ಕೆಲವು ದಿನಗಳ ಮೊದಲು ಕೊಕ್ಕರೆ ಬೆಳ್ಳೂರಿನ ಕೊಕ್ಕರೆಗಳ ಫೋಟೋಗಳನ್ನು ಬ್ಲಾಗಿನಲ್ಲಿ ಪ್ರಕಟಿಸಿದ್ದೆನಷ್ಟೇ. ಅದೇ ಕೊಕ್ಕರೆ ಬೆಳ್ಳೂರಿನಿಂದ ವಾಪಾಸಾಗುವಾಗ ರಸ್ತೆ ಬದಿಯ ಮನೆಯೊಂದರ ಪಕ್ಕದ ನೆರಳಿನಲ್ಲಿ ರೇಷ್ಮೆ ಹುಳುಗಳ ಈ ಚಂದ್ರಿಕೆಗಳು ಕಾಣಿಸಿದವು. 'ಬಿಟ್ಟರೆ ಸಿಗದು ' ಎಂದುಕೊಳ್ಳುತ್ತಾ ಜ್ಞಾನವನ್ನು ಭದ್ರಪಡಿಸಿಕೊಳ್ಳಲು ತರಾತುರಿಯಿ೦ದ ಕಾರಿಳಿದು ಫೋಟೋ ತೆಗೆಯಲು ಮುಂದಾದೆವು..ಅಷ್ಟೊತ್ತಿಗೆ ಆ ಮನೆಯ ಯಜಮಾನ ಸ್ವಯಂ ರೇಷ್ಮೆ ಕೃಷಿಕ ನಮಗೆ ಮಾಹಿತಿಗಳೊಂದಿಗೆ ಒಳಗಡೆ ಇರುವ ಮತ್ತಷ್ಟು ಚಂದ್ರಿಕೆಗಳನ್ನೂ ,ಅಟ್ಟಣಿಗೆಯಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಭಕ್ಷಿಸುತ್ತಿರುವ ರೇಷ್ಮೆ ಮರಿ ಹುಳುಗಳನ್ನೂ, ಬಲಿತ ಹುಳುಗಳೂ, ಕೋಶ ಮಾಡಿಕೊಳ್ಳುತ್ತಿರುವ [ಕಕೂನ್] ಹುಳುಗಳ ಮತ್ತು ಕೋಶಗಳನ್ನೂ ತೋರಿಸಿ ಫೋಟೋ ತೆಗೆದುಕೊಳ್ಳಲು ಅನುವು ಮಾಡಿಕೊಟ್ಟರು.
ಅವರ ಹೊಟ್ಟೆ ತಣ್ಣಗಿರಲಿ.ಮಕ್ಕಳಿಗೆ ಒಂದು ಉತ್ತಮ ಪ್ರಾತ್ಯಕ್ಷಿಕೆ ದೊರೆತಂತೆ ಆಯಿತು.
ಅಂತೆಯೇ ನಾನೂ ಕೂಡಾ ಫೋಟೋದೊಂದಿಗೆ ಇನ್ನಷ್ಟು ಮಾಹಿತಿಯನ್ನೂ ಹೊಂದಿಸಿ ಮತ್ತಷ್ಟು ವಿಸ್ತರಿಸಿಕೊಳ್ಳಲು ಅಂತರ್ಜಾಲಮುಖಿಯಾದೆ.
ಮೊದಲು ಕಾಣಿಸಿದ ತಟ್ಟಿಯ ಚಂದ್ರಿಕೆಗಳು
ಹಿಪ್ಪುನೇರಳೆ ಸೊಪ್ಪನ್ನು ಭಕ್ಷಿಸುತ್ತಿರುವ ರೇಷ್ಮೆ ಹುಳುಗಳು.
ಬಾಂಬಿಕ್ಸ್ ಮೊರಿ [ bombyx mori ] ಎನ್ನುವ ಒಂದು ಜಾತಿಯ ಹಾತೆಯ ಲಾರ್ವೆಯೇ ರೇಷ್ಮೆ ಹುಳು. ರೇಷ್ಮೆ ಇಲಾಖೆಯಲ್ಲಿ ಸಿಗುವ ಚಿಕ್ಕ ಲಾರ್ವೆಗಳನ್ನು ತಂದು ಈ ಹಿಪ್ಪುನೇರಳೆ ಸೊಪ್ಪಿನ ಅಟ್ಟಣಿಗೆಯ ಮೇಲೆ ಬಿಡುತ್ತಾರೆ. ಹುಳುಗಳಿಗೆ ಸದಾಕಾಲ ಸೊಪ್ಪನ್ನು ತಿನ್ನುವುದೇ ಕೆಲಸ..ಸುಮಾರು ಇಪ್ಪತ್ತು -ಇಪ್ಪತೈದು ದಿನಗಳ ಕಾಲ ತಿಂದೂ ತಿಂದೂ ಬಲಿಯುತ್ತವೆ. ರೇಷ್ಮೆ ಸಾಕುವವರು ಹಿಪ್ಪು ನೇರಳೆ ತೋಟವನ್ನೂ ಹೊಂದಿರುತ್ತಾರೆ.
ರೈತರು ಎಳೆ ಹುಳುಗಳಿಗೆ 'ಕಾಯಿ' ಎಂದೂ, ಬಲಿತವಕ್ಕೆ 'ಹಣ್ಣು' ಎಂದು ಸರಳವಾಗಿ ವಿವರಿಸಿದರು.
ಬಲಿತ ಹುಳುಗಳು
ರೇಷ್ಮೆ ಹುಳುಗಳು ಈ ಅವಧಿಯಲ್ಲಿ ನಾಲ್ಕು ಹಂತಗಳಿಂದ ಹೊರ ಚರ್ಮವನ್ನು ಗಟ್ಟಿಗೊಳಿಸಿಕೊಳ್ಳುತ್ತದೆ [molt]. ಚರ್ಮದ ಬಣ್ಣ ಹಳದಿಯಾಗುತ್ತದೆ. ಸೊಪ್ಪು ತಿನ್ನುವುದನ್ನು ನಿಲ್ಲಿಸುತ್ತದೆ. ಐದನೇ ಹಂತವೇ 'ಪ್ಯೂಪ'.
ಆಗ ಅದನ್ನು ಅಟ್ಟಣಿಗೆಯಿಂದ ಹೊರ ತೆಗೆದು ಚಂದ್ರಿಕೆಯಲ್ಲಿ ಬಿಡುತ್ತಾರೆ.
ಕೋಶದ ಸಿದ್ದತೆಯಲ್ಲಿರುವ ಹುಳು
ತನ್ನ ಜೊಲ್ಲು ರಸದಿಂದ ತನ್ನ ಸುತ್ತಲೂ ಕೋಶವನ್ನು ಹೆಣೆಯಲು ತೊಡಗುತ್ತದೆ. ಇದು ಸ್ರವಿಸುವ ಜೊಲ್ಲು ರಸದಲ್ಲಿ ಎರಡು ಬಗೆಯ ಪ್ರೋಟೀನ್ ಗಳಿವೆ. fibroin ಮತ್ತು sericin . ಫೈಬ್ರೊಇನ್ ಎಳೆಗಳಾಗುತ್ತವೆ ಮತ್ತು ಸೆರಿಸಿನ್ ಅದನ್ನು ಗಟ್ಟಿಗೊಳಿಸಲು ಸಹಾಯಮಾಡುತ್ತದೆ. ಅದು ನಿಶ್ಚಲ ಸ್ಥಿತಿಯಲ್ಲಿರುವ ಪ್ಯೂಪದ ಸಂರಕ್ಷಣೆಗಾಗಿ ಕೋಶವನ್ನು ನಿರ್ಮಿಸಿಕೊಳ್ಳುತ್ತದೆ. ಸುಮಾರು ಮೂರು ದಿನಗಳಲ್ಲಿ ಕೋಶ ಸಿದ್ಧವಾಗುತ್ತದೆ.
ಪೂರ್ಣಗೊಂಡ ಕೋಶ [cocoon ]
ಈ ಕಕೂನ್ ಎಷ್ಟು ಗಟ್ಟಿಯಾಗಿರುತ್ತದೆಂದರೆ ಬರಿ ಕೈಗಳಿಂದ ಇದನ್ನು ಛೇಧಿಸಲಾಗದು. ಒಂದು ಕಕೂನ್ ಸಾವಿರ ಅಡಿಗಳಿಂದ ಮೂರು ಸಾವಿರ ಅಡಿ ಉದ್ದದ ಎಳೆಯಿಂದ ಮಾಡಲ್ಪಟ್ಟಿರುತ್ತದೆ. ಈ ಹಂತದಲ್ಲಿಯೇ ಇದನ್ನು ರೇಷ್ಮೆ ಉತ್ಪನ್ನಗಳಿಗಾಗಿ ಬಳಸುವರು.ಕುದಿ ನೀರಿನಲ್ಲಿ ಈ ಕಕೂನುಗಳನ್ನು ಮುಳುಗಿಸಿ ಹುಳುಗಳನ್ನು ಸಾಯಿಸುತ್ತಾರೆ. ನಂತರ ನೂಲನ್ನು ತೆಗೆಯುತ್ತಾರೆ.
ಈ ಕಕೂನನ್ನು ಹಾಗೆಯೇ ಇಟ್ಟರೆ ಒಳಗಿನ ರೇಷ್ಮೆಹುಳ ಹಾತೆಯಾಗಿ ಹೊರಬರುತ್ತದೆ. ಇದು ಸ್ರವಿಸುವ ಪ್ರೋಟಿಯೋಲಿಟಿಕ್ ಕಿಣ್ವ ಎಳೆಗಳನ್ನು ಕರಗಿಸಿ ಹೊರಬರಲು ಸಹಾಯಮಾಡುತ್ತದೆ.
ಪ್ರಕೃತಿ ತನ್ನ ಮಕ್ಕಳಿಗೆ ಬದುಕಲು ಎಷ್ಟೆಲ್ಲಾ ವೈವಿಧ್ಯಮಯವಾಗಿ ಸಹಾಯ ಮಾಡುತ್ತದೆ. ಮನುಷ್ಯನೆಂಬ ಮಗ ಮಾತ್ರ ಅದೆಲ್ಲಾ ತನಗೆ ಸೇರಿದ್ದು ಎನ್ನುವಂತೆ ಅದನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಾನೆ..
ರೇಷ್ಮೆ ಹುಳುಗಳನ್ನು ಬಿಸಿನೀರಿನಲ್ಲಿ ಹಾಕಿ ಕೊಲ್ಲುತ್ತಾರೆಂದು ಕೇಳಿದಾಕ್ಷಣ ನನ್ನ ಮಗಳು 'ಪಾಪ...! ನನಗಂತೂ ರೇಷ್ಮೆ ಬಟ್ಟೆ ಬೇಡ.. ಜೀನ್ಸ್ ಬಟ್ಟೆಯೇ ಸಾಕು' ಎನ್ನುವ ಸ್ಟೇಟ್ ಮೆಂಟ್ ಕೊಟ್ಟಿದ್ದಾಳೆ..!!
ಹಾತೆಯಾಗಿ ಹೊರ ಬರುವುದನ್ನು ನೋಡಲೆಂದು ಒಂದು ಕಕೂನನ್ನು ಅವರಲ್ಲಿ ಇಸಿದುಕೊಂಡು ಬಂದಿದ್ದೆವು. ಶಿಶಿರನ ಪ್ರಯೋಗಶೀಲತೆಯ ಪರಿಣಾಮದಿಂದ ಅದು ಹಾತೆಯಾಗುವ ಬದಲು ಮೋಕ್ಷ ಹೊಂದಿತು..!
ಅಂತೂ ಮಕ್ಕಳ ರಜೆಯ ಪ್ರಯುಕ್ತ ಹೋಗಲಾದ ಒಂದು ದಿನದ ಪ್ರವಾಸಕ್ಕೆ ಶೈಕ್ಷಣಿಕ ರೂಪ ಕೊಟ್ಟು ಅರ್ಥ ಪೂರ್ಣವಾಗುವಲ್ಲಿ ಶ್ರಮಿಸಿದ್ದೇವೆ...!
ವಂದನೆಗಳು













