಂಚದ ವಿರುದ್ಧ ನಿಮ್ಮ ಹೋರಾಟದ ಅನಿಸಿಕೆ ಮೆಚ್ಚಬೇಕು. "ಮೈದಾಹಿಟ್ಟಿಗೆ ಬೋರಿಕ್ ಪೌಡರ್ ಬೆರೆಸಿ ಉಂಡೆ ಮಾಡಿ ಅಲ್ಲಲ್ಲಿ ಇಟ್ಟು " ಎಂಬಲ್ಲಿ ನಿಮ್ಮದೇ method ಬಳಸಿರುವುದು ನಗೆ ಮೂಡಿಸಿತು!

    ReplyDelete
  2. ಹಂ...

    ಲಂಚಕ್ಕೆ ಮನೆಯೇ ಮೊದಲ ಪಾಠ ಶಾಲೆ..!

    ಖಂಡಿತ ಅಲ್ಲ... ಪೋಷಕರು ಹೇಳುವ ಆಸೆಗೆ ಮಕ್ಕಳಲ್ಲಿ ಉತ್ಸಾಹ ಉಂಟಾಗುತ್ತೆ ಆದರೆ ಅದನ್ನ ಲಂಚ ಅಂತ ಕರಿಯೋದು ತಪ್ಪು..
    ಕೆಲಸಕ್ಕೆ ಹೋಗುವಾಗ ಉತ್ಸಾಹ ಇರುತ್ತೆಯೇ ಹೊರತು ಇವತ್ತು ಇಷ್ಟು ಲಂಚ/ದುಡ್ಡು ತಂದೆ ತರ್ತೀನಿ ಅಂತ ಹೋಗೋದು ತಪ್ಪು.. ಅದನ್ನ ನಾವು ಮಕ್ಕಳಿಗೆ ತಿಳಿಸಿ ಹೇಳಬೇಕಾಗುತ್ತೆ.
    ಲಂಚಕ್ಕು ಪೋಷಕರು ಕೊಡಿಸುವ ಸವಲತ್ತಿಗು ವತ್ಯಾಸ ತುಂಬಾ ಇದೆ..
    ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡೋವನಿಗೆ, ಚೆನ್ನಾಗಿ ಕೆಲಸ ಮಾಡಿದ್ರೆ ಬೋನಸ್ ಸಿಗುತ್ತೆ ಅಂತ ಹೇಳೋದು ಅವನಿಗೆ ಕೆಲಸದಲ್ಲಿ ಉತ್ಸಾಹ ಉಂಟಾಗಲಿ ಅಂತಾನೆ ಹೊರತು ಅದು ಲಂಚ ಅಲ್ಲ ಅಲ್ವಾ?

    ReplyDelete
  3. ಮಕ್ಕಳಿಗೆ ಯಾವುದೇ ಆಮಿಷವನ್ನು ತೋರಿಸಿ, ಅವರ ಕರ್ತವ್ಯವನ್ನು ಮಾಡಿಸುವದು, ಲಂಚ ಸ್ವೀಕಾರದ ಮನೋಭಾವವನ್ನು ಹುಟ್ಟಿಸಿದಂತೆಯೇ ಸೈ! ಮಕ್ಕಳನ್ನು ದಂಡಿಸಬಾರದೆನ್ನುವ ಆಧುನಿಕ ಮನೋಭಾವವೇ ಇದಕ್ಕೆ ಕಾರಣವಾಗಿರಬಹುದು.

    ReplyDelete
  4. ಮಕ್ಕಳಿಗೆ ಉತ್ತೇಜನ ಮತ್ತು ಆಮಿಶ ಎರಡರ ನಿಜಾರ್ಥ ತಿಳಿವಂತೆ ಮಾಡಿದರೆ ದೊಡ್ಡವರಿಗೆ ನೀಡುವ ಲಂಚ ಮತ್ತು ಬಹುಮಾನ ಅಥವಾ ಬೋನಸ್ ಅಥವಾ ಪ್ರಶಸ್ತಿ ಇವುಗಳ ಅಂತರ ತಿಳಿಯುತ್ತೆ...
    ನನ್ನ ಅನಿಸಿಕೆ..ಮಕ್ಕಳಿಗೆ ಸಾಧನೆ ಮಾಡಿತೋರಿದರೆ ನಿನಗೆ ಬಹುಮಾನ ಖಂಡಿತಾ ಎಂದು ಹೇಳಿ ಸಾಧನೆಗೆ ಪ್ರೋತ್ಸಾಹ ನೀಡಿದರೆ ತಪ್ಪಿಲ್ಲ....ಆದ್ರೆ ಅದೇ ಕೆಲ್ಸಕ್ಕೆಂದೇ ಕುಳಿತಿರುವ ಬೆಳೆದ ಪ್ರಬುದ್ಧರಿಗೆ ಕೆಲ್ಸ್ ಮಾಡಲು ಅಥವಾ ಮೊದಲು ಅವರ ಕೆಲ್ಸ ಮಾಡಲು ಅಥವಾ ವಿಶೇಷ ಪರಿಗಣನೆಗೆ ನೀಡುವುದು ಲಂಚ....
    ವಿಜಯಶ್ರೀ ..ಲಂಚದ ಪರಿಭಾಷೆಯ ವಿವಿಧತೆ ಚನ್ನಾಗಿದೆ...

    ReplyDelete
  5. chintanege hacchuva baraha....
    chennaagide...

    ಇದೇ ತಿಂಗಳ ೨೪ ಕ್ಕೆ ಮತ್ತೊಮ್ಮೆ ಎಲ್ಲರೂ ಸಿಗೋಣ.... ಪ್ರಕಾಶಣ್ಣನ ಪುಸ್ತಕ ಬಿಡುಗಡೆಯ ನೆವದಲ್ಲಿ ಎಲ್ಲಾ ಬ್ಲೊಗ್ ಗೆಳೆಯರು ಸೇರೋಣ......

    ReplyDelete
  6. ಲಂಚಕ್ಕೆ ಮನೆಯೇ ಮೊದಲ ಶಾಲೆ ಎಂಬ ನಿಮ್ಮ ತರ್ಕ ಯಾಕೋ ಸರಿ ಅಲ್ಲ ಎಂಬುದು ನನ್ನ ಭಾವನೆ.
    ನೀವು ಹೇಳುವ ವೀಡಿಯೊ ಗೇಮ್ಸ್ ಆಟವ ಚಾಕೊಲೆತ್ಸ್ ಗಳು ಮಕ್ಕಳಲ್ಲಿ ಉತ್ಸಾಹ ಮತ್ತು ನಿಮ್ಮ ಮೇಲೆ ಪ್ರೀತಿ ಹೆಚ್ಚಿಸುತ್ತದೆ...
    ಚಿಕ್ಕ ಮಕ್ಕಳಿಗೆ ಈ ರೀತಿ ಆಸೆ ತೋರಿಸಿ ಬೆಳೆಸುವುದು ಸಹಜ,ಆದರೆ ಅದು ಮುಂದೆ ಲಂಚ ಕೇಳುವ ಮಟ್ಟಿಗೆ ಬೆಳೆಯುತ್ತದೆ ಎಂಬುದು ಸುಳ್ಳು.

    ReplyDelete
  7. ಸಾಧನೆಗೆ ಪ್ರೋತ್ಸಾಹದ ಮೂಲಕ ಮಕ್ಕಳಿಗೆ ತಿಂಡಿ,ಬಟ್ಟೆ, ಆಟಿಕೆಗಳನ್ನ ಕೊಡಿಸುತ್ತೇವೆ... ಅದು ಲಂಚವಾಗದು ಆದರೆ ದೊಡ್ಡವರೆನಿಸಿಕೊಂಡವರು ಲಂಚ ತೆಗೆದುಕೊಳ್ಳುವುದು ಅದು ದುರಾಸೆಯ ಮೆಟ್ಟಿಲು...

    ReplyDelete
  8. ಲ೦ಚ ಹಾಗೂ ಬ್ರಷ್ಟಾಚಾರದ ವಿರುದ್ದ ಅಣ್ಣಾ ಹಜಾರೆಯವರು ಹಾಗೂ ಅದರಲ್ಲಿ ನೇರವಾಗಿ ಪಾಲ್ಗೊ೦ಡ ಎಲ್ಲರ ಪ್ರಯತ್ನ ಸಫಲವಾಗಲಿ.

    ReplyDelete
  9. ನಿಮ್ಮ ಲೇಖನ ನಂಗೆ ಚಿಂತಿಸುವಂತೆ ಮಾಡಿತು. ನನ್ನ ಮಗಳು ಊಟ ಮಾಡ್ಬೇಕು ಅಂದ್ರೆ ಚಾಕಲೇಟ್, ಐಸ್ ಕ್ರೀಮ್ ಆಮಿಷ ತೋರಿಸಲೇ ಬೇಕಾಗುತ್ತೆ...ಆದರೂ ಇದು ಲಂಚ ಅಂತ ಅನ್ನಿಸಿಕೊಲ್ಲೊಲ್ಲ ಅಂತ ನನ್ನ ಅನಿಸಿಕೆ...ಲೇಖನ ಚೆನ್ನಾಗಿದೆ...

    ReplyDelete
  10. neevu barediruvudu odhidhaaga haudalla anisitu :)

    vakribhavana padhavannu upayogisidha reethi thumba hidisitu :)

    ReplyDelete
  11. ಅನುಭವದಿಂದ ಕೂಡಿದ, ಚಿಂತನೆಗೆ ಹಚ್ಚುವ ಲೇಖನ.

    ReplyDelete
  12. ವಿಜಯಾ..

    ನೀವು ಹೇಳುವ ಮಾತಿನಲ್ಲಿ ತರ್ಕವಿದೆ..


    ಆಸೆ ತೋರಿಸಿ ಕೆಲಸ ಮಾಡಿಸುವದು ನಮ್ಮ ನರನಾಡಿಗಳಲ್ಲಿ ಹರಿತಾ ಇದೆ..
    ಮಕ್ಕಳಿಂದ ಶುರುವಾಗಿ ದೇವರಿಗೂ ಬಿಟ್ಟಿಲ್ಲ ನಾವು...

    ನನ್ನ ಮಗ ಈ ವರ್ಷ ಎಸ್.ಎಸ್.ಎಲ್.ಸಿ...
    ಜಾಸ್ತಿ ಸ್ಕೋರ್ ಮಾಡಿದರೆ "ಲಾಪ್" ಬೇಕು ಅಂತ ಅವನೇ ಕೇಳೀದ್ದಾನೆ..

    ಒಳ್ಳೆಯ ಕೆಲಸಕ್ಕಾದರೆ ಅದು "ಉಡುಗೊರೆ"

    ಸರ್ಕಾರಿ ಕಛೇರಿಗಳಲ್ಲಾದರೆ ಅದು "ಲಂಚ" ಅಲ್ಲವೆ?

    ಹ್ಹಾ...ಹ್ಹಾ... !

    ReplyDelete
  13. ಅಭಿಪ್ರಾಯ ಹ೦ಚಿಕೊ೦ಡ ಎಲ್ಲರಿಗೂ ಹಾರ್ದಿಕ ವ೦ದನೆಗಳು

    ReplyDelete
  14. Vijaya, nimma aalochanegalu anthu superb!!!. lanchavannu hogaladisuvudu kashtadha kelasane. yaava lokpal bil bandru kooda lancha thegedukolluvavaru adhara appannane udukuthaare.

    ReplyDelete
  15. ವಿಜಯಾ
    ನನಗನಿಸುವ ಮಟ್ಟಿಗೆ ಮಕ್ಕಳಿಗೆ ಮಕ್ಕಳು ಊಟ , ಹೋಂ ವರ್ಕ್ .. ಮಾಡಲು ನಾವು ಮನೆಯಲ್ಲಿ ಮಾತಿನ ಉತ್ತೇಜಕಗಳನ್ನು ಕೊಟ್ಟರೆ ಸಾಕು,.....{verbal reinforcement}
    ಅವರು ಒಳ್ಳೆಯ ರೀತಿಯಲ್ಲಿ ನಡೆದುಕೊಂಡಗ ಅವರಿಗೆ ಇಷ್ಟದ ವಸ್ತುವನ್ನು ಬಹುಮಾನವಾಗಿ ಕೊಡುವುದು ಸೂಕ್ತ....
    ಅವರ ನಕಾರತ್ಮಕ ನಡವಳಿಕೆಗೆ ನಮ್ಮ ಸಕಾರತ್ಮಕ ಉತ್ತೇಜಕಗಳು ಅವರ ನಕಾರತ್ಮಕ ನಡವಳಿಕೆಗಳನ್ನು ಹೆಚ್ಹು ಮಾಡುತ್ತದೆ.ಅದರಿಂದ ಅವರಿಗೆ ಉತ್ತೇಜಕಗಳನ್ನು ಕೊಡುವಾಗ ಪ್ರಬುದ್ಧರಾದ ಪೋಷಕರು ಅಲೋಚಿಸಿದರೆ ಉತ್ತಮ....

    ReplyDelete