Tuesday, April 10, 2012

ಪಿಜ್ಜಾ ಹಟ್ಟಿನಲ್ಲಿ ಡಿನ್ನರ್ರು..

ಪಿಜ್ಜಾ ಹಟ್ಟಿಗೆ ಹೋಗಿದ್ದೆವು. ನಾನೂ, ಇವರು  ಮತ್ತು ಐಶು.  ಶಿಶಿರ ಹಠ ಮಾಡಿಕೊಂಡು ಊರಿಗೆ ಹೋಗಿದ್ದರಿಂದ ಅವನೊಬ್ಬ ಮಿಸ್ಸಿಂಗು. ಐಶುವಿನ ಬರ್ತ್ ಡೇ ಟ್ರೀಟಿಗೆ ಪಿಜ್ಜಾ ಹಟ್ಟಿಗೆ ಹೋಗುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾಯ್ತು. ನಮ್ಮನೆಯಲ್ಲಿ ಬರ್ತ್ ಡೇ ನಮ್ಮದಾದರೂ ಸರಿ, ಮಕ್ಕಳದ್ದಾದರೂ ಸರಿ ಪಾರ್ಟಿ ಕೊಡಿಸುವುದು ಮಕ್ಕಳಿಗೆ !     ಹಾಗಾಗಿ  ಐಶುವಿನ ಮೋಸ್ಟ್ ಫೆವರಿಟ್ ಚ್ಹೀಸೀ ಬೈಟ್ ಅನ್ನು  ಮೊದಲೇ ನೆನೆದುಕೊಂಡು ಪಿಜ್ಜಾ ಹಟ್ಟಿಗೆ ಪಯಣ  ಬೆಳೆಸಿದ್ದಾಯ್ತು.

ಅಲ್ಲಿ  ವೈಟರ್ ತಂದಿಟ್ಟ ಮೆನು ನೋಡಿಯೇ ನೋಡಿದೆ.  ಪ್ರತಿ ಬಾರಿಯೂ  ಆರ್ಡರ್ ಮಾಡಿದ ಪಿಜ್ಜಾದ ರುಚಿ ನೋಡಿದ ಮೇಲೆ, ರುಚಿ ಏನ್ಬಂತು ಮಣ್ಣು,   ಪಿಜ್ಜಾ ಬಾಯಿಗಿಟ್ಟ ಮೇಲೆ ಬೇರೇದು ತಗೋ ಬೇಕಿತ್ತು ಅನಿಸುತ್ತಿತ್ತು. ಆ ಇಟಲಿಯವರ ಸುಡುಗಾಡು  ಹೆಸರು ಒಂದೂ ನೆನಪಿಗೆ ಬರುವಂತದ್ದಲ್ಲ.   ಐಶು ಅದೊ೦ತರ ಸ್ಟಾರ್ಟ್ರು ಆರ್ಡರ್ ಮಾಡಿದ್ಲು. ರೊಟ್ಟಿ ತುಂಡಿನ ಒಳಗೆ ಒಂದೆರಡು ತರಕಾರೀ ಪೀಸೂ, ಒಂದೆರಡು ಪನ್ನೀರ್ ಪೀಸೂ ಇತ್ತು. ಮತ್ತೆ ಪನ್ನೀರ್ ಪಿಜ್ಜಾ , ಅವಳ ಇಷ್ಟದ ಚ್ಹೀಸೀ ಬೈಟೂ , ಆಮೇಲೆ  ಆ ವೈಟರ್ ಪುಣ್ಯಾತ್ಮ ಅದೇನೋ ಬೆವರೆಜ್, ಎರಡು ತಗೊಂಡ್ರೆ ಡಿಸ್ಕೌಂಟ್ ಸಿಗುತ್ತೆ ಅಂತ ಅದನ್ನೂ ನಮ್ ಕೈಲಿ ಆರ್ಡರ್ ಮಾಡಿಸಿದ..! ಗ್ರೀನ್ ಆಪಲ್ ಮೋಜಿಟೋ ಅಂತ. ಅದು ಚನ್ನಾಗಿತ್ತು. ಮತ್ತು ಅದು ಮಾತ್ರ ರುಚಿಯಾಗಿತ್ತು..!

ಸುಮಾರು ಹೊತ್ತಾದ ಮೇಲೆ ಸ್ಟಾರ್ಟ್ರು ಮುಗಿಸಿದ ಮೇಲೆ ಪಿಜ್ಜಾ ಬಂತು. ಆ ವೈಟರ್ರೆ ಎಲ್ಲಾ ಎಳೆದು, ಸುಗುದು ಒಂದೊಂದು ಪೀಸು ಬಡಿಸಿ ಹೋದ. ನನಗೆ ಆ ಫೋರ್ಕು ಚಾಕು ಹಿಡ್ಕೊಂಡು ಯಾವ ದಿಕ್ಕಿಂದ ಕತ್ತರಿಸ ಬೇಕೂ ಅಂತಾನೂ ಗೊತ್ತಾಗಲಿಲ್ಲ. ನಾರೂ ನಾರು. ಬಾಲ ಬಾಲ..   ಐಶು ಮಾತ್ರಾ ಪ್ರೊಫೆಶನಲ್ಸ್ ತರಾ, 'ಅಮ್ಮ ಹೀಗೆ ಹಿಡ್ಕೋ ಹಾಗೆ ಹಿಡ್ಕೋ' ಅಂತ ಯಾವಾಗಿನಂತೆ  ನನಗೆ ಉಪದೇಶ ಕೊಟ್ಟಳು.ನಟರಾಜ್ ನೋಡಿದೆ. ಅವರು ಒಂದೊಂದು ಕೈಯಲ್ಲಿ ಒಂದೊಂದು ಆಯುಧ ಹಿಡಿದು ಯುದ್ಧೋನ್ಮಾದದಿಂದ ಥೇಟ್ ವೈರಿಯ ತಲೆ ಹರಿಯುವ ಸ್ಟೈಲಿನಲ್ಲಿ ಪಿಜ್ಜಾವನ್ನು ಕತ್ತರಿಸುತ್ತಿದ್ದರು.ನಾನೂ ಶ್ರದ್ಧೆಯಿಂದ, ಭಕ್ತಿಯಿಂದ ಕತ್ತರಿಸುವ ಕಾರ್ಯದಲ್ಲಿ ಮಗ್ನಳಾದೆ.ರುಚಿಯೇ ಇರದ ಈ ಪಿಜ್ಜಾವನ್ನು ಯಾಕಾದರೂ ತಿನ್ನುತ್ತಾರೋ ಅಂತ ಪ್ರತಿಸಾರಿಯಂತೆ ಈ ಸಲವೂ ಅನ್ನಿಸಿತು.


ನಟರಾಜ್ ಒಮ್ಮೆಲೇ ಜ್ಞಾನೋದಯವಾದವರಂತೆ, '' ರುಕ್ಕಮ್ಮನ ಗಂಡನನ್ನು ಕರ್ಕೊಬರ್ಬೇಕಿತ್ತು.'' ಅಂದರು. ಯಾಕೆ ಅಂದ್ರೆ ನಮ್ಮ ಕೆಲಸದಾಕೆ ರುಕ್ಕಮ್ಮನ ಗಂಡ ಗೋಪಾಲ ಕಾರ್ಪೆಂಟರು. ಅವನ ಹತ್ತಿರ ಇರುವ ಗರಗಸ ಪಿಜ್ಜಾ ಕೊಯ್ಯಲು ಸಹಕಾರಿಯಾಗುತ್ತೆ ಅಂತ ಇವರು ಆಗಲೇ ಮನದಟ್ಟು ಮಾಡಿಕೊಂಡಿದ್ದರು. ನನ್ನ   ಅಣ್ಣಂದಿರು ಆಗಿದ್ದಿದ್ದರೆ    'ನಾರು ಬಜ್ಜ' ಅನ್ನುತ್ತಿದ್ದರು ಗ್ಯಾರಂಟಿ. ಇನ್ನೂ ವಿಶ್ಲೇಷಿಸಿ ಬೇಕಿದ್ದರೆ [ ಪಿಜ್ಜಾ ಅಭಿಮಾನಿಗಳು ಯಾರೂ ಕಲ್ಲೆತ್ಕೊಂಡು ಬರಬೇಡಿ..] ಇದು ಹಳೆ ಎಮ್ಮೆ ಚರ್ಮ ಎಳೆದ ಹಾಗಿರುತ್ತೆ..   ಎಂದು ಹೊಗಳುತ್ತಿದ್ದರು. ನಾವೂ ಹೀಗೆ ವಿಸ್ತಾರ ಮಾಡಿ  ಐಶು ವನ್ನು  ಕೆಣಕಿದೆವು. ''ಅಪ್ಪಾ ಬರ್ಗರ್ ತಿನ್ನುವುದು ಇನ್ನೂ ಕಷ್ಟ'' ಎಂದಳು. ಅದಾದರೆ ಮೊಸಳೆಯಂತೆ ಇಷ್ಟಗಲ  ಬಾಯಿ  ತೆರೆದು ಗಬಕ್ಕನೆ ಕಚ್ಚಿ ಹರಿಯಬೇಕಿತ್ತು. ಬಾಯಿ ಎಷ್ಟಗಲ ಮಾಡ್ಬೇಕು ಅಂತಾನೂ ಗೊತ್ತಾಗದೆ  ಎಮ್ಮೆ ಮುರ ತಿಂದಂತೆ ತಿನ್ನ ಬೇಕಿತ್ತು. ''ಅದು ನಿನಗೇ ಇರಲಿ'' ಎಂದೆ.

ನನಗಂತೂ  ಈ ಪಿಜ್ಜ್ಯಾದಲ್ಲಿ ರುಚಿ ಎಲ್ಲಿದೆ ಅಂತಾನೆ ಗೊತ್ತಾಗಲಿಲ್ಲ. ಎಲ್ಲಾ ಚೀಸು ಚೀಸು. ನೆಂಚಿಕೊಳ್ಳಲು ಕೂಡಾ ಚೀಸಿ ಡಿಪ್ಪಂತೆ. ಅಲ್ಲಿರುವ ಮೆಣಸಿನ ಬೀಜ.. ಪೆಪ್ಪರ್ ಪೌಡರ್ ನಲ್ಲೆ ಸ್ವಲ್ಪ ರುಚಿ ಇದೆ ಅನ್ನಿಸಿತು. ನಮ್ಮೂರಲ್ಲಿ ಬೇಸಿಗೆಯಲ್ಲಿ  ಕಾಳು ಕಡಿ ಮಾಡುವ ಸಮಯದಲ್ಲಿ,  ಒಣ ಮೆಣಸಿನ ಕಾಯಿ ತಂದು ಅದನ್ನು ಹೆಕ್ಕಿ ಒಣಗಿಸಿ ಡಬ್ಬ ತುಂಬಿ ಇಡುವಾಗ ಕೆಳಗಷ್ಟು ಮೆಣಸಿನ ಬೀಜ ಉಳಿಯುತ್ತಲ್ಲ,  ಅದನ್ನು ಎಸೆದು ಬಿಡುತ್ತಾರೆ. ಆದ್ರೆ ನೋಡಿ, ಇಟಲಿಯಲ್ಲಿ ಅದನ್ನು ದಂಡ ಮಾಡದೆ  ಪಿಜ್ಜಾಗೆ ಹಾಕಿಕೊಂಡು ತಿನ್ನುತ್ತಾರೆ !

  ಐಶು  ಚೀಸಿ ಬೈಟು ತಿಂದಾದ ಮೇಲೆ  ''ಅಯ್ಯೋ ಪಿಜ್ಜಾ ತಿಂದರೆ ಒಬೇಸ್ ಆಗ್ತಾರೆ. ನಾಳೆಯಿಂದ ನಾಲ್ಕು ದಿನ ಊಟ ಮಾಡೋಲ್ಲ ನಾನು'' ಎಂದು ಯೋಚನೆಗೆ ಶುರುವಿಟ್ಟು ಕೊಂಡಳು. ''ಒಂದು ತಿಂಗಳು ಊಟ ಬಿಡು'' ಎಂದರು ಅವಳಪ್ಪ. ''ಹಸಿವಾದರೆ ಮತ್ತೆ ಪಿಜ್ಜಾ ಕೊಡುಸ್ತೀಯಾ'' ಎಂದು ಮುಗ್ಧೆಯಂತೆ ಅಪ್ಪನನ್ನು ಕೇಳಿದಳು.

  ನಾನು  ''ಇನ್ನು ಮುಂದೆ ಪಿಜ್ಜಾ ತಿನ್ನೋಲ್ಲ ಕರ್ಮ '' ಅಂತ  ಈ ಸಲವೂ ಪ್ರತಿಜ್ಞೆ ಮಾಡಿದೆ ...!

ನಟರಾಜ್ ಮಾತ್ರ  ''ಈ ಪಿಜ್ಜಾ  ಒಳ್ಳೆ ರಬ್ಬರ್ ತರಾ ಹೊಟ್ಟೆ ಒಳಗೆ ಓಡಾಡ್ತಾ ಇದೆ''   ಅಂದರು.. ಮನೆಗೆ ಹೋದ ತಕ್ಷಣ ಒಂದು ಉದ್ದಾ ಲೋಟದಲ್ಲಿ ಮಜ್ಜಿಗೆ ಬೇಕು ಅಂತ ಹೊಸ ಆರ್ಡರ್ ಕೊಟ್ಟರು.




40 comments:

  1. ಹ್ಹೆ ಹ್ಹೆ :) ಈಗಿನ ಜಮಾನ :) ಪಿಜ್ಜಾ ತಿನ್ನೋದಕ್ಕಿಂತ ಮೈದಾ ದೋಸೆ ತಿನ್ನೋದೆ ಚೆನ್ನ !!ಒಳ್ಳೆ ಬರಹ :)

    ReplyDelete
    Replies
    1. ಹೌದು.. ಅದರ ಅಲ೦ಕಾರ ನೋಡುಗರ ಮನಸೆಳೆಯುತ್ತೆ.. ನಾಲಿಗೆ ಸೆಳೆಯೊಲ್ಲ..!
      ಥ್ಯಾ೦ಕ್ಸ್..:)

      Delete
  2. ಚೆನ್ನಾಗಿದೆ ಪಿಜ್ಜಾ ಪುರಾಣ
    ನಿಮ್ಮ ಮಗಳಿಗೆ ಶುಭಾಶಯಗಳು
    ಸ್ವರ್ಣಾ

    ReplyDelete
    Replies
    1. ಸ್ವರ್ಣ ಅವರೆ..
      ತು೦ಬಾ ಥ್ಯಾ೦ಕ್ಸ್..

      Delete
  3. ಜಯಶ್ರೀ ಒಳ್ಳೆಯ ಹಾಸ್ಯಪ್ರಜ್ಞೆಯ ಲೇಖನ. ಓದಿ ಖುಷಿಯಾಯಿತು................

    ReplyDelete
    Replies
    1. ಇಷ್ಟ ಪಟ್ಟಿದ್ದಕ್ಕೆ ತು೦ಬಾ ಥ್ಯಾ೦ಕ್ಸ್ ಉಮಕ್ಕ..:)

      Delete
  4. ಹಹಹ ಪೀಟ್ಜಾಯಣ.. ಚನ್ನಾಗಿದೆ... ನನಗೆ ಒಮ್ಮೆ ತಿಂದಮೇಲೆ ಮತ್ತೆ ತಿನ್ನಬೇಕು ಅಂತ ಅನ್ನಿಸ್ಲೇ ಇಲ್ಲ.... ಅದೇ ಬೆಣ್ಣೆ ಮಸಾಲೆ, ತುಪ್ಪ ಮಸಾಲೆ, ಆನಿಯನ್ ಉತ್ತಪ್ಪ, ಸಾದಾ ಸೆಟ್ ದೋಸೆ...ಇವೆಲ್ಲಾ ಬ್ಯಾಡಾ ಸ್ಪೆಷಲಿಸ್ಟ್ ಗಳು ಅಂದ್ರೆ...ಸಿಂಪಲ್ ಗೋಳಿ ಬಜ್ಜೆ ನೂ ಎರದನೇ ಪ್ಲೇಟ್ ಆರ್ಡರ್ ಮಾಡ್ಸಿದ್ದೂ ಹಲವೌ ಸಲ... ಚನ್ನಾಗಿದೆ,,, ಲೇಖನ ...ಅಂದಹಾಗೆ ಮಕ್ಕಳು ಹೇಗೋ ಇಷ್ಟ ಪಡ್ತಾರೆ ಅವರಿಗಾಗಿ ಹೋಗಬೇಕು... ಐಶು ಗಿಂತಾ ಶಿಶಿರ ಹೆಚ್ಚು ಚಾವ್ ನಿಂದ ತಿನ್ನಬಹುದು...ಹಹಹ..ನಟರಾಜ್ ಸರ್ ಮಜ್ಜಿಗೆ ಆರ್ಡರ್ ಸೂಪರ್....ಹಹಹಹ

    ReplyDelete
    Replies
    1. ನಿಜ ಸರ್.. ಮಕ್ಕಳಿಗೆ ಇಷ್ಟ ಆಗುತ್ತೆ ಅ೦ತ ಹೋಗ್ಬೇಕು. ಮಕ್ಕಳಿಗಾದರೂ ಅವರಿಗೆ ಒ೦ತರಾ ಕ್ರೇಸ್.. ಅಷ್ಟೇ.. ಶಿಶಿರ ತಿನ್ನೋಲ್ಲ..:))
      ಪ್ರತಿಕ್ರಿಯೆಗೆ ವ೦ದನೆಗಳು.

      Delete
  5. yesterday my boss was saying..if u pu a pizza in a bowl filled with water it takes some 20 hrs to dilute...and imagine the speed it will cover inside our stomach..they add chemicals, additives so hate pizza

    ReplyDelete
    Replies
    1. ನಿಜವಾದ ವಿಚಾರ..
      ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  6. haha..chennagide...pijja purana... ondu salavu tinnuva chapala barle illa...:) hope I'm safe....;)

    ananth

    ReplyDelete
    Replies
    1. ಖ೦ಡಿತವಾಗಲೂ ನೀವು ಸೇಫು..
      ತಮ್ಮ ಮಕ್ಕಳೆಲ್ಲ ಬಹುಶ: ದೊಡ್ಡವರಾಗಿದ್ದಾರೆ.. ಇಲ್ಲದಿದ್ದರೆ ಅನಿವಾರ್ಯವಾಗಿ ರುಚಿ ನೋಡಬೇಕಾಗುತ್ತಿತ್ತು....
      ಧನ್ಯವಾದಗಳು.

      Delete
  7. ಬದುಕಿನ ಅನೇಕ ಘಟನೆಗಳನ್ನು ವಿನೋದಮಯವಾಗಿಸಿ ನಕ್ಕು ನಲಿಯುವ ಕಲೆಯನ್ನು ನಿಮ್ಮಿಂದ ಕಲಿಯಬೇಕು !. ಇನ್ನು ಗರಗಸದಲ್ಲಿ ಪಿಜ್ಜಾ ಕೊಯ್ಯುವ ಐಡಿಯಾ ಅಸಾಮಾನ್ಯವಾದುದು ಬಿಡಿ !.
    ಪಿಜ್ಜಾ ಬರ್ಗರ್ ತಿಂದು (ತಿನ್ನಲಾರದೆ !) ಒದ್ದಾಡುವ ಬದಲು ನೀರು ಮಜ್ಜಿಗೆ ಕುಡಿಯುವುದು ತುಂಬ ಗುಡ್ ಐಡಿಯಾ :-)

    ReplyDelete
    Replies
    1. ಥ್ಯಾ೦ಕ್ಸ್ ಸುಬ್ರಹ್ಮಣ್ಯ..
      ನಗು ಹ೦ಚಿದಷ್ಟೂ ಹೆಚ್ಚಾಗುತ್ತಾ ಹೋಗುತ್ತದಲ್ಲವೇ..!
      ನಕ್ಕು ಇಷ್ಟಪಟ್ಟಿದ್ದಕ್ಕೆ ತು೦ಬಾ ಥ್ಯಾ೦ಕ್ಸ್..

      Delete
  8. ಪಿಜ್ಜಾ ಪುರಾಣ ತುಂಬ ಚೆನ್ನಾಗಿದೆ. ಘೋರ ಅಪರಾಧಗಳನ್ನು ಮಾಡಿದವರಿಗೆ, ಪಿಜ್ಜಾ ತಿನ್ನುವ ಶಿಕ್ಷೆಯನ್ನು ಯಾಕೆ ಕೊಡಬಾರದು ಅಂತ?

    ReplyDelete
  9. ಕಾಕಾ...
    ಹೌದೇ ಹೌದು..
    ಕೊಡಬಹುದು..ಆದರೆ ಈಗಿನ ಕಾಲದವರಿಗೆ ಕೊಟ್ಟರೆ ಉಪಯೋಗವಿಲ್ಲ...!!ಅಪರಾಧಿಗಳ ಸ೦ಖ್ಯೆ ಹೆಚ್ಚಾಗಬಹುದು...!!!

    ಪ್ರೋತ್ಸಾಹಕರ ನುಡಿಗಳಿಗೆ ವ೦ದನೆಗಳು.

    ReplyDelete
  10. ಪಿಜ್ಜಾ ತಿನ್ನಲು ಕೈ ಅಸ್ಟೇ ಅಲ್ಲ ಕಾಲು ಕೂಡ ಉಪಯೋಗಿಸಬೇಕು. [ನಾಯಿಯ ಕ್ಷಮೆ ಇರಲಿ].
    ಪಿಜ್ಜಾ ನಮ್ಮ "ಖಾಲಿ ದೋಸೆಯಮೇಲೆ ನಾಯಿ ವಾನ್ತಿಮಾಡಿದ ಹಾಗೆ ಕಾಣುತ್ತದೆ" ಅನ್ನುವುದು ಹಾಸ್ಯಗಾರರ ಉಪಮೆ.
    ಟೊಮೇಟೊ ಸಾಸ್- ಕೆಚಪ್ ಯಾವುದಕ್ಕೆ ಹೋಲಿಸಬಹುದು?
    ಮುಂದಿನಬಾರಿ ಪಿಜ್ಜಾ ತಿನ್ನಲು ಹೋದಾಗ ಈ ಕಾಮೆಂಟ್ ಮರೆತು ಬಿಟ್ಟಿದ್ದರೆ ಒಳ್ಳೆಯದು!.

    ReplyDelete
  11. ಶಿವರಾಮ..
    ಭಯ೦ಕರ ಕಾಮೆ೦ಟು.. ತಲೆ ಪೂರಾ ಕೆಟ್ಟೋತು...!!

    ReplyDelete
  12. ಪಿಜ್ಜಾ ಪುರಾಣ ಚೆನ್ನಾಗಿದೆ!ಅದನ್ನು ಕಂಡು ಹಿಡಿದವರು ಅವನ್ನೆಲ್ಲಾ ಬಿಟ್ಟು ನಮ್ಮ ಮಸಾಲೆ ದೋಸೆಗೆ ಮುಗಿ ಬೀಳುತ್ತಾರೆ!ನಮ್ಮವರು ಆ ರುಚಿಯಿಲ್ಲದ ತಿನಿಸುಗಳನ್ನು ನೆನೆದು ಬಾಯಿ ಚಪ್ಪರಿಸುತ್ತಾರೆ!ಇದಲ್ಲವೇ ವಿಪರ್ಯಾಸ?!!

    ReplyDelete
  13. ಪಿಜ್ಜಾ ಪುರಾಣ ಚೆನ್ನಾಗಿದೆ!ಒಮ್ಮೆ ಅದನ್ನು ತಿಂದು ಬಂದ ಮೇಲೆ ದವಡೆ ಹಲ್ಲುಗಳು ಮೂರು ದಿನ ನೋಯುತ್ತಿದ್ದವು!!

    ReplyDelete
    Replies
    1. ಹ್ಹ..ಹ್ಹ.. ಚನ್ನಾಗಿದೆ ನಿಮ್ಮ ಪಿಜ್ಜಾ ಅನುಭವ..
      ವ೦ದನೆಗಳು.

      Delete
  14. ತುಂಬಾ ಚಲೋ ಇದ್ದು ಪಿಜ್ಜಾ ಪುರಾಣ... ನಾನು ಒಮ್ಮೆ ತಿಂದು ಇನ್ನು ತಿನ್ನಲಾಗ ಹೇಳಿ ಪ್ರಮಾಣ ಮಾಡಿದ್ದಂತೂ ನಿಜ. ಆದ್ರೆ ನನ್ನ ಕರ್ಮಕ್ಕೆ ಇರದು ಜಪಾನೀಸ್ ಆಫೀಸ್. ಇಲ್ಲಿ ಏನೇ ಅದ್ರು ಪಿಜ್ಜಾ ದೇ ಪಾರ್ಟಿ..:(

    ReplyDelete
    Replies
    1. ಸಂಧ್ಯಾ ಶ್ರೀಧರ್ ಭಟ್
      ಚೀಸ್ ಜಾಸ್ತಿ ಆಗೋದ್ರೆ ಒ೦ತರಾ..ಆಗ್ತು. ಅಭ್ಯಾಸ ಇಲ್ಲದವ್ರಿಗೆ ತಿನ್ನದು ಕಷ್ಟ..
      ಥ್ಯಾ೦ಕ್ಸ್..

      Delete
  15. LOL. ಆ ಪಿಜ್ಜಾದಲ್ಲಿ ಏನಿದೆ ಅಂತ ಅದನ್ನ ತಿಂತಾರೆ ಅಂತ ನಂಗೂ ಇನ್ನೂ ಗೊತ್ತಾಗಿಲ್ಲ! :)

    ReplyDelete
    Replies
    1. ವಿ.ರಾ.ಹೆ.
      ತಿ೦ದು ನೋಡು.. ಗೊತ್ತಾಗ್ತು..:))
      ಥ್ಯಾ೦ಕ್ಸ್.

      Delete
    2. ತಿಂದು ನೋಡಿದ್ದಕ್ಕೇ ಗೊತ್ತಾಗ್ದೇ ಇದ್ದಿದ್ದು :)

      Delete
  16. ತುಂಬಾ ಚೆನ್ನಾಗಿದೆ ಪಿಜ್ಜಾ ಕತೆ...
    ನಕ್ಕು ನಕ್ಕು ಸುಸ್ತು....

    ReplyDelete
  17. ಹೌದೂ... ರುಚಿಯಾಗಿರುವ ಪಿಜ್ಜಾದ ಹೆಸರ ಹೇಳಿ ಪ್ಲೀಸ್. ನಾನೂ ತಿನ್ನಬೇಕು. ಅಲ್ಲ ಈಗಿನ ಜನರೇಷನ್ ಹೊಸ ಟೇಸ್ಟ್ ನವರು. ಅವರಿಗೆ ರುಚಿ ಅಂದರೆ ಅದರಲ್ಲೇನೋ ರುಚಿಯಿರಬೇಕಲ್ಲವ?!!!
    ಮನುಷ್ಯನೆಂಬ ಪ್ರಾಣಿ ಮಾತ್ರ ರುಚಿ ಬಯಸುತ್ತಾನೆ. ಬೇರ್ಯಾವ ಪ್ರಾಣಿಯೂ ರುಚಿ ಗ್ರಹಿಸಲಾರದು. ಹಾಗಾದ ಮೇಲೆ ಈಗಿನ ಕಾಲದ ಎಳೇ ಮನುಷ್ಯ ಪ್ರಾಣಿಯ ಆಚಾರ ವಿಚಾರಗಳನ್ನು ರೂಢಿಸಿಕೊಳ್ಳುತ್ತಿದೆಯಾ? ಈ ಪಿಜ್ಜಾ ತಿನ್ನುವ ಮನುಷ್ಯ ಪ್ರಾಣಿಗಳು ಪ್ರಾಣಿಗಳಂತೇ ಮುಗ್ಧ ಹಾಗೂ ಸ್ವಚ್ಚ ಹೃದಯ ಹೊಂದಿರುತ್ತಾರೆಯ?? ಮಾಡಬೇಕಾದ ಪ್ರಶ್ನೆ ಇದು.

    ReplyDelete
    Replies
    1. ಭಡ್ತಿ..
      ಪಿಜ್ಜಾ ತಿ೦ದೇ ನೋಡಿ.. ರುಚಿಸುತ್ತದೆಯೋ ಗೊತ್ತಾಗುತ್ತದೆ.
      ಪಿಜ್ಜಾ ನೋಡಲು ತು೦ಬಾ ಆಕರ್ಷಣೀಯ. ಮಕ್ಕಳು ಅದರ ರುಚಿಗಿ೦ತಾ ಅದರ ಅ೦ದಕ್ಕೆ ಮರುಳಾಗಿಬಿಡುತ್ತಾರೆ..ನೀವ್ಹೇಳಿದ೦ತೆ ಯಾವುದೋ ರುಚಿ ಇರುತ್ತದೆ. ಅಲ್ಲದಿದ್ದರೆ ಅವರ ವ್ಯಾಪಾರ ಇಷ್ಟು ಭರದಿ೦ದ ನಡೆಯಲು ಸಾಧ್ಯವೇ..? ನನಗೆ ಹಾಗನ್ನಿಸಿತು..:))

      ”ಈ ಪಿಜ್ಜಾ ತಿನ್ನುವ ಮನುಷ್ಯ ಪ್ರಾಣಿಗಳು ಪ್ರಾಣಿಗಳಂತೇ ಮುಗ್ಧ ಹಾಗೂ ಸ್ವಚ್ಚ ಹೃದಯ ಹೊಂದಿರುತ್ತಾರೆಯ??”
      ಖ೦ಡಿತವಾಗಲೂ ಹಾಗೆ ಹೇಳಲು ಬರುವುದಿಲ್ಲ.. ೧) ದಿನಾ ತಿ೦ದರೆ ಹೃದಯದಲ್ಲಿ ಕೊಲೆಷ್ಟರಾಲ್ ಹೆಚ್ಚಾಗಿ ಅಶುದ್ಧವಾಗುತ್ತದೆ. ೨) ಪ್ರಾಣಿಗಳು ಸೊಪ್ಪು ಸದೆ ತಿನ್ನುವುದರಿ೦ದ ಅವು ಮುಗ್ಧವಾಗಿರುತ್ತವೆ. ಅ೦ತೆಯೇ ನಾವೂ ಆಹಾರದಲ್ಲಿ ಸೊಪ್ಪು ಸದೆ ಹೆಚ್ಚಾಗಿ ಬಳಸಿದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿ ಇರಬಹುದು. ಹಿ೦ದಿನ ಕಾಡುಮನುಶ್ಯರು ಮುಗ್ಧರೇ ಆಗಿದ್ದರಲ್ಲವೇ..?

      ಮಕ್ಕಳು ಮುಗ್ಧತೆಯಿ೦ದಲೇ ಜಾಹೀರಾತೋ ಮತ್ಯಾವುದಕ್ಕೋ ಮರುಳಾಗಿ ಪಿಜ್ಜಾ ತಿನ್ನಲು ಬಯಸಿಬಿಡುತ್ತಾರೆ. ತಿ೦ತಾ ತಿ೦ತಾ ರುಚಿ ಸಿಗುತ್ತದೆ ಅವರಿಗೆ. ಅಡಿಕೆಯಲ್ಲಿ ಯಾವ ರುಚಿಯಿದೆ..? ಸಿಗರೇಟಿನಲ್ಲಿ ಎ೦ತಾ ಸೊಗಸಿದೆ..? ರುಚಿ ಅವರ ಸ್ವ೦ತದ್ದು....!!!:))

      ಪ್ರಶ್ನೆಯಿಟ್ಟು ಪ್ರತಿಕ್ರಿಯಿಸಿದ್ದಕ್ಕೆ ತು೦ಬಾ ಥ್ಯಾ೦ಕ್ಸ್..

      Delete
  18. ಹ ಹ :-) ಚೆನ್ನಾಗಿದೆ ಪಿಜ್ಜಾ ಪುರಾಣ . ರುಕ್ಕಮ್ಮನ ಗಂಡನ ಗರಗಸದಿಂದ ಪಿಜಾ ಕೊಯ್ಯೋದು , ಬರ್ಗರ್ ಗೆ ಮೊಸಳೆ ಬಾಯಿ .. ಮುಂತಾದ ಕಲ್ಪನೆಗಳೇ ಹೊಟ್ಟೆತುಂಬಾ ನಗು ತರಿಸಿದವು . ಒಳ್ಳೇ ಹಾಸ್ಯ ಲೇಖನ. ನಮಗೆ ಅದು ಹಿಡಿಸದಿದ್ದರೂ ಬೇರೆ ಅವರು ತಿನ್ನುತ್ತಾರೆ ಅಂತ ತಿಂತೀವಿ. ಅವರಿಗೂ ಹಾಗೇ ಆಗಿರುತ್ತೆ. ಇದೊಂತರ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಆಗ್ತಾ ಇದೆ ಅಲ್ವಾ ಅಂತನೂ ಅನಿಸ್ತು. ಕಿರಣ್ ದೇಸಾಯಿವರ ಮಾಹಿತಿಗೂ , ಶಿವರಾಮ ಭಟ್ಟರ ಕಮೆಂಟಿಗೂ ಒಂದು ಸಲಾಂ . ನಿಮ್ಮ ಈಗಿನ ಬ್ಲಾಗ್ ವಿನ್ಯಾಸವೂ ಚೆನ್ನಾಗಿದೆ . ಇಷ್ಟವಾಯಿತು :-)

    ReplyDelete
    Replies
    1. ಪ್ರತಿಕ್ರಿಯಿಸಿದ್ದಕ್ಕೆ ತು೦ಬಾ ಥ್ಯಾ೦ಕ್ಸ್..prashasti

      Delete
  19. ತುಂಬಾ ಚೆನ್ನಾಗಿದೆ ಪಿಜ್ಜಾ ಪುರಾಣ.

    ReplyDelete
  20. ತುಂಬಾ ಚೆನ್ನಾಗಿದೆ ಪಿಜ್ಜಾ ಪುರಾಣ.

    ReplyDelete
  21. ತುಂಬಾ ಚೆನ್ನಾಗಿ ಪಿಜ್ಜಾ serve ಮಾಡಿ ರುಚಿ ಹತ್ತಿಸ್ಬಿಟ್ರಿ, ಇನ್ನು ಬಿಡೋದು ಕಷ್ಟ ಕಷ್ಟ

    ReplyDelete
  22. ಆಹಾ! ಪಿಜ್ಜಾ ತಿನ್ನುವ ಪರಿ ಅದು ಇರುವ ಪರಿಯನ್ನು ಹಾಸ್ಯಮಯವಾಗಿ ಬರೆದಿದ್ದೀರಿ..ನಾನು ಪಿಜ್ಜ್ಯವನ್ನು ಇಷ್ಟಪಡುವುದಿಲ್ಲ. ಏಕೆ ಇಷ್ಟಪಡುವುದಿಲ್ಲವೆನ್ನುವುದಕ್ಕೆ ಸರಿಯಾಗಿ ಬರೆದ್ದಿದ್ದೀರಿ.ಇದು ನನ್ನ ಅನಿಸಿಕೆ ಕೂಡ...ನಿಮ್ಮ ಈ ಲೇಖನವನ್ನು ಓದುತ್ತಿದ್ದರೆ ಸಕ್ಕತ್ ನಗುಬರುತ್ತದೆ. ಆದ್ರೆ ಪಿಜ್ಜಾ ತಿನ್ನುವಾಗ ಏನು ಬರುವುದಿಲ್ಲ...ಪ್ಯಾಟ್ ಒಂದನ್ನು ಬಿಟ್ಟು.

    ReplyDelete