Tuesday, July 31, 2012

ಬಾರದ ಮಳೆಯಲೊಂದಷ್ಟು ಕೊಡೆಯ ನೆನಪುಗಳು

ಹೊರಗಡೆ ಸುಯ್ಯನೆ ಗಾಳಿ ಬೀಸುತ್ತಿದೆಯೇ ಹೊರತೂ ಹನಿ ಮಳೆಯಿಲ್ಲ.  ಮಳೆಯಿರದಿದ್ದರೂ ನಮ್ಮನೆಯಲ್ಲಿ ಕೊಡೆಗಳಿಗೆ ಬರಗಾಲವಿಲ್ಲ.ಒಂದು ಐದಾರು ಕೊಡೆಗಳಿವೆ.    ಒಂದು ದಿನವೂ ಮಳೆಗೆ ಕೊಡೆ ಹಿಡಿದಿಲ್ಲ.ಆದರೂ  ಅದರಲ್ಲಿ ಒಂದೂ ನೆಟ್ಟಗಿಲ್ಲ.   ಕಡ್ಡಿಗಳು ಮುರಿದು, ಹೊಲಿಗೆ ಬಿರಿದು, ಬಿಚ್ಚಿದರೆ ಸೊಂಟ ನೋವಿನಿಂದ ಬಳಲುವ  ಅಜ್ಜಿಯಂತೆ ಕಾಣಿಸುತ್ತವೆ. ಅಂಗಡಿಗಳಲ್ಲಿ ಕಾಣುವ ಬಣ್ಣ ಬಣ್ಣದ ಛತ್ರಿಗಳನ್ನು ಕಂಡೊಡನೆ ಪ್ರತೀಸಲ  ನನ್ನ ಮಗಳು ಛತ್ರಿ ಕೊಳ್ಳುವ ವಿಚಾರವನ್ನು  ನೆನಪಿಸುತ್ತಾಳೆ.  ಈಗಿನ ಬಹು ಮಡಿಕೆಗಳ ಛತ್ರಿಗಳು  ವ್ಯಾನಿಟೀ ಬ್ಯಾಗಿನಲ್ಲಿ ಇಟ್ಟುಕೊಂಡು ಹೋಗಲು ಚಂದವೇ ಹೊರತೂ ಮಳೆಗೆ ಬಿಚ್ಚಿಕೊಂಡು ಹೋಗಲಲ್ಲ. ಮಳೆ ಬಂದ್ರೆ ಇರಲಿ ಅನ್ನುವುದಕ್ಕೋಸ್ಕರ ಅದನ್ನೇ ನನ್ನ ಮಗಳು ಬ್ಯಾಗಿನಲ್ಲಿ ಪುಸ್ತಕಗಳೊಂದಿಗೆ  ಪ್ಲಾಸ್ಟಿಕ್ ಕವರಿನಲ್ಲಿ ಇಟ್ಟುಕೊಂಡು ಶಾಲೆಗೆ   ಹೋಗುತ್ತಾಳೆ. ಮಳೆ ಬಂದರೆ ಛತ್ರಿ ನೆನೆಯಬಾರದು ಅನ್ನುವ ಸದುದ್ಧೇಶ!  ನನ್ನ ಮಗ ಮಾತ್ರಾ ಸ್ನಾನದ  ಕೋಣೆಯ  ಶವರಿನಡಿಯಲ್ಲಿ ಛತ್ರಿ ಬಿಚ್ಚಿ ನಿಂದು  ಮಳೆಗಾಲದ ಸ್ವಾದವನ್ನನುಭವಿಸುತ್ತಾನೆ.  ಅಲ್ಲೇ ಕುಣಿದಾಡುತ್ತಾ ಛತ್ರಿಯ   ಅಷ್ಟೂ ಕಡ್ಡಿಗಳನ್ನೂ  ಮುರಿದು ಹಾಕುತ್ತಾನೆ.

ನಾವೆಲ್ಲಾ ಶಾಲೆಗೆ ಹೊಗುವ ಸಮಯದಲ್ಲಿ ಹೀಗೆಲ್ಲಾ ತರತರದ ಛತ್ರಿಗಳ ಆಯ್ಕೆಗಳಿಗವಕಾಶವಿರಲಿಲ್ಲ. ಆಗ ನಮಗೆ  ಇದ್ದ ಛತ್ರಿಗಳಲ್ಲೇ ಅದರ ಹ್ಯಾ೦ಡಲ್ಲಿನ ಬಣ್ಣ ಮತ್ತು ಅದರ ಕ್ವಾಲಿಟಿ ಪ್ರತಿಷ್ಟೆಯ ವಿಚಾರವಾಗಿತ್ತು! ಸ್ಟೀಲ್ ಕೋಲಿನ ಪ್ಲಾಸ್ಟಿಕ್ ಹ್ಯಾ೦ಡಲ್ ಆದರೆ ಅದು ಹೆಗ್ಗಳಿಕೆ.  ಆಪ್ಪಯ್ಯ ನನಗೆ ಮತ್ತು ನನ್ನ ಅಕ್ಕನಿಗೆಂದೇ  ಪ್ಲಾಸ್ಟಿಕ್ ಹ್ಯಾ೦ಡಲಿನ ಎರಡು ಕೊಡೆಗಳನ್ನು ತ೦ದು ಕೊಟ್ಟಿದ್ದ.  ಮರದ ಕೋಲಿನ ಛತ್ರಿ ಇದ್ದವರಿಗೆ ಸ್ವಲ್ಪ ಕೀಳರಿಮೆ, ಆದರೂ ಮರದ ಕೋಲಿನ ಛತ್ರಿಗಳು ದೊಡ್ಡದಾಗಿರುವುದರಿ೦ದ ಮಳೆ ಹೆಚ್ಚು ಮೈಗೆ ತಾಗದು. ಇಬ್ಬಿಬ್ಬರು ಒ೦ದೇ ಛತ್ರಿಯಲ್ಲಿ ಹೊಕ್ಕೊ೦ಡು ಗುಟ್ಟು ಹೇಳಿಕೊ೦ಡು ಬರಬಹುದಾಗಿದ್ದ ಸೌಲಭ್ಯ ಇತ್ತಾದರೂ ಅದು ನಮಗೆ ಆಗಲೇ   ’ಓಲ್ಡ್ ಫ್ಯಾಶನ್’ ಆಗಿತ್ತು. ನನ್ನ ಛತ್ರಿಯ ಹ್ಯಾ೦ಡಲ್ಲು ಕೆ೦ಪು  ಬಣ್ಣದ್ದಾಗಿತ್ತು ಮತ್ತು ಸ್ವಲ್ಪ ಚಿಕ್ಕದು. ನನ್ನಕ್ಕನ ಛತ್ರಿ ಸ್ವಲ್ಪ ದೊಡ್ಡದು. ಅದೇನು ಬೇಜಾರಿನ ಸ೦ಗತಿಯೇನಾಗಿರಲಿಲ್ಲ. ಜೋರು ಮಳೆ,ಗಾಳಿ ಬ೦ದಾಗ ಯಾವ ಛತ್ರಿಯಾದರೂ ಅದರ ಕಥೆ ಡಿಶ್ಶೇ..   ಅದು ಡಿಶ್ ತರ  ಎನ್ನುವ  ಜ್ಞಾನ  ನಮಗೆ ಇಲ್ಲದಿದ್ದರೂ  ಉಲ್ಟಾ ಆಗಿ ಅರಳಿದ ಕಮಲದ೦ತೆ   ಕ೦ಡು ತನ್ನ ಸೌ೦ದರ್ಯವರ್ಧಿಸಿಕೊ೦ಡ೦ತೆ ಭಾಸವಾಗುತ್ತಿತ್ತು! ಅಲ್ಲದೇ ಮಳೆಯಲ್ಲಿ ನೆನೆಯುವುದು ನಮಗೆ  ಮುಖ್ಯಹೊರತೂ  ಛತ್ರಿಯಲ್ಲವಲ್ಲ. ಬೀಸುವ ಗಾಳಿಗೆ ದೊಡ್ಡ ಕೊಡೆ ಒಳಗೆ ಗಾಳಿ ಹೊಕ್ಕು ಅಷ್ಟಷ್ಟು  ದೂರ  ಎಳೆದುಕೊಂಡು ಹೋಗುತ್ತಿತ್ತು. ಮುರಿದ ಛತ್ರಿ ಮಡಚಿಟ್ಟುಕೊಂದು ಗೆಳತಿಯರಲ್ಲಿ   ''ಏ ಛತ್ರಿ.....ಕೊಡೇ '' ಎನ್ನುತ್ತಾ pun ಎಂದರೇನೆಂದು  ಅರಿವೇ ಇಲ್ಲದ ಸಮಯದಲ್ಲೂ  punಡಾಟಿಕೆ  ಮಾಡಿದ್ದುಂಟು. ಕೆಲವರು ಈ ಸಮಸ್ಯೆಗಳೇ ಬೇಡ ಎನ್ನುವಂತೆ ಬಣ್ಣ ಬಣ್ಣದ  ಪ್ಲಾಸ್ಟಿಕ್ ಕೊಪ್ಪೆ ಹಾಕಿಕೊಂಡು ಬರುತ್ತಿದ್ದರು. ನಿಜ ಅಂದರೆ ಅದೇ ಆರಾಮ. ಮಳೆ ಒಂಚೂರೂ ಮೈಗೆ ತಾಗುತ್ತಿರಲಿಲ್ಲ. ಆದರೂ ನಮ್ಮ ಲೆಕ್ಕದಲ್ಲಿ  ಕೊಪ್ಪೆಯ ಬೆಲೆ ಕಡಿಮೆ ಆಗ..! ಒಂದು ಮಳೆಗೆ ಒಂದುಕೊಡೆ ಮತ್ತು ಒಂದು  ಜ್ವರ ಆಗ..
 

  ನನ್ನ ಛತ್ರಿಯ   ಹೆಚ್ಚುಗಾರಿಕೆಯೆ೦ದರೆ ಅದು ಚಿಕ್ಕದಿರುವ ಕಾರಣ, ನನ್ನ ಅಕ್ಕ  ’ ಇವತ್ತೊಂದಿನ  ನಾನು ಶಾಲೆಗೆ ತೆಗೆದುಕೊ೦ಡುಹೋಗುತ್ತೇನೆ ಕೊಡೇ ,’ ಎ೦ದು ಆಗಾಗ ಕೇಳುತ್ತಿದ್ದುದು. ಅವಳ ಶಾಲೆ ದೂರ.ದೊಡ್ಡ ಛತ್ರಿ ಭಾರ.  ಆಗ ನಾನಾದರೂ ಇಲ್ಲದ ಶ್ರೀಮದ್ಗಾ೦ಭೀರ್ಯದಿ೦ದ ಯಾವುದೋ ಮಹಾ ತ್ಯಾಗವನ್ನು ಮಾಡುವವಳ೦ತೆ ಮನಸ್ಸಿಲ್ಲದಿದ್ದರೂ ಅವಳಿಗೆ ಕೊಡುತ್ತಿದ್ದೆ. ಸಮಯಕ್ಕೆ ಬೇಕಾಗುತ್ತಲ್ಲ..! 


 ಸುಮ್ಮನೆ ಹನಿ ಮಳೆಯಲ್ಲಿ ಕೊಡೆ ಹಿಡಿದುಕೊಂಡು ಬರುತ್ತಿರುವಾಗಲೇ ಚಿಕ್ಕ ಪುಟ್ಟ ಜಗಳ, ಅದು ಕೆಲವೊಮ್ಮೆ ಯುದ್ಧಕ್ಕೆ ತಿರುಗುವ ಅಪಾಯಗಳೂ ಇಲ್ಲದಿಲ್ಲ. ಆಗ ಅರಳಿದ ಕೊಡೆಗಳೇ  ಶಸ್ತ್ರಾಸ್ತ್ರಗಳು!  ಒಬ್ಬರ ಕೊಡೆಯಿಂದ   ಮತ್ತೊಬ್ಬರ ಕೊಡೆ ಕುಕ್ಕಿದರೆ ಅದೇ ಮಾರಾಮಾರಿ ಯುದ್ಧ.  ಯಾರು ಜಾಸ್ತಿ ಸಲ ಕುಕ್ಕಿದ್ದಾರೋ ಅವರೇ ಜಯಶಾಲಿಗಳು...! ಈ ಗಲಾಟೆಯಲ್ಲಿ ಎಲ್ಲೋ ಏನೋ ಸ್ವಲ್ಪ ಹೆಚ್ಚು ಕಮ್ಮಿಯಾಗಿ ಕೊಡೆ ತಂತಿಯೇನಾದರೂ ಮುರಿದು ಗಿರಿದು ಹೋದರೆ ಅಕ್ಕಂದಿರು ರಾಜೀಪಂಚಾಯ್ತಿಕೆಗೆ  ಬರಬೇಕಿತ್ತು. 


ಮಳೆಗಾಲ ಬ೦ತೆ೦ದರೆ ಅಪ್ಪಯ್ಯಮುರಿದ ಕೊಡೆಗಳ ರಿಪೇರಿ ಕೆಲಸ ಹಚ್ಚಿಕೊಳ್ಳುತ್ತಾನೆ ಈಗಲೂ..!   ನಮ್ಮನೆಯಲ್ಲಿ ಪೇಟೆಗೆ ತೆಗೆದುಕೊಂಡು ಹೋಗಿ ಆ  ಕೊಡೆ ರಿಪೇರಿ ಮಾಡುವವನನ್ನು ಹುಡುಕಿ ಕಾದು  ರಿಪೇರಿ ಮಾಡಿಸಿಕೊಳ್ಳುವ ಅವಶ್ಯಕತೆಯೇ ಇರಲಿಲ್ಲ. ಅಪ್ಪಯ್ಯ ಮಳೆಗಾಲದ ಬಿಡುವಿನ ಸಮಯದಲ್ಲಿ ಮದ್ಯಾಹ್ನದ ಹೊತ್ತು ಈ ರಿಪೇರಿ ಕೆಲಸಗಳನ್ನೆಲ್ಲ ಆಸಕ್ತಿಯಿಂದ ಮಾಡುತ್ತಾನೆ. ಅದವನಿಗೆ ಒಂತರಾ ಇಷ್ಟದ ಕೆಲಸ. ನಾವು ಕಸೂತಿ ಹಾಕಿದಂತೆ ಅವನ ಸ್ಟೈಲು ಹಾಗೆ.   ಒ೦ದು ರ್ಯಾಗ್ಜಿನ್ ಬಟ್ಟೆಯಲ್ಲಿ ಸುತ್ತಿ ಇಟ್ಟುಕೊ೦ಡ  ಹಳೇ  ಕೊಡೆ ಕಡ್ಡಿ, ಕೋಲು, ಹಿಡಿಕೆ, ತಂತಿಗಳೂ,ಛತ್ರಿಯ ಬಟ್ಟೆ  ಇವೆಲ್ಲವನ್ನೂ ಮೆತ್ತಿನ ಮೇಲಿ೦ದ ಕೆಳಗಿಳಿಸುತ್ತಾನೆ. ಬಾಯಲ್ಲಿ ಒಂದು ಹೊಗೆಸೊಪ್ಪಿನ  ಕವಳ  ಇಟ್ಟುಕೊಂಡು ಕುಳಿತರೆ ಏಳುವಾಗ   ಮುರಿದ ಕೊಡೆ  ಹೊಸಕೊಡೆಯಾಗಿರುತ್ತಿತ್ತು ಆಗೆಲ್ಲಾ. ಅಪ್ಪಯ್ಯನ ಹಡಪದಲ್ಲಿ ಇರದ ವಸ್ತುಗಳಿಲ್ಲ.  ಕೆಲವೊಮ್ಮೆಕೊಡೆ  ಬಟ್ಟೆ ಹರಿದುಹೊದರೆ ಪೇಟೆಯಿಂದ ಹೊಸಬಟ್ಟೆ ತಂದು ಹಳೆ ಕೊಡೆಯ ಅಸ್ಥಿಪಂಜರಕ್ಕೆ  ಹೊಲಿದು ಹೊಸಾದು ಮಾಡುತ್ತಿದ್ದ.. ಆಮೇಲೆ ಕೊಡೆ ಕಳೆದು ಹೋಗದಂತೆ  ದಾರದಲ್ಲೇ ಹೊಲಿದಿಡುವ ನಮ್ಮ ಹೆಸರಿನ ಮೊದಲಕ್ಷರ ಸಿದ್ಧ . ''ನೋಡೇ ಹಳೆ ಕೊಡೆ ಹ್ಯಾಂಗೆ ಹೊಸಾದು ಮಾಡಿದ್ದಿ...'' ಎಂದು ಅಪ್ಪಯ್ಯ ಕವಳ ಉಗುಳಿ  ಬಂದು ಹೇಳುತ್ತಿದ್ದರೆ ನಮಗೆ ಖುಶಿ ಮತ್ತು ಅಪ್ಪಯ್ಯನಿಗೂ ಸಂತೃಪ್ತಿ.   ಹಾಗಾಗಿ ನಾವು ಯಾವತ್ತೂ ಹರಕಲು ಮುರುಕಲು ಕೊಡೆ ಒಯ್ದವರೇ ಅಲ್ಲ.

ನನ್ನ ಮಗ  ಒಂದಷ್ಟು  ದಿನ ಟೆರೇಸಿನಲ್ಲಿ ಕೊಡೆ ಹಿಡಿದು  ಮಳೆಯೊಂದಿಗೆ ಆಡಿದ. ಅಲ್ಲೂ ಜೋರು ಗಾಳಿ.   ಇವನನ್ನೆಲ್ಲಾದರೂ  ಹಾರಿಸಿಕೊಂಡು ಹೋಗಿ ಪಕ್ಕದ ಟೆರೇಸಿಗೆ ಹಾಕಿದರೆ ಕಷ್ಟ..   ಹೊರಗೆ ಬೀದಿಯಲ್ಲಿ ಕೊಚ್ಚೆ. ಅವನೇನು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬಚ್ಚಲುಮನೆಯ ನಲ್ಲಿ, ಶವರಿನ ಕೆಳಗೆ ಮಳೆ,ಮಳೆ  ಅನ್ನುತ್ತಾ ಕುಣಿಯುತ್ತಾನೆ. ಮಳೆಬಾರದ ಈ ಮಳೆಗಾಲದಲ್ಲಿ ನೀರ ಬರ.  ನೀರಿಲ್ಲ ಎಂದು ಅವನನ್ನು  ಸುಮ್ಮನಿರಿಸಿದ್ದೇನೆ.
 
ನನ್ನ ಬಳುವಳಿಗೆ ಕೊಟ್ಟ ಹೊಸಾ ಛತ್ರಿ ಇನ್ನೂ ಹೊಸದಾಗಿಯೇ ಇದೆ. ಏಕೆಂದರೆ ಅದನ್ನು ಬಳಸಿದ್ದೇ  ಕಡಿಮೆ ಮತ್ತು ಬೆಂಗಳೂರಲ್ಲಿ ಮಳೆಯಲ್ಲಿ  ಹೊರಗೆ  ಹೋಗಿದ್ದೇ  ಇಲ್ಲ.  ಅಷ್ಟರ ಮೇಲೆ ಅನೇಕ ಛತ್ರಿಗಳು  ನಮ್ಮನೆ ಶೆಲ್ಫ್   ಅಲಂಕರಿಸಿದರೂ ಎಲ್ಲವೂ ಶಿಶಿರನ  ಮಳೆ ಕುಣಿತಕ್ಕೆ  ಸಿಲುಕಿ ಮುರಿದ ಸ್ಥಿತಿಯಲ್ಲಿವೆ. ಅದನ್ನಾದರೂ ರಿಪೇರಿ ಮಾಡಿಸೋಣವೆಂದರೆ  ಕೊಡೆ ರಿಪೇರಿ ಮಾಡುವವರು ಯಾರೂ ಕಾಣುವುದೇ ಇಲ್ಲ ಈಗೀಗ...  ಹೊಸಾದು ತಗೊಳ್ಳುವುದೇ ಒಳ್ಳೇದು ಎಂದು  ಐಶು  ಅನ್ನುತ್ತಾಳೆಂದು ಮತ್ತೆ ಬಾಯಿ ಬಿಗಿದುಕೊಂಡು ಕೂತಿದ್ದೇನೆ  ಅಪ್ಪಯ್ಯನನ್ನು ನೆನೆಸಿಕೊಳ್ಳುತ್ತಾ..


   

18 comments:

 1. ಕೊಡೆ ಕೊಡೆ ನನಗೆ ಕೊಡೆ.. ಅನ್ನುವ ನಮ್ಮ ಹಾಡು, ಕೊಡೆಯನ್ನೇ ಬೋರಲು ನೀರಿಗೆ ಹಾಕಿ ದೋಣಿ ಆಟ ಆಡಿದ್ದು ಎಲ್ಲಾ ನೆನಪಿಸಿತು ಈ ಲೇಖನ..
  ಸವಿ ಸವಿ ನೆನಪು..

  ReplyDelete
 2. ಕೊಡೆ ಅಂದ ಕೂಡಲೇ ನನ್ನ ಅಪ್ಪನ ನೆನಪಾಗುತ್ತದೆ .ಕೊಡೆ ಕಳೆಯಬಾರದು ,ಕಾರ್ಯಕ್ರಮಗಳಿಗೆ ಹೋದಾಗ ಅದಲು ಬದಲಾಗಬಾರದು ,ಅಂತ ಕೊಡೆ ಮಳೆ ಬಿಳೀ ದಾರದಿಂದ D.V.R ..ಅಂತ ಹೊಲೆಯುತ್ತಿದ್ದರು ..ನನಗೆ ಆ ಕೊಡೆ ಇಷ್ಟವಾಗುತ್ತಿರಲಿಲ್ಲ , ಗೆಳತಿಯರು ಹಾಸ್ಯ ಮಾಡಬಹುದು ಎಂಬ ಕಾರಣಕ್ಕೆ .ಬಾಗಿಲ ಸಂದಿಯಿಂದ ಕೊಡೆ ಕಂಡಾಗ ಅಪ್ಪ ಬಗ್ಗಿ ನನ್ನನ್ನು ನೋಡಿದಂತಾಯಿತು .ತುಂಬಾ ನಿಜವಾಗಿ ಚಿತ್ರಿಸಿದ್ದೀರಿ .ಅಭಿನಂದನೆಗಳು .

  ReplyDelete
 3. ಹಳೆಯ ನೆನಪುಗಳು ಮಳೆಯಲ್ಲಿ ಮತ್ತೆ ಹೊಸದಾಗಿ ಹೊಳೆಯುತ್ತಿವೆ!! :):)
  ನಮ್ಮ ಕಡೆ ಎರಡು ದಿನಗಳಿ೦ದ ಮಳೆ..ಮಕ್ಕಳಿಗೆ ಮಳೆಯಲ್ಲಿ ನೆನೆಯಬೇಕೆನ್ನಿಸಿದರೂ ನಾನು ಬೇಡವೆನ್ನುತ್ತೇನೆ೦ದು ಛತ್ರಿಹಿಡಿದು ಮಳೆಯನ್ನು ಎ೦ಜಾಯ್ ಮಾಡ್ತಿದ್ದಾರೆ.
  ಕೊಡೆ ಅಮಾವಾಸ್ಯೆಯ ದಿನ, ಅಪ್ಪಯ್ಯ ಕೊಟ್ಟಿದ್ದ ಕೊಡೆಯನ್ನು ಹೊರ ತೆಗೆದು ಮತ್ತೆ ಇಟ್ಟಿದ್ದೇನೆ..:)
  ಚೆ೦ದದ ಬರಹ..

  ReplyDelete
 4. ಮುಂಚಿನ ಕೊಡೆ...ಎರಡು ಮೂರು ಜನರನ್ನು ಮಳೆಯಿಂದ ರಕ್ಷಿಸುವಷ್ಟು ದೊಡ್ದಾಗಿತ್ತು..ನಮ್ಮ ತಾತನಿಗೆ ಅದು ಬಿಸಿಲು, ಮಳೆಯಿಂದ ರಕ್ಷಣೆ ಕೊಡುವ ಸಾಧನ ಹಾಗು ನಡೆಯಲು ಸಹಾಯ ಮಾಡುವ ವಸ್ತುವು ಕೂಡ...ಈಗಿನ ಕಾಲದ ಮನುಜರಂತೆ ಮನಸು, ಕೊಡೆ ಎರಡು ಚಿಕ್ಕದಾಗುತ್ತ ಹೋಗುತ್ತಿದೆ...ಒಳ್ಳೆಯ ಲೇಖನ...

  ReplyDelete
 5. ಮಳೆಯ ನೆನಪುಗಳನ್ನು ಮತ್ತೆ ತೆರೆದಿಟ್ಟ ಬರಹ.

  ReplyDelete
 6. haLeya nenapugaLe madura....nivu nenapu maaDida riti super..........

  ReplyDelete
 7. ಒಂದು ಸುಂದರ ನೆನಪು ಕಣ್ಣಿಗೆ ಕಟ್ಟುವಂತೆ ಮೂಡಿದೆ,
  ಸ್ನಾನದ ನೀರಿನಲ್ಲಿ ಮಳೆಯ ಅನುಭವ ಅಪರೂಪವೆನಿಸಿತು

  ReplyDelete
 8. oh good one a trip back to old days

  ReplyDelete
 9. ಹೊಸ ವರುಷಕೆ ಹೊಸ ಹರುಷಕೆ ಹೊಸದು ಕೊಡೆಯನ್ನು ತರಲೇ ಬೇಕು. ಕಳೆದ ವರುಷದಲ್ಲೆಲ್ಲಾ...ಕೊಡೆಯನ್ನು ಕಳೆದುಕೊಳ್ಳುವುದೇ ಆಗಿರುತ್ತದೆ... ;) ಧನ್ಯವಾದಗಳು ಕೊಡೆಯ ಪುರಾಣದ ಉತ್ತಮ ಪ್ರಸ್ತುತಿಗೆ.

  ಅನ೦ತ್

  ReplyDelete
 10. ಕೊಡೆ ಪುರಾಣ ಚೆನಾಗಿದೆ..ಹಳೆಯ ನೆನಪುಗಳನ್ನು ಮನಮುಟ್ಟುವಂತೆ ಬಿಂಬಿಸಿದ್ದಕ್ಕೆ ಧನ್ಯವಾದಗಳು..

  ReplyDelete
 11. ಒಂದು ಕೊಡೆಯ ಹಿಂದೆ ಎಷ್ಟೆಲ್ಲಾ ಭಾವನೆಗಳಿವೆ !.

  ReplyDelete
 12. ವಿಜಯಶ್ರೀ,
  ಊರಲ್ಲಿ ಇರದ ಕಾರಣ, ನಿಮ್ಮ ಲೇಖನವನ್ನು ತಡವಾಗಿ ನೋಡುತ್ತಿದ್ದೇನೆ. ಕೊಡೆಯ ಹರಟೆ ತುಂಬ ಚೆನ್ನಾಗಿದೆ. ನಾನು ಹಿಡಿಯುತ್ತಿದ್ದ ಹಳೆಯ ಕೊಡೆಗಳೂ ನೆನಪಾದವು!

  ReplyDelete
 13. ಹಳೆಯ ಕೊಡೆಯೊಂದಿಗೆ ನನ್ನ ಕೊಪ್ಪೆಯ ನೆನಪಗೆ ಬಂತು.
  ಲೇಖನ ಚನ್ನಾಗಿದೆ.

  ReplyDelete
 14. ಕೊಡೆಯೊಂದಿಗಿನ ಹನಿ ಹನಿ ನೆನಪುಗಳನ್ನು ಚೆನ್ನಾಗಿ ಚಿತ್ರಿಸಿದ್ದೀರಿ.. ಕೊಡೆ ಡಿಶ್ ಆಗುವ.. ಬೇಕಂತಲೇ ಡಿಶ್ ಮಾಡಿ ತೋಟದ ತುದಿಯ ಹೊಳೆಯಲ್ಲಿ ತೇಲಿ ಬಿಟ್ಟ ನೆನಪುಗಳೆಲ್ಲ ಮಳೆಯಂತೆ ಬಂದು ತಂಪಾಗಿಸಿದವು..

  ReplyDelete
 15. tumba chennagide, ishta aaytu. :) bareyuttiri.

  ReplyDelete
 16. ಚತ್ರಿಯ ಪುರಾಣ ತುಂಬಾ ಚೆನ್ನಾಗಿ ಮೂಡಿಬಂದಿದೆ.
  ನಮ್ಮ ಕೆ ಪಿ ಸಿ ಕಾಲೋನಿಯಲ್ಲಿ.ಮಳೆಗಾಲ ಬಂದೊಡನೆ "ಛತ್ರಿ ಪೇರೀ""ಛತ್ರಿ ಪೇರೀ" ಎಂದು ಕೂಗುತ್ತ ಮುದುಕನೊಬ್ಬ ರಸ್ತೆಯಲ್ಲಿ ಸುತ್ತಾಡುತ್ತಿದ್ದ.
  ಸೂಜಿ ದಾರ ತಂತಿ ಪಕ್ಕೊಡು ಮತ್ತು ಹರಿದ ಚತ್ರಿಯ ಹಳೆ ಕಡ್ಡಿ ಬಟ್ಟೆ ಇದ್ದರೆ ನಾವೂ
  "ಛತ್ರಿ ಪೇರೀ" ಮಾಡಬಹುದು! ಮರದ ದಂಡಿಗೆಯ ಕೊಡೆ ಈಗ ಸಿಗದು. ಕೊಪ್ಪೆಗೆ ದುಡ್ಡು ಕಡಿಮೆ. ಕಳ್ಳರ ಭಯವಿಲ್ಲ.
  ಕಂಬಳಿ ಕೊಪ್ಪೆಯ ಹೊರಗೆ ಇನ್ನೊಂದು ಕೊಪ್ಪೆ. ಬೆಚ್ಚನೆಯ ಹಳೆಯ ನೆನಪುಗಳು ಮತ್ತೆ ಮರುಕಳಿಸಿದವು.

  ReplyDelete
 17. ಕೊಡೆಯ ಬಗ್ಗೆ ತಮ್ಮ ಈ ಲೇಖನ ನಮ್ಮ ಬಾಲ್ಯದ ಅನುಭವವನ್ನು ಕೆಣಕಿತು. ಕೊಡೆ ಹಿಡಿದು ಓದಲು ಮಳೆಗಾಲ ಕಾಯುತ್ತಿದ್ದೆವು... ಒಮ್ಮೆ ಹೀಗೆ ಮಳೆಗಾಲದ ಪ್ರಾರಂಭದ ಹನಿ ಹನಿದಾಗ ಅಟ್ಟದಲ್ಲಿದ್ದ ಕೊಡೆ ಹಿಡಿದು ಮಳೆಯಲ್ಲಿ ಇಳಿದಾಗ ಅದರಲ್ಲಿ ಹೊಕ್ಕಿದ್ದ ಚೇಳೊಂದು ನನ್ನನ್ನು ಕುಟುಕಿ ಒದ್ದಾಡಿದ್ದು ನೆನಪಾಯಿತು...
  ನನ್ನ ಮಗನ ನೆಚ್ಚಿನ ವೀಡಿಯೊ ಮಳೆ ಬಂತು ಮಳೆ ಕೊಡೆ ಹಿಡಿದು ನಡೆ ಮಣ್ಣಿನಲ್ಲಿ ಜಾರಿ ಬಿದ್ದು ಬಟ್ಟೆಯೆಲ್ಲಾ ಕೊಳೆ... ಬಿಸಿಲಿ ಬಂತು ಇಸಿಲು.. ಕೋಟು ಟೋಪಿ ತೆಗೆ .. ಬಾವಿಯಿಂದ ನೀರು ಸೇದಿ ಸೋಪು ಹಾಕಿ ಒಗೆ!

  ReplyDelete