Tuesday, June 12, 2012

ಕಾಯುವ ಸಹನೆಯೂ ಇಲ್ಲ ಮತ್ತು ಧೈರ್ಯವೂ ಇಲ್ಲ..!

ಬಸ್ಸಿಗಾಗಿ ಕಾದು  ಕಾದು  ಸುಸ್ತಾಯಿತು. ಬೇಗ ಬೇಗ ಕೆಲಸ ಮುಗಿಸಿ ಇರುವ ಸ್ವಲ್ಪ  ಸಮಯದಲ್ಲಿ ಏನೋ ತರಲು  ಎಲ್ಲೋ  ಹೋಗಬೇಕಿತ್ತು. ಆಟೋ ಒಂದೂ ಸಿಗಲಿಲ್ಲ.  ಮೀಟರಿನ ಮೇಲೆ ಇಷ್ಟು ಎಕ್ಸಟ್ರಾ ಕೊಟ್ಟು   ಅವರನ್ನು ಓಲೈಸಿ ಹೋಗುವುದಕ್ಕಿಂತ ಬಸ್ಸೇ ಮೇಲು ಅಂದುಕೊಂಡು, ಆಟೋದವರ ಸೊಕ್ಕಿಳಿಸಲು   ಬಸ್ ಸ್ಟ್ಯಾಂಡ್ ಗೆ ಬಂದು ನೋಡಿದರೆ ನನಗೆ ಬೇಕಾದ ಬಸ್ಸೊಂದು ಬಿಟ್ಟು ಯಾವ್ಯಾವುದೋ ಎಲ್ಲೆಲ್ಲಿಗೋ ಹೋಗುವ ಬಸ್ಸುಗಳೆಲ್ಲ ಬರುತ್ತಿದ್ದವು ಹೋಗುತ್ತಿದ್ದವು. ಸುಮಾರು ಹೊತ್ತಾಯಿತು. ಸಮಯ ನೋಡಿಕೊಂಡೆ. ಬಸ್ ಸ್ಟ್ಯಾಂಡಿಗೆ  ಬಂದು ಇನ್ನೂ ಐದು ನಿಮಿಷವಾಗಿತ್ತು. ಥೋ,  ಅಷ್ಟರಲ್ಲಿ ನನಗೆ ಐದಾರು ಘಂಟೆಯೇ ಆದಂತಾಗಿತ್ತು.  ಕಾಯಲು ಸಹನೆಯೇ ಸಾಲುತ್ತಿಲ್ಲ ಈ ನಡುವೆ. ಇವರು ಆಟೋದಲ್ಲಿ  ಹೋಗು  ಅಂದರೂ ಕೇಳದೆ ಬಸ್ಸಿನಲ್ಲೇ ಹೋಗುತ್ತೇನೆ ಅಂತ ಜುಟ್ಟು  ಹಾರಿಸಿಕೊಂಡು ಬಂದಿದ್ದಕ್ಕೆ ಯಾಕೋ ಮರ್ಯಾದೆಯೇ ಸಿಗುತ್ತಿಲ್ಲ..!

ಶಾಲೆ ಕಾಲೇಜುಗಳಿಗೆ ಹೋಗುವಾಗ ಅದೆಷ್ಟು ಹೊತ್ತು ಬಸ್ಸಿಗಾಗಿ ಕಾಯುತ್ತಿದ್ದೆವು. ಬರೆದರೆ ದೊಡ್ಡ ಇತಿಹಾಸ ಪುಸ್ತಕವೇ  ಆಗುತ್ತದೆ.
ನಮ್ಮೂರಿಗೆ ಸಾಕಷ್ಟು ಬಸ್ಸುಗಳಿದ್ದರೂ  ಒಂದೂ ಸಮಯಕ್ಕೆ ಸರಿಯಾಗಿ ಬರುವ ನಿಷ್ಠೆ ತೋರುತ್ತಿರಲಿಲ್ಲ. ಕಟ್ ರೂಟು ಬೇರೆ. ಪ್ರತಿಯೊಬ್ಬರೂ ಮತ್ತೊಬ್ಬರನ್ನು  ''ಇವತ್ತು ಐದು ಘಂಟೆ ಹಂಸಗಾರು  ಬಸ್ಸು ಎಷ್ಟೊತ್ತಿಗೆ ಬರುತ್ತದೆ?'' ಎಂದೇ ಕೇಳುವುದು ರೂಢಿಯಾಗಿ ಹೋಗಿತ್ತು. ಆರು ಘಂಟೆ ಆರೂವರೆ, ಏಳು  ಹೀಗೆ ಬಸ್ಸಿನ ಸಮಯ ವ್ಯತ್ಯಾಸವಾಗುತ್ತಿತ್ತು. ಆ ಬಸ್ಸು ಕೆಲವೊಮ್ಮೆ ಬರುತ್ತಲೇ ಇರಲಿಲ್ಲ.  ಕುಮುಟಾದಿಂದ ಬರುವ ಬಸ್ಸು ಮಧ್ಯದಲ್ಲಿ ಎಲ್ಲಾದರೂ ಕೆಟ್ಟು ನಿಂತು ದೊಡ್ಡವರು ತಮ್ಮ  ಕವಳದ  ಬಾಯಿಯಲ್ಲಿ ''ಬಸ್ಸು ಇವತ್ತು ಅಲ್ಲೆಲ್ಲೋ ಬಾಳೆಬರೆ  ಘಾಟೀಲಿ  ಕರ ಹಾಕಿದ್ದಡಾ'' ಎಂದು ಆಕಾಶಕ್ಕೆ ಮಳೆಗರೆಯುತ್ತಿದ್ದರು.ಅದು  ಬಿಟ್ಟರೆ ಮತ್ತೆ ರಾತ್ರಿ ಒಂಬತ್ತರ ವರದಕ್ಕೆ ಕಾಯಬೇಕಿತ್ತು.ಹೆಚ್ಚಾಗಿ ಸಾಗರದ ಬಸ್ ಸ್ಟ್ಯಾಂಡ್ ನಲ್ಲಿ ಬಂಗಾರಿ ಭಟ್ಟರ ಮನೆ ಹೊರಗೆ ನಿಲ್ಲಲು  ಸ್ವಲ್ಪ ಜಾಗವಿತ್ತು. ಅಲ್ಲಿ ನಾವೆಲ್ಲಾ ಹೆಣ್ಣು ಮಕ್ಕಳು ನಿತ್ಕೊಂಡು ಕೂತ್ಕೊಂಡು ಬಸ್ ಸ್ಟ್ಯಾಂಡ್  ಕಾಯ್ಕೊಂಡು ಇರುತ್ತಿದ್ದೆವು.  ನೀರು ಪಾರು ಬೇಕಾದ್ರೆ ಅವ್ರ ಮನೆಯಲ್ಲೇ ಕೇಳಿ ಕುಡಿಯುವುದು. ಸೇವಾಸಾಗರಕ್ಕೆ ಹೋಗುವ ಚಿಳ್ಳೆ  ಪಿಳ್ಳೆಗಳಿಂದ  ಹಿಡಿದು ಕಾಲೇಜು ಕನ್ಯೆಯರ ವರೆಗೆ ಎಲ್ಲರೂ ಅಲ್ಲೇ  ಝಾಂಡಾ  ಊರುವುದು. ಅಜ್ಜಿ ಮನೆ ಅಂತ ಒಂದಿತ್ತು. ಅಲ್ಲೂ ಕೆಲವರು ಇರುತ್ತಿದ್ದರು.  ಇಲ್ಲಾ ಅಂದರೆ ಪೈ ಅಣ್ಣನ ಅಂಗಡಿ. ನಮ್ಮ ಶಾಲೆ ಕಾಲೇಜುಗಳ ಮಂಗಾಟ, ಕಕ್ರತನ, ಇನ್ನಿತರೇ ಕೆಲಸಕ್ಕೆ ಬರುವ, ಬಾರದ ಸುದ್ದಿಗಳೆಲ್ಲ ವಿನಿಮಯವಾಗುತ್ತಿದ್ದು ಅಲ್ಲೇ.  ಹೊತ್ತು ಕಳೆಯಲು ಹುಂಡಿ ಪದ, ಚುಕ್ಕಿ ಆಟ.ಕೆಲ ಸ್ಕೂಲ್ ಮಕ್ಕಳು ಪಾಪ ಅಲ್ಲೇ ತಮ್ಮ ಹೋಂ ವರ್ಕ್ ಮಾಡಿಕೊಳ್ಳುತ್ತಿದ್ದರು.ನಾನಂತೂ ಎಷ್ಟೊಂದು ಸಾಯಿಸುತೆ, ಉಷಾ ನವರತ್ನರಾಮ್ ತರದವರು ಬರೆದ ಪ್ರೇಮ ಕಾದಂಬರಿಗಳನ್ನೆಲ್ಲಾ ಅಲ್ಲೇ ಓದಿ ಅಲ್ಲೇ  ಮರೆಯುತ್ತಿದ್ದೆನೋ ಏನೋ..!  ಬಸ್ ಸ್ಟ್ಯಾಂಡಿನಲ್ಲಿ   ಲೈನ್ ಹೊಡೆಯುವ ಹುಡುಗರು ಬಂಗಾರಿ ಭಟ್ಟರ ಮನೆ  ಬಾಗಿಲಿಗೆ ಕಣ್ಣೋಟ ಎಸೆಯುತ್ತಾ, ಕ್ರಾಪು ತೀಡುತ್ತಾ ಪ್ಯಾಂಟು ಜೋಬಿನಲ್ಲೊಂದು ಕೈ ಹಾಕಿಕೊಂಡು ಬಸ್  ಸ್ಟ್ಯಾಂಡಿನಲ್ಲಿ ಮೇಲೆ ಕೆಳಗೆ ಓಡಾಡುತ್ತಿದ್ದರು. ಕೆಲ ತುಂಟ ಹುಡುಗಿಯರು ಕಣ್ಣು ಗೋಲಿಯನ್ನು  ಮೂಗಿನ ಪಕ್ಕಕ್ಕೆ ತಂದು ವಚ್ಗಣ್ಣು  ಮಾಡಿ  ಹೆದರಿಸುತ್ತಿದ್ದರು. ಅಂತೂ ನಮಗೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ.ಮಧ್ಯಾಹ್ನ ತಿಂದ ಒಣಕಲು ದೋಸೆಯೋ, ಅಥವಾ ಉಪ್ಪಿಟ್ಟೋ   ಹೊರತೂ ಹಸಿವಾದರೂ ನಾವ್ಯಾರೂ ಹಾಗೆಲ್ಲಾ ಹೋಟೆಲಿಗೆ ಹೋಗುತ್ತಿರಲಿಲ್ಲ.  ಯಾವಾಗಲಾದರೂ   ನಿಂಬೆ ಹುಳಿ  ಪೆಪ್ಪರಮೆಂಟು ಇಲ್ಲ  ಯಾರಾದರೂ ಉಪ್ಪಿಗೆ ಹಾಕಿದ ನೆಲ್ಲಿಕಾಯಿಗಳನ್ನು ಕೊಟ್ಟರೆ  ಬಾಯಲ್ಲಿ ಅಡಗಿಸಿ ಇಟ್ಟುಕೊಳ್ಳುವುದು. ಅಪರೂಪಕ್ಕೊಮ್ಮೆ ಐಸ್ ಕ್ಯಾಂಡಿಯನ್ನು ತಿನ್ನುತ್ತಿದ್ದೆವು. ಅಂತೂ ಬಸ್ಸು ಬರುವವರೆಗೆ ಅಲ್ಲೇ ಜೋತು ಬಿದ್ದಿರುತ್ತಿದ್ದೆವು. ನಮ್ಮೂರ ಬಸ್ಸಿಗೆ ಬರುವ ಗಂಡು ಮಕ್ಕಳೆಲ್ಲ ಬೇರೆ ಬಸ್ಸಿಗೆ ಹೋಗಿ ಮೂರು ಮೈಲು ನಡೆದುಕೊಂಡು ಮನೆಗೆ ಹೋಗಿಬಿಡುತ್ತಿದ್ದರು.   ಹೆಣ್ಣುಮಕ್ಕಳಿಗೆ ಹಾಗೆ  ಹೋಗಲು ಭಯ.ಬೆಳಿಗ್ಗೆ ಕಾಲೇಜಿಗೆ ಹೋಗಲು  ಎಂಟೂವರೆ ಬಸ್ಸು ಹತ್ತಿದೊಡನೆಯೇ  ಸಾಯಂಕಾಲದ ಬಸ್ಸು ಬರುತ್ತಾ ..? ಇವತ್ತು ಯಾವ ಕಂಡಕ್ಟರು..? ಯಾವ ಡ್ರೈವರ್ರು..?  ಯಾವ ಯಾವ ಪೀರಿಯಡ್ಡು ಇದೆ..? ಯಾರ್ಯಾರು ಐದು ಘಂಟೆ ಬಸ್ಸಿಗೆ ಬರುವವರು..? ಎಲ್ಲಾ ತನಿಖೆ  ಶುರುವಾಗುತ್ತಿತ್ತು. ಕಾಲೇಜಿಗೆ ಹೋಗುವುದ್ಯಾಕೆ ಅಂತ ಅಂದರೆ ಬಸ್ಸು  ಕಾಯ್ಕೊಂಡು  ಮನೆಗೆ ಬರೋಕೆ ಅನ್ನುವಷ್ಟರ ಮಟ್ಟಿಗೆ ನಮ್ಮ  ಬಸ್ ಸ್ಟ್ಯಾಂಡ್  ಕಾವಲು ನಡೆಯುತ್ತಿತ್ತು...! ಇವತ್ತು ಬಸ್ಸು ಬಂದರೆ ಡ್ರೈವರಿಗೆ ಒಂದು ಕಾಯಿ ಒಡೆದು ಕೊಡುತ್ತೇನೆ ಎನ್ನುವ ತಲೆಹರಟೆ ಹರಕೆಗಳನ್ನೆಲ್ಲಾ ಹೊತ್ತು ಕೊಳ್ಳುತ್ತಿದ್ದೆವು. ಚಿಳ್ಳೆ ಪಿಳ್ಳೆಗಳ ಜೊತೆ ಸುಮ್ಮನೆ ಕೀಟಲೆ ಮಾಡುತ್ತಿದ್ದೆವು. ಯಾರಾದರೂ ಹೊಸ ಶೂ ಹಾಕಿಕೊಂಡು ಬಂದರೆ '' ಎರಡೂ  ಕಾಲಿಗೂ ಒಂದೇ ತರದ್ದು ಶೂ ಹಾಕ್ಕೊಂಡು ಬಂದಿದ್ದೀಯಲ್ಲ.  ಎರಡಿದೆ ಆಲ್ವಾ ನನಗೊಂದು ಕೊಡು.ಆಗ್ಲಿ ಕೊಡಾ.. ಪ್ಲೀಸ್ ಕೊಡಾ.. '' ಅಂತಾ ರೇಗಿಸುತ್ತಿದ್ದೆವು.ಕೈ ತುಂಬಾ ಬಳೆ  ಹಾಕಿಕೊಂಡು ಬಂದವರನ್ನು ನೋಡಿ,'' ಮಾರಾಯ್ತಿ ಯಾವ  ಕಡೆಯಿಂದ ಇಷ್ಟು  ಬಳೆ  ಸುರುಗಿಕೊಂಡಿದ್ದೀಯಾ ಅಂತಾನೂ  ಗೊತ್ತಾಗ್ತಿಲ್ವೇ.. ..ಕನ್ಫ್ಯೂಸ್ ಆಗ್ತಿದೆ ಕಣೆ ''ಅಂತಾ ಸುಳ್ಳು ಸುಳ್ಳೇ ಆಶ್ಚರ್ಯ ಪಡುತ್ತಿದ್ದೆವು. ಹೇಗಾದರೂ ಮೂರು ತಾಸು ಸಮಯ ಕೊಲ್ಲಬೇಕಿತ್ತಲ್ಲ.   ಸಮಯಕ್ಕೆ ಸರಿಯಾಗಿ ಅಪರೂಪಕ್ಕೊಮ್ಮೆ ಬಸ್ಸು ಬಂದರೆ ನಮಗೆ ಏನನ್ನೋ  ಕಳೆದುಕೊಂಡ ಹಾಗೆ..!  ಕಾಲೇಜು ಏನು ಓದಿದೆವೋ ಬಿಟ್ಟೆವೋ ನೆನಪಿಲ್ಲ ಆದರೆ ಬಸ್ಸು ಕಾದಿದ್ದು ಮಾತ್ರ ಮರೆಯಲಾದೀತೇ ..?

ಮತ್ತೊಂದೇನೆಂದರೆ ಬಸ್ಸು ಬಂದ ದಿನ ಬಸ್ಸು ಸರಿಯಾಗಿ ಬರುತ್ತಿಲ್ಲ ಅಂತಾ ಬಸ್ಸು ತಡೆದು ಸ್ಟ್ರೈಕ್ ಮಾಡುತ್ತಿದ್ದೆವು.ಸಿರಸಿಯಿಂದ ಡಿಪೋ ಮ್ಯಾನೇಜರ್ ಬಂದು ಸಮಾಧಾನ ಮಾಡಿ ಬಸ್ಸು ಬಿಡಿಸಿಕೊಂಡು ಹೋಗಬೇಕಾಗಿತ್ತು. ಅಂತೂ ಬಸ್ಸು ಬಂದರೂ ಒಂದೇ ಬರದಿದ್ದರೂ ಒಂದೇ.

 ಕಾದಿದ್ದು ಕಾದಂತೆಯೇ ಅನಿಸದೆ ಚೂರೂ ಬೇಸರಿಸದೆ ಹಸನ್ಮುಖಿಯರಾಗಿ ಮನೆಗೆ ಬರುತ್ತಿದ್ದುದು ಹೇಗೆ ಅಂತ ನನಗೆ ಆಶ್ಚರ್ಯವಾಗುತ್ತದೆ.ಮನೆಯಲ್ಲಿ ಅಪ್ಪ ಅಮ್ಮ ಮಾತ್ರಾ, ಬಸ್ಸಿನ್ನು ಬರಲಿಲ್ಲ ಕಾಣುತ್ತೆ ..ಹುಡ್ರು ಬಂದಿಲ್ಲ... ಎಂದು ಆಗಾಗ ಹೇಳುತ್ತಿದ್ದರೇನೋ..? ಆವತ್ತಿನ ಕಾಲಕ್ಕೆ ಅಷ್ಟೆಲ್ಲಾ ಯಾರೂ ಹೆದರುವ ಅವಶ್ಯಕತೆಯೂ ಇರಲಿಲ್ಲ. ಈಗಾದರೆ ಇಲ್ಲಿ ನನ್ನ ಮಕ್ಕಳು ಹಾಗೆ ಸ್ಕೂಲು ಬಿಟ್ಟು  ಮೂರು ನಾಲ್ಕು ಘಂಟೆಯಾದರೂ   ಬರದಿದ್ದರೆ  ಪೋಲೀಸ್ ಕಂಪ್ಲೇಂಟೇ   ಕೊಡುವುದಿಲ್ಲವೇ ನಾನು..?  ಕಾಯುವ ಸಹನೆಯೂ ಇಲ್ಲ ಮತ್ತು ಧೈರ್ಯವೂ ಇಲ್ಲ..!

ಈಗೀಗ ಯಾರೂ ಅಲ್ಲಿ ಬಸ್ಸು ಕಾಯುವ, ಬಸ್ಸಿನ ಹಂಗಿಗೆ ಸಿಗುವ ಮಕ್ಕಳು ಸಿಗುವುದಿಲ್ಲ. ಪ್ರೈವೇಟ್ ಕಾರು ವ್ಯಾನು ಸ್ಕೂಲಿಗೆ ನೇರ ಕರೆದೊಯ್ಯುತ್ತವೆ.
ಇಂತಿರುವಾಗ ಮತ್ತೆ ಈಗಲೂ  ಬಸ್ಸು ಕಾಯುವ ಹಣೆಬರಹ  ಅಂದುಕೊಳ್ಳುವಷ್ಟರಲ್ಲಿ  ಬಸ್ಸು ಬಂತು. ಆ ಬಸ್ಸೋ .. ನೇರ ನಾನು ಆಟೋದಲ್ಲಿ ಹೋದರೆ ಹತ್ತು ನಿಮಿಷಕ್ಕೆ ಹೋಗುತ್ತಿದ್ದೆ. ಇದು ನಾನಿಳಿಯುವ  ಗಮ್ಯವನ್ನು ತಲುಪಲು ಬರೋಬ್ಬರಿ ಮುಕ್ಕಾಲು ಘಂಟೆ ತೆಗೆದುಕೊಂಡಿತು . ಬಸ್ಸು ಕಾದದ್ದಕ್ಕಿಂತಾ ಬಸ್ಸಿನಲ್ಲಿ ಕಾದಿದ್ದೇ ಹೆಚ್ಚಾಯ್ತು. ಅಲ್ಲೆಲ್ಲಾ ಕೆಲಸ ಮುಗಿದು ಮತ್ತೆ ಬಸ್ಸು ಕಾಯುವ ಧೈರ್ಯ ಮಾಡಲಿಲ್ಲ ನಾನು. ಆಟೋ ಕರೆದರೆ ಮೀಟರಿನ ಮೇಲೆ ನಲವತ್ತು ಜಾಸ್ತಿ ಕೊಡಿ ಅಂದ. 'ಬೇಡ ಹೋಗು' ಅಂತಂದೆ. ಇನ್ನೊಬ್ಬ ಮೂವತ್ತು ಅಂದ. ಮತ್ತೊಬ್ಬ ಹತ್ತು ಕೊಟ್ಟರೆ ಬರುತ್ತೇನೆ ಅಂದ.'ಸರಿ,' ಅಂದು  ಹೀಗೆ ಚೌಕಾಸಿ ಮಾಡಿ ಮೂವತ್ತು ಉಳಿಸಿದ [ ಮೀಟರಿನ ಮೇಲೆ ಮತ್ತೆ]  ಸಂತೃಪ್ತಿಯಲ್ಲಿ ಮನೆ ಸೇರಿದೆ...!

 • ಫೇಸ್ಬುಕ್ ಗೆಳೆಯರ ಪ್ರತಿಕ್ರಿಯೆಗಳು..

  • Imthiyaz Perla ತುಂಬಾ ಚೆನ್ನಾಗಿದೆ .. ಇಷ್ಟವಾಯಿತು


  • Shirva Harish Shetty ನಿಮ್ಮ ಲೇಖನ ಓದಿ ಬಸ್ಸಲ್ಲಿ ಸುಖ ಪ್ರವಾಸ ಮಾಡಿದಂತೆ ಆಯಿತು, ನಿಮ್ಮ ವಾಸ್ತವದ ಅನುಭವ ಜನ ಸಾಮಾನ್ಯರ ಮನೋ ಭಾವನೆಯಂತೆ, ನಿಮ್ಮ ಬರೆಯುವ ಶೈಲಿ ತುಂಬಾ ಚನ್ನಾಗಿದೆ, ಓದುತ ಹೋಗಬೇಕೆಂದು ಮನಸ್ಸಾಗುತ್ತದೆ......ಲೇಖನ ತುಂಬಾ ಇಷ್ಟವಾಯಿತು.


  • Dev Narsya ಇಷ್ಟವಾಯಿತು............., ನಿಮ್ಮ ಬರೆಯುವ ಶೈಲಿ ತುಂಬಾ ಚನ್ನಾಗಿದೆ.....
  • ಸತೀಶ್ ಡಿ. ಆರ್. ರಾಮನಗರ ಈ ರೀತಿಯ ಅನುಭವ ಎಲ್ಲರಿಗೂ ಆಗುತ್ತದೆ. ಮುಖ್ಯವಾಗಿ ತಾಳ್ಮೆ ಬೇಕು. ಬಸ್ಸಿಗಾಗಿ ಕಾಯುವ, ಆಟೋದವನ ಮುಂದೆ ಚೌಕಾಸಿ ಮಾಡುವ ಸಂದರ್ಭಗಳಂತೂ ನಮ್ಮ ತಾಳ್ಮೆಯನ್ನು ಕೆಣಕುತ್ತವೆ. ಸುಂದರ ಸರಳ ಲೇಖನ.


  • Paresh Saraf ಆ ಹಳೆಯ ಶಾಲಾ ದಿನಗಳ ನೆನಪು ಹಸಿಯಾಯಿತು.. ನಿಜ ಇಂದು ಆ ಚಿಕ್ಕ ಚಿಕ್ಕ ಆನಂದಗಳು ಮಾಯವಾಗುತ್ತಿವೆ.ನಾಲ್ಕು ವರ್ಷದ ಮಗುವೊಂದು ಅಪ್ಪ ಮೊಬೈಲ್ ಕೊಡು
   "ಆಂಗ್ರಿ ಬರ್ಡ್ಸ್" ಆಡ್ತೇನೆ ಅಂತ ಹೇಳುವುದನ್ನು ಕೇಳಿದೆ. ಆಗ ಅನಿಸಿತು ಈಗಿನ ಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಇದ್ದು ಸಾಮಾಜಿಕ ಜೀವನ ಮತ್ತು ಸಾಮಾನ್ಯ ಜ್ಞಾನವನ್ನೇ
   ಮರೆಯುತ್ತಾರೋ ಎಂದು. ನನ್ನ ವಿದ್ಯಾರ್ಥಿ ಜೀವನ ನೆನಪಿಸಿದಿರಿ.. ಸುಂದರ.. ಶುಭವಾಗಲಿ :)
  • Shama Nandibetta ‎"ಆಂಗ್ರಿ ಬರ್ಡ್ಸ್" ಆಡುವುದು ಮಾತ್ರವಲ್ಲ; ಮಕ್ಕಳೂ "ಆಂಗ್ರಿ ಬರ್ಡ್ಸ್" ಆಗ್ತಾ ಇದ್ದಾರೆ ಅನಿಸೋಲ್ವೆ Paresh Saraf... ಇದು ನಮ್ಮ ಜೀವನ ಶೈಲಿಯ ಕೊಡುಗೆಯಾ ?


  • Paresh Saraf
   ಖಂಡಿತ.. ಇಂದಿನ ನ್ಯೂಕ್ಲಿಯರ್ ಕುಟುಂಬಗಳು, ಹಣ ಗಳಿಸುವುದ್ದನ್ನು ಕಲಿಸಿ, ಬದುಕಲು ಕಲಿಸದಿರುವ ಶಿಕ್ಷಣ ಪದ್ಧತಿ ಇವೆಲ್ಲವುಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಕುಂಠಿತವಾಗುತ್ತಿದೆ. ಸಹ ಜೀವನ, ಜೀವನ ತತ್ವಗಳನ್ನು ಕಲಿಸಬೇಕಾದ ಪ್ರಾಥಮಿಕ ಶಾಲೆಗಳು ಲಕ್ಷಗಟ್ಟಲೆ ಡೊನೇಶನ್ ಪಡೆದು ಆ ಹಂತದಲ್ಲೇ ಮಕ್ಕಳನ್ನು ಸ್ಪರ್ಧೆಗೆ ಹಚ್ಚುತ್ತಿವೆ. ಮಕ್ಕಳಿಗೆ ಸಂಸ್ಕಾರ ನೀಡಲು ಅಪ್ಪ ಅಮ್ಮರಿಗೆ ಸಮಯ ಇಲ್ಲದೆ ಬೇಬಿ ಸಿಟ್ಟಿಂಗ್ಗಳು ನಾಯಿ ಕೊಡೆಯಂತೆ ತಲೆಯೆತ್ತಿವೆ. ಇವೆಲ್ಲದರ ನಡುವೆ ಮಗುವಿನ ಮನಸ್ಸು ಸಂಕುಚಿತವಾಗುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ....  • Shama Nandibetta ಅಪ್ಪ ಅಮ್ಮನಿಗೆ ಪುರುಸೊತ್ತಿಲ್ಲ; ಪುರುಸೊತ್ತು ಇದ್ದು ಸಂಸ್ಕಾರ ಕೊಡಬಲ್ಲ ಅಜ್ಜ ಅಜ್ಜಿಯರು ಇವರಿಗೆ ಬೇಕಿಲ್ಲ. ಬದುಕಲು ಕಲಿಸದಿರುವ ಶಿಕ್ಷಣ ಪದ್ಧತಿಯೇ ಅಲ್ಲವೇ ಇಷ್ಟೊಂದು ಆತ್ಮಹತ್ಯೆಗಳ ಮೂಲ...


  • Shama Nandibetta Oscar Wilde ಹೇಳಿದ, “Now-a-days, people know the price of everything, but the value of nothing.” ಮಾತು ನೆನಪಾಯ್ತು


  • Banavasi Somashekhar ಓದಿಸಿಕೊಂಡು ಹೋಯಿತು.ಜೀವನಾನುಭವವನ್ನು ಕಣ್ಣಿಗೆ ಕಟ್ಟಿತು.


  • Uday Shankar ಕಾಲೇಜಿಗೆ ಹೋಗುವುದ್ಯಾಕೆ ಅಂತ ಅಂದರೆ ಬಸ್ಸು ಕಾಯ್ಕೊಂಡು ಮನೆಗೆ ಬರೋಕೆ........... superrrr lines........... :D


18 comments:

 1. ಹಹಹ... ನನಗೂ ಬಸ್ಸಿಗಾಗಿ ಕಾಯೋದು ಅಂದ್ರೇ ಸಿಕ್ಕಾಪಟ್ಟೆ ಬೇಜಾರು... ಏನೋ ಒಟ್ಟಲ್ಲಿ ಚೌ... ಕಾಸಿ ಮಾಡಿ ಮನೆ ತಲುಪಿದ್ರಲ್ಲಾ ಸುಸ್ತಾಗಿದೆಯಾ ಸುದಾರಿಸಿಕೊಳ್ಳಿ :))

  ReplyDelete
  Replies
  1. ಸುಗುಣಾ

   ಸುಧಾರಿಸಿಕೊಳ್ಳುತ್ತಿದ್ದೇನೆ...!

   ಥ್ಯಾ೦ಕ್ಸೂಪ್ಪಾ..

   Delete
 2. ಬಸ್ಸಿಗಾಗಿ ಕಾಯುವವರ ಪಾಡನ್ನು ರಮ್ಯವಾಗಿ ಚಿತ್ರೀಕರಿಸಿದ್ದೀರಿ.... ಸುಂದರ ನಿರೂಪಣೆ..
  http://nenapinasanchi.wordpress.com/

  ReplyDelete
  Replies
  1. ನೆನಪಿನ ಸ೦ಚಿಯವರೆ

   ನನ್ನ ಬ್ಲಾಗಿನರಮನೆಗೆ ಸ್ವಾಗತ. ಮೆಚ್ಚಿದ್ದಕ್ಕೆ ಧನ್ಯವಾದಗಳು.

   Delete
 3. ವಿಜಯಶ್ರೀ ಮೇಡಂ,
  ನೀವು ಹೇಳಿದ ಮಾತು ನೂರಕ್ಕೆ ನೂರು ಸತ್ಯ. ಓಡುವ ದಿನಗಳಲ್ಲಿ ನಮಗೀಗ ಕ್ಷಣ ಕೂಡ ಕಾಯುವ ತಾಳ್ಮೆ ಇಲ್ಲ. ಜನವರಿಯಲ್ಲಿ ಊರಿಗೆ ಹೋದಾಗ ಬಾಳೆ ಬರೆ ಘಾಟಿ ರಸ್ತೆ ದುರಸ್ತಿ ಕಾಮಗಾರಿಯಿಂದಾಗಿ ನಮಗೆ ದಿನಕ್ಕೆ ಎರೆಡೆ ಬಸ್ಸು ತೀರ್ಥಹಳ್ಳಿ ಕಡೆ ಹೋಗುತ್ತಿದ್ದವು. ಆಗೊಂದು ದಿನ ನನಗೆ ಗೊತ್ತಿಲ್ಲದೆ ಬಸ್ಸು ಕಾದಿದ್ದು ಇದೆಯಲ್ಲ. ನೆನೆಸಿಕೊಂಡರೆ ಮೈ ಉರಿಯುತ್ತದೆ!!!

  ಎಷ್ಟಾದರೂ ನಾವು ಮುಂದುವರೆದಿದ್ದೀವಲ್ವಾ? ಅದಕ್ಕೆ ಗಡಿಬಿಡಿಯ ಈ ದಿನಗಳಲ್ಲಿ ತಾಳ್ಮೆ ಕೂಡ ಕಳೆದುಕೊಂಡಿದ್ದೇವೆ.

  ಅಂದ ಹಾಗೆ ನಿಮ್ಮ ಬಗ್ಗೆ ಹೆಮ್ಮೆ ಅನಿಸುತ್ತದೆ ಯಾಕೆ ಗೊತ್ತಾ? ಒಂದು ಕಿ. ಮೀ. ಹೋಗಲೂ ಆಟೋಗಳು 60-70 ರೂ. ತೆಗೆದುಕೊಳ್ಳುವ ಈ ಕಾಲದಲ್ಲಿ ನೀವು ಬರೀ ಹತ್ತು ರುಪಾಯಿ ಮೀಟರಿನ ಮೇಲಿಟ್ಟು ಬಂದಿದ್ದೀರಲ್ಲ. ನೀವು ಗ್ರೇಟ್ ಬಿಡಿ!!!!!!!!!!!!!!

  ಚಂದದ ಬರಹ.

  ReplyDelete
  Replies
  1. ಹೆಲ್ಲೊ ಪ್ರವೀಣ್..
   ಮೀಟರಿನ ಮೇಲೆ ಹತ್ತು ರುಪಾಯಿ ಅ೦ತ ಅ೦ದ್ರೆ ಮೀಟರಿನಲ್ಲಿ ಎಷ್ಟು ತೋರಿಸುತ್ತೋ ಅದರ ಮೆಲೆ ಮತ್ತೆ ಹತ್ತು ರುಪಾಯಿ ಜಾಸ್ತಿ ಅ೦ತ. ಈಗ ನೀವು ನನ್ನನ್ನು ಗ್ರೇಟ೦ತ ಕೊ೦ಡಾಡಿದ್ದನ್ನು ವಾಪಾಸು ತೆಗೆದುಕೊ೦ಡುಬಿಡುತ್ತೀರಾ ಅ೦ತ...:))

   ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು..

   Delete
 4. ಸೂಪರ್ ವಿಜಯಕ್ಕ :-)
  ಹಳೇ ನೆನಪುಗಳನ್ನೆಲ್ಲಾ ನೆನಸ್ಕಂಡಿ :-) ಆಗ ಸಾಗರದಲ್ಲಿ ಬಸ್ ಕಾದಿದ್ದಕ್ಕೂ ಈಗ ಬೆಂದಕಾಳೂರಲ್ಲಿ ಬಸ್ ಕಾಯದಕ್ಕೂ ಎಷ್ಟೊಂದು ವ್ಯತ್ಯಾಸ ಅಲ್ದಾ ? .. ಆಟೋಗಳದ್ದೇ ಕಾರ್ಬಾರು ಇಲ್ಲಿ.. ಐಟಿಪಿಎಲ್ ಕಡೆ ವೋಲ್ವೋಗಳದ್ದೇ ಕಾರ್ಬಾರು. normal ಬಸ್ಸು ಬೇಕಂದ್ರೆ ಕಾಯದೇ ಗತಿ. ಕೆಲವೊಂದು ಸಲ ಐಟಿಪಿಎಲ್ ನಿಂದ ಮೆಜೆಸ್ಟಿಕ್ಗೆ ಹೋಗೋ ವೋಲ್ವೋ ಬಸ್ ರೇಟಲ್ಲಿ(೬೦ರೂ) ಸಾಗರದಿಂದ ಶಿವಮೊಗ್ಗಕ್ಕೆ(೫೦) ಆರಾಮಾಗಿ ಹೋಗಿ ಬರ್ಲಕ್ಕು ಅಂತ ಅಂದ್ಕತ್ತಿರ್ತ್ಯ :-)

  ನಮ್ಮೂರಿನಲ್ಲಿ, ಸಾಗರದಿಂದ ಊರಿಗೆ ಹೀಗೆ ೫-೬ ಕಿ.ಮೀ ನಡೆದಿದ್ದೇ ಬೇರೆ. ಆದರೆ ಈ ಬೆಂದಕಾಳೂರಲ್ಲಿ ನಡೆಯೋಕೆ ಬೇಜಾರು :-( ಕೆಲೋ ಕಡೆ ಮರಗಿಡ ಇದ್ದು, ತಣ್ಣಗಿರೋ ಏರಿಯಾಗಳಲ್ಲಿ ಓಕೆ.. ಕೆಲೋ ಕಡೆ ಘೋರ ಸೆಕೆ. ನಡೆಯೋದು ಅಸಾಧ್ಯ ಅನ್ನೋ ಅಷ್ಟು ಬೇಜಾರು :-(. ಕೆಲೋ ಏರಿಯಾಗಳ ಮಧ್ಯೆ ನೇರ ಬಸ್ಸುಗಳೇ ಇಲ್ಲ. ಸುತ್ತಿ ಸುತ್ತಿ ಸಾಕಾಗ್ತು. ಅವಾಗ, ಮತ್ತೆ ನೀವು ಹೇಳಿದಾಗೆ ಆಟೋನೆ ಗತಿ

  ReplyDelete
 5. ನಿಮ್ಮ ಲೇಖನ ಓದುತ್ತ ಮತ್ತೆ ಸಿರ್ಸಿ ಬಸ್ ಸ್ಟ್ಯಾಂಡ್ ನಿಂದಾ ಕಾಲೇಜ್ ವರಿಗೆ ಎಲ್ಲ ನೆನಪು ಮಾಡ್ಕ್ಯೋತ ಹೋಗಿ ಬಂದಿ.. ಬಸ್ ಕಾದಿದ್ದು, ಬಸ್ ಬಿಡದ್ದಾಗ ಸ್ಟ್ರೈಕ ಮಾಡಿದ್ದು, ಪಾಸ್ ಇದ್ದವು ಕುತ್ಗಳಲಾಗ ಅಂದ ಕಂಡೆಕ್ಟರ ಜೊತೆ ಜಗಳ ಆಡಿದ್ದು.. ಅಬ್ಬ.. ಬಸ್ಸಿನ ಜೊತೆ ಬೆಸೆದುಕೊಂಡ ಘಟನೆಗಳು ಅದೇಷ್ಟಿದ್ದನ .. :)

  ReplyDelete
 6. ಆ ಹಳೆಯ ಶಾಲಾ ದಿನಗಳ ನೆನಪು ಹಸಿಯಾಯಿತು.. ನಿಜ ಇಂದು ಆ ಚಿಕ್ಕ ಚಿಕ್ಕ ಆನಂದಗಳು ಮಾಯವಾಗುತ್ತಿವೆ.ನಾಲ್ಕು ವರ್ಷದ ಮಗುವೊಂದು ಅಪ್ಪ ಮೊಬೈಲ್ ಕೊಡು
  "ಆಂಗ್ರಿ ಬರ್ಡ್ಸ್" ಆಡ್ತೇನೆ ಅಂತ ಹೇಳುವುದನ್ನು ಕೇಳಿದೆ. ಆಗ ಅನಿಸಿತು ಈಗಿನ ಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಇದ್ದು ಸಾಮಾಜಿಕ ಜೀವನ ಮತ್ತು ಸಾಮಾನ್ಯ ಜ್ಞಾನವನ್ನೇ
  ಮರೆಯುತ್ತಾರೋ ಎಂದು. ನನ್ನ ವಿದ್ಯಾರ್ಥಿ ಜೀವನ ನೆನಪಿಸಿದಿರಿ.. ಸುಂದರ.. ಶುಭವಾಗಲಿ :)

  ReplyDelete
 7. ಸೂಪರ್ ಆಗಿದ್ದು ವಿಜಿ. ಪುಣ್ಯಕ್ಕೆ ನಮ್ಮೂರಲ್ಲಿ ಬಸ್ಸೆಲ್ಲ ಸುಮಾರಾಗಿ ಟೈಮಿಗೆ ಸರಿಯಾಗೇ ಅಂದರೆ ಎಲ್ಲೋ ಒಂದು ೧೫-೩೦ ನಿಮಿಶ ಹೆಚ್ಚು ಕಮ್ಮಿಯಲ್ಲಿ ಬರ್ತಿತ್ತು. ಹಾಂಗಾಗಿ ಜಾಸ್ತಿ ಕಾದಿದ್ದು ನೆನಪಿಲ್ಲೇ. ಆದರೂ ಬೆಂಗಳೂರಲ್ಲಿ ಸಿಟಿ ಬಸ್ ಕಾಯುವ ತುಂಬಿಕೊಂಡೆ ಬಂದ ಬಸ್ ಕೆಲವೊಮ್ಮೆ ನಿಲ್ಲಿಸದೆ , ಕೆಲವೊಮ್ಮೆ ನಿಲ್ಲಲು ಜಾಗ ಇಲ್ಲ ಹೇಳಿ ನಾವೇ ಬಿಟ್ಟು ಆಮೇಲೆ ಮುಂದಿನ ಬಸ್ ಬೇಗ ಬರದೆ , ಆಫೀಸಿಗೆ ಲೇಟ್ ಆಗ್ತಾ ಇರೋದ್ರ ಬಗ್ಗೆ ಯೋಚನೆ ಮಾಡಿ , ಛೆ, ರಶ್ ಇದ್ರೂ ಒಂದೆರಡು ಸ್ಟಾಪ್ ಅದ್ಮೇಲೆ ನಮ್ ಕಾಲ ಮೇಲೆ ನಾವು ನಿಲ್ಲೋಕೆ ಜಾಗ ಸಿಗ್ತಿತ್ತೇನೊ ಹೋಗಿಬಿಡಬೇಕಿತ್ತು ಎಂದು ಹಳಹಳಿಸುತ್ತಾ ಕಳೆದ ಕಾಲವೆಲ್ಲ ಒಮ್ಮೆ ನೆನಪಾಯ್ತು.
  ಚಂದದ ಬರಹ !!

  ReplyDelete
 8. ಸೂಪರ್ ಆಗಿದ್ದು ವಿಜಿ !
  ನಮ್ಮೂರಲ್ಲಿ ಬಸ್ಸೆಲ್ಲ ಸುಮಾರಾಗಿ ಟೈಮಿಗೆ ಬರ್ತಿತ್ತು. ಎಲ್ಲೋ ಒಂದು ೧೫-೩೦ ನಿಮಿಷ ವ್ಯತ್ಯಾಸ ಅಷ್ಟೇ !! ಹಾಂಗಾಗಿ ಜಾಸ್ತಿ ಕಾದಿದ್ದು ನೆನಪಿಲ್ಲೇ.
  ಆದರೂ ಬೆಂಗಳೂರಲ್ಲಿದ್ದಾಗ , ಸಿಟಿ ಬಸ್ಸಿಗೆ ಕಾಯುತ್ತ , ಮೊದಲೇ ತುಂಬಿಕೊಂಡು ಬಂದ ಬಸ್ ನಿಲ್ಲಿಸದೆ ಅಥವಾ ಅದರಲ್ಲಿ ಕಾಲಿಡಲು ಜಾಗವಿಲ್ಲೆಂದು ನಾವೇ ಬಿಟ್ಟು ಮುಂದಿನ ಬಸ್ಸಿಗೆ ಕಾಯುತ್ತಾ , ಅದು ಸಮಯಕ್ಕೆ ಬಾರದಿದ್ದಾಗ , ಆಫೀಸಿಗೆ ಹೊತ್ತಾಗುತ್ತಿರುವುದರ ಬಗ್ಗೆ ಯೋಚಿಸಿ , ' ಛೆ , ಮುಂಚಿನ ಬಸ್ಸಲ್ಲೇ ಹತ್ತಿ ಬಿಡಬೇಕಾಗಿತ್ತು. ೧-೨ ಸ್ಟಾಪ್ ನಂತರ ಆದರು ನಮ್ಮ ಕಾಲ ಮೇಲೆ ನಿಲ್ಲಲು ಜಾಗ ಸಿಗುತ್ತಿತ್ತು ' .. ಎಂದೆಲ್ಲಾ ಹಳಹಳಿಸಿ ... ಎಲ್ಲ ಒಮ್ಮೆ ನೆನಪಾಯಿತು. ಚಂದದ ಬರಹ !!

  ReplyDelete
 9. ಮನಮುಟ್ಟುವ ಮುದಗೊಳಿಸಿದ ಬರಹ :).

  ReplyDelete